Mysore
26
scattered clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ನಾಳೆಯಿಂದ ಸುತ್ತೂರು ಜಾತ್ರಾ ಮಹೋತ್ಸವ ಸಂಭ್ರಮ

ಮೈಸೂರು: ಕಪಿಲಾನದಿ ತೀರದ ನಂಜನಗೂಡು ತಾಲೂಕಿನ ಸುತ್ತೂರುಶ್ರೀ ಕ್ಷೇತ್ರದಲ್ಲಿ ಆರು ದಿನಗಳ ಕಾಲ ನಡೆಯಲಿರುವ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವವು ಬುಧವಾರದಿಂದ ಪ್ರಾರಂಭವಾಗಲಿದ್ದು, ಅದಕ್ಕಾಗಿ ವೈವಿಧ್ಯಮಯ ಹಾಗೂ ಮಧುವಣಗಿತ್ತಿಯಂತೆ ಸಕಲ ಸಿದ್ಧತೆ ಮಾಡಲಾಗಿದೆ. ಕೊರೊನಾ ಕಾರಣಕ್ಕಾಗಿ ಎರಡು ವರ್ಷಗಳಿಂದ ಸರಳವಾಗಿ ಆಚರಿಸಲ್ಪಟ್ಟಿದ್ದ ಸುತ್ತೂರು ಜಾತ್ರೆಯು ಬಾರಿ ವೈಭವದಿಂದ ಜರುಗುತ್ತಿರುವುದರಿಂದ ಸಾರ್ವಜನಿಕರ ಸಂಖ್ಯೆಯಲ್ಲೂ ದುಪ್ಪಟ್ಟಾಗುವ ಸಾಧ್ಯತೆ ಇರುವುದರಿಂದ 20 ಲಕ್ಷಕ್ಕೂ ಹೆಚ್ಚು ಜನರಿಗೆ ದಾಸೋಹಕ್ಕಾಗಿ ತಯಾರಿ ಮಾಡಿಕೊಳ್ಳಲಾಗಿದೆ.

ನಾಡು,ಹೊರ ರಾಜ್ಯದಿಂದ ಆಗಮಿಸುವ ಭಕ್ತರ ಸ್ವಾಗತ, ದೇವರ ದರ್ಶನ ಸೇರಿದಂತೆ ಎಲ್ಲ ಕಾರ್ಯಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಜಾತ್ರಾ ಮಹೋತ್ಸವ ಪ್ರಯುಕ್ತ ಸಾಮೂಹಿಕ ವಿವಾಹ, ರಥೋತ್ಸವ, ತೆಪ್ಪೋತ್ಸವ, ಕೊಂಡೋತ್ಸವ ಮೊದಲಾದ ಧಾರ್ಮಿಕ ಕಾರ್ಯಗಳು ಜರುಗಲಿದ್ದು, ಸುತ್ತೂರು ಮಠವನ್ನು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಮಾಡಲಾಗಿದೆ. ಜಾತ್ರೆಗೆ ಆಗಮಿಸುವ ಭಕ್ತರೆಲ್ಲರಿಗೂ ಪ್ರಸಾದ ವಿತರಣೆ ಮಾಡಲು ೫೦೦ಕ್ಕೂ ಹೆಚ್ಚು ನುರಿತ ಬಾಣಸಿಗರು ಸಜ್ಜಾಗಿದ್ದರೆ, ಲಕ್ಷ ಲಕ್ಷಗಟ್ಟಲೆ ಬಾದುಷ, ಮೈಸೂರು ಪಾಕ್, ಕೊಬ್ಬರಿ ಮಿಠಾಯಿ,ಕಾರಾಬೊಂದಿ ತಯಾರಿಸಲಾಗಿದೆ.

ರೈತರ ಅನುಕೂಲಕ್ಕಾಗಿ ಕೃಷಿ ಬ್ರಹ್ಮಾಂಡ ಸೇರಿ ಕೃಷಿ ಮೇಳವಿದ್ದರೆ, ಮತ್ತೊಂದು ಕಡೆ ವಸ್ತು ಪ್ರದರ್ಶನಕ್ಕೆ ಸಜ್ಜಾಗಿದೆ. ವಾಣಿಜ್ಯ ಮತ್ತು ವಾಣಿಜ್ಯೇತರ ಮಳಿಗೆಗಳಾಗಿ ವಿಂಗಡಿಸಿದ್ದು, ೪೦೦ಕ್ಕೂ ಮಳಿಗೆಗಳಲ್ಲಿ ಇದೆ. ಇದಲ್ಲದೆ, ಭಜನಾಮೇಳ,ಚಿತ್ರಸಂತೆ, ಸ್ಥಳದಲ್ಲೇ ಚಿತ್ರ ರಚಿಸುವ ರಾಜ್ಯಮಟ್ಟದ ಸ್ಪರ್ಧೆ,ಸಾಮೂಹಿಕ ವಿವಾಹ, ಕುಸ್ತಿಪಂದ್ಯಾವಳಿ, ಗ್ರಾಮೀಣ ಆಟಗಳ ಸ್ಪರ್ಧೆ ಮೊದಲಾದ ಕಾರ್ಯಕ್ರಮಕ್ಕಾಗಿ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ.

ನಾಳೆ ವಿದ್ಯುಕ್ತ ಚಾಲನೆ: ಬುಧವಾರ ಸಂಜೆ  4ಕ್ಕೆ ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ, ಕಾಸರಗೋಡು ಶಂಕರಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಮ್ಮುಖದಲ್ಲಿ,ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಧ್ಯಕ್ಷತೆಯಲ್ಲಿ ಸಚಿವ ಮುರುಗೇಶ್ ಆರ್.ನಿರಾಣಿ ವಸ್ತು ಪ್ರದರ್ಶನವನ್ನು, ಸಚಿವ ಬಿ.ಸಿ.ಪಾಟೀಲ್ ಕೃಷಿಮೇಳವನ್ನು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆರೋಗ್ಯ ತಪಾಸಣಾ ಶಿಬಿರವನ್ನು, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸಪೂಜಾರಿ ಸಾಂಸ್ಕೃತಿಕ ಮೇಳವನ್ನು ಉದ್ಘಾಟಿಸಲಿದ್ದಾರೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿರಿಧಾನ್ಯ ಮೇಳ, ಶಾಸಕರಾದ ಸೌಮ್ಯರೆಡ್ಡಿ ರಂಗೋಲಿ ಮತ್ತು ಸೋಬಾನೆ ಸ್ಪರ್ಧೆಯನ್ನು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ದೋಣಿ ವಿಹಾರವನ್ನು ಉದ್ಘಾಟಿಸಲಿದ್ದಾರೆ. ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಭಜನಾಂಜಲಿ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಸಿ.ಎಸ್.ನಿರಂಜನಕುಮಾರ್, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ವಿ.ಲೋಕೇಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಸ್ತುಪ್ರದರ್ಶನ: ಜಾತ್ರೆಯ ಪ್ರಮುಖ ಆಕರ್ಷಣೆಯಾದ ವಸ್ತು ಪ್ರದರ್ಶನದಲ್ಲಿ ಕರಕುಶಲ, ಕೈಮಗ್ಗ, ಗೃಹೋಪಯೋಗಿ ಪದಾರ್ಥಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಇರುತ್ತದೆ. ಸರ್ಕಾರದ ಅಭವೃದ್ಧಿ ಇಲಾಖೆಗಳು, ಕೈಗಾರಿಕಾ ಸಂಸ್ಥೆಗಳು, ಉದ್ಯಮಿಗಳು ಹಾಗೂ ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಜೆಎಸ್ಎಸ್ ಪ್ರೌಢಶಾಲೆಗಳ ವಿದ್ಯಾರ್ಥಿಗಳು ತಯಾರಿಸಿರುವ 200ಕ್ಕೂ ಹೆಚ್ಚು ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಪ್ರಾತ್ಯಕ್ಷಿಕೆಗಳು, ವೈದ್ಯಕೀಯ ಹಾಗೂ ತಾಂತ್ರಿಕ ವಸ್ತುಪ್ರದರ್ಶನ ಆಯೋಜಿಸಲಾಗಿದೆ.

ಸಾಮೂಹಿಕ ವಿವಾಹ: ಪ್ರತಿ ವರ್ಷದಂತೆ .19ರಂದು ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ಜಾತಿಮತ ಭೇದಭಾವವಿಲ್ಲದೆ ಎಲ್ಲರಿಗೂ ಮುಕ್ತ ಅವಕಾಶವಿದ್ದು, ಇಲ್ಲಿಯವರೆಗೆ 100ಕ್ಕೂ ಹೆಚ್ಚು ಜೋಡಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಸಾಮೂಹಿಕ ವಿವಾಹದಲ್ಲಿ ಅಂತರ್ಜಾತಿ ಹಾಗೂ ಅಂಗವಿಕಲ ಜೋಡಿಗಳು ಸಹ ವಿವಾಹವಾಗಲಿದ್ದಾರೆ. ವಧುವಿಗೆ ಮಾಂಗಲ್ಯ, ಸೀರೆ, ಕಾಲುಂಗರ ಹಾಗೂ ವರನಿಗೆ ಪಂಚೆ, ವಲ್ಲಿ, ಶರ್ಟ್ ನೀಡಲಾಗುತ್ತದೆ. ಜತೆಗೆ ಬಾಗಿನವನ್ನೂ ನೀಡಲಾಗುತ್ತದೆ.

ಭಜನಾ ಮೇಳ: ಸಂಜೆ 4 ಗಂಟೆಗೆ ರಾಜ್ಯಮಟ್ಟದ ಭಜನಾ ಮತ್ತು ಏಕತಾರಿ ಸ್ಪರ್ಧೆ ನಡೆಯಲಿದ್ದು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಸ್ಥಳದಲ್ಲೇ ಚಿತ್ರ ಬರೆಯುವ ರಾಜ್ಯಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅಲ್ಲದೆ ರಾಜ್ಯದ ಕಲಾವಿದರ ಜೊತೆಗೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕಲಾವಿದರುಗಳಿಂದ ಕಲಾ ಕೃತಿಗಳ ಪ್ರದರ್ಶನ ಮತ್ತು ಮಾರಾಟ ಮಾಡುವ ಚಿತ್ರ ಸಂತೆಯನ್ನು ಸಹ ಏರ್ಪಪಡಿಸಲಾಗಿದೆ.

ವಿಶೇಷ ಬಸ್ ವ್ಯವಸ್ಥೆ

ಸುತ್ತೂರು ಕ್ಷೇತ್ರಕ್ಕೆ ಜಾತ್ರಾ ಮಹೋತ್ಸವ ಪ್ರಯುಕ್ತ ಅಧಿಕ ಸಂಖ್ಯೆಯಲ್ಲಿ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ ಬಸ್ ಕಾರ್ಯಾಚರಣೆ ಮಾಡಲಾಗುತ್ತದೆ. ಮೈಸೂರು,ತೀ.ನರಸೀಪುರ, ಕೊಳ್ಳೇಗಾಲ, ಹುಣಸೂರು,ಕೆ.ಆರ್.ನಗರ,ಎಚ್.ಡಿ.ಕೋಟೆ, ಗುಂಡ್ಲುಪೇಟೆ,ಚಾಮರಾಜನಗರ, ಪಾಂಡವಪುರ ಕಡೆಯಿಂದ ಹೆಚ್ಚುವರಿಯಾಗಿ ಕಾರ್ಯಚರಣೆ ಮಾಡಲಾಗುತ್ತದೆ. ಇದಲ್ಲದೆ ಮೈಸೂರು ನಗರದ ಬನ್ನಿಮಂಟಪ, ಕುವೆಂಪುನಗರ, ಸಾತಗಳ್ಳಿ,ವಿಜಯನಗರ ಘಟಕದಿಂದ ಜಾತ್ರಾ ವಿಶೇಷ ಬಸ್ಗಳು ಸಂಚರಿಸಲಿವೆ. ಪ್ರತಿನಿತ್ಯವೂ ಬೆಳಿಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದದ ವ್ಯವಸ್ಥೆ ಇರುತ್ತದೆ. ದೂರದಿಂದ ಬರುವವರಿಗೆ ತಾತ್ಕಾಲಿಕ ಕುಟೀರಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ