Mysore
23
broken clouds

Social Media

ಶುಕ್ರವಾರ, 13 ಜೂನ್ 2025
Light
Dark

ಇಂದಿನಿಂದ 3 ದಿನ ಹೊಸ ಸರ್ಕಾರದ ಮೊದಲ ಅಧಿವೇಶನ : ವಿಧಾನಸೌಧ ಸುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೊದಲ ವಿಧಾನಸಭಾ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಅಧಿವೇಶನದ ಕಾರ್ಯ ಕಲಾಪಗಳಿಗೆ ಅಡಚಣೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸೌಧ ಕಟ್ಟಡದ ಸುತ್ತಲ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಆದೇಶಿಸಿದ್ದಾರೆ.

ಮೇ.22 ರಿಂದ 24ರವರೆಗೆ ಮೂರು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಮೊದಲ ಎರಡು ದಿನ ನೂತನ ಶಾಸಕರ ಪ್ರಮಾಣವಚನ ಹಾಗೂ ಕೊನೆಯ ದಿನ ಹೊಸ ಸಭ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಸೋಮವಾರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲು ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ಅವರು ಹಂಗಾಮಿ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮೆರವಣಿಗೆ, ಪ್ರತಿಭಟನೆ ಧರಣಿ, ಸತ್ಯಾಗ್ರಹ, ವಿಧಾನಸೌಧ ಮುತ್ತಿಗೆ ಹಮ್ಮಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ಅಧಿವೇಶನದ ಕಾರ್ಯ-ಕಲಾಪಗಳಿಗೆ ಅಡಚಣೆಯಾಗಿ ಸಾರ್ವಜನಿಕ ನೆಮ್ಮದಿಗೆ ಭಂಗ ಹಾಗೂ ಸುಗಮ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ 6 ರಿಂದ ಬುಧವಾರ ಮಧ್ಯರಾತ್ರಿ 12ರವರೆಗೆ ವಿಧಾನಸೌಧದ ಸುತ್ತಲ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಈ ಆದೇಶದ ಅನ್ವಯ ನಿಷೇಧ ಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪುಗೂಡುವಂತಿಲ್ಲ. ಮೆರವಣಿಗೆ ಮತ್ತು ಸಭೆ ನಡೆಸುವಂತಿಲ್ಲ. ಶಸ್ತ್ರಗಳು, ದೊಣ್ಣೆಗಳು, ಕತ್ತಿ, ಈಟಿ ಮೊದಲಾದ ಮಾರಕಾಸ್ತ್ರ ಒಯ್ಯುವಂತಿಲ್ಲ. ಯಾವುದೇ ರೀತಿ ಸ್ಫೋಟಕ ವಸ್ತುಗಳನ್ನು ಸಿಡಿಸುವಂತಿಲ್ಲ. ಉಪಕರಣ ಸಾಗಾಟ, ಶೇಖರಣೆಯನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿಗಳ ಪ್ರತಿಕೃತಿ ಪ್ರದರ್ಶನ, ಬಹಿರಂಗ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!