ಮಂಡ್ಯ : ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ 76ನೇ ಸ್ವಾತಂತ್ರ್ಯ ದಿನಾಚರಣೆ ವಿಶೇಷ ಆಹ್ವಾನಿತರನ್ನಾಗಿ ಮಂಡ್ಯ ರೈತ ಎನ್.ಹೆಚ್.ವಿರೂಪಾಕ್ಷಪ್ಪ ಅವರನ್ನು ಪ್ರಧಾನಮಂತ್ರಿಗಳ ಕಾರ್ಯಾಲಯವು ಆಹ್ವಾನಿಸಿದೆ. ವಿರೂಪಾಕ್ಷಪ್ಪ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಯಾಗಿದ್ದಾರೆ.
ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿಯ ರೈತರಾಗಿದ್ದಾರೆ. ಪಿಎಂಒ ಕಚೇರಿಯಿಂದ ಆಹ್ವಾನ ಬಂದ ಬಗ್ಗೆ ಸಂತಸ ವ್ಯಕ್ತಪಡಿಸಿದ ವಿರೂಪಾಕ್ಷಪ್ಪ, ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿರುವುದರಿಂದ ಅಧಿಕೃತವಾಗಿ ನನ್ನನ್ನು ವಿಶೇಷವಾಗಿ ಮಂಡ್ಯ ಜಿಲ್ಲೆಯಿಂದ ಆಹ್ವಾನಿಸಿದ್ದಾರೆ. ಇದಕ್ಕಾಗಿ ಕರ್ನಾಟಕದ ಹಾಗೂ ಜಿಲ್ಲೆಯ ರೈತರ ಪರವಾಗಿ ಪ್ರಧಾನಿ ಹಾಗೂ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಂಡ್ಯ ಜಿಲ್ಲೆಯ ರೈತ ವಿರೂಪಾಕ್ಷಪ್ಪ ಅವರನ್ನು ಆಯ್ಕೆ ಮಾಡಿದ್ದಾರೆ. ಇವರನ್ನು ಕಳುಹಿಸಿ ಕೊಡುವಂತೆ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಸೂಚನೆ ಬಂದಿದೆ. ಹೀಗಾಗಿ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ವಿರೂಪಾಕ್ಷಪ್ಪ ಅವರ ಜೊತೆ ಒಬ್ಬ ಅಧಿಕಾರಿಯನ್ನೂ ಕಳುಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಹೇಳಿದರು.
ಎ.ನಾಗತಿಹಳ್ಳಿಯಲ್ಲಿ ಗ್ರಾಮದಲ್ಲಿ 4 ಎಕರೆ 10 ಗುಂಟೆ ಜಮೀನುವೊಂದಿರುವ ವಿರೂಪಾಕ್ಷಪ್ಪ, ಪೂರ್ಣ ಜಮೀನಿನಲ್ಲಿ ಸಾವಯವ ಕೃಷಿ ಹಾಗೂ ಉನ್ನತ ಸಾಂದ್ರ ಬೇಸಾಯ ಪದ್ದತಿಯನ್ನ ಅಳವಡಿಸಿಕೊಂಡಿದ್ದಾರೆ. ಜೊತೆಗೆ ಕೃಷಿ ಬೆಳೆ, ರಾಗಿ, ಜೋಳ ಹಾಗೂ ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ.
ಜೊತೆಗೆ ಮಾಡಾಗಲ ಮತ್ತು ಡ್ರಾಗನ್ ಫ್ರೂಟ್ ಗಿಡಗಳನ್ನ ಬೆಳೆದಿದ್ದು, ಏಲಕ್ಕಿ ಬೆಳೆಯನ್ನು ಬೆಳೆದಿದ್ದಾರೆ. ಇನ್ನು 2022ರಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸಹಯೋಗದಲ್ಲಿ ಜಮೀನಿನಲ್ಲಿಯೇ ಪ್ರಾತಕ್ಷಿತೆ ಕೂಡ ನಡೆದಿದೆ. ಸಾವಯವ ಕೃಷಿ ಬಗ್ಗೆ ಆಕಾಶವಾಣಿಯಲ್ಲಿ ಕಾರ್ಯಕ್ರಮ ಸಹಾ ನೀಡಿದ್ದಾರೆ. ಸಾವಿರಾರು ರೈತರು ಇವರ ಜಮೀನಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಇವರ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮಾಹಿತಿ ಕಳುಹಿಸಿಕೊಟ್ಟಿತ್ತು.
ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಇವರನ್ನು ಗುರುತಿಸಿ 76 ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮಕ್ಕೆ ಆ್ವಹಾನ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಾಮಮಂಗಲದ ಕೃಷಿ ಅಧಿಕಾರಿ ಯೋಗರಾಜ್ ಅವರಿಗೆ ಇವರನ್ನ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಕರೆದುಕೊಂಡು ಬರುವ ಜವಬ್ದಾರಿ ನೀಡಿದೆ.