ನವದೆಹಲಿ : ಇಸ್ರೇಲ್ ಮತ್ತು ಉಗ್ರಗಾಮಿ ಗುಂಪು ಹಮಾಸ್ ನಡುವಿನ ಉದ್ವಿಗ್ನತೆಯ ಹೆಚ್ಚಿದ್ದು ಏರ್ ಇಂಡಿಯಾ ನವೆಂಬರ್ 30 ರವರೆಗೆ ಟೆಲ್ ಅವೀವ್‌ಗೆ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಿದೆ. ಅಕ್ಟೋಬರ್ 7 ರಿಂದ ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಯಾವುದೇ ಭಾಗಕ್ಕೂ ವಿಮಾನ ಹಾರಾಟ ಇಲ್ಲ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
ನವೆಂಬರ್ 30 ರವರೆಗೆ ಟೆಲ್ ಅವಿವ್‌ಗೆ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ. ಸಾಮಾನ್ಯವಾಗಿ, ವಿಮಾನ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ರಾಷ್ಟ್ರೀಯ ರಾಜಧಾನಿಯಿಂದ ಟೆಲ್ ಅವೀವ್‌ಗೆ ಐದು ಏರ್ ಇಂಡಿಯಾ ವಿಮಾನಗಳು ಕಾರ್ಯಾಚರಿಸುತ್ತಿವೆ.
ಕಳೆದ ತಿಂಗಳು, ಘರ್ಷಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ನಿಂದ ಹಿಂತಿರುಗಲು ಇಚ್ಛಿಸುವ ಭಾರತೀಯರನ್ನು ಮರಳಿ ಕರೆತರಲು ಸರ್ಕಾರದ ಆಪರೇಷನ್ ಅಜಯ್ ಅಡಿಯಲ್ಲಿ ವಿಮಾನಯಾನವು ರಾಷ್ಟ್ರೀಯ ರಾಜಧಾನಿಯಿಂದ ಟೆಲ್ ಅವೀವ್‌ಗೆ ಕೆಲವು ಚಾರ್ಟರ್ಡ್ ವಿಮಾನಗಳನ್ನು ಕಳುಹಿಸಿತ್ತು.
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ 5 ಸಾವಿರ ರಾಕೆಟ್ಗಳಿಂದ ದಾಳಿ ನಡೆಸಿದರು, ಘಟನೆಯಲ್ಲಿ 1,400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅದಾದ ಬಳಿಕ ಇಸ್ರೇಲ್ ಪ್ರತಿಯಾಗಿ ಗಾಜಾದ ಮೇಲೆ ದಾಳಿ ನಡೆಸಿದ್ದು, ಅಲ್ಲೂ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧವನ್ನು ನಾವು ಪ್ರಾರಂಭ ಮಾಡಿಲ್ಲ ಆದರೆ ನಾವೇ ಅಂತ್ಯ ಮಾಡುತ್ತೇವೆ ಎಂದು ಇಸ್ರೇಲ್ ಪಣತೊಟ್ಟಿದೆ.
ವಿಶ್ವಸಂಸ್ಥೆ ನಡೆಸುತ್ತಿದ್ದ ಶಾಲೆಯ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 70ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿನ ಹಮಾಸ್ ಆರೋಗ್ಯ ಸಚಿವಾಲಯವು ತಿಳಿಸಿದೆ.
ಅಲ್-ಫಖುರಾ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದರು, ಮತ್ತು 70 ಮಂದಿ ಗಾಯಗೊಂಡಿದ್ದರು. ಇದಕ್ಕೂ ಮೊದಲು ಈ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು 54 ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ಹೇಳಿತ್ತು.