ಮಧುಮೇಹಿಗಳ ನಿತ್ಯದ ಚಟುವಟಕೆಗಳು ಎಂದಿನಂತೆ ಇರಲಿ; ವ್ಯಾಯಾಮ ತಪ್ಪದಿರಲಿ
ಚಳಿಗಾಲ ಬಂತು. ಬೆಚ್ಚಗೆ ಮನೆಯಲ್ಲಿ ಇರುವುದಕ್ಕೆ ಎಲ್ಲರ ಮನಸ್ಸು ಹಾತೊರೆಯುತ್ತದೆ. ಸುರಿಯುತ್ತಿರುವ ಇಬ್ಬನಿ, ಹೊದ್ದುಕೊಂಡ ಹೊದಿಕೆ ನಿತ್ಯದ ಚಟುವಟಿಕೆಗಳಿಗೆ ಅಡೆತಡೆ ತರುವುದು ಸಹಜ. ಹಾಗೆಂದು ಮನಸ್ಸು ಹೇಳಿದಂತೆ ದೇಹವನ್ನು ದಂಡಿಸದೇ ಹೋದರೆ ಆರೋಗ್ಯದಲ್ಲಿ ಏರುಪೇರು ಖಚಿತ. ಅದರಲ್ಲಿಯೂ ಸಕ್ಕರೆ ಕಾಯಿಲೆ ಇರುವವರಿಗೆ ಇದು ಸಮಸ್ಯೆಯಾಗುತ್ತದೆ.
ಚಳಿಗಾಲದಲ್ಲಿ ದೇಹದ ತೂಕ ಹೆಚ್ಚುವುದು ಸಹಜ. ಬಾಯಿ ಬಗೆ ಬಗೆಯ ತಿನಿಸುಗಳನ್ನು ಬಯಸುತ್ತಿರುತ್ತದೆ. ಈ ವೇಳೆಯಲ್ಲಿ ಎಚ್ಚರ ತಪ್ಪಿದರೆ ತೊಂದರೆ ಖಚಿತ. ಇದಕ್ಕಾಗಿಯೇ ವೈದ್ಯರು ಚಳಿಗಾಲದಲ್ಲಿ ವ್ಯಾಯಾಮವನ್ನು ತಪ್ಪದೇ ಮಾಡಿ ಎಂದು ಹೇಳುವುದು.
ಚಳಿಗಾಲದಲ್ಲಿ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಅತಿ ಮುಖ್ಯ. ಇದಕ್ಕೆ ಕೆಲವು ಬಗೆಯ ಪೇಯಗಳ ಸೇವನೆ, ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಆಗುತ್ತದೆ. ಹಾಗೆಂದು ವ್ಯಾಯಾಮವನ್ನು ತ್ಯಜಿಸುವುದು ಸರಿಯಲ್ಲ. ದೇಹವನ್ನು ದಂಡಿಸಿದಾಗ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ಇದು ಚಳಿಗಾಲದಲ್ಲಿ ಅತಿ ಮುಖ್ಯ. ಅಲ್ಲದೇ ಬೆಳಗ್ಗಿನ ವೇಳೆಯಲ್ಲಿ ಎಳೆ ಬಿಸಿಲಿಗೆ ಮೈ ಒಡ್ಡುವುದು ಚಳಿಗಾಲದಲ್ಲಿ ಅತಿ ಮುಖ್ಯ. ಮಧುಮೇಹಿಗಳು ಇದನ್ನು ತಪ್ಪದೇ ಪಾಲಿಸುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದ್ದು.
ಪದೇ ಪದೇ ಪರೀಕ್ಷೆಗೆ ಒಳಗಾಗಿ
ಸಕ್ಕರೆ ಕಾಯಿಲೆ ಇರುವವರು ಚಳಿಗಾಲದಲ್ಲಿ ಎಚ್ಚರಿಕೆಯಿಂದ ಇರಬೇಕು. ಯಾವುದೇ ಸಣ್ಣ ಗಾಯಗಳಾದರೂ ಆರೋಗ್ಯವಂತರಿಗೇ ಬೇಗ ವಾಸಿಯಾಗುವುದಿಲ್ಲ. ಇನ್ನು ಶುಗರ್ ಇದ್ದವರಿಗೆ ಹೆಚ್ಚು ತೊಂದರೆಯೇ. ಅಲ್ಲದೇ ವಾರಕ್ಕೆ, ಹದಿನೈದು ದಿನಕ್ಕೆ ಒಮ್ಮೆ ಶುಗರ್ ಲೆವೆಲ್ ಚೆಕ್ ಮಾಡಿಕೊಳ್ಳುವುದು, ನಿಗದಿತ ಸಮಯಕ್ಕೆ ಮಾತ್ರೆಗಳು, ಆಹಾರ ತೆಗೆದುಕೊಳ್ಳುವುದು ಉತ್ತಮ. ಧೂಮಪಾನ ಬೇಡವೇ ಬೇಡ. ವಾತಾವರಣದಲ್ಲಿ ಉಷ್ಣಾಂಶ ಕಡಿಮೆ ಆಗುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ. ಹೀಗಾಗಿ ನಿಮ್ಮ ದೇಹ ಪ್ರಕೃತಿಗೆ ಒಗ್ಗುವ ಮಸಾಲೆ ಪದಾರ್ಥಗಳು, ಶುಂಠಿ, ಲವಂಗ, ಚಹ, ಕಾಫಿ ಸೇವನೆ ಉತ್ತಮ.