2023-24ರ ಸಾಲಿನ ಮುಂಗಡ ಪತ್ರವನ್ನು ಅರ್ಥಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು. ಸಿನಿಮಾ ಪ್ರಮಾಣೀಕರಣ ಹೊರತುಪಡಿಸಿದರೆ ಅದು ಕೇಂದ್ರದ ವಿಷಯವಲ್ಲ, ಅದೇನಿದ್ದರೂ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು. ಅಲ್ಲೇನಿದ್ದರೂ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಅದರ ಕೈಕೆಳಗಿನ ಪ್ರಸಾರಭಾರತಿ ಮುಂತಾದವುಗಳಿಗೆ ಸಂಬಂಧಪಟ್ಟಂತೆ ಅನುದಾನ ಇತ್ಯಾದಿ ಇರಬಹುದು.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಸಂಬಂಧ ಪಟ್ಟಂತೆ, ಈಗ ಯಾರು ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ಪ್ರಶ್ನೆ ಕೇಳಲಾಗುತ್ತಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. 2022ರ ಡಿಸೆಂಬರ್ 31ರಂದು ಕೇಂದ್ರ ಸರ್ಕಾರ, ಚಲನಚಿತ್ರಗಳಿಗೆ ಸಂಬಂಧಪಟ್ಟಂತೆ ನಾಲ್ಕು ವಿಭಾಗಗಳನ್ನು ಮುಚ್ಚಿತು. ಚಲನಚಿತ್ರೋತ್ಸವ ನಿರ್ದೇಶನಾಲಯ, ರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಾಗಾರ, ಮಕ್ಕಳ ಚಲನಚಿತ್ರ ಸಮಾಜ ಮತ್ತು ಫಿಲಂಸ್ ಡಿವಿಜನ್. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳನ್ನು ಹಮ್ಮಿಕೊಳ್ಳುವುದೇ ಮೊದಲಾದ ಕೆಲಸಗಳು ಚಲನಚಿತ್ರೋತ್ಸವ ನಿರ್ದೇಶನಾಲಯದ್ದಾಗಿತ್ತು. ಪ್ರಾಚ್ಯಾಗಾರವಂತೂ ದೇಶವಿದೇಶಗಳ ಹಳೆಯ ಚಿತ್ರಗಳ, ಚಿತ್ರಗಳಿಗೆ ಸಂಬಂಧಿಸಿದ ಪ್ರಕಟಣೆ, ವಸ್ತುಗಳ ಭಂಡಾರ. ಮಕ್ಕಳ ಚಲನಚಿತ್ರಗಳ ನಿರ್ಮಾಣ, ಮಕ್ಕಳ ಚಲನ ಚಿತ್ರೋತ್ಸವ ಇತ್ಯಾದಿ ಮಕ್ಕಳ ಚಿತ್ರಸಮಾಜದ ಜವಾಬ್ದಾರಿಯಾಗಿತ್ತು. ಫಿಲಂ ಡಿವಿಜನ್ ಸಾಕ್ಷ್ಯ ಚಿತ್ರಗಳ ಮತ್ತು ಸುದ್ದಿಚಿತ್ರಗಳನ್ನು ತಯಾರಿಸುವ, ಸಂಗ್ರಹಿಸುವ ಪ್ರದರ್ಶಿಸುವ ವಿಭಾಗವಾಗಿತ್ತು.
ಈಗ ಈ ನಾಲ್ಕೂ ವಿಭಾಗಗಳನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಕೈಕೆಳಗೆ ತರಲಾಗಿದೆ. ನಿಗಮ ಈ ನಾಲ್ಕು ವಿಭಾಗಗಳನ್ನು ಹೇಗೆ ನಿಭಾಯಿಸುತ್ತದೆ ನೋಡಬೇಕು. 2021ರ ಸಾಲಿನ ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ತಿಂಗಳುಗಳೇ ಕಳೆದಿವೆ. ಈ ಬಾರಿಯ ಆಯ್ಕೆಯನ್ನು ನಿಗಮ ಸ್ವತಂತ್ರವಾಗಿ ಮಾಡುತ್ತದೋ, ಇಲ್ಲವೇ ವಾರ್ತಾ ಇಲಾಖೆಯ ಮೇಲುಸ್ತುವಾರಿಯಲ್ಲಿ ಮಾಡುತ್ತದೋ ಕಾದು ನೋಡಬೇಕು. ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಹಿಂದಿನ ವರ್ಷದಲ್ಲಿ ತಯಾರಾದ ಚಿತ್ರಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸುವುದಿದೆ. ತಿಂಗಳು ಕಳೆದರೂ 2022ರ ಸಾಲಿಗೆ ಇನ್ನೂ ಅರ್ಜಿ ಕರೆದಿಲ್ಲ.
ಕೇಂದ್ರದ ಮಾತು ಹಾಗಿರಲಿ, ಈ ತಿಂಗಳ ಹದಿನೇಳರಂದು ರಾಜ್ಯ ಮುಂಗಡಪತ್ರವನ್ನು ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿಗಳು ಮಂಡಿಸಲಿದ್ದಾರೆ. ಚಿತ್ರರಂಗದ ಕುರಿತಂತೆ ಅವರು ಬಹಳ ಉದಾರಿಗಳು ಎನ್ನುವುದು ಕಳೆದ ವರ್ಷ ೧೨೫ರಿಂದ ೨೦೦ ಚಿತ್ರಗಳಿಗೆ ಸಹಾಯಧನ ಏರಿಸಿದಾಗಲೇ ತಿಳಿಯಿತು. ಉದ್ಯಮದ ಪ್ರತಿನಿಧಿಗಳು ಈಗ ಕೊಡುವ 125ರ ಬದಲು 175 ಚಿತ್ರಗಳಿಗೆ ಸಹಾಯ ಧನ ನೀಡಲು ಒತ್ತಾಯಿಸಿದ್ದರು. ಇನ್ನೂ ಇಪ್ಪತ್ತೈದು ಸೇರಿಸಿದರು ಮುಖ್ಯಮಂತ್ರಿಗಳು.
ಅವರೇನೋ 200 ಚಿತ್ರಗಳಿಗೆ ಸಹಾಯಧನ ಎಂದು ಸಹಿ ಮಾಡಿದರು. ಆದರೆ ಅದು ಸಿಗುವುದು ಯಾವಾಗ? ಸಹಾಯಧನ ಆಯ್ಕೆ, ನೀತಿಯಲ್ಲಿ ಮಾರ್ಪಾಡು ಮಾಡಿ, ಸಕಾಲದಲ್ಲಿ ಅದು ದೊರಕುವಂತೆ ಮಾಡಲು ಸಾಧ್ಯವಾಯಿತೇ ಎನ್ನುವುದನ್ನು ಗಮನಿಸಬೇಕು. ಈಗಾಗಲೇ ಈ ವಿಷಯ ಬೇರೆ ಸಂದರ್ಭ ದಲ್ಲಿ, ಇದೇ ಅಂಕಣದಲ್ಲಿ ಪ್ರಸ್ತಾಪವಾಗಿದೆ. 2018ನೇ ಸಾಲಿನ ಸಹಾಯಧನ ಮತ್ತು ರಾಜ್ಯ ಪ್ರಶಸ್ತಿಗಳ ವಿಲೇವಾರಿಗೆ ತಕರಾರಿದೆ. ಬಹುಶಃ ಕೆಲವರಿಗೆ ಸಹಾಯಧನ ನೀಡಲಾಗಿದೆ. ಚಲನಚಿತ್ರ ಸೆನ್ಸಾರಾದ ದಿನಾಂಕದ ಗೊಂದಲದಿಂದ ಕೆಲವು ಚಿತ್ರಗಳು, ಆಯ್ಕೆಯಾಗಿದ್ದರೂ ಅವುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿರುವುದರಿಂದ ತಡೆ ಇದೆ. ಆ ಸಾಲಿನ ಪ್ರಶಸ್ತಿ ಆಯ್ಕೆಯೂ ಅದರ ಅಧ್ಯಕ್ಷರು ಮತ್ತು ಇಲಾಖೆಯ ಕಾರಣದಿಂದ ನ್ಯಾಯಾಲಯದಲ್ಲಿದೆ ಎನ್ನಲಾಗಿದೆ.
2019ರ ಸಾಲಿನ ಪ್ರಶಸ್ತಿಗೆ ಮತ್ತು ಸಹಾಯಧನ ನೀಡಲು ಆ ವರ್ಷ ತಯಾರಾದ ಚಿತ್ರಗಳ ನಿರ್ಮಾಪಕರಿಂದ ಅರ್ಜಿಗಳನ್ನು ಕರೆದು ವರ್ಷಗಳಾಗಿವೆ. ಕಳೆದ ವರ್ಷ 2020 ಸಹಾಯಧನಕ್ಕಾಗಿ ಆಯಾ ಸಾಲಿನಲ್ಲಿ ಚಿತ್ರ ನಿರ್ಮಿಸಿದ ನಿರ್ಮಾಪಕರಿಂದ ಅರ್ಜಿಗಳನ್ನು ಕರೆಯಬೇಕಷ್ಟೆ. ಇವುಗಳು ಪೂರ್ತಿ ಆಗಬೇಕಾದರೆ ಕನಿಷ್ಠ ಎಂದರೂ ಆರು ತಿಂಗಳಾಗಬಹುದು.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಪನೋರಮಾ ಆಯ್ಕೆಗೆ ತೀರ್ಪುಗಾರರಾಗಿ ಹೋಗುವವರು ಪ್ರತಿದಿನ ಐದು ಇಲ್ಲವೇ ಆರು ಚಿತ್ರಗಳನ್ನು ವೀಕ್ಷಿಸಿದರೆ, ಇಲ್ಲಿ ನಾಲ್ಕು ಚಿತ್ರಗಳನ್ನು ವೀಕ್ಷಿಸಲೂ ಹಿಂದೇಟು ಹಾಕುತ್ತಾರೆ ಎನ್ನಲಾಗಿದೆ. ಹಾಗಾಗಿಯೇ ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತದೆ.
ಸರ್ಕಾರ ಸಹಾಯಧನ ನೀತಿಯನ್ನು ಹೊಸ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಮರುಪರಿಶೀಲಿಸಿ, ಬದಲಾಯಿಸಬೇಕಾದ ಅಗತ್ಯವಿದೆ. ಕೋಟಿಗಟ್ಟಲೆ ಬಂಡವಾಳದ ಚಿತ್ರಗಳು ಕನ್ನಡದಲ್ಲಿ ತಯಾರಾಗಿವೆ, ಆಗುತ್ತಿವೆ, ಸಾವಿರಕೋಟಿ ಗಳಿಕೆ ಮಾಡಿ ದಾಖಲೆ ಮಾಡುತ್ತಿವೆ. ಇದೇ ಸಂದರ್ಭದಲ್ಲಿ ಸರ್ಕಾರ ನೀಡುವ ಸಹಾಯಧನದ ಅರ್ಧಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಸಿನಿಮಾ ತಯಾರಿಸುವ ಮಂದಿಯೂ ಇದ್ದಾರೆ. ಮೂಲಗಳ ಪ್ರಕಾರ ಇಂತಹ ಚಿತ್ರಗಳನ್ನು ನಿರ್ಮಿಸಿ, ಸಹಾಯಧನ ಪಡೆಯುವ ದೊಡ್ಡ ವರ್ಗವೇ ಇದೆ!
2011ರಲ್ಲಿ ಐದು ವರ್ಷಕ್ಕೆಂದು ಪ್ರಕಟವಾದ ಚಲನಚಿತ್ರ ನೀತಿ ಸಮಗ್ರವಾಗಿರಲಿಲ್ಲ. ಆಗಿನ್ನೂ ಸೆಲ್ಯುಲಾಯ್ಡ್ ಪೂರ್ತಿಯಾಗಿ ಬದಲಾಗಿಲ್ಲದ ದಿನಗಳು. ಈಗ ಪೂರ್ತಿಯಾಗಿ ಡಿಜಿಟಲ್‌ಗೆ ಸಿನಿಮಾ ಹೊರಳಿದೆ. ಈಗಿನ ಅಗತ್ಯಗಳು, ಮೂಲ ಸೌಲಭ್ಯಗಳು, ಪ್ರದರ್ಶನ ವ್ಯವಸ್ಥೆ ಮೊದಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚಲನಚಿತ್ರ ನೀತಿ ಬರಬೇಕಾಗಿದೆ.
ಹಿಂದೆ, 1994ರಲ್ಲಿ ತಜ್ಞರ ಸಮಿತಿಯೊಂದು ಸಮಗ್ರ ಅಧ್ಯಯನ ನಡೆಸಿ, ವರದಿಯೊಂದನ್ನು ನೀಡಿತ್ತು. ಅದರ ಹಲವು ಶಿಫಾರಸುಗಳಲ್ಲಿ ಒಂದು ಚಲನಚಿತ್ರ ಅಕಾಡೆಮಿ. ?ಚಲನಚಿತ್ರದಲ್ಲಿ ಶಿಕ್ಷಣ, ಶಿಕ್ಷಣದಲ್ಲಿ ಚಲನಚಿತ್ರ’ ಎನ್ನುವ ಘೋಷವಾಕ್ಯದೊಂದಿಗೆ, ತಡವಾಗಿಯಾದರೂ ಆರಂಭವಾದ ಅಕಾಡೆಮಿ. ಅದರ ಧ್ಯೇಯೋದ್ದೇಶಗಳನ್ನು ಈಡೇರಿಸಲು ಇನ್ನೂ ಪೂರ್ತಿಯಾಗಿ ಸಾಧ್ಯವಾಗುತ್ತಿಲ್ಲ. ಅದರದೇ ಆದ ಒಂದು ಕಟ್ಟಡ ಇದೆ. ಅಲ್ಲಿನ ಪ್ರದರ್ಶನ ಮಂದಿರವಿನ್ನೂ ಪೂರ್ತಿಯಾಗಿ ಪ್ರದರ್ಶನಕ್ಕೆ ತೆರೆದಿಲ್ಲ. ಚಲನಚಿತ್ರ ಭಂಡಾರಕ್ಕೆ ಬೇಕಾದ ಸೂಕ್ತ ವ್ಯವಸ್ಥೆಗಳಿಗಾಗಿ ಸರ್ಕಾರದಿಂದ ಇನ್ನೂ ಅನುದಾನ ಬಂದಿಲ್ಲ ಎನ್ನಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಫೆಬ್ರವರಿ ಕೊನೆಯವಾರ, ಮಾರ್ಚ್ ಮೊದಲ ವಾರ ನಡೆಯುವುದಿತ್ತು. ಕಳೆದ ವರ್ಷ ಮಾರ್ಚ್ ೩ರಂದು ಚಿತ್ರೋತ್ಸವ ಉದ್ಘಾಟನೆ ಆದಾಗ, ಮುಖ್ಯಮಂತ್ರಿಗಳು ಇನ್ನು ಪ್ರತಿ ವರ್ಷ ಮಾರ್ಚ್ ೩ರಂದೇ ಚಿತ್ರೋತ್ಸವ ಆರಂಭ ಆಗಲಿದೆ ಎಂದು ಪ್ರಕಟಿಸಿದರಲ್ಲದೆ, ಅದನ್ನು ‘ವಿಶ್ವ ಕನ್ನಡ ಸಿನಿಮಾ ದಿನ’ ಎಂದು ಆಚರಿಸುವುದಾಗಿಯೂ ಹೇಳಿದರು. ಮಾರ್ಚ್ 3 ಕನ್ನಡದ ಮೊದಲ ಮಾತಿನ ಚಿತ್ರ ‘ಸತಿ ಸುಲೋಚನಾ’ ತೆರೆಕಂಡ ದಿನ.
14ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ದಿನಾಂಕ ಕೂಡ ನಿಗದಿಯಾಗಿಲ್ಲ. ಈ ನಡುವೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಗಡ ಪತ್ರದ ಚರ್ಚೆಯ ವೇಳೆ ಉದ್ಯಮದ ಬೇಡಿಕೆಗಳನ್ನು ಮುಂದಿಟ್ಟಿದೆ. ಬಹುಶಃ ಅವುಗಳಲ್ಲಿ ಮುಖ್ಯವಾಗಿ ಮೈಸೂರಿನಲ್ಲಿನ ಚಿತ್ರನಗರಿ ಯೋಜನೆಗೆ ಸಂಬಂಧಪಟ್ಟಂತೆ ಇದೆ ಎನ್ನಲಾಗಿದೆ.
ಕೊನೆಗೂ ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಯಾಗಿದೆ. ಚಿತ್ರರಂಗದ ಗಣ್ಯರಿಗೆ, ಪ್ರಾತಿನಿಧಿಕ ಸಂಸ್ಥೆಗಳ ಮುಖ್ಯರಿಗೆ ಸೇರಿದಂತೆ ಸಂಬಂಧಪಟ್ಟವರಿಗೆ ಆಹ್ವಾನ ಇರಲಿಲ್ಲ, ಅವರೆಲ್ಲ ಈ ಕುರಿತು ಸಂಬಂಧಪಟ್ಟವರೊಂದಿಗೆ ತಮ್ಮ ನೋವನ್ನು ಹಂಚಿಕೊಂಡದ್ದಾಗಿ ತಿಳಿದು ಬಂದಿದೆ. ವಾರ್ತಾ ಇಲಾಖೆಯ ಕಾರ್ಯಕ್ರಮವಾದರೂ, ಇದರ ಟ್ರಸ್ಟ್ ಪೂರ್ತಿ ಈ ಕೆಲಸಗಳ ಜವಾಬ್ದಾರಿ ವಹಿಸಿಕೊಂಡಿದ್ದು, ಹೀಗಾಗಿದೆಯಂತೆ.
ಬೆಂಗಳೂರಿನಲ್ಲಿ ರಾಜಕುಮಾರ್ ಸ್ಮಾರಕ ಉದ್ಘಾಟನೆಯಾದಾಗ, ನೆರೆ ರಾಜ್ಯಗಳಿಂದಲೂ ಕಲಾವಿದರನ್ನು ಕರೆಸಲಾಗಿತ್ತು, ಈ ಬಾರಿ ಇಲ್ಲಿನವರಿಗೇ ಆಹ್ವಾನ ಇರಲಿಲ್ಲ ಎನ್ನಲಾಗಿದೆ. ಈ ಕುರಿತಂತೆ ಸಮಜಾಯಿಷಿ, ಸಮಾಧಾನಗಳು ಸಿಗುವುದು ಕಷ್ಟ. ಸರ್ಕಾರದ ಕೆಲಸ ದೇವರ ಕೆಲಸ. ದೇವರು ಕೊಟ್ಟರೂ…