Mysore
26
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸದ್ದಾಂ ಎಂಬ ತರುಣನ ನೃತ್ಯಸೇವೆ

ಮಹೇಂದ್ರ ಹಸಗೂಲಿ

ನಾವು ನೃತ್ಯ ಕಲಿಯಬೇಕು. ಎಲ್ಲರಂತೆ ನಾವೂ ವೇದಿಕೆ ಮೇಲೆ ನೃತ್ಯ ಮಾಡಿ ಸೈ ಅನ್ನಿಸಿಕೊಳ್ಳಬೇಕು. ಟಿವಿ ಚಾನೆಲ್‌ಗಳ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂಬ ಆಸೆ ಯಾವ ಮಕ್ಕಳಿಗೆ ಇರುವುದಿಲ್ಲ ಹೇಳಿ, ನಗರ ಭಾಗದಲ್ಲಿ ಬೇಕಾದಷ್ಟು ಅನುಕೂಲತೆಗಳಿರುತ್ತವೆ. ನೃತ್ಯ ತರಗತಿಗಳಿರುತ್ತವೆ. ಅಲ್ಲಿ ತರಬೇತಿ ಪಡೆದ ಮಕ್ಕಳು ನೃತ್ಯ ಕಲಿತು ಸಾಧನೆಯ ಹಾದಿ ತುಳಿಯುತ್ತಾರೆ. ಆದರೆ ಗ್ರಾಮೀಣ ಭಾಗದ ಮಕ್ಕಳಿಗೆ ಈ ಅವಕಾಶಗಳು ತೀರಾ ಕಡಿಮೆ.

ಅವಕಾಶ ವಂಚಿತ ಗ್ರಾಮೀಣ ಮಕ್ಕಳು ನೃತ್ಯವನ್ನು ಏಕೆ ಕಲಿಯಬಾರದು? ಎಂಬ ಆಲೋಚನೆ ಮಾಡಿದ ತರುಣನೊಬ್ಬ ಕಡುಬಡ ಮಕ್ಕಳಿಗೆ ಉಚಿತವಾಗಿ, ಸಾಧಾರಣ ಕುಟುಂಬ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ನೃತ್ಯ ಕಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸದ್ದಾಂ ಡ್ಯಾನ್ಸ್ ಗ್ರೂಪ್ ಮತ್ತು ಮೆಲೋಡೀಸ್‌ನ ಮಾಲೀಕ ಸದ್ದಾಂ ಸದ್ಯ ಗ್ರಾಮೀಣ ಭಾಗದ ಮಕ್ಕಳ ನೃತ್ಯ ಗುರುವಾಗಿ ಹೊರಹೊಮ್ಮುತ್ತಿದ್ದಾರೆ.

ಸದ್ದಾಂ ಅಹಮದ್ ಒಬ್ಬ ನೃತ್ಯಗಾರ, ನೃತ್ಯ ಸಂಯೋಜಕ, ಮಾಡೆಲ್. ಮೂಲತಃ ಮೈಸೂರಿನವರಾದರೂ ಓದಿ ಬೆಳೆದಿದ್ದು ಗುಂಡ್ಲುಪೇಟೆಯಲ್ಲಿ. ಹತ್ತನೇ ತರಗತಿ ಓದಿರುವ ಸದ್ದಾಂ ನೃತ್ಯದಲ್ಲಿ ನಿಪುಣರು. ಸದ್ದಾಂ ಅವರ ತಾಯಿ ಸಯೀದ ಬೇಗಂ ಶಿಕ್ಷಕಿಯಾದ್ದರಿಂದ ಸದ್ದಾಂರಿಗೆ ಚಿಕ್ಕ ವಯಸ್ಸಿನಿಂದಲೇ ಮನೆಯಲ್ಲಿಯೇ ನೃತ್ಯ ತರಬೇತಿ ತಾಯಿಯಿಂದಲೇ ದೊರೆತಿತು.

ಸದ್ದಾಂ ಒಬ್ಬ ಪ್ರತಿಭಾನ್ವಿತ ನೃತ್ಯ ಸಂಯೋಜಕ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆಯ ಹಾದಿಯಲ್ಲಿದ್ದಾರೆ. ಕಡು ಬಡತನದ ಕುಟುಂಬದಲ್ಲಿ ಬೆಳೆದ ಅವರು, ಆರಂಭದಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡುತ್ತಾ ಬೆಳೆದವರು. ಕಳೆದ 11 ವರ್ಷಗಳಿಂದ ಸದ್ದಾಂ ಡ್ಯಾನ್ಸ್ ಗ್ರೂಪ್ ಮತ್ತು ಮೆಲೋಡೀಸ್ ನೃತ್ಯ ಶಾಲೆ ನಡೆಸುತ್ತಿದ್ದು, ತನ್ನಂತೆ ಬಡ ಕುಟುಂಬದ ಸಾವಿರಾರು ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದಾರೆ.

ಸದ್ದಾಂ ತಮ್ಮ ಆರಂಭಿಕ ದಿನಗಳಲ್ಲಿ ಸ್ಥಳೀಯ ಕಾರ್ಯಕ್ರಮಗಳಲ್ಲಿ, ರಸಮಂಜರಿಗಳಲ್ಲಿ ನೃತ್ಯ ಮಾಡುತ್ತಾ, ಆಯೋಜಕರು ನೀಡಿದ ಗೌರವಧನದಿಂದ ಜೀವನ ಸಾಗಿಸುತ್ತಾ ತಮ್ಮ ಕನಸನ್ನು ಈಡೇರಿಸುವತ್ತ ಸಾಗಿದರು. ದಿನಗಳು ಕಳೆದಂತೆ ದೊಡ್ಡ ಅವಕಾಶಗಳು ಅವರನ್ನು ಅರಸಿ ಬಂದವು. ಸ್ಥಳೀಯ ಸಣ್ಣ ಕಾರ್ಯಕ್ರಮಗಳಿಗೂ ಸೈ ದೊಡ್ಡ ಕಾರ್ಯಕ್ರಮಗಳಿಗೂ ಸೈ ಎನ್ನುವ ಸದ್ದಾಂ ತಮ್ಮ ಪ್ರತಿಭೆಯ ಮೂಲಕವೇ ಜನರನ್ನು ರಂಜಿಸಿದರು.

ಸದ್ದಾಂ ಅವರ ಬಳಿ ನೃತ್ಯ ಕಲಿತ ಅನೇಕ ಮಕ್ಕಳು ಹಲವಾರು ವೇದಿಕೆಗಳಲ್ಲಿ ನೃತ್ಯ ಮಾಡಿ ಸಾಕಷ್ಟು ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಸದ್ದಾಂ ಡ್ಯಾನ್ಸ್ ಗ್ರೂಪ್‌ನ ವಿದ್ಯಾರ್ಥಿಗಳು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಅಲ್ಲಿಯೂ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಮಾಡೆಲಿಂಗ್ ಮತ್ತು ನೃತ್ಯ ಸಂಯೋಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆಗಳನ್ನು ಮಾಡುತ್ತಿರುವ ಸದ್ದಾಂರವರಿಗೂ ಹಲವು ಪ್ರಶಸ್ತಿಗಳು ಲಭಿಸಿವೆ. ಮಿಸ್ಟರ್ ಥೈಲ್ಯಾಂಡ್, ಮಿಸ್ಟರ್ ಮಿಡಲ್ ಈಸ್ಟ್ ಏಷಿಯಾ ಮತ್ತು ಮ್ಯಾನ್ ಆಫ್ ದ ವರ್ಲ್ಡ್, ಮಿಸ್ಟರ್ ಕರ್ನಾಟಕ ಇಂಟರ್‌ನ್ಯಾಷನಲ್, 2023ರ ಮಾರ್ಚ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ವಿಯೆಟ್ನಾಂನಲ್ಲಿ ನಡೆದ ಸ್ಪರ್ಧೆಯಲ್ಲಿ ಮಿಸ್ಟರ್‌ ವರ್ಲ್ಡ್ ಅಂಬಾಸಿಡಾರ್ ಇಂಟರ್‌ ನ್ಯಾಷನಲ್ ಗ್ಯಾಂಡ್
ನಿನ್ನರ್‌ ಆಗಿದ್ದಾರೆ.
ಇದರೊಂದಿಗೆ ಸಿನಿಮಾ ಕ್ಷೇತ್ರದ ವಿಷ್ಣುವರ್ಧನ್ ಪ್ರಶಸ್ತಿ, ಅಪ್ಪು ನಮನ ಪ್ರಶಸ್ತಿ, ಮಿನುಗು ತಾರೆ ಕಲ್ಪನಾ ಮತ್ತು ಜನಪ್ರಿಯ ತಾರೆ ಸೌಂದರ್ಯ ಮತ್ತು ಬಂಗಾರದ ಮನುಷ್ಯ ಪ್ರಶಸ್ತಿಗಳೂ ಇವರಿಗೆ ಲಭಿಸಿವೆ. ಅಲ್ಲದೆ ಕನ್ನಡಪರ ಸಂಘಟನೆಗಳಿಂದ ಅನೇಕ ಗೌರವ ಪುರಸ್ಕಾರಗಳೂ ಸಂದಿವೆ.

ಸದ್ಯ ಸದ್ದಾಂರವರು ಗುಂಡ್ಲುಪೇಟೆಯ ಖಾಸಗಿ ಬಸ್ ನಿಲ್ದಾಣದ ಬಳಿಯ ಹನುಮಾನ್ ಪ್ರಾವಿಷನ್ ಸ್ಟೋರ್ ಎದುರು ಯತ್ನಮ್ಮ ಕಾಂಪ್ಲೆಕ್ಸ್‌ನಲ್ಲಿ ನೃತ್ಯ ತರಬೇತಿ ತರಗತಿ ನಡೆಸುತ್ತಿದ್ದಾರೆ. ತೆರಕಣಾಂಬಿಯಲ್ಲಿಯೂ ತೆರಕಣಾಂಬಿ ಕಾಲೇಜು ರಸ್ತೆಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹತ್ತಿರದ ವಾಲ್ಮೀಕಿ ಭವನದ ಎದುರು ಭ್ರಮರಾಂಬ ಕಾಂಪ್ಲೆಕ್ಸ್ ನಲ್ಲಿಯೂ ತರಗತಿಗಳನ್ನು ನಡೆಸುತ್ತಿದ್ದಾರೆ.

ನನ್ನ ತಾಯಿಯೇ ನನ್ನ ನೃತ್ಯ ಗುರು, ನಾನು ಅನೇಕ ವರ್ಷಗಳಿಂದ ನೃತ್ಯ ತರಬೇತಿ ನೀಡುತ್ತಿದ್ದು, ಬುದ್ಧಿ ಮಾಂದ್ಯ ಮಕ್ಕಳಿಗೂ ಉಚಿತವಾಗಿ ನೃತ್ಯ ತರಬೇತಿ ನೀಡಿದ್ದೇನೆ. ಸದ್ದಾಂ ಡ್ಯಾನ್ಸ್ ಗ್ರೂಪ್‌ನಲ್ಲಿ ಬಡ ಮಕ್ಕಳಿಗೆ ಯಾವುದೇ ಶುಲ್ಕವಿಲ್ಲದೆ ನೃತ್ಯ ಕಲಿಸುತ್ತಿದ್ದೇನೆ. ಕಲಾಸೇವೆಯನ್ನು ಹಣದಿಂದ ಅಲ್ಲ ಶುದ್ಧ ಮನಸ್ಸಿನಿಂದ ಮಾಡಬೇಕು. ಇದೇ ನನ್ನ ಆಶಯ.
-ಸದ್ದಾಂ ಅಹಮದ್‌, ನೃತ್ಯ ಸಂಯೋಜಕ.

mahendrahasaguli60@gmail.com

Tags: