Mysore
23
mist

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕೀರ್ತಿ ರಾಜ್‌ ಸಿಂಗ್‌ ಮೈಸೂರಿನ ಸ್ಕೇಟಿಂಗ್‌ ಪತಾಕೆ

ಕೆ.ಎಂ. ಅನುಚೇತನ್

ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಜತೆಗೆ ಒಟ್ಟಾರೆ ಅವರ ವ್ಯಕ್ತಿತ್ವ ವಿಕಸನಕ್ಕೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವುದು ಮುಖ್ಯ ಎಂದು ಸಭೆ, ಸಮಾರಂಭಗಳಲ್ಲಿ ಅತಿಥಿ ಗಣ್ಯರು ಭಾಷಣ ಮಾಡುತ್ತಲೇ ಬಂದಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿಹೋಗಿರುವ ಇಂದಿನ ವಿದ್ಯಾರ್ಥಿಗಳು ಗಣ್ಯರ ಭಾಷಣದಲ್ಲಿನ ಈ ಅಂಶವನ್ನು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡವರೆಷ್ಟೋ !

ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ವಿದ್ಯಾಸಂಸ್ಥೆಯಲ್ಲಿ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬನ್ನಿಮಂಟಪದ ನಿವಾಸಿಗಳಾದ ಉದ್ಯಮಿ ಸುನಿಲ್ ಸಿಂಗ್ ಹಾಗೂ ಶಿಕ್ಷಕಿ ರೀತುದೇವಿ ಅವರ ಪುತ್ರ ಕೀರ್ತಿರಾಜ್ ಸಿಂಗ್ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿ ಚಿನ್ನದ ಪದಕಗಳನ್ನು ಬೇಟೆ ಆಡುತ್ತಿದ್ದಾರೆ. ಮಗನ ಕ್ರೀಡಾಸಕ್ತಿಗೆ ನೀರೆರೆಯುವ ಸಲುವಾಗಿಯೇ ಆಂಧ್ರಮೂಲದ ಈತನ ಪೋಷಕರು ಕಳೆದ ಕೆಲವು ವರ್ಷಗಳಿಂದ ಮೈಸೂರಿನಲ್ಲಿಯೇ ನೆಲೆಸಿ ಕೀರ್ತಿಗೆ ಶ್ರೀಕಾಂತ್ ರಾವ್ ಎಂಬವರಲ್ಲಿ ಸ್ಕೇಟಿಂಗ್ ತರಬೇತಿ ಕೊಡಿಸುತ್ತಿದ್ದಾರೆ.

ಕೀರ್ತಿ ೪ನೇ ವಯಸ್ಸಿನಲ್ಲಿಯೇ ಸ್ಕೇಟಿಂಗ್ ಗೇಮ್ ನಲ್ಲಿ ಆಸಕ್ತಿ ಬೆಳೆಸಿಕೊಂಡು ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ರಾಜ್ಯ, ರಾಷ್ಟ್ರಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಸ್ಪರ್ದಿಸಿ ಚಿನ್ನದ ಪದಕ ವಿಜೇತನಾಗಿದ್ದಾರೆ. ೧೪ ವರ್ಷದ ಎಳವೆಯಲ್ಲೇ ಒಟ್ಟು ೫೭ ಪದಕಗಳನ್ನು ಬಾಚಿಕೊಂಡು ಹೆತ್ತವರು ಮತ್ತು ಓದುವ ಶಾಲೆಗೂ ಕೀರ್ತಿ ತರುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಕೀರ್ತಿರಾಜ್ ರೂಪುಗೊಳ್ಳುತ್ತಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ನಡೆದ ಏಷ್ಯನ್ ಓಪನ್ ಶಾರ್ಟ್ ಟ್ರ್ಯಾಕ್ ಸೀಡ್ ಸ್ಕೇಟಿಂಗ್ ಟ್ರೋಫಿ-೨೦೨೫ರಲ್ಲಿ ೧೪ ವರ್ಷದ ಒಳಗಿನ ಐಸ್ (ಹಿಮ) ಸ್ಕೇಟಿಂಗ್‌ನ ಮೊಟ್ಟಮೊದಲ ಸ್ಕೇಟರ್ ವಿಜೇತನಾಗಿ ಭಾರತಕ್ಕೆ ಎರಡು ಚಿನ್ನದ ಪದಕ ಗೆದ್ದು ಕೊಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಭಾರತದ ಡೆಹ್ರಾಡೂನ್‌ನ ಹಿಮಾದ್ರಿ ಐಸ್ ಸ್ಕೇಟಿಂಗ್ ರಿಂಕ್‌ನಲ್ಲಿ ಕಳೆದ ಆ.೨೦ರಿಂದ ೨೩ರವರೆಗೆ ನಡೆದ ಏಷ್ಯನ್ ಸ್ಕೇಟಿಂಗ್ ಗೇಮ್ಸ್‌ನಲ್ಲಿ ಐಸ್(ಹಿಮ) ಸ್ಕೇಟರ್ ಹಾಗೂ ರೋಲರ್ ಐಸ್ ಸ್ಕೇಟಿಂಗ್ ಎರಡು ವಿಭಾಗದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ವಿಶ್ವದ ಹಲವಾರು ದಾಖಲೆಗಳನ್ನು ಮುರಿದು, ಭಾರತದಲ್ಲೇ ೧೪ ವರ್ಷದೊಳಗಿನ ಬಾಲಕರ ಸ್ಕೇಟಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್:  ಕೀರ್ತಿರಾಜ್ ಸಿಂಗ್ ತನ್ನ ಕ್ರೀಡಾಸಕ್ತಿಯಿಂದ ೫೭ ಕ್ಕೂ ಹೆಚ್ಚು ಪದಕಗಳ ವಿಜೇತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ್ದಾರೆ. ಈವರೆಗೆ ರಾಷ್ಟ್ರ ಮಟ್ಟದಲ್ಲಿ ನಾಲ್ಕು ಹಾಗೂ ರಾಜ್ಯಮಟ್ಟದಲ್ಲಿ ೧೦ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದು, ಕರ್ನಾಟಕ, ತಮಿಳುನಾಡು, ತೆಲಂಗಾಣ, ಹೊಸದಿಲ್ಲಿ, ಉತ್ತರಾಖಂಡ, ಜಾರ್ಖಂಡ್, ಮೊಹಾಲಿ ಸೇರಿದಂತೆ ವಿವಿಧೆಡೆ ನಡೆದ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತನಾಗಿ ದಾಖಲೆ ಬರೆದಿದ್ದಾನೆ. ಈತನ ಪೋಷಕರು ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ವಿದೇಶಿ ಮಹಿಳಾ ತರಬೇತುದಾರರಿಂದಲೂ ತರಬೇತಿ ಕೊಡಿಸಿದ್ದಾರೆ. ಬಾಲಕ ಸ್ಕೇಟಿಂಗ್ ಗೇಮ್ಸ್‌ನಲ್ಲಿ ಮಾತ್ರವಲ್ಲದೇ ಓದಿನಲ್ಲೂ ಮುಂದಿದ್ದು, ಈತನ ಕ್ರೀಡಾಸಕ್ತಿಗೆ ಪೋಷಕರು ನೀರೆರೆಯುತ್ತಿರುವ ಜೊತೆಗೆ ಅವರು ವಿದ್ಯಾಭ್ಯಾಸ ಮಾಡುತ್ತಿರುವ ಮಹಾಜನ ಶಿಕ್ಷಣ ಸಂಸ್ಥೆಯಿಂದಲೂ ವಿದ್ಯಾರ್ಥಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ಸಂಸ್ಥೆಯಿಂದ ಕ್ರೀಡೆಗೆ ನೆರವು: ಏಷ್ಯನ್ ಗೇಮ್ಸ್‌ನಲ್ಲಿ ವಿಜೇತನಾಗಿರುವ ವಿದ್ಯಾರ್ಥಿ ಕೀರ್ತಿರಾಜ್ ಸಿಂಗ್‌ಗೆ ಮುಂದೆ ಈತ ಭಾಗವಹಿಸಲಿರುವ ಕ್ರೀಡಾ ಸ್ಪರ್ಧೆಗಳಿಗೆ ಆರ್ಥಿಕ ನೆರವು ನೀಡಲು ಮಹಾಜನ ಶಿಕ್ಷಣ ಸಂಸ್ಥೆ ಉತ್ಸುಕತೆ ತೋರಿದೆ. ಈತನಿಂದ ಸಂಸ್ಥೆಗೆ ಮತ್ತಷ್ಟು ಕೀರ್ತಿ ಬಂದಿದ್ದು, ವಿದ್ಯಾರ್ಥಿಯ ಭವಿಷ್ಯದ ಶಿಕ್ಷಣಕ್ಕಾಗಿ ಹಾಗೂ ಕ್ರೀಡೆಯ ಭಾಗವಹಿಸುವಿಕೆಗಾಗಿ ಸಂಸ್ಥೆಯು ಆರ್ಥಿಕ ಸಹಾಯ ಮಾಡಲಿದ್ದು, ಉಚಿತ ಶಿಕ್ಷಣ ನೀಡಲು ತೀರ್ಮಾನಿಸಿದೆ. ಈತ ೧೬ನೇ ವಯಸ್ಸಿನ ನಂತರ ಒಲಿಂಪಿಕ್ಸ್ ಗೇಮ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದು, ಅದಕ್ಕಾಗಿ ಸಂಸ್ಥೆಯು ಸಂಪೂರ್ಣ ಆರ್ಥಿಕ ಸಹಾಯವನ್ನು ಭರಿಸಲು ಮುಂದಾಗಿದ್ದು, ತಮ್ಮ ಸಂಸ್ಥೆಯಲ್ಲಿ ಉನ್ನತ ಶಿಕ್ಷಣದವರೆಗೂ ವ್ಯಾಸಂಗ ಮಾಡಲು ಅವಕಾಶವಿದ್ದು, ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡುವುದಾಗಿ ಮಹಾಜನ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ವಿಜಯಲಕ್ಷ್ಮೀ ಮುರಳೀಧರ್ ಹಾಗೂ ಮುಖ್ಯ ಶಿಕ್ಷಕಿ ರಾಜೇಶ್ವರಿ ಅಯ್ಯರ್ ಸಂತಸ

ಕಿರಿಯರ ವರ್ಲ್ಡ್‌ಕಪ್‌ಗೆ ಗುರಿ:  ಹಲವು ಪಂದ್ಯಾವಳಿಗಳಲ್ಲಿ ವಿಜೇತರಾಗಿ ಕೀರ್ತಿ ತಂದಿರುವ ಬಾಲಕ ಕೀರ್ತೀರಾಜ್ ಸಿಂಗ್ ಸದ್ಯ ಮುಂಬರುವ ಐಸ್ ಸ್ಕೇಟಿಂಗ್ ಜೂನಿಯರ್ ವರ್ಲ್ಡ್ ಕಪ್‌ಅನ್ನು ಎದುರು ನೋಡುತ್ತಿದ್ದು ಅದಕ್ಕಾಗಿ ನಿರಂತರ ತರಬೇತಿ ಹಾಗೂ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಖೇಲೋ ಇಂಡಿಯಾ ಕ್ರೀಡೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದು, ಮುಂದಿನ ವರ್ಷ ಭಾಗವಹಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ನಿರಂತರವಾಗಿ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುವುದಲ್ಲದೇ, ಒಲಿಂಪಿಕ್ಸ್, ವಿಶ್ವ ಮಟ್ಟದ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸುವ ಗುರಿ ಹೊಂದಿದ್ದಾರೆ.

” ನಾಲ್ಕನೇ ವಯಸ್ಸಿನಿಂದಲೇ ಸ್ಕೇಟಿಂಗ್‌ನಲ್ಲಿ ಆಸಕ್ತಿ ಹುಟ್ಟಿದ್ದು, ಪೋಷಕರ ಉತ್ತೇಜನದಿಂದಾಗಿ ನಿತ್ಯವೂ ಅಭ್ಯಾಸದಲ್ಲಿ ತೊಡಗಿಕೊಂಡಿದ್ದೇನೆ. ಮುಂದಿನ ವರ್ಷ ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದೇನೆ ಹಾಗೂ ಜೂನಿಯರ್ ವರ್ಲ್ಡ್ ಕಪ್ ಸ್ಕೇಟಿಂಗ್‌ನಲ್ಲಿ ಚಿನ್ನದ ಪದಕ ಗೆಲ್ಲಬೇಕೆಂಬ ಕನಸಿದೆ.”

– ಕೀರ್ತಿರಾಜ್ ಸಿಂಗ್, ಸ್ಕೇಟಿಂಗ್ ಕ್ರೀಡಾಪಟು

” ಪದಕಗಳ ಬೇಟೆ:  ಕೀರ್ತಿರಾಜ್ ಸಿಂಗ್ ಈವರೆಗೆ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ೧೦, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ೪ ಚಿನ್ನದ ಪದಕ, ರಾಷ್ಟ್ರಮಟ್ಟದ ರೋಲಿಂಗ್ ಸ್ಕೇಟಿಂಗ್‌ನಲ್ಲಿ ೩ ಚಿನ್ನ, ೨ ಬೆಳ್ಳಿ, ೧ ಕಂಚು ಸೇರಿದಂತೆ ೬ ಪದಕಗಳನ್ನು ಪಡೆದಿದ್ದು, ಒಟ್ಟಾರೆ ೫೭ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.”

Tags:
error: Content is protected !!