ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ಪಂಚಾಯತಿ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈ ವೇಳೆ ಹಿಂಸಾಚಾರ ಭುಗಿಲೆದ್ದು ಟಿಎಂಸಿ ಕಾರ್ಯಕರ್ತ ಸೇರಿ ಕನಿಷ್ಟ 11 ಮಂದಿ ಸಾವನ್ನಪ್ಪಿದ್ದಾರೆಂದು ಶನಿವಾರ ತಿಳಿದುಬಂದಿದೆ.
ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ರಾಜ್ಯದ ಹಲವೆಡೆ ತೀವ್ರ ಹಿಂಸಾಚಾರದ ಘಟನೆಗಳು ವರದಿಯಾಗಿದ್ದವು. ಇದಾದ ನಂತರ ಮತದಾನ ದಿನವಾದ ಇಂದು ಕೂಡ ಅಂಥದ್ದೇ ಘಟನೆಗಳು ನಡೆದಿವೆ.
ಮತದಾನ ಆರಂಭಕ್ಕೂ ಕೆಲವೇ ಗಂಟೆಗಳ ಮೊದಲು ಮುರ್ಷಿದಾಬಾದ್‌ನಲ್ಲಿ ತಡರಾತ್ರಿ ಟಿಎಂಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಮನೆಯೊಂದನ್ನು ಧ್ವಂಸಮಾಡಿದ್ದಾರೆ.
ಕೂಚ್‌ಬೆಹಾರ್ ಜಿಲ್ಲೆಯ ಫಲಿಮಾರಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಮತಗಟ್ಟೆ ಏಜೆಂಟ್ ಮಾಧಬ್ ಬಿಸ್ವಾಸ್ ಅವರನ್ನು ಹತ್ಯೆ ಮಾಡಲಾಗಿದೆ.
ಬಿಸ್ವಾಸ್ ಮತಗಟ್ಟೆಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಅವರನ್ನು ಟಿಎಂಸಿ ಬೆಂಬಲಿಗರು ತಡೆದಿದ್ದಾರೆ. ನಂತರ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ನಡುವೆ ಆರೋಪಗಳನ್ನು ಟಿಎಂಸಿ ನಿರಾಕರಿಸಿದೆ.
ಈ ನಡುವೆ ಸ್ವತಂತ್ರ ಅಭ್ಯರ್ಥಿಯ ಬೆಂಬಲಿಗರೊಬ್ಬರನ್ನು ಥಳಿಸಿ ಉತ್ತರ 24 ಪರಗಣ ಜಿಲ್ಲೆಯ ಕದಂಬಗಚಿ ಪ್ರದೇಶದಲ್ಲಿ ಹತ್ಯೆ ಮಡಾಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ವ್ಯಕ್ತಿಯನ್ನು 41 ವರ್ಷದ ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಹಲ್ಲೆ ಬಳಿಕ ಅಬ್ದುಲ್ಲಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆಂದು ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಮುಖರ್ಜಿ ತಿಳಿಸಿದ್ದಾರೆ.
ಈ ನಡುವೆ ಹತ್ಯೆಯನ್ನು ವಿರೋಧಿಸಿ ಸ್ಥಳೀಯರು ಮುಂಜಾನೆ ಟಾಕಿ ರಸ್ತೆಯನ್ನು ತಡೆದು, ಪ್ರತಿಭಟನೆ ನಡೆಸಿದರು.
ಮುರ್ಷಿದಾಬಾದ್ ಜಿಲ್ಲೆಯ ಕಪಾಸ್‌ದಂಗ ಪ್ರದೇಶದಲ್ಲೂ ರಾತ್ರೋರಾತ್ರಿ ಹಿಂಸಾಚಾರ ಸಂಭವಿಸಿದ್ದು, ಘಟನೆಯಲ್ಲಿ ಟಿಎಂಸಿ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ. ಮೃತ ವ್ಯಕ್ತಿಯನ್ನು ಬಾಬರ್ ಅಲಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,
ಘಟನೆ ಸಂಬಂಧ ಟ್ವೀಟ್ ಮಾಡಿರುವ ಟಿಎಂಸಿ, ‘ರೆಜಿನಗರ, ತುಫಂಗಂಜ್ ಮತ್ತು ಖಾರ್‌ಗ್ರಾಮ್‌ನಲ್ಲಿ ನಮ್ಮ ಪಕ್ಷದ ಮೂವರು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಡೊಮ್‌ಕೋಲ್‌ನಲ್ಲಿ ಇಬ್ಬರು ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಬಿಜೆಪಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್ ಪಕ್ಷಗಳು ಹಿಂಸಾಚಾರ ನಡೆಸುತ್ತಿವೆ. ಚುನಾವಣೆಯ ಹಿನ್ನೆಲೆ ಕೇಂದ್ರ ಪಡೆಗಳನ್ನು ರಾಜ್ಯದಲ್ಲಿ ನಿಯೋಜನೆ ಮಾಡಲಾಗಿದ್ದರೆ, ಅವುಗಳು ಈಗ ಎಲ್ಲಿವೆ’ ಎಂದು ಪ್ರಶ್ನಿಸಿ ಪ್ರಶ್ನೆ ಮಾಡಿದೆ.
‘ಕೇಂದ್ರ ಪಡೆಗಳ ಭದ್ರತೆ ಮಧ್ಯೆಯೂ ಸಾವಿನ ಸಂಖ್ಯೆ ಹೆಚ್ಚುತ್ತಿವೆ. ಮಾಲ್ಡಾದ ಮಾಣಿಕ್‌ಚಕ್‌ನಲ್ಲಿ ಬಾಂಬ್ ದಾಳಿಯ ನಡೆಸಲಾಗಿದೆ. ಇದು ನಮ್ಮ ಪಕ್ಷದ ಕಾರ್ಯಕರ್ತನನ್ನು ಬಲಿ ತೆಗೆದುಕೊಂಡಿದೆ. ನಾಡಿಯಾದ ನಾರಾಯಣಪುರ ಗ್ರಾಮ ಪಂಚಾಯತಿ ಅಭ್ಯರ್ಥಿ ಹಸೀನಾ ಸುಲ್ತಾನ್ ಅವರ ಪತಿಯ ಮೇಲೆ ಗುಂಡು ಹಾರಿಸಲಾಗಿದೆ. ಮತದಾನ ಆರಂಭವಾಗುವ ಕೆಲವೇ ಕ್ಷಣಗಳ ಮೊದಲು ಕಚ್ಚಾ, ದೇಶಿ ನಿರ್ಮಿತ ಬಾಂಬ್‌ಗಳನ್ನು ನಮ್ಮ ಕಾರ್ಯಕರ್ತರ ಮೇಲೆ ಎಸೆಯಲಾಗಿದೆ’ ಎಂದು ಆರೋಪಿಸಿದೆ.
ಮತ್ತೊಂದೆಡೆ ಮಾಲ್ಡಾ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿಗರೊಂದಿಗೆ ನಡೆದ ಘರ್ಷಣೆಯಲ್ಲಿ ಟಿಎಂಸಿ ನಾಯಕನ ಸಹೋದರ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಣಿಕ್ಚಕ್ ಪೊಲೀಸ್ ಠಾಣೆ ವ್ಯಾಪ್ತಿಯ ಜಿಶಾರತ್ತೋಲಾದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಮಾಲೆಕ್ ಶೇಖ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂಡಿ ಸಲೀಂ ಅವರು, ನೆಲದಲ್ಲಿ ಬಿದ್ದಿರುವ ತೆರೆದ ಮತಪಟ್ಟಿಗೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಚ್‌ಬೆಹಾರ್ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಮತಪೆಟ್ಟಿಗೆಗಳಿಗೆ ಬೆಂಕಿ ಹಚ್ಚಿರುವ ವಿಡಿಯೋವನ್ನು ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಕೂಡ ಹಂಚಿಕೊಂಡಿದ್ದು, ಮತಗಟ್ಟೆಯಲ್ಲಿ ಘರ್ಷಣೆ ಏರ್ಪಟ್ಟ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಪಲಾಯನ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಮತಗಟ್ಟೆಗಳ ಬಳಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಹಲವೆಡೆ ಮತದಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ದಕ್ಷಿಣ 24 ಪರಗಣದಲ್ಲಿ ಕಚ್ಚಾ ಬಾಂಬ್ ಸ್ಫೋಟ: ಇಬ್ಬರು ಮಕ್ಕಳಿಗೆ ಗಾಯ
ಈ ನಡುವೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ಬಾಂಬ್ ಸ್ಫೋಟಿಸಲಾಗಿದ್ದು, ಘಟನೆಯಲ್ಲಿ ಇಬ್ಬರು ಮಕ್ಕಳಿಗೆ ಗಾಯಗಳಾಗಿವೆ ಎಂದು ವರದಿಗಳಿಂದ ತಿಳಿದುಬಂದಿದೆ.
ಹಿಂಸಾಚಾರ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ ವಿ ಆನಂದ ಬೋಸ್ ಅವರು ವಿವಿಧ ಜಿಲ್ಲೆಗಳಿಗೆ ಭೇಟಿ ಮಾಡಿ, ಪರಿಸ್ಥಿತಿ ಅವಲೋಕನ ನಡೆಸಿದರು.
ಈ ಸಂದರ್ಭದಲ್ಲಿ ಮತಾನಾಡಿದ ಅವರು, ಇದು ಕಳವಳಕಾರಿ ವಿಚಾರವಾಗಿದೆ. ಇಂದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಪವಿತ್ರವಾದ ದಿನವಾಗಿದೆ. ಚುನಾವಣೆಯು ಮತಯಂತ್ರಗಳ ಮೂಲಕ ನಡೆಯಬೇಕೇ ಹೊರತು ಬುಲೆಟ್‌ಗಳಿಂದಲ್ಲ ಎಂದು ಹೇಳಿದರು.