ಪೊಲೀಸ್ ಎಂದರೆ ಸಾರ್ವಜನಿಕರಲ್ಲಿ ಏನೋ ಒಂದು ಭಯ. ಅವರ ಸಹವಾಸ ನಮಗೇಕೆ ಎನ್ನುವವರೇ ಹೆಚ್ಚು. ಪೊಲೀಸ್ ಎಂದರೆ ಕೈಯಲ್ಲಿ ಲಾಠಿ ಹಿಡಿದುಕೊಂಡು ತಪ್ಪಿತಸ್ಥರನ್ನು ಎಚ್ಚರಿಸುವ ಕೆಲಸ ಮಾಡುವವರು ಎಂಬ ಮನೋಭಾವನೆ ಇದೆ. ಆದರೆ ಪೊಲೀಸ್ ಎಂದರೆ ಭಯವಲ್ಲ ಅವರು ಭರವಸೆ ಎಂಬುದನ್ನು ತಮ ಸಮಾಜಮುಖಿ ಕಾರ್ಯಗಳಿಂದ ತೋರಿಸಿಕೊಟ್ಟಿದ್ದಾರೆ ಯುವ ಪೊಲೀಸ್ ಸಿಬ್ಬಂದಿ ಎಸ್.ಎಸ್.ಗೋವಿಂದರಾಜು.
ಗೋವಿಂದರಾಜು ಸರಗೂರು ತಾಲ್ಲೂಕಿನ ಸಾಗರ ಗ್ರಾಮದ ನಾರಾಯಣಚಾರ್ ಮತ್ತು ನಾಗಮಣಿ ದಂಪತಿಗಳ ಪುತ್ರ, ಮೈಸೂರು ಜಿಲ್ಲಾ ವ್ಯಾಪ್ತಿಯ 112 ಪೊಲೀಸ್ ಸಹಾಯವಾಣಿ ವಾಹನದ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಕರ್ತವ್ಯದ ಜೊತೆ ಜೊತೆಗೆ ಸಮಾಜಮುಖಿ ಕೆಲಸ ಕಾರ್ಯಗಳಿಂದ ಮತ್ತು ಮೂಲ ಸೌಕರ್ಯದಿಂದ ವಂಚಿತರಾದ ಅದಿವಾಸಿ ಸಮುದಾಯದವರ ಬಗ್ಗೆ ಕಾಳಜಿ ವಹಿಸುತ್ತಾ ಜನಸ್ನೇಹಿಯಾಗಿಯೂ ಕರ್ತವ್ಯ ನಿರ್ವಹಿಸಬಹುದು ಎಂಬುದನ್ನು ತೋರಿಸಿಕೊಡುವ ಮೂಲಕ ಯುವ ಪೊಲೀಸ್ ಸಿಬ್ಬಂದಿಗಳಿಗೆ ಮಾದರಿಯಾಗಿದ್ದಾರೆ.
ಇತ್ತೀಚೆಗಷ್ಟೇ ತಾಲ್ಲೂಕಿನ ಎನ್.ಬೇಗೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ಗುಂಡಿಗಳು ನಿರ್ಮಾಣವಾಗಿದ್ದವು. ಈ ವೇಳೆ ಗೋವಿಂದರಾಜು ಅವರು ಆ ಭಾಗದ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾರ್ವಜನಿಕ ಶ್ರಮದಾನದ ಮೂಲಕ ರಸ್ತೆಯನ್ನು ದುರಸ್ತಿ ಪಡಿಸುವ ಮೂಲಕ ಸಾರ್ವಜನಿಕ ವಲಯದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗೋವಿಂದರಾಜು 112 ಪೊಲೀಸ್ ಸಹಾಯವಾಣಿ ವಾಹನದ ಸಿಬ್ಬಂದಿಯಾಗಿದ್ದು ಅವರು ಕರ್ತವ್ಯ ನಿರ್ವಹಿಸುವಾಗ ಯಾವುದೇ ಅಪಘಾತಗಳು ಸಂಭವಿಸಿದಾಗ ಕೂಡಲೇ ಸ್ಥಳಕ್ಕೆ ಆಗಮಿಸಿ ಗಾಯಾಳು ಗಳನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಸಾಕಷ್ಟು ಜೀವಗಳನ್ನು ಉಳಿಸಿದ್ದಾರೆ. ತಮ್ಮ ಈ ಸೇವಾ ಮನೋಭಾವನೆಯಿಂದಲೇ ಇಂದು ಗೋವಿಂದರಾಜು ತಾಲ್ಲೂಕಿನ ಮನೆ ಮಾತಾಗಿದ್ದಾರೆ. ಇವರು ಪೊಲೀಸ್ ಇಲಾಖೆಗೆ ಸೇರಿದಾಗಿನಿಂದಲೂ ಕರ್ತವ್ಯದಲ್ಲಿ ಬದ್ಧತೆ ಮತ್ತು ಸಾಮಾಜಿಕ ಸೇವಾಕಾರ್ಯಗಳಿಂದಲೇ ತಾಲ್ಲೂಕಿನ ಜನರ ವಿಶ್ವಾಸ ಗಳಿಸಿದ್ದು, ಸಾಕಷ್ಟು ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ತನಿಖೆಯಲ್ಲಿ ಕೌಶಲವನ್ನು ತೋರಿಸುವ ಮೂಲಕ ಇತರ ಯುವ ಪೊಲೀಸ್ ಸಿಬ್ಬಂದಿಗೆ ಮಾದರಿಯಾಗಿದ್ದಾರೆ.