Mysore
27
few clouds

Social Media

ಗುರುವಾರ, 10 ಏಪ್ರಿಲ 2025
Light
Dark

ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಉದಯ್ ಅರಸ್

ಅನಿಲ್ ಅಂತರಸಂತೆ

ಛಾಯಾಗ್ರಹಣವೆಂಬುದು ಒಂದು ವಿಶಿಷ್ಟ ಕಲೆ. ಕೈಯಲ್ಲೊಂದು ಕ್ಯಾಮೆರಾ ಇದ್ದರೆ ಯಾರು ಬೇಕಿದ್ದರೂ ಸುಂದರ ಚಿತ್ರಗಳನ್ನು ಸೆರೆ ಹಿಡಿಯುತ್ತಾರೆ ಎನ್ನಲಾಗದು. ಛಾಯಾಗ್ರಹಣಕ್ಕೂ ಒಂದು ವಿಶಿಷ್ಟವಾದ ಜ್ಞಾನವಿರಬೇಕು. ಕಾದು ಸುಂದರ ಕ್ಷಣವನ್ನು ಸೆರೆಹಿಡಿಯುವ ತಾಳ್ಮೆ ಇರಬೇಕು. ಅದರಲ್ಲಿಯೂ ವನ್ಯಜೀವಿ ಛಾಯಾಗ್ರಹಣ, ಕ್ರೀಡೆ, ವಿಶಿಷ್ಟ ಆಚರಣೆಗಳ ಅದ್ಭುತ ಕ್ಷಣಗಳನ್ನು ಸೆರೆ ಹಿಡಿಯಲು ಅನುಭವದ ಜತೆಗೆ ಅಪಾರ ಜ್ಞಾನವೂ ಬೇಕು. ಅಂತಹದೊಂದು ವಿಶಿಷ್ಟ ಹವ್ಯಾಸವನ್ನು ರೂಢಿಸಿಕೊಂಡು, ಛಾಯಾಗ್ರಹಣದಿಂದ ಅನೇಕ ಪ್ರಶಸ್ತಿಗಳನ್ನು ಪಡೆದು ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ ಉದಯ್ ತೇಜಸ್ವಿ ಅರಸ್.

ಬೆಂಗಳೂರಿನಲ್ಲಿ ವಾಸವಿರುವ ಉದಯ್ ಮೂಲತಃ ಎಚ್.ಡಿ.ಕೋಟೆ ತಾಲ್ಲೂಕಿನ ಕೋಳಗಾಲ ಗ್ರಾಮದವರು. ಯಕ್ಷಗಾನ ಕಲಾವಿದರಾದ ಭಾಗವತ ಬಸವರಾಜೇ ಅರಸ್‌ರವರ ಕುಟುಂಬದ ಉದಯ್ ತೇಜಸ್ವಿ ಅರಸ್ ಫೋಟೋಗ್ರಫಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಮಲ್ಟಿ ನ್ಯಾಷನಲ್ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಉದಯ್ ತೇಜಸ್ವಿ ಅರಸ್, ಕೆ.ಬಿ.ಜಯಚಂದ್ರ ರಾಜೇ ಅರಸ್ ಮತ್ತು ರಾಜೇಶ್ವರಿ ಅರಸ್‌ರವರ ಪುತ್ರ. ಇವರ ಸಹೋದರ ಕೂಡ ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ಸೌಂಡ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸು ತ್ತಿದ್ದು, ಉದಯ್‌ರವರಿಗೆ ವೃತ್ತಿ ಜೀವನದ ಜತೆಗೆ ವನ್ಯಜೀವಿ ಛಾಯಾಚಿತ್ರ ಸೆರೆಹಿಡಿಯುವುದು, ಕಂಬಳ, ಜಲ್ಲಿಕಟ್ಟು ಸೇರಿದಂತೆ ವಿವಿಧ ಸಾಂಸ್ಕ ತಿಕ ಆಚರಣೆಗಳ ಚಿತ್ರ ಸೆರೆ ಹಿಡಿಯುವುದೆಂದರೆ ಅಚ್ಚುಮೆಚ್ಚು. ಎಂವಿಎ ವ್ಯಾಸಂಗ ಮಾಡುವ ವೇಳೆ ಫೋಟೋಗ್ರಫಿ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದ ಉದಯ್‌ರವರಿಗೆ ಮುಂದೆ ಛಾಯಾ ಗ್ರಹಣ ಮಾಡುವುದೇ ಒಂದು ಹವ್ಯಾಸವಾಗಿ ರೂಢಿಯಾಯಿತು. ತಮ್ಮ ಸ್ನೇಹಿತರಾದ ಯತೀಶ್ ಶಟ್ಟಿಗಾರ್‌ರವರ ಸಲಹೆಯ ಮೇರೆಗೆ ಫೋಟೋಗ್ರಫಿ ಆರಂಭಿಸಿದ ಉದಯ್‌ರವರಿಗೆ, ಎಂ.ರಾಮು ಮತ್ತು ಬಿ.ಶ್ರೀನಿವಾಸ್‌ರವರು ಮಾರ್ಗದರ್ಶನ ನೀಡಿದರು.

ಪರಿಣಾಮ ಇಂದು ನೂರಾರು ಪ್ರಶಸ್ತಿಗಳು ಸಂದಿವೆ. ವಿಶೇಷವಾದ ಹಕ್ಕಿಗಳ ಚಿತ್ರಗಳನ್ನು ಸೆರೆಹಿಡಿಯುವುದು, ಅವುಗಳ ಜೀವನ ಶೈಲಿಯನ್ನು ಸೆರೆಹಿಡಿಯುವುದು ಎಂದರೆ ಉದಯ್‌ರವರಿಗೆ ಅಚ್ಚುಮೆಚ್ಚು.ಇದಕ್ಕಾಗಿ ಅವರು, ದೇಶದ ಅನೇಕ ಪಕ್ಷಿಧಾಮಗಳು, ವನ್ಯಜೀವಿ ಧಾಮಗಳಲ್ಲಿ ಸಂಚರಿಸಿದ್ದಾರೆ.

ಆರಂಭದಲ್ಲಿ ಛಾಯಾಗ್ರಹಣಕ್ಕಷ್ಟೇ ಆಸಕ್ತಿ ತೋರಿದ್ದ ಉದಯ್ ನಂತರದ ದಿನಗಳಲ್ಲಿ ವನ್ಯಜೀವಿಗಳ ಬದುಕು, ಅವುಗಳ ಜೀವನ ಶೈಲಿ ಕುರಿತು ಅಧ್ಯಯನ ನಡೆಸಿ, ಅವುಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಿದರು. ಈ ಚಿತ್ರಗಳೇ ಇಂದು ೫೦೦ಕ್ಕೂ ಅಧಿಕ ಪ್ರಶಸ್ತಿಗಳು ಲಭಿಸುವಂತೆ ಮಾಡಿವೆ.

ಒಲಿದು ಬಂದವು ನೂರಾರು ಪ್ರಶಸ್ತಿಗಳು: ಉದಯ್‌ರವರ ಫೋಟೋಗ್ರಫಿ ಇಂದು ನೂರಾರು ವೇದಿಕೆಗಳಲ್ಲಿ ಪ್ರದರ್ಶನಗೊಂಡಿವೆ. ೫೦೦ಕ್ಕೂ ಅಧಿಕ ಪ್ರಶಸ್ತಿಗಳು, ೨,೦೦೦ಕ್ಕೂ ಅಽಕ ಅಕ್ಸಪ್ಟನ್ಸ್‌ಗಳಾಗಿವೆ. ಇವುಗಳ ಪೈಕಿ ೭ ಡಿಸ್ಟಿಂಕ್ಷನ್, ೪ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು (ಎಎಫ್‌ಐಪಿ, ಇಎಫ್‌ಐಪಿ, ಇಎಫ್ ಐಪಿಯ ಗೋಲ್ಡ್ ನೇಚರ್, ಇಎಫ್‌ಪಿಐಯ ಪ್ಲಾಟಿನಂ ನೇಚರ್) ಮತ್ತು ೪ ಅಂತಾರಾಷ್ಟ್ರೀಯ ಪ್ರಶಸ್ತಿಗಳು (ಎಫ್‌ಐಎಪಿ, ಇಎಫ್‌ಐಪಿಎ, ಇಎಫ್ ಐಎಪಿಯ ‘ಬಿ’) ಉದಯ್‌ರವರಿಗೆ ಸಂದಿವೆ. ಉದಯ್ ಅವರು ೩೫ ವರ್ಷದೊಳಗಿನ ವಯಸ್ಸಿನವರು ಸ್ಪರ್ಧಿಸಬಹುದಾದ ಛಾಯಾಚಿತ್ರ ಸ್ಪರ್ಧೆಯೊಂದರಲ್ಲಿ ‘ಅಕ್ಷರ್ಯ ಪ್ರಶಸ್ತಿ’ ಗಳಿಸಿದ್ದಾರೆ.

೨೦೧೯ರಲ್ಲಿ ಆರ್ಟಿಸ್ಟ್ ಆಫ್ ದಿ ಫೆಡರೇಶನ್ ಆಫ್ ಇಂಡಿಯಾದಿಂದ ಡಿಸ್ಟಿಂಕ್ಷನ್ ಪಡೆದಿದ್ದರೆ. ಬಳಿಕ ವಿವಿಧ ಫೆಡರೇಶನ್‌ಗಳಲ್ಲಿ ಇವರ ಛಾಯಾಚಿತ್ರಗಳು ಪ್ರಶಸ್ತಿಗಳನ್ನು ಗಳಿಸಿವೆ.

ವನ್ಯಜೀವಿ ಛಾಯಾಗ್ರಹಣ ಮಾಡುವುದು ಪ್ರಸ್ತುತ ಅನೇಕ ಯುವಕರಿಗೆ ಹವ್ಯಾಸ. ಈ ಹವ್ಯಾಸ ರೂಢಿಸಿಕೊಳ್ಳುವುದು ನಾವು ನಮ್ಮ ಬಿಡುವಿನ ಸಮಯವನ್ನು ಪರಿಸರದೊಂದಿಗೆ ಕಳೆಯಲು ಮತ್ತು ಪರಿಸರವನ್ನು ಅರ್ಥೈಸಿಕೊಳ್ಳಲು ಫೋಟೋಗ್ರಫಿಗಿಂತ ಮತ್ತೊಂದು ಹವ್ಯಾಸ ಬೇಕಿಲ್ಲ. ಫೋಟೋಗ್ರಫಿ ಜತೆ ಪರಿಸರ ಹಾಗೂ ವನ್ಯಜೀವಿಗಳಿಗೆ ತೊಂದರೆ ಕೊಡದಂತೆ ನಾವು ಅವುಗಳ ಜೀವನ ಶೈಲಿಯನ್ನು ಅಧ್ಯಯನ ಮಾಡಬೇಕು. ಅವುಗಳ ಹಾವಭಾವವನ್ನು ಸೆರೆಹಿಡಿಯಬೇಕು. ವಿಶೇಷವಾದ ಸನ್ನಿವೇಶಗಳನ್ನು ಸೆರೆಹಿಡಿದಷ್ಟೂ ಅವು ಪ್ರಶಸ್ತಿಗಳನ್ನು ತಂದುಕೊಂಡುತ್ತವೆ. ಇದಕ್ಕೆಲ್ಲ ತಾಳ್ಮೆ ಮುಖ್ಯ. ಯುವಕರು ಅದರತ್ತ ಗಮನ ಹರಿಸಬೇಕು ಎಂಬುದು ಉದಯ್ ಅರಸ್‌ರವರ ಕಿವಿಮಾತು.

” ಹವ್ಯಾಸವಾಗಿ ರೂಢಿಯಾದ ಫೋಟೋಗ್ರಫಿ ಈಗ ಬದುಕಿನ ಭಾಗವಾಗಿದ್ದು, ಪ್ರಶಸ್ತಿಗಳನ್ನು ತಂದುಕೊಡುತ್ತಿರುವುದು ಸಂತಸ ತಂದಿದೆ. ಇಲ್ಲಿಯವರೆಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸೇರಿ ೫೦೦ಕ್ಕೂ ಅಧಿಕ ಪ್ರಶಸ್ತಿಗಳು ಸಂದಿವೆ. ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿರುವುದು ಮತ್ತಷ್ಟು ಉತ್ಸಾಹ ಮೂಡಲು ಸಹಕಾರಿಯಾಗಿದೆ.”

-ಉದಯ್ ತೇಜಸ್ವಿ ಅರಸ್, ವನ್ಯಜೀವಿ ಛಾಯಾಗ್ರಹಕ.

Tags: