ಬೆಂಗಳೂರು : ಈ ಬಾರಿಯ 68 ನೇ ಕನ್ನಡ ರಾಜ್ಯೋತ್ಸವಕ್ಕೆ 68 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದ್ದು ನವೆಂಬರ್ ಒಂದರಂದು ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
68 ಸಾಧಕರು, 10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, ಎರಡು ದಿನಗಳಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಅಂದಹಾಗೆ ಈ ಬಾರಿಯ ಎಲ್ಲ ಜಾತಿ, ಧರ್ಮ ಮತ್ತು ಲಿಂಗಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು.
ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಇದೇ ಮೊದಲ ಬಾರಿಗೆ ಕನ್ನಡಕ್ಕಾಗಿ ದುಡಿದ ಹತ್ತು ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ನಮಗೆ ಈಗಾಗಲೇ 3523 ಅರ್ಜಿಗಳು ಬಂದಿದ್ದು, 26,655 ಶಿಫಾರಸುಗಳು ಬಂದಿವೆ.
28 ಸಮಿತಿಯ ಸದಸ್ಯರು ಗಣ್ಯರ ಹೆಸರನ್ನು ಆಯ್ಕೆ ಮಾಡುತ್ತಾರೆ. ಸಮಿತಿ ನೀಡಿರುವ ಹೆಸರುಗಳನ್ನು ಅನುಮೋದಿಸುತ್ತೇವೆ ಎಂದರು. ರಾಜ್ಯೋತ್ಸವ ಪ್ರಶಸ್ತಿಗಾಗಿ ಭೌತಿಕವಾಗಿ 2,500, ಸೇವಾ ಸಿಂಧು ಪೋರ್ಟಲ್ ಮೂಲಕ 4,500ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಸುಮಾರು 23 ಸಾವಿರಕ್ಕೂ ಅಧಿಕ ಜನ 2000 ಮಂದಿ ಸಾಧಕರನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ನಾಮನಿರ್ದೇಶನ ಮಾಡಿದ್ದಾರೆ.