ನವದೆಹಲಿ (ಪಿಟಿಐ): ಅದಾನಿ ಸಮೂಹದೊಂದಿಗೆ ಚೀನಾದ ಸಂಪರ್ಕವಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷವು, ಈ ಕುರಿತಂತೆ ಜಂಟಿ ಸಂಸದೀಯ ಸಮಿತಿಯ ತನಿಖೆ ನಡೆಸುವುದೇ ಈಗ ಉಳಿದಿರುವ ಪರಿಹಾರ ಎಂದು ಪ್ರತಿಪಾದಿಸಿದೆ.
ಅದಾನಿ ಸಮೂಹದ ಜೊತೆಗೆ ಸಂಪರ್ಕವುಳ್ಳ, ಪ್ರಸ್ತುತ ಪೌರತ್ವ ಕುರಿತು ವಿವಾದವಿರುವ ಪಿಎಂಸಿ ಪ್ರಾಜೆಕ್ಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಮಾರಿಸ್ ಚಾಂಗ್ ಅವರು, ‘ತಾನು ತೈವಾನ್ ಪ್ರಜೆ’ ಎಂದು ಹೇಳಿಕೊಂಡಿರುವುದರ ಹಿಂದೆಯೇ ಕಾಂಗ್ರೆಸ್ ಪಕ್ಷವು ಜೆಪಿಸಿ ತನಿಖೆ ಅಗತ್ಯವನ್ನು ಪುನರುಚ್ಚರಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು, ‘ಪಿಎಂಸಿ ಪ್ರಾಜೆಕ್ಟ್ಸ್ ಮಾಲೀಕತ್ವ ಚಾಂಗ್ ಪುತ್ರನದು ಎಂದು ನಾವು ಉಲ್ಲೇಖಿಸಿದ್ದೇವೆ. ಕಂದಾಯ ಗುಪ್ತದಳ ನಿರ್ದೇಶನಾಲಯವು ಇದೇ ಕಂಪನಿಯು ₹ 5,500 ಕೋಟಿ ಮೌಲ್ಯದ ಇಂಧನ ಖರೀದಿ ಹಗರಣದಲ್ಲಿ ಭಾಗಿಯಾಗಿರುವುದನ್ನು ಉಲ್ಲೇಖಿಸಿದೆ. ಈ ಎಲ್ಲದರ ಬಗ್ಗೆಯೂ ಜೆಪಿಸಿ ತನಿಖೆ ನಡೆಯಲಿ ಎಂದು ಹೇಳಿದ್ದಾರೆ.
ಪಾಸ್‌ಪೋರ್ಟ್ ಆಧರಿಸಿ ಚಾಂಗ್ ಚೀನಾದ ಪ್ರಜೆ ಎಂದು ಹೇಳಲಾಗಿತ್ತು. ಇವರು ಗೌತಮ್ ಅದಾನಿ ಅವರ ಮಾಲೀಕತ್ವದ ಬಂದರು–ಇಂಧನ ಉದ್ಯಮಗಳ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಪಿಎಂಸಿ ಪ್ರಾಜೆಕ್ಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಅದಾನಿ ಸಮೂಹದ ಪರವಾಗಿ ಬಂದರು, ಟರ್ಮಿನಲ್ಸ್, ರೈಲು ಮಾರ್ಗ, ವಿದ್ಯುತ್ ಪೂರೈಕೆ ಮಾರ್ಗ ಮತ್ತು ಇತರೆ ಮೂಲಸೌಕರ್ಯ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುತ್ತಿದೆ.
ಚಾಂಗ್ ಅವರ ಪುತ್ರ ಚಾಂಗ್ ಚೀನ್ ಟಿಂಗ್ (ಮಾರಿಸ್ ಚಾಂಗ್), ತಾನು ತೈವಾನ್ ಪಾಸ್‌ಪೋರ್ಟ್ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ಜೈರಾಂ ರಮೇಶ್ ಅವರು ಉಲ್ಲೇಖಿಸಿದ್ದಾರೆ.