ಟೋಕಿಯೊ : ಜಪಾನ್ ಪ್ರಧಾನಿ ಪ್ಯುಮಿಯೊ ಕಿಶಿಡಾ ಭಾಷಣ ಮಾಡಬೇಕಿದ್ದ ವಕಯಾಮಾದ ಬಂದರು ಪ್ರದೇಶದಲ್ಲಿ ಸ್ಮೋಕ್ ಬಾಂಬ್ ದಾಳಿ ನಡೆದಿದ್ದು, ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿ ಭಾಷಣಕ್ಕಾಗಿ ಜನ ಸೇರಿದ್ದ ಪ್ರದೇಶದಲ್ಲಿ ಸ್ಫೋಟದ ಸದ್ದು, ಬಿಳಿ ಬಣ್ಣದ ಹೊಗೆ ಆವರಿಸಿರುವುದು ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ವಿಡಿಯೊದಲ್ಲಿ ಕಂಡುಬಂದಿದೆ. ಘಟನೆ ಸಂಬಂಧ ಪಶ್ಚಿಮ ಜಪಾನ್‌ನಲ್ಲಿ ಒಬ್ಬ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿ ಎನ್‌ಎಚ್‌ಕೆ ವರದಿ ಮಾಡಿದೆ. ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ವಿಡಿಯೊ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿದೆ.‘ನಾನು ಘಟನೆಯಿಂದ ದಿಗ್ಭ್ರಮೆಗೊಂಡಿದ್ದೇನೆ.
ನನ್ನ ಹೃದಯ ಈಗಲೂ ಜೋರಾಗಿ ಬಡಿದುಕೊಳ್ಳುತ್ತಿದೆ’ಎಂದು ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ಹೇಳಿದ್ದಾರೆ. ಸ್ಫೋಟಕ್ಕೂ ಮೊದಲೇ ಜನರು ಓಡಲು ಆರಂಭಿಸಿದ್ದರು ಎಂದು ಒಬ್ಬ ವ್ಯಕ್ತಿ ಹೇಳಿದರೆ, ಯಾರೋ ಬಾಂಬ್ ಅನ್ನು ಎಸೆದರು ಎಂದು ಮತ್ತೊಬ್ಬ ವ್ಯಕ್ತಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಜಪಾನ್ ಸಂಸತ್ತಿನ ಕೆಳಮನೆಯ ಕ್ಷೇತ್ರವೊಂದರ ಉಪ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಕಿಶಿಡಾ ಸ್ವಲ್ಪ ಸಮಯದಲ್ಲೇ ಭಾಷಣ ಆರಂಭಿಸಬೇಕಿತ್ತು. ಅಷ್ಟರಲ್ಲಿ ಸ್ಫೋಟ ಸಂಭವಿಸಿದೆ.
‘ಪ್ರಜಾಪ್ರಭುತ್ವದ ದೇಶದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದ ಸಂದರ್ಭ ನಡೆದ ಈ ದಾಳಿಯು ವಿಷಾದನೀಯ ಮತ್ತು ಅಕ್ಷಮ್ಯ ಅಪರಾಧ’ ಎಂದು ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ(ಎಲ್‌ಡಿಪಿ) ಚುನಾವಣಾ ಕಾರ್ಯತಂತ್ರ ಮುಖ್ಯಸ್ಥೆ ಹಿರೊಶಿ ಮರಿಯಾಮಾ ಹೇಳಿದ್ದಾರೆ. ಜುಲೈ, 2022ರಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ಜಪಾನ್‌ನಲ್ಲಿ ರಾಜಕಾರಣಿಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.





