ನವದೆಹಲಿ: ಕೇಂದ್ರ ಸರಕಾರ ನಡೆಸುವ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಜೆನರಿಕ್ ಔಷಧಗಳನ್ನು ಬರೆದುಕೊಡದ ವೈದ್ಯರ ವಿರುದ್ಧ ಕ್ರಮ ಜರುಗಿಸುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಎಚ್ಚರಿಸಿದೆ.
ಜೆನರಿಕ್ ಔಷಧಗಳನ್ನು ಮಾತ್ರ ಬರೆಯುವಂತೆ ಕೇಂದ್ರ ಸರಕಾರಿ ಆಸ್ಪತ್ರೆಗಳು, ಕೇಂದ್ರ ಸರಕಾರ ಆರೋಗ್ಯ ಯೋಜನೆ (ಸಿಜಿಎಚ್‌ಎಸ್) ಅಡಿಯ ‘ಕ್ಷೇಮ ಕೇಂದ್ರಗಳು’ ಮತ್ತು ಪಾಲಿ ಕ್ಲಿನಿಕ್‌ಗಳ ವೈದ್ಯರಿಗೆ ಹಲವು ಬಾರಿ ಸೂಚನೆ ನೀಡಲಾಗಿದೆ. ಆದರೂ ವೈದ್ಯರು ಕೆಲವು ಸಂದರ್ಭಗಳಲ್ಲಿ ಬ್ರಾಂಡೆಡ್ ಔಷಧ ಬರೆಯುವುದನ್ನು ಮುಂದುವರೆಸಿದ್ದಾರೆ.
ಉನ್ನತ ಅಧಿಕಾರಿಗಳ ತನಿಖೆಯಲ್ಲಿ ಈ ವಿಚಾರ ಖಚಿತಪಟ್ಟ ಹಿನ್ನೆಲೆಯಲ್ಲಿ ಮತ್ತೊಮ್ಮೆ ಎಚ್ಚರಿಕೆ ರವಾನಿಸಲಾಗಿದೆ,” ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ ಅತುಲ್ ಗೋಯೆಲ್ ಹೇಳಿದ್ದಾರೆ.
ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅಧೀನ ವೈದ್ಯರು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಅಲ್ಲದೆ, ಯಾವುದೇ ಖಾಸಗಿ ಔಷಧ ಕಂಪನಿಯ ಪ್ರತಿನಿಧಿಗಳು ಸರಕಾರಿ ಆಸ್ಪತ್ರೆಗಳ ಆವರಣಕ್ಕೆ ಬರದಂತೆ ಸೂಕ್ತ ಕ್ರಮ ವಹಿಸುವಂತೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.