ಬೆಂಗಳೂರು : ಇದೇ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು ನಮ್ಮ ಅನ್ನಭಾಗ್ಯ ಅಕ್ಕಿಯಿಂದಲೇ ಅಕ್ಷತೆ ಆಗ್ತಿದೆ ಸಂತೋಷ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನಮ್ಮನ್ನು ಕರೆದಿಲ್ಲ. ನಾನು ಶಿವನ ಭಕ್ತ. ಎಲ್ಲಾ ದೇವರುಗಳು ನನ್ನ ಹೃದಯದಲ್ಲಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ನಮ್ಮ ಅನ್ನಭಾಗ್ಯ ಅಕ್ಕಿಯಿಂದಲೇ ಅಕ್ಷತೆ ಆಗುತ್ತಿರುವುದು ಸಂತೋಷ ಎಂದರು.
ಫುಡ್ ಆಕ್ಟ್ ತಂದಿದ್ಯಾರು ಎಂಬುದನ್ನೇ ಬೊಮ್ಮಾಯಿ ಮರೆತಿದ್ದಾರೆ. ಮೊದಲು ಅನ್ನಭಾಗ್ಯ ಯೋಜನೆಯ ಪ್ರಾರಂಭಿಸಿದ್ದೆ ಸಿಎಂ ಸಿದ್ದರಾಮಯ್ಯ. ಪಾಪ ಬಸವರಾಜ ಬೊಮ್ಮಾಯಿಗೆ ಇದು ಮರೆತುಹೋಗಿದೆ ಎಂದು ಡಿಕೆ ಶಿವಕುಮಾರ್ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದರು.
ಹೆಚ್‌ಡಿಡಿಗೆ ಡಿಕೆಶಿ ತಿರುಗೇಟು : ಸಿದ್ದರಾಮಯ್ಯ ಡಿಕೆಶಿ ಇಂದಲೇ ಕಾಂಗ್ರೆಸ್ ಅಂತ್ಯ ಎಂಬ ಹೆಚ್.ಡಿ.ದೇವೇಗೌಡ ಅವರ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 136 ಸ್ಥಾನ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ 138 ವರ್ಷಗಳ ಇತಿಹಾಸ ಇದೆ. ಇಬ್ಬರು ಪಕ್ಷೇತರರು ನಮ್ಮ ಪಕ್ಷಕ್ಕೆ ಸೇರಿದ್ದಾರೆ. ದೇವೇಗೌಡರು ಪದೇಪದೇ ನಮ್ಮನ್ನು ನೆನಪಿಸಿಕೊಂಡರೆ ಸ್ಫೂರ್ತಿ ತುಂಬಿದಂತಾಗುತ್ತದೆ ದೇವೇಗೌಡರು ಏನೇ ಮಾತನಾಡಿದರು ಕೂಡ ಅದು ನಮಗೆ ಆಶೀರ್ವಾದವಾಗಿದೆ ಎಂದಿದ್ದಾರೆ.