ಶ್ರೀನಗರ : ಪ್ರಸಕ್ತ ಸಾಲಿನಡಿ ಅಮರನಾಥ ದೇವಾಲಯಕ್ಕೆ 62 ದಿನಗಳ ತೀರ್ಥಯಾತ್ರೆಯು ಜುಲೈ 1ರಿಂದ ಆರಂಭಗೊಳ್ಳಲಿದ್ದು, ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಏಪ್ರಿಲ್ 17ರಿಂದ ಯಾತ್ರಾರ್ಥಿಗಳ ಹೆಸರು ನೋಂದಣಿ ಪ್ರಕ್ರಿಯೆ ಶುರುವಾಗಲಿದೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ಕುರಿತು ಅಧಿಕೃತವಾಗಿ ಘೋಷಿಸಿದ್ದು, ಯಾತ್ರಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಶ್ರೀಅಮರನಾಥ ಯಾತ್ರಾ ಮಂಡಳಿ ಸಿದ್ಧತೆ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಯಾವುದೇ ಗೊಂದಲ ತಲೆದೋರದಂತೆ ತೀರ್ಥಯಾತ್ರೆಗೆ ಅನುಕೂಲ ಕಲ್ಪಿಸುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೊದಲ ಆದ್ಯತೆಯಾಗಿದೆ. ಅಮರನಾಥಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಉತ್ತಮ ದರ್ಜೆಯ ಆರೋಗ್ಯ ಸೇವೆ ಸೇರಿದಂತೆ ಸೂಕ್ತ ಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಭಕ್ತರಿಗೆ ಅನುಕೂಲವಾಗುವಂತೆ ದೂರವಾಣಿ ಸಂಪರ್ಕ ಒದಗಿಸಲು ಒತ್ತು ನೀಡಲಾಗಿದೆ. ವಸತಿ, ವಿದ್ಯುತ್, ಕುಡಿಯುವ ನೀರು, ಸುರಕ್ಷತಾ ಸೌಲಭ್ಯ ಕಲ್ಪಿಸಿ ಯಾತ್ರೆ ಸುಗಮಗೊಳಿಸಲು ಸಂಬಂಧಪಟ್ಟ ಇಲಾಖೆಗಳು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸುತ್ತಿವೆ ಎಂದು ವಿವರಿಸಿದ್ದಾರೆ.
ಯಾತ್ರೆಯ ಮಾರ್ಗದಲ್ಲಿ ಸ್ವಚ್ಛತೆ ಪಾಲಿಸುವುದು, ತ್ಯಾಜ್ಯ ನಿರ್ವಹಣೆಗೂ ಅಗತ್ಯ ಕ್ರಮವಹಿಸುವಂತೆ ಲೆಫ್ಟಿನೆಂಟ್ ಗವರ್ನರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘ಶ್ರೀಅಮರನಾಥ ಯಾತ್ರಾ’ ಆ್ಯಪ್ ಕೂಡ ಲಭ್ಯವಿದ್ದು, ಹವಾಮಾನ ಸೇರಿದಂತೆ ದೈನಂದಿನ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುತ್ತದೆ.