ನವದೆಹಲಿ : ಕೇಂದ್ರ ಸರಕಾರವು ರಾಜ್ಯಗಳಿಗೆ ತೆರಿಗೆ ಪಾಲನ್ನು ಮಂಗಳವಾರ ಬಿಡುಗಡೆ ಮಾಡಿದೆ. ಹೆಚ್ಚು ಮತ್ತು ತ್ವರಿತವಾಗಿ ತೆರಿಗೆ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದ ಕರ್ನಾಟಕಕ್ಕೆ 2,660 ಕೋಟಿ ರೂ. ವಿತರಿಸಲಾಗಿದೆ.
ಒಟ್ಟಾರೆ 72,961 ಕೋಟಿ ರೂ.ಗಳ ತೆರಿಗೆಯನ್ನು ರಾಜ್ಯಗಳಿಗೆ ಕೇಂದ್ರ ಸರಕಾರವು ಹಂಚಿಕೆ ಮಾಡಿದೆ. ಅತಿ ಹೆಚ್ಚು ತೆರಿಗೆ ಪಾಲು ಪಡೆದ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯ ಪ್ರದೇಶ ಮೊದಲ ಮೂರು ಸ್ಥಾನಗಳನ್ನು ಗಳಿಸಿವೆ. ಅತಿ ಕಡಿಮೆ ಪಾಲು ಪಡೆದ ರಾಜ್ಯಗಳಲ್ಲಿ ಗೋವಾ ಮೊದಲ ಸ್ಥಾನದಲ್ಲಿದೆ. ಸಿಕ್ಕಿಂ, ಮಿಜೋರಾಂ ನಂತರ ಸ್ಥಾನದಲ್ಲಿವೆ.
ಸಾಮಾನ್ಯವಾಗಿ ನವೆಂಬರ್ 10ರಂದು ತೆರಿಗೆ ಪಾಲಿನ ಹಣವನ್ನು ರಾಜ್ಯಗಳಿಗೆ ವರ್ಗಾಯಿಸುವ ರೂಢಿ ಇತ್ತು. ದೀಪಾವಳಿ ಹಬ್ಬದ ಹಂಗಾಮಿನ ಹಿನ್ನೆಲೆಯಲ್ಲಿ ಅವಧಿಗಿಂತ ಮೂರು ದಿನಗಳಿಗೆ ಮುಂಚಿತವಾಗಿಯೇ ತೆರಿಗೆಯ ಪಾಲನ್ನು ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ನೀಡಿದೆ.
ಕೇಂದ್ರ ಸರಕಾರದಿಂದ ಅತಿ ಹೆಚ್ಚು ತೆರಿಗೆ ಪಾಲು ಪಡೆದ ರಾಜ್ಯಗಳು
ಕ್ರ. ಸಂ. | ರಾಜ್ಯ | ಕೇಂದ್ರ ಸರಕಾರ ಬಿಡುಗಡೆ ಮಾಡಿದ ತೆರಿಗೆ ಮೊತ್ತ |
1 | ಉತ್ತರ ಪ್ರದೇಶ | 13,088.51 ಕೋಟಿ ರೂ. |
2 | ಬಿಹಾರ | 7,338.44 ಕೋಟಿ ರೂ. |
3 | ಮಧ್ಯ ಪ್ರದೇಶ | 5,727.4 ಕೋಟಿ ರೂ. |
4 | ಪಶ್ಚಿಮ ಬಂಗಾಳ | 5,488.88 ಕೋಟಿ ರೂ. |
5 | ಮಹಾರಾಷ್ಟ್ರ | 4,608.96 ಕೋಟಿ ರೂ. |
ಕೇಂದ್ರ ಸರಕಾರದಿಂದ ಅತಿ ಕಡಿಮೆ ತೆರಿಗೆ ಪಡೆದ ರಾಜ್ಯಗಳು
ಕ್ರ. ಸಂ. | ರಾಜ್ಯ | ಕೇಂದ್ರ ಸರಕಾರ ಬಿಡುಗಡೆ ಮಾಡಿದ ತೆರಿಗೆ ಮೊತ್ತ |
1 | ಗೋವಾ | 281.63 ಕೋಟಿ ರೂ. |
2 | ಸಿಕ್ಕಿಂ | 283.1 ಕೋಟಿ ರೂ. |
3 | ಮಿಜೋರಾಂ | 364.8 ಕೋಟಿ ರೂ. |
4 | ನಾಗಾಲ್ಯಾಂಡ್ | 415.15 ಕೋಟಿ ರೂ. |
5 | ಮಣಿಪುರ | 522,41 ಕೋಟಿ ರೂ. |
ಅಕ್ಟೋಬರ್‌ನಲ್ಲಿ ದಾಖಲೆಯ 1.72 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ : ಹಬ್ಬದ ಸೀಸನ್‌ನಲ್ಲಿ ಖರೀದಿ ಭರಾಟೆ ಜೋರಿದ್ದ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ದಾಖಲೆಯ 1.72 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿತ್ತು. ಅಕ್ಟೋಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ಏಪ್ರಿಲ್ 2023ರ ನಂತರ ಸಂಗ್ರಹವಾದ ಎರಡನೇ ಅತಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದ್ದು, ಇದಾದ ಬೆನ್ನಿಗೆ ಇದೀಗ ಕೇಂದ್ರ ಸರಕಾರ ರಾಜ್ಯಗಳಿಗೆ ತೆರಿಗೆ ಪಾಲನ್ನು ಬಿಡುಗಡೆ ಮಾಡಿದೆ.