ಬೆಂಗಳೂರು: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ವಿಚಾರವಾಗಿ ಸಂವಿಧಾನದ 9 ನೇ ಪರಿಚ್ಛೇದ ಸೇರ್ಪಡೆ ಶಿಫಾರಸ್ಸು ವಿಳಂಬ ಖಂಡಿಸಿ ಕಾಂಗ್ರೆಸ್ ರಾಜಭವನ ಚಲೋ ಪ್ರತಿಭಟನೆ ಹಮ್ಮಿಕೊಂಡಿತ್ತು. ಕೆಪಿಸಿಸಿ ಕಚೇರಿಯಿಂದ ಪಾದಯಾತ್ರೆ ಮೂಲಕ ಆಗಮಿಸಿದ ಕಾಂಗ್ರೆಸ್ ನಾಯಕರನ್ನು ಇಂಡಿಯನ್ ಎಕ್ಸ್‌ಪ್ರೆಸ್ ಸರ್ಕಲ್ ಬಳಿ ಪೊಲೀಸರು ವಶಕ್ಕೆ ಪಡೆದುಕೊಂಡರು.
ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್, ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್ ಭಾಗಿಯಾಗಿದ್ದರು.
ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಎಸ್‌ಟಿ, ಎಸ್‌ಸಿ ಮೀಸಲಾತಿ ಹೆಚ್ಚಳ ವಿಚಾರವಾಗಿ ಸಂವಿಧಾನದ 9 ನೇ ಪರಿಚ್ಛೇದಕ್ಕೆ ಸೇರಿಸಲು ಇಷ್ಟು ದಿನ ಏನು ಮಾಡುತ್ತಿದ್ದರು? ಮೀಸಲಾತಿ ಹೆಚ್ಚಳಕ್ಕೆ ಆದೇಶ ಯಾವಾಗ ಆಯಿತು? ಆದೇಶ ಆಗಿ ಬಹಳ ದಿನ ಆಯ್ತು, ನಂತರದಲ್ಲಿ ಕ್ಯಾಬಿನೆಟ್‌ನಲ್ಲೂ ನಿರ್ಧಾರ ಆಯಿತು ಎಂದರು.
ನಾವು ಪ್ರತಿಭಟನೆಗೆ ಕರೆ ಕೊಟ್ಟ ಬಳಿಕ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಶೇ.50ರಷ್ಟು ಇರುವ ಮೀಸಲಾತಿ ಏರಿಕೆ ಮಾಡುವ ಯಾವುದೇ ಪ್ರಸ್ತಾವ ಇಲ್ಲ ಎಂದು ಕೇಂದ್ರ ಸರ್ಕಾರ ಉತ್ತರ ಕೊಟ್ಟಿದೆ. ಅಂದರೆ ಏನು ಅರ್ಥ? ರಾಜ್ಯ ಸರ್ಕಾರದ ಮೀಸಲಾತಿ ಹೆಚ್ಚಳ ಮಾಡಿದರೂ ಕೇಂದ್ರ ಒಪ್ಪಲ್ಲ ಎಂದಲ್ಲವೇ ಎಂದು ಪ್ರಶ್ನಿಸಿದರು.
ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಶೇ.50 ಮೀರಬಾರದು ಎಂದಿದೆ. ಅದು ಮೀರಬೇಕಾದರೆ ಸಂವಿಧಾನದ 9 ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು. ಕೇವಲ ಮತಕ್ಕಾಗಿ ಹಾಗೂ ಜನರ ದಾರಿತಪ್ಪಿಸಲು ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ದಲಿತರಿಗೆ ಎಷ್ಟು ಮೋಸ ಮಾಡುತ್ತಿದ್ದೀರಿ? ಬಿಜೆಪಿ ಸರ್ಕಾರ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಬಿಜೆಪಿ ಸರ್ಕಾರ 15 ದಿನ ಮಾತ್ರ ಇದೆ. ಅಷ್ಟು ದಿನ ಕೂಡಾ ಇರಬಾರದು. ಕೂಡಲೇ ವಜಾ ಮಾಡಬೇಕು ಎಂದು ಒತ್ತಾಯಿಸಿ, ರಾಜ ಭವನ ಚಲೋ ಹಮ್ಮಿಕೊಂಡಿದ್ದೇವೆ. ಬಿಜೆಪಿ ಸರ್ಕಾರ ದಲಿತರಿಗೆ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಸಿ-ಎಸ್‌ಟಿ ಮೀಸಲು ಹೆಚ್ಚಳ ಕೇಂದ್ರಕ್ಕೆ ಶಿಫಾರಸು!
ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.24ಕ್ಕೆ ಹೆಚ್ಚಳ ಮಾಡಿ ಕರ್ನಾಟಕ ರೂಪಿಸಿರುವ ಶಾಸನವನ್ನು ಸಂವಿಧಾನದ ಶೆಡ್ಯೂಲ್ 9ರಲ್ಲಿ ಸೇರ್ಪಡೆ ಮಾಡಲು ಕರ್ನಾಟಕ ಸರಕಾರ ಗುರುವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಪರಿಶಿಷ್ಟರ ಮೀಸಲಾತಿಯನ್ನು ಒಟ್ಟಾರೆ ಶೇ.6ರಷ್ಟು ಏರಿಕೆ ಮಾಡಲು ರಾಜ್ಯ ಸಚಿವ ಸಂಪುಟ ತೀರ್ಮಾನ ಕೈಗೊಂಡು ವಿಧಾನ ಮಂಡಲ ಅಧಿವೇಶನದಲ್ಲಿ ವಿಧೇಯಕ ಮಂಡನೆ ಮಾಡಿತ್ತು. ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳು ವಿಧೇಯಕಕ್ಕೆ ಅನುಮೋದನೆ ನೀಡಿದ್ದವು. ಜನವರಿ 11 ರಂದು ರಾಜ್ಯಪಾಲರು ಒಪ್ಪಿಗೆ ಕೂಡ ಸೂಚಿಸಿದ್ದರು. ಆದರೆ, ಎರಡು ತಿಂಗಳ ಬಳಿಕ ವಿಧೇಯಕವನ್ನು ಶೆಡ್ಯೂಲ್ 9ಗೆ ಸೇರಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.