Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ವಿಜೃಂಭಿಸುವ ಪರಭಾಷಾ ಚಿತ್ರಗಳ ನಡುವೆ ಕನ್ನಡ ಚಿತ್ರೋದ್ಯಮ

ಮೊನ್ನೆ ಅಕ್ಟೋಬರ್ 8ರಂದು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯಲ್ಲಿ ನಡೆಯಿತು. 2022ರ ಸಾಲಿನ ಚಿತ್ರಗಳಿಗೆ ಸಂದ ಪ್ರಶಸ್ತಿಗಳವು. ಆ ವರ್ಷ ಮುಖ್ಯವಾಹಿನಿ ಮತ್ತು ಸಮಾನಾಂತರ ಚಿತ್ರಗಳು ಕನ್ನಡದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತಯಾರಾಗಿದ್ದವು. ‘ಕಾಂತಾರ’ ಮತ್ತು ‘ಕೆಜಿಎಫ್ ಚಾಪ್ಟರ್ 2’ ನಂತಹ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದದ್ದೇ ಅಲ್ಲದೆ ಭಾರತೀಯ ಚಿತ್ರರಂಗದ ಗಮನವನ್ನು ಇತ್ತ ಹರಿಸುವಂತೆ ಮಾಡಿದ್ದವು. ಅತ್ತ ‘ಪೆದ್ರೋ’, ‘ಫೋಟೋ, ‘ಹದಿನೇಳೆಂಟು, ‘ಕೋಳಿ ಎಸು’, ‘ನಾನು ಕುಸುಮ’ ದಂತಹ ಚಿತ್ರಗಳಿದ್ದವು. ಅವುಗಳಲ್ಲಿ ಕೆಲವು, ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಸ್ಪರ್ಧಿಸಿ, ಪ್ರಶಸ್ತಿ ಪಡೆದವುಗಳೂ ಇದ್ದವು. ‘ವಿರಾಟಪುರ ವಿರಾಗಿ’ಯಂತಹ ಚಿತ್ರವಿತ್ತು. ಆದರೆ ಅಂತಿಮ ಹಂತಕ್ಕೆ ಬಂದ ಚಿತ್ರಗಳ ಸಂಖ್ಯೆ ಕಡಿಮೆ. ಪ್ರಶಸ್ತಿಗೆ ಸಂಬಂಧಪಟ್ಟಂತೆ ಹೊಸ ನಿಯಮಾವಳಿಗಳು ಕೆಲವು ಚಿತ್ರಗಳಿಗೆ ತೊಡಕಾದರೆ, ತೀರ್ಪುಗಾರರ ಸಮಿತಿಯಲ್ಲಿರುವ ಸದಸ್ಯರಿಗೆ ಸಿನಿಮಾ ಕುರಿತಂತೆ ಮತ್ತು ಪ್ರಶಸ್ತಿಗಳ ಉದ್ದೇಶದ ಕುರಿತಂತೆ ಇರುವ ತಿಳಿವಳಿಕೆಗಳೂ ಈ ಬೆಳವಣಿಗೆಗೆ ಕಾರಣವಾಯಿತು ಎನ್ನುತ್ತವೆ ಮೂಲಗಳು.

ಯಾವುದೇ ಪ್ರಶಸ್ತಿ ಆಯ್ಕೆ ವಿವಾದಾತೀತವಾಗಿರುವುದಿಲ್ಲ ಎನ್ನುವುದೇನೋ ನಿಜ; ಆದರೆ ವಿವಾದಗಳೇನೇ ಆಗಲಿ, ಎನ್ನುವ ಭಾವನೆಯ ಆಯ್ಕೆ ಸರಿಯಲ್ಲ. ಇತ್ತೀಚಿನ ರಾಷ್ಟ್ರಪ್ರಶಸ್ತಿಗಳ ತೀರ್ಪುಗಾರರ ಆಯ್ಕೆ, ಅವರ ತಾತ್ವಿಕ ನಿಲುವುಗಳ ಕುರಿತಂತೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಕೆಲವು ಕಾಲ ಚರ್ಚೆಯಾಗಿ ಎಂದಿನಂತೆ ಮರೆತು ಹೋಗುತ್ತದೆನ್ನಿ. ಈ ಬಾರಿ ಕನ್ನಡಕ್ಕೆ ಸಂದ ಕಥಾ ಚಿತ್ರಗಳ ವಿಭಾಗದ ಪ್ರಶಸ್ತಿ ಹೊಂಬಾಳೆ ಸಂಸ್ಥೆಯದಾಯಿತು. ಅದು ನಿರ್ಮಿಸಿದ ‘ಕಾಂತಾರ’ ಚಿತ್ರಕ್ಕೆ ಅತ್ಯುತ್ತಮ ಮನರಂಜನಾ ಚಿತ್ರಕ್ಕಿರುವ ಸ್ವರ್ಣಕಮಲದ ಗೌರವವಾದರೆ, ರಿಷಬ್ ಶೆಟ್ಟಿ ಅದರಲ್ಲಿನ ಅಭಿನಯಕ್ಕಾಗಿ ಪ್ರಶಸ್ತಿ ಪಡೆದರು. ಹೊಂಬಾಳೆ ನಿರ್ಮಿಸಿದ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಸಾಹಸ ಸಂಯೋಜನೆಗಾಗಿ ಅನ್ಸರಿವ್‌ ಪ್ರಶಸ್ತಿ ಪಡೆದರೆ, ಅತ್ಯುತ್ತಮ ಕನ್ನಡ ಚಿತ್ರಕಿರುವ ಪ್ರಶಸ್ತಿಯನ್ನು ಆ ಚಿತ್ರ ಪಡೆಯಿತು. ಚಿತ್ರಗಳಿಗೆ ಪ್ರಶಸ್ತಿ ಬಂದಾಗ ಅದರ ನಿರ್ಮಾಪಕ ಮತ್ತು ನಿರ್ದೇಶಕ ಇಬ್ಬರಿಗೂ ಪ್ರಶಸ್ತಿ ನೀಡಲಾಗುತ್ತದೆ. ಹೊಂಬಾಳೆ ಸಂಸ್ಥೆಯ ನಿರ್ಮಾಪಕರ ಪರವಾಗಿ ವಿಜಯ್ ಕಿರಗಂದೂರು ಮತ್ತು ಅವರ ಪತ್ನಿ ಶೈಲಜಾ ಅವರು ಪ್ರಶಸ್ತಿ ಸ್ವೀಕರಿಸಿದರು.

ಕಥೇತರ ವಿಭಾಗದಲ್ಲೂ ಈ ಬಾರಿ ಕನ್ನಡಕ್ಕೆ ಪ್ರಶಸ್ತಿಗಳು ಸಂದವು. ಮೊದಲ ಚಿತ್ರ ನಿರ್ದೇಶಕನಿಗಿರುವ ಪ್ರಶಸ್ತಿಯನ್ನು ‘ಮಧ್ಯಂತರ’ ಚಿತ್ರದ ಬಸ್ತಿ ದಿನೇಶ್ ಶೆಣೈ ಪಡೆದರೆ, ಅದರ ಸಂಕಲನಕಾರ ಸುರೇಶ್ ಅರಸ್ ಅವರೂ ಪ್ರಶಸ್ತಿಗೆ ಭಾಜನರಾದರು. ಅತ್ಯುತ್ತಮ ಕಲೆ/ಸಂಸ್ಕೃತಿ ಚಿತ್ರಕ್ಕೆ ಸಂದ ಪ್ರಶಸ್ತಿಯನ್ನು ನಿರ್ದೇಶಕ ಸುನಿಲ್ ಪುರಾಣಿಕ್ ಮತ್ತು ನಿರ್ಮಾಪಕರ ಪರವಾಗಿ ಅವರ ಮಗ ಸಾಗರ ಪುರಾಣಿಕ್‌ ಸ್ವೀಕರಿಸಿದರು.

ಗಂಭೀರ ಪರಂಪರೆಯ ಚಿತ್ರಗಳನ್ನು ಪಶಸ್ತಿಗೆ ಪರಿಗಣಿಸದೆ ಇರುವುದರ ಕುರಿತಂತೆ ಕರ್ನಾಟಕದಲ್ಲಿ ಮಾತ್ರವಲ್ಲ, ಇತರ ಭಾಷಾ ರಂಗಗಳಲ್ಲೂ ಚರ್ಚೆಗಳಾಗುತ್ತಿವೆ. ಇಂತಹ ಪ್ರತಿಷ್ಠಿತ ಪ್ರಶಸ್ತಿಗಳ ಆಯ್ಕೆ ಮಾಡುವವರೂ ಸಿನಿಮಾ ಕುರಿತಂತೆ ಅಕಾಡೆಮಿಕ್ ಆಗಿ ತಿಳಿದವರಿರಬೇಕು ಎನ್ನುವ ಒತ್ತಾಯ ಹೆಚ್ಚತೊಡಗಿದೆ. ಅದು ಅಗತ್ಯವೂಹೌದು.ಮುಂದಿನ ದಿನಗಳಲ್ಲಿ ಅಂತಹ ಬೆಳವಣಿಗೆನಿರೀಕ್ಷಿಸಬಹುದೇನೋ.

ಇನ್ನು ಲಾಗಾಯ್ತಿನಿಂದಲೂ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳದೇ ಕಾರುಬಾರು. ಅದರಲ್ಲೂ ರಾಜ್ಯದ ರಾಜಧಾನಿಯಲ್ಲಂತೂ ಅವುಗಳದೇ ರಾಜ್ಯಭಾರ ಎನ್ನುವಂತೆ, ಮಲ್ಟಿಪ್ಲೆಕ್ಸ್ ಮಂದಿ ವರ್ತಿಸುತ್ತಿರುತ್ತಾರೆ. ಇವುಗಳಿಗೆ ಯಾವುದಾದರೂ ರೀತಿಯಲ್ಲಿ ನಿಯಂತ್ರಣದ ಅಗತ್ಯವಿದೆ. ಆದರೆ ಬಹುತೇಕ ಮಲ್ಟಿಪ್ಲೆಕ್ಸ್‌ಗಳ ಮಾಲೀಕರು ಉತ್ತರ ಭಾರತದವರು. ಅಲ್ಲಿಂದಲೇನಿಯಂತ್ರಣ. ಮೊನ್ನೆ ರಾಜ್ಯ ಸರ್ಕಾರ ಚಿತ್ರಗಳ ಗಳಿಕೆ ಮತ್ತು ಒಟಟಿಗಳ ಮೇಲೆ ಶೇ.2 ಕರಭಾರ ಹಾಕುವ ಪ್ರಸ್ತಾಪವಿರುವ ಬಿಲ್‌ಗೆ ರಾಜ್ಯಪಾಲರು ಸಹಿ ಹಾಕುತ್ತಲೇ, ಈ ಮಂದಿ ಎಚ್ಚರಗೊಂಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮಾತ್ರ ತೆರಿಗೆ ಹಾಕುವ ಅಧಿಕಾರ; ರಾಜ್ಯ ಸರ್ಕಾರಗಳಿಗಿಲ್ಲ. ನಾವು ಈಗಾಗಲೇ ಜಿಎಸ್‌ಟಿ ನೀಡುತ್ತಿದ್ದೇವೆ ಎಂಬಿತ್ಯಾದಿಯಾಗಿ ಹೇಳತೊಡಗಿದ್ದಾರೆ.

ಹಿಂದಿನ ವಾರ ಕನ್ನಡ ಚಿತ್ರಗಳ ಕುರಿತಂತೆ ಚಿಂತನ ಮಂಥನ ಸಭೆಯೊಂದನ್ನು ಕನ್ನಡ ರಕ್ಷಣಾ ವೇದಿಕೆ ಕರೆದಿತ್ತು. ಕೃಷ್ಣಗೌಡರ ವಾಣಿಜ್ಯ ಮಂಡಳಿಯ ಸಹಯೋಗವಿತ್ತು. ಅಂದು ಪ್ರೊ.ಬರಗೂರು ರಾಮಚಂದ್ರಪ್ಪ ಅವರೂ ಸೇರಿದಂತೆ ಹಲವು ಮಂದಿ ಕನ್ನಡ ಪರ, ಚಿತ್ರರಂಗದ ಮಂದಿ ಅಲ್ಲಿದ್ದರು. ಕನ್ನಡ ಚಿತ್ರಗಳನ್ನು ನೋಡಲು ಪ್ರೇಕ್ಷಕರ ನಿರಾಸಕ್ತಿ, ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ಪ್ರವೇಶ ದರಗಳೇ ಮೊದಲಾದ ವಿಷಯಗಳ ಕುರಿತ ಚರ್ಚೆ ಅಲ್ಲಿತ್ತು. ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಇರುವಂತೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಕಡಿಮೆ ಪ್ರವೇಶ ದರ ನಿಗದಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದೂ ಸೇರಿದಂತೆ ಹಲವು ನಿರ್ಧಾರಗಳನ್ನು ಅಲ್ಲಿ ಕೈಗೊಳ್ಳಲಾಯಿತು.

ಕನ್ನಡದಲ್ಲಿ ತಯಾರಾಗುವ ಚಿತ್ರಗಳ ಸಂಖ್ಯೆಯ ಕುರಿತಂತೆ ಅಲ್ಲಿ ಪ್ರಸ್ತಾಪವಿತ್ತು. ನಿರ್ಮಾಪಕರಲ್ಲಿ ಒಂದು ವರ್ಗ ಕೇವಲ ಸಹಾಯಧನದ ಮಿತಿಯೊಳಗೆ, ಅದರಲ್ಲೂ ಲಾಭವನ್ನು ಇಟ್ಟುಕೊಂಡು ಗುಣಮಟ್ಟವಿಲ್ಲದ ಚಿತ್ರಗಳನ್ನು

ತಯಾರಿಸುತ್ತಿರುವುದಾಗಿಯೂ, ಸರ್ಕಾರದ ಈ ಸೌಲಭ್ಯದ ದುರುಪಯೋಗ ತಪ್ಪಿಸಲು ಈ ಕುರಿತ ಮರುಚಿಂತನೆ ಆಗಬೇಕು ಎನ್ನುವ ಮಾತೂ ಅಲ್ಲಿತ್ತು.

ಡಿಜಿಟಲ್ ದಿನಗಳ ನಂತರ, ಕೊರೊನಾ ಹಾವಳಿ ಮುಗಿದ ನಂತರ ಒಟಿಟಿಯತ್ತ ಪ್ರೇಕ್ಷಕರ ಸೆಳೆತ ಹೆಚ್ಚು. ಅಲ್ಲಿ ತಮಗೆ ಬೇಕಾದ ಭಾಷೆಯ, ತಮ್ಮ ಆಸಕ್ತಿಯ ಚಿತ್ರಗಳನ್ನು ನೋಡಲು ಸಾಧ್ಯ ಎನ್ನುವುದು ಇದಕ್ಕೆ ಕಾರಣ. ಪರಭಾಷೆಯ ಚಿತ್ರಗಳಷ್ಟೇ ಅಲ್ಲದೆ, ಕನ್ನಡಕ್ಕೆ ಡಬ್ ಆದ ಪರಭಾಷಾ ಚಿತ್ರಗಳ ಸಂಖ್ಯೆಯೂ ಕಡಿಮೆ ಏನಲ್ಲ. ಅದು ಒಟಟಿಗೆ ಮಾತ್ರ ಸೀಮಿತವಾಗಿಲ್ಲ. ಕಿರುತೆರೆಗೂ ವಿಸ್ತರಿಸಿದೆ, ಹಲವು ವಾಹಿನಿಗಳು, ವಿಶೇಷವಾಗಿ ಸಿನಿಮಾಗಳನ್ನೇ ಪ್ರಸಾರ ಮಾಡುವವು ಡಬ್ ಆದ ಚಿತ್ರಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡತೊಡಗಿವೆ. ಡಬ್ ಆದ ಚಿತ್ರಗಳ ಪ್ರಸಾರ ಎಂದರೆ, ವಾಹಿನಿಗಳ ಪಾಲಿಗೆ ಕಡಿಮೆ ಬಂಡವಾಳ, ಅಧಿಕ ಲಾಭ. ವ್ಯಾಪಾರ ಎಂದರೆ ಲಾಭದತ್ತ ತಾನೇ ಗಮನ!

ಈ ವಾರ ರಜನಿಕಾಂತ್ ಅಭಿನಯದ ತಮಿಳು ಚಿತ್ರ ‘ವೇಟೈಯನ್’ ತೆರೆಕಂಡಿದೆ. ನಿನ್ನೆ ಬೆಂಗಳೂರು ನಗರವೊಂದರಲ್ಲೇ ಅದರ ಸುಮಾರು ಎಂಟುನೂರು ಪ್ರದರ್ಶನಗಳಿದ್ದವು. ಮುಂಜಾನೆ ನಾಲ್ಕು ಗಂಟೆಯಿಂದ ಪ್ರದರ್ಶನ! ಇದು ಕರ್ನಾಟಕದಲ್ಲಿ ಮಾತ್ರ ಸಾಧ್ಯ. ಆಂಧ್ರಪ್ರದೇಶದಲ್ಲಿ ನಾಲ್ಕು ಪ್ರದರ್ಶನದ ಬದಲು ಇನ್ನೊಂದು ಪ್ರದರ್ಶನ ಹೆಚ್ಚು ಬೇಕೆಂದರೂ ಜಿಲ್ಲಾಧಿಕಾರಿಗಳ ಅನುಮತಿ ಬೇಕು; ಪ್ರವೇಶ ಶುಲ್ಕವೂ ಅಷ್ಟೇ. ಕೆಲವೆಡೆ ಸಾವಿರ ರೂ.ಗಳ ಗಡಿ ದಾಟಿದ್ದೂ ಇದೆ. ಅವರವರ ಇಷ್ಟ ಬಂದಂತೆ ಏರಿಕೆ.

ಈ ವಾರ ತೆರೆಕಾಣುತ್ತಿರುವ ಕನ್ನಡ ಚಿತ್ರ ‘ಮಾರ್ಟಿನ್’ಗೆ ಈ ತಮಿಳು ಚಿತ್ರ ತೆರೆಕಾಣುವ ಕಾರಣ ಚಿತ್ರಮಂದಿರಗಳು ದೊರಕುವುದು ಕಡಿಮೆಯಾಗಬಹುದು ಅನ್ನುವ ಆತಂಕವಿತ್ತು. ಅದು ದೂರವಾಗಿದೆ. ನಿನ್ನೆ ರಜನಿಕಾಂತ್ ಅಭಿಯದ ಚಿತ್ರದ ಪ್ರದರ್ಶನ ಎಂಟುನೂರರ ಗಡಿ ದಾಟಿದರೆ, ಇವತ್ತು ಅಷ್ಟಿಲ್ಲ, ಈ ಅಂಕಣ ಬರೆಯುವ ವೇಳೆಗೆ ಬುಕ್ ಮೈ ಶೋದಲ್ಲಿ 384 ಪ್ರದರ್ಶನಗಳನ್ನು ಹೇಳುತ್ತಿತ್ತು. ‘ಮಾರ್ಟಿನ್’ ಚಿತ್ರದ 450ಕ್ಕೂ ಹೆಚ್ಚು ಪ್ರದರ್ಶನಗಳು ಬೆಂಗಳೂರಿನಲ್ಲಿತ್ತು. ಅದೇನೂ ದೊಡ್ಡದಲ್ಲ. ಇನ್ನೂ ಹೆಚ್ಚು ಚಿತ್ರಮಂದಿರಗಳು ಲಭ್ಯವಾಗಬೇಕಿತ್ತು ಎನ್ನಿ.

ಹಾಂ! ವೇಟೈಯನ್ ಚಿತ್ರದ ಕನ್ನಡ, ಮಲಯಾಳ ತೆಲುಗು ಆವೃತ್ತಿಗಳೂ ಜೊತೆಜೊತೆಯಲ್ಲೇ ಬಿಡುಗಡೆಯಾಗಿವೆ. ಅದರಲ್ಲಿ ಕನ್ನಡ ಚಿತ್ರಗಳ ಸಂಖ್ಯೆ ಕೈಬೆರಳೆಣಿಕೆಗೆ ಒಂದೆರಡು ಹೆಚ್ಚು! ಡಬ್ಬಿಂಗ್ ಪರ ಹೋರಾಟ ಮಾಡಿದ, ಮಾಡುವ ಮಂದಿಯ ಗಮನಕ್ಕೆ ಇದು ಬರಲಿಲ್ಲವೋ ಏನೋ. ಡಬ್ಬಿಂಗ್‌ ಅವಕಾಶ ಕೊಟ್ಟ ನಂತರ, ಪರಭಾಷಾ ಚಿತ್ರಗಳ ಬಿಡುಗಡೆಯಲ್ಲಿ ವ್ಯತ್ಯಾಸ ಏನೂ ಆಗಿಲ್ಲ. ಇತರ ಭಾಷೆಗಳ ಜೊತೆಯಲ್ಲಿ ಇನ್ನಷ್ಟು ಗಳಿಕೆಗೆ ಆ ಭಾಷೆಗಳ ಚಿತ್ರಗಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ, ಕನ್ನಡ ಅಗ್ರಮಾನ್ಯ ಎನ್ನುವ ಘೋಷಣೆಯೊಳಗೆ, ಸಿನಿಮಾಗಳನ್ನು ತರುವ ಪ್ರಯತ್ನ ಆಗಬೇಕು. ಆ ನಿಟ್ಟಿನಲ್ಲಿ ಕೆಲಸಗಳಾಗಬೇಕು. ರಕ್ಷಣಾ ವೇದಿಕೆಯ ಚಿಂತನ-ಮಂಥನ ಕಾರ್ಯಕ್ರಮ ಆರಂಭವೇನೋ ಆಗಿದೆ. ಆದರೆ ಚಿತ್ರೋದ್ಯಮದ ಒಳಗಿರುವ ಸಮಸ್ಯೆ, ಅಹಮಿಕೆಗಳು, ಒಡೆದು ಆಳುವ ಪರಿ ಇವುಗಳನ್ನು ತಿಳಿಯುವ ಹೊತ್ತಿಗೆ ತಂತ್ರಜ್ಞಾನ ಮತ್ತೆಲ್ಲೋ ತಲುಪಿರುತ್ತದೆ.

ಸಿನಿಮಾ ನಿರ್ಮಾಣದಲ್ಲಿ ಕೃತಕ ಬುದ್ದಿಮತ್ತೆಯದೀಗ ದಾಪುಗಾಲು. ಯಾವುದೇ ಭಾಷೆಯ ಚಿತ್ರವನ್ನು ಇನ್ನೊಂದು ಭಾಷೆಗೆ ಡಬ್ ಮಾಡುವಾಗ, ಮೂಲ ಕಲಾವಿದರ, ಮೂಲ ಗಾಯಕನ ದನಿಯನ್ನು ಅಂತೆಯೇ ಮುದ್ರಿಸಿಕೊಳ್ಳುವುದಕ್ಕೆ ಸಾಧ್ಯವಂತೆ. ಅಮಿತಾಭ್ ಬಚ್ಚನ್‌ದೋ, ಶಾರೂಕ್ ಖಾನನದೋ ದನಿಯಲ್ಲಿ ಕನ್ನಡ ಮಾತುಗಳನ್ನು ತುಟಿ ಚಲನೆಗೆ ಹೊಂದಿಸಿ ಮಾಡಬಲ್ಲ ತಂತ್ರಜ್ಞಾನ ಈಗ ಇದೆ. ಇಂತಹ ವಿಷಯಗಳ ಕುರಿತ ತಿಳಿವಳಿಕೆ ಕನ್ನಡದ ಮಂದಿಗೆ ಕಡಿಮೆ ಎಂದೇ ಹೇಳಬೇಕು. ಕೃತಕ ಬುದ್ಧಿಮತ್ತೆಯ ಬಳಕೆಯ ತರಬೇತಿ ಪಡೆಯಲು ನಟ, ನಿರ್ಮಾಪಕ ಕಮಲಹಾಸನ್ ತೆರಳಿದ್ದು ವರದಿಯಾಗಿತ್ತು. ನಮ್ಮಲ್ಲಿ ಅಂತಹ ಕಲಿಕೆಯ ಆಸಕ್ತಿ ಇರುವವರು ಎಷ್ಟಿದ್ದಾರೆ? ಈ ತಂತ್ರಜ್ಞಾನವೂ ಸೇರಿದಂತೆ ಹೊಸ ಹೊಸ ಆವಿಷ್ಠಾರಗಳನ್ನು ಚಿತ್ರೋದ್ಯಮ ಬಳಸಿಕೊಳ್ಳಬೇಕು. ಅದು ಉದ್ಯಮದ ಪಾಲಿಗೆ ವರವಾಗುವಂತೆ ನೋಡಿಕೊಳ್ಳುವುದೋ, ಶಾಪವಾಗಿಸುವುದೋ ಉದ್ಯಮದ ಕೈಯಲ್ಲಿದೆ

ಡಿಜಿಟಲ್ ದಿನಗಳ ನಂತರ, ಕೊರೊನಾ ಹಾವಳಿ ಮುಗಿದ ನಂತರ ಒಟಿಟಿಯತ್ತ ಪ್ರೇಕ್ಷಕರ ಸೆಳೆತ ಹೆಚ್ಚು. ಅಲ್ಲಿ ತಮಗೆ ಬೇಕಾದ ಭಾಷೆಯ, ತಮ್ಮ ಆಸಕ್ತಿಯ ಚಿತ್ರಗಳನ್ನು ನೋಡಲು ಸಾಧ್ಯ ಎನ್ನುವುದು ಇದಕ್ಕೆ ಕಾರಣ. ಪರಭಾಷೆಯ ಚಿತ್ರಗಳಷ್ಟೇ ಅಲ್ಲದೆ, ಕನ್ನಡಕ್ಕೆ ಡಬ್ ಆದ ಪರಭಾಷಾ ಚಿತ್ರಗಳ ಸಂಖ್ಯೆಯೂ ಕಡಿಮೆ ಏನಲ್ಲ. ಅದು ಒಟಿಟಿಗೆ ಮಾತ್ರ ಸೀಮಿತವಾಗಿಲ್ಲ. ಕಿರುತೆರೆಗೂ ವಿಸ್ತರಿಸಿದೆ, ಹಲವು ವಾಹಿನಿಗಳು, ವಿಶೇಷವಾಗಿ ಸಿನಿಮಾಗಳನ್ನೇ ಪ್ರಸಾರ ಮಾಡುವವು ಡಬ್ ಆದ ಚಿತ್ರಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡತೊಡಗಿವೆ.

 

Tags: