Mysore
20
overcast clouds

Social Media

ಭಾನುವಾರ, 19 ಜನವರಿ 2025
Light
Dark

ಸ್ನೇಹ-ಸಾಮರಸ್ಯಕ್ಕೆ ಸಂಕ್ರಾಂತಿ ಸೇತುವೆಯಾಗಲಿ…

ಹಬ್ಬದ ಬಾಲ್ಯದ ನೆನಪು ಬಿಚ್ಚಿಟ್ಟ ರಘು ದೀಕ್ಷಿತ್

ಪ್ರತಿಯೊಂದು ಹಬ್ಬದ ಆಚರಣೆಯ ಹಿಂದೆ ಯಾವುದಾದರೊಂದು ಧಾರ್ಮಿಕ, ಯಾವುದೋ ಪೌರಾಣಿಕ ಕಾರಣಗಳು, ಯಾವುದಾದರೊಂದು ನಂಬಿಕೆ ಅಥವಾ ಕಥೆ ಇರುತ್ತದೆ ಮತ್ತು ಖುಷಿಯನ್ನು ಹಂಚಿಕೊಳ್ಳುವ ಹಿನ್ನೆಲೆಯಲ್ಲಿ ಹಬ್ಬ ಆಚರಿಸಲಾಗುತ್ತದೆ.
ನಮ್ಮ ಆಹಾರ ಧಾನ್ಯಗಳನ್ನು ಬೆಳೆಯುವ ಭೂಮಿಗೆ, ರೈತನಿಗೆ ಕೃತಜ್ಞರಾಗಿರಬೇಕು, ಒಗ್ಗಟ್ಟಾಗಿರಬೇಕು ಮತ್ತು ಸಂತೋಷಪಡಬೇಕು ಎಂಬುದು ಮಕರ ಸಂಕ್ರಾಂತಿಯ ಸಂಕೇತವಾಗಿದೆ. ಈ ಹಬ್ಬವು ಜನರಲ್ಲಿ ಉದಾರತೆ, ಸಾಮರಸ್ಯ, ಕೃತಜ್ಞತೆ ಮತ್ತು ಪ್ರೀತಿಯನ್ನು ಎಲ್ಲರಲ್ಲೂ ಉಂಟು ಮಾಡಬೇಕು. ಪ್ರತಿ ಹಬ್ಬವೂ ಖುಷಿಯನ್ನು ನೀಡುವ ಜೊತೆಗೆ ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ಒಂದಷ್ಟು ನೆನಪುಗಳನ್ನು, ತುಂಟಾಟಗಳನ್ನು ಮೆಲುಕು ಹಾಕಲು ಸುಂದರ ಅವಕಾಶವನ್ನು ನೀಡುತ್ತದೆ.
ಬಾಲ್ಯದಲ್ಲಿ ನಾನು ಕೂಡ ಎಳ್ಳು ಬೀರಿರುವುದು ಉಂಟು. ನಮ್ಮ ಮನೆ ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿ ಇತ್ತು. ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇರಲಿಲ್ಲ. ಹಾಗಾಗಿ, ಅಮ್ಮ ಎಳ್ಳು -ಬೆಲ್ಲ ಪೊಟ್ಟಣಗಳನ್ನು ತಯಾರು ಮಾಡಿ ಇಡುತ್ತಿದ್ದಳು. ನಾನು ಮತ್ತು ನನ್ನ ತಮ್ಮ ಇಬ್ಬರೂ ಹತ್ತಿರದವರ ಮನೆಗಳಿಗೆ ಎಳ್ಳು -ಬೆಲ್ಲ ಹಂಚುತ್ತಿದ್ದವು. ಹಬ್ಬಕ್ಕೆಂದು ನಮ್ಮ ಮನೆಯಲ್ಲಿಯೇ ಸಕ್ಕರೆ ಅಚ್ಚುಗಳನ್ನು ಮಾಡುತ್ತಿದ್ದರು. ಹತ್ತು ದಿನ ಮುನ್ನವೇ ಅಚ್ಚುಮಣೆಯನ್ನು ತೆಗೆದು ತೊಳೆದು ಒಣಗಿಸಿ, ನಂತರ ಸಕ್ಕರೆ ಅಚ್ಚು ಮಾಡುವ ಕೆಲಸ ಆರಂಭವಾಗುತ್ತಿತ್ತು. ನಮಗೆ ಅಚ್ಚುಗಳಿಗೆ ಸಕ್ಕರೆ ಪಾಕ ಬಿಡುವುದು ಎಂದರೆ ಏನೋ ಒಂದು ರೀತಿಯ ಮಜಾ ಇರುತ್ತಿತ್ತು.
ಹಬ್ಬದ ದಿನ ತಿಂಡಿ ತುಂಬಾ ತಡವಾಗುತ್ತಿತ್ತು. ಪೂಜೆ-ಪುನಸ್ಕಾರಗಳು ಮುಗಿದ ನಂತರವೇ ತಿಂಡಿ-ಊಟ. ನಮ್ಮ ಅಪ್ಪನ ಪೂಜೆಯೋ ಮ್ಯಾರಥಾನ್ ಪೂಜೆ. ನಮಗೆ ಹಸಿವು ತಡೆಯಲು ಆಗುತ್ತಿರಲಿಲ್ಲ. ಹಬ್ಬಕ್ಕೆ ಎಂದು ಮಾಡಿದ ತಿಂಡಿಗಳನ್ನು ಕದ್ದು ತಿನ್ನುತ್ತಿದ್ದ್ದೆವು. ನನಗಂತೂ ಶಾವಿಗೆ ಪಾಯಸ ಬಹಳ ಇಷ್ಟ. ಹಬ್ಬಕ್ಕೆ ಅದನ್ನು ಮಾಡಲೇಬೇಕಿತ್ತು. ಇನ್ನು ಹಿರಿಯರು ಮನೆಗೆ ಬಂದರೆ, ಅವರಿಂದ ಆಶೀರ್ವಾದ ಮತ್ತು ಖರ್ಚಿಗೆ ಕಾಸು ಸಿಗುತ್ತಿತ್ತು.
ಹೀಗೆ ಪ್ರತಿ ಹಬ್ಬವೂ ಒಂದೊಂದು ರೀತಿಯಲ್ಲಿ ನಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಲು ಸಮಯವನ್ನು ನೀಡುತ್ತವೆ. ನೆನಪಿಸಿಕೊಂಡು ಕುಟುಂಬದವರೆಲ್ಲ ಸೇರಿ ಖುಷಿಯಾಗಿ ಕಳೆಯಲು ದಾರಿಯಾಗುತ್ತವೆ. ಇಂತಹ ಹಬ್ಬಗಳನ್ನು ಎಲ್ಲರೂ ಒಟ್ಟಿಗೆ ಆಚರಿಸಿ. ಜಾತಿ-ಧರ್ಮಗಳನ್ನು ಮರೆತು ಎಳ್ಳು-ಬೆಲ್ಲ ಹಂಚಿ, ಅದನ್ನು ಸವಿಯಿರಿ. ಆ ಮೂಲಕ ಸ್ನೇಹ-ಸಾಮರಸ್ಯಕ್ಕೆ ಸೇತುವೆ ನಿರ್ಮಾಣವಾಗಲಿ. ಎಲ್ಲರೂ ಮಾನವರೇ. ಆದರೆ, ಹಬ್ಬಗಳನ್ನು ಯಾವ ರೀತಿ, ಎಷ್ಟು ಸ್ನೇಹಮಯವಾಗಿ, ಖುಷಿಯಾಗಿ ಆಚರಿಸುತ್ತೇವೆ ಎಂಬುದರ ಮೇಲೆ ಮನುಷ್ಯತ್ವ ಬೆಳೆಯುತ್ತದೆ. ಭೇದ-ಭಾವಗಳನ್ನು ಮರೆತು ಒಟ್ಟಾಗಿರಬೇಕು ಎಂಬ ಉದ್ದೇಶದಿಂದ ಹಿರಿಯರು ಈ ಪ್ರಕ್ರಿಯೆ ಶುರು ಮಾಡಿದ್ದಾರೆ. ಒಗ್ಗಟಾಗಿ ‘ನಾವು ಕನ್ನಡಿಗರು’ ಎಂಬ ಭಾವನೆಯಿಂದ ಹಬ್ಬವನ್ನು ಆಚರಿಸಿ.
ಎಳ್ಳು-ಬೆಲ್ಲವನ್ನು ಸವಿದು ಒಳ್ಳೆಯ ಮಾತನಾಡಿ, ಮುಖ್ಯವಾಗಿ ಕನ್ನಡವನ್ನು ಅಚ್ಚುಕಟ್ಟಾಗಿ, ಹೆಚ್ಚು ಮಾತನಾಡಿ. ಅನ್ನದಾತ ರೈತನಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ. ಹಬ್ಬದ ಊಟ ಮಾಡಿ. ಹಾಗಾಯೇ, ಹೊಸ ತಂಡವೊಂದು ‘ಆರ್ಕೆಸ್ಟ್ರಾ ಮೈಸೂರು’ ಎಂಬ ಸಿನಿಮಾ ಮಾಡಿ, ಸಂಕ್ರಾಂತಿ ಸಮಯಕ್ಕೆಂದು ಬಿಡುಗಡೆ ಮಾಡಿದೆ. ಅದನ್ನು ದಯವಿಟ್ಟು ವೀಕ್ಷಣೆ ಮಾಡಿ. ಹೊಸ ಪ್ರತಿಭೆಗಳನ್ನು, ಸಿನಿಮಾ ತಂಡವನ್ನು ಪ್ರೋತ್ಸಾಹಿಸಿ. ‘ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು’

(ನಿರೂಪಣೆ- ಬಿ.ಎನ್.ಧನಂಜಯಗೌಡ)

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ