Mysore
17
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಭಯಕ್ಕೆ ಅರಿವೇ ಔಷಧಿ

ಡಾ. ನೀ.ಗೂ.ರಮೇಶ್
ಭಯ ಮತ್ತು ಅಜ್ಞಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭಯವಿದ್ದ ಕಡೆ ಅಜ್ಞಾನ, ಅಜ್ಞಾನ ಇದ್ದ
ಕಡೆ ಭಯ ಇರಲೇಬೇಕು. ಯಾವುದೇ ವಿಷಯದ ಬಗ್ಗೆ ನಮಗೆ ಅರಿವಿಲ್ಲದಿದ್ದಾಗ ಅಥವಾ ಅಪೂರ್ಣ ಮಾಹಿತಿ ಇದ್ದಾಗ ಆ ಕೆಲಸ ಮಾಡಲು ಹಿಂಜರಿಕೆ, ಭಯ ಉಂಟಾಗುವುದು ಸಾಮಾನ್ಯ ಸಂಗತಿ. ಉದಾಹರಣೆಗೆ ಹಾವನ್ನು ಕಂಡರೆ ಬಹಳ ಮಂದಿ ಹೆದರುತ್ತಾರೆ. ಆದರೆ, ಕೆಲವರು ಮಾತ್ರ ಅದನ್ನು ಕೈಯಲ್ಲಿ ಹಿಡಿದು ಆಡಿಸುತ್ತಾರೆ, ಮೈಮೇಲೆ ಬಿಟ್ಟುಕೊಳ್ಳುತ್ತಾರೆ, ಮನೆಯೊಳಗೆ ಬಂದರೂ ಸುಮ್ಮನಿರುತ್ತಾರೆ!! ಕಾರಣ, ಹಾವುಗಳ ಬಗ್ಗೆ ಅವರು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಎಲ್ಲ ಹಾವುಗಳೂ ಮನುಷ್ಯರನ್ನು ಕಚ್ಚುವುದಿಲ್ಲ, ಯಾವ ಹಾವೂ ತಮಗೆ ತೊಂದರೆ ಒದಗುವ ಸಂದರ್ಭ ಬರದ ಹೊರತು, ತಾನಾಗಿ ಹುಡುಕಿಕೊಂಡು ಬಂದು ಯಾರನ್ನಾಗಲಿ ಕಚ್ಚಿದ ಉದಾಹರಣೆಯಿಲ್ಲ ಎಂಬ ಸಾಮಾನ್ಯ ತಿಳಿವಳಿಕೆಯಿಂದ ಅವರಿಗೆ ಆ ಧೈರ್ಯ ಬಂದಿರುತ್ತದೆ. ಅವರು ಹಾವುಗಳಿಗೆ ಹೆಚ್ಚು ಹೆದರುವುದಿಲ್ಲ, ಎಚ್ಚರಿಕೆ ವಹಿಸುತ್ತಾರೆ. ಆದರೆ, ಹಾವುಗಳ ಬಗ್ಗೆ ಸಣ್ಣ ತಿಳಿವಳಿಕೆಯೂ ಇಲ್ಲದವರು ಹಾವುಗಳನ್ನು ಕಂಡರೆ ಸಾಕು ಗಾಬರಿಯಾಗಿ ಏನೇನೋ ಅವಾಂತರ ಮಾಡಿ ಮತ್ತಷ್ಟು ಸಮಸ್ಯೆಗೆ ಸಿಲುಕುತ್ತಾರೆ. ಅದೊಂದು ಹಾವನ್ನು ಕೊಂದರೆ ತನಗೆ ನೆಮ್ಮದಿ ಎಂಬ ನಿರ್ಧಾರಕ್ಕೂ ಬಂದುಬಿಡುತ್ತಾರೆ.
ಹಾಗಾಗಿ, ಜಗತ್ತಿನಲ್ಲಿ ಹಾವಿನಿಂದ ಸತ್ತವರಿಗಿಂತ ಹಾವಿನ ಭಯದಿಂದ ಸತ್ತವರೇ ಜಾಸ್ತಿ! ಹಾಗೆಯೇ ಮನುಷ್ಯನ ಭಯಕ್ಕೆ ಬಲಿಯಾದ ಹಾವುಗಳ ಸಂಖ್ಯೆ ಅದಕ್ಕಿಂತ ದುಪ್ಪಟ್ಟು ಜಾಸ್ತಿ ಎಂಬ ಮಾಹಿತಿ ಗಮನಾರ್ಹವಾದುದು.

ಅದೇ ರೀತಿ, ವಾಹನ ಚಾಲನೆ ಮಾಡಲು ಕಲಿಯುವ ಮುಂಚೆ ಚಾಲಕನ ಸೀಟಿಗೆ ಹತ್ತಿ ಕೂರಲೂ ಭಯ. ಆದರೆ ವಾಹನವನ್ನು ನಿಯಂತ್ರಿಸುವುದನ್ನು ತಿಳಿದ ಮೇಲೆ ಎಂತಹ ವಾಹನವನ್ನೂ ಲೀಲಾಜಾಲವಾಗಿ ಚಲಾ ಯಿಸುವುದಲ್ಲದೆ ಇತರರಿಗೂ ಹೇಳಿಕೊಡ ಬಹುದು. ಈಜು ಬರದ ವ್ಯಕ್ತಿಗೆ ನೀರಿಗೆ ಕಾಲಿಡಲೂ ಆತಂಕ. ಎಷ್ಟು ಆಳವಿದೆಯೋ ಎಂಬ ಭಯ. ಚೆನ್ನಾಗಿರುವ ಜಾಗದಲ್ಲಿಯೂಜಾರಿಬೀಳುವ ನಡುಕ. ಅದೇ ಈಜು ಕಲಿತ ವ್ಯಕ್ತಿಗೆ ಆಳ ಮುಖ್ಯವೇ ಆಗುವುದಿಲ್ಲ. ನೀರಿನ ಮರ್ಮ ಅವರಿಗೆ ಚೆನ್ನಾಗಿ ತಿಳಿದಿರುತ್ತದೆ.

ಹಾಗೆಯೇ, ನೂರಾರು ಜನರ ಮುಂದೆ ವೇದಿಕೆಯಲ್ಲಿ ನಿಲ್ಲಲು ನಡುಗುವ ವ್ಯಕ್ತಿ ಒಂದೆರಡು ಬಾರಿ ವೇದಿಕೆಯಲ್ಲಿ ಮಾತಾಡಿದ ನಂತರ ಮತ್ತೆ ಮತ್ತೆ ವೇದಿಕೆಯ ಮೇಲೆ ಹೋಗಲು ಬಯಸುತ್ತಾನೆ. ಆ ವೇದಿಕೆಯನ್ನು ನಿರ್ವಹಿಸುವುದನ್ನು ಕಲಿತ ನಂತರ ಲೀಲಾಜಾಲವಾಗಿ ಸಾವಿರಾರು ಸಭಿಕರನ್ನು ಮಂತ್ರಮುಗ್ಧ ರಾಗುವಂತೆ ಹಿಡಿದಿಟ್ಟುಕೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾನೆ. ಇದಕ್ಕೆಲ್ಲ ಕಾರಣ ವೇದಿಕೆಯಲ್ಲಿ ಹೇಗೆ ಮಾತನಾಡಬೇಕು? ಏನೇನು ಸಿದ್ಧತೆ ಮಾಡಿಕೊಳ್ಳಬೇಕು? ವೇದಿಕೆಯ ಮುಂದೆ ಇರುವವರು ಯಾರು? ಎಂಬೆಲ್ಲ ಪ್ರಜ್ಞೆ ಅವನ ಆತ್ಮವಿಶ್ವಾಸ ವನ್ನು ಹೆಚ್ಚಿಸುತ್ತದೆ.

ಇನ್ನು ವಾಹನ ಕಲಿಯುವಾಗ ಎಲ್ಲರಿಗೂ ಭಯವೇ. ತಾನು ಬಿದ್ದುಬಿಟ್ಟರೆ, ಕೈಕಾಲು ಮುರಿದರೆ, ಬೇರೆಯವರಿಗೆ ಗುದ್ದಿದರೆ, ಪೊಲೀಸ್ ಕೇಸಾದರೆ ಹೀಗೆ ಹಲವು ಭವಿಷ್ಯತ್ ಕಾಲದ ಕಲ್ಪನೆಗಳಲ್ಲೇ ಮುಳುಗಿದವರು ಅಂತಹ ವಿದ್ಯೆಗಳನ್ನು ಕಲಿಯುವುದು ತುಂಬಾ ಕಷ್ಟ. ಕಲಿತರೂ ರಸ್ತೆಯ ಮೇಲಿನ ಆಕಸ್ಮಿಕ ಪರಿಸ್ಥಿತಿಗಳನ್ನು ನಿಭಾಯಿಸುವುದು ಕಷ್ಟ. ಏಕೆಂದರೆ ಅವರಿಗೆ ತಾವು ನೋಡಿದ, ಕೇಳಿದ ವಾಹನ ಚಾಲನೆಯಲ್ಲಿ ಆಗುವ ಅಪಾಯಗಳೇ ತಲೆ ತುಂಬಾ ತುಂಬಿಕೊಂಡಿರುತ್ತವೆ. ಹಾಗಾಗಿ ಹಿರಿಯರಿಗಿಂತ ಮಕ್ಕಳೇ ಬೇಗ ವಾಹನ ಚಾಲನೆ ಕಲಿತುಬಿಡುತ್ತಾರೆ. ಏಕೆಂದರೆ, ಅವರಿಗೆ ಅಪಘಾತದ ಅನುಭವಗಳು ಕಡಿಮೆ. ಒಮ್ಮೆ ದ್ವಿಚಕ್ರ ವಾಹನ ಚಾಲನೆ ಮಾಡಿದವರು ಯಾವ ದ್ವಿಚಕ್ರ ವಾಹನವಾದರೂ ಓಡಿಸುತ್ತಾರೆ. ಒಂದು ಕಾರು ಓಡಿಸಲು ಕಲಿತವರು ಯಾವ ಕಾರು ಆದರೂ ಚಾಲನೆ ಮಾಡುತ್ತಾರೆ. ಇದಕ್ಕೆ ಕಾರಣ ಅವರಿಗೆ ಚಾಲನೆಯ ಬಗ್ಗೆ ಬಂದಿರುವ ತಿಳುವಳಿಕೆಯೇ ಹೊರತು ಬೇರೇನೂ ಅಲ್ಲ. ಯುವಜನರು, ವಿದ್ಯಾರ್ಥಿಗಳು ತಮಗೆ ಖುಷಿಕೊಡುವ ಸಂಗತಿಗಳನ್ನು ಮಾತ್ರ ಕಲಿಯುತ್ತಾ ಹೋಗದೆ, ನಮ್ಮ ಜೀವನಕ್ಕೆ ಅಗತ್ಯವಾದ, ನಮ್ಮ ಬದುಕು ರೂಪಿಸಿಕೊಡುವ ಕೌಶಲಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿತರೆ ಕಡಿಮೆ ಶ್ರಮದಲ್ಲಿ ಕಲಿಯಬಹುದಾಗಿರುತ್ತದೆ.

ಭಯವೂ ಕಡಿಮೆ ಇರುತ್ತದೆ. ಹೆಚ್ಚು ಅನುಕೂಲಗಳನ್ನೂ ಪಡೆಯಬಹುದಾಗಿರುತ್ತದೆ. ಓದು, ಬರಹ, ಮಾತು, ಹಾಡು, ನೃತ್ಯ, ನಟನೆ, ವಾಹನ ಚಾಲನೆ, ಈಜು, ಆಟ, ಕಂಪ್ಯೂಟರ್ ಕೆಲಸ ಯಾವುದೇ ಇರಲಿ ಅದರ ಬಗ್ಗೆ ತಿಳಿದುಕೊಂಡಷ್ಟೂ ಅದರ ಬಗೆಗೆ ಭಯವಿಲ್ಲದೆ ನಿರ್ವಹಿಸಬಹುದಾಗಿರುತ್ತದೆ. ಅಂತಹ ಕ್ರಮಬದ್ಧ ಕಲಿಕೆ ಮಾತ್ರ ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ. ಸಮಾಜಕ್ಕೆ ನಮ್ಮ ಅಗತ್ಯ ಇರುತ್ತದೆ. ಏಕೆಂದರೆ, ಇದು ಕೌಶಲಗಳ ಯುಗ. ಎಂತಹ ದೊಡ್ಡ ವ್ಯಕ್ತಿಯಾದರೂ ಸಣ್ಣ ಸಣ್ಣ ಕೌಶಲ ಅರಿತಿರುವ ವ್ಯಕ್ತಿಯ ಮೇಲೇ ಅವಲಂಬಿತರಾಗಿರುತ್ತಾರೆ. ಏಕೆಂದರೆ ಅವರು ಎಷ್ಟೇ ದೊಡ್ಡ ವ್ಯಕ್ತಿಯಾಗಿ ದ್ದರೂ ಕೆಲವು ವಿಷಯಗಳ ಅರಿವು ಇರುವುದಿಲ್ಲ.

ಇನ್ನೊಂದು ಮಾತು: ಎಲ್ಲ ವಿಷಯಗಳಲ್ಲೂ ಹೀಗೆಯೇ, ನಮಗೆ ಯಾರೋ ಮೋಸ ಮಾಡುತ್ತಿದ್ದಾಗ ಪ್ರಶ್ನಿಸಬೇಕೆಂದರೆ ನಮಗೆ ಅದರ ಬಗ್ಗೆ ತಿಳಿವಳಿಕೆ ಇರಬೇಕು. ಇಲ್ಲದಿದ್ದರೆ ಮೋಸ ಮಾಡುವವರಿಗೆ ನಮ್ಮ ಅಜ್ಞಾನವೇ ಆಯುಧವಾಗುತ್ತದೆ.ನಮ್ಮ ಎಲ್ಲ ಭಯಗಳಿಗೂ ಅಜ್ಞಾನವೇ ಕಾರಣ. ‘ಅರಿವು’ ಈ ಜಗತ್ತಿನ ಅತ್ಯಂತ ಶಕ್ತಿಯುತ ಆಯುಧ

” ಕೀಬೋರ್ಡ್ ನೋಡಿಕೊಳ್ಳದೆ ಟೈಪಿಂಗ್ ಮಾಡುವವರನ್ನು ಕಂಡಾಗ ಅದ್ಭುತವನ್ನೇ ಕಂಡಂತೆ ಭಾಸವಾಗುತ್ತದೆ. ಒಮ್ಮೆ ಕೀಗಳು ನಮ್ಮ ಮನಸ್ಸಿಗೆ ಬಂದರೆ ಸಾಕು ಎಂತಹ ಪರಿಸ್ಥಿತಿಯಲ್ಲಿಯೂ ನಿರರ್ಗಳವಾಗಿ ಟೈಪಿಂಗ್ ಮಾಡುತ್ತಾ ಹೋಗಬಹುದು. ಅದೆಲ್ಲವೂ ಬಂದಿದ್ದು ಅಭ್ಯಾಸದಿಂದ ಮಾತ್ರ. ವಾಹನ ಚಾಲನೆ, ಈಜು, ಭಾಷಣ, ಎಲೆಕ್ಟ್ರಿಕ್ ಕೆಲಸ ಇಂತಹ ಕೌಶಲ್ಯಾಧಾರಿತ ಕಲೆಗಳು ಆರಂಭದಲ್ಲಿ ಭಯ ಹುಟ್ಟಿಸುತ್ತವೆ. ಹೆಚ್ಚು ಅಭ್ಯಾಸವನ್ನು, ಆತ್ಮವಿಶ್ವಾಸವನ್ನು ಬಯಸುತ್ತವೆ. æ. Practice makes perfect ಎಂಬ ನಾಣ್ಣುಡಿಯಂತೆ ಪ್ರಯತ್ನ ಮತ್ತು ಅಭ್ಯಾಸ ಎಲ್ಲವನ್ನೂ ಕಲಿಸುತ್ತವೆ, ಎಲ್ಲ ಕಠಿಣ ಕೆಲಸಗಳನ್ನೂ ಮಾಡಿಸುತ್ತವೆ” 

Tags:
error: Content is protected !!