Mysore
28
few clouds

Social Media

ಶುಕ್ರವಾರ, 17 ಜನವರಿ 2025
Light
Dark

ಯೋಗ ಕ್ಷೇಮ : 50 ರ ನಂತರದ ಆಹಾರ ಕ್ರಮ

ವಯಸ್ಸಾದರೂ ಆರೋಗ್ಯವಾಗಿರಲು ಸಮತೋಲಿತ ಆಹಾರ ಸೇವಿಸಿ
ವಿನುತಾ ಪುರುಷೋತ್ತಮ್, ಹೆಬ್ಬಾಳ
ಮನುಷ್ಯ ಶತಾಯುಷಿ. ಆದರೆ ಆಧುನಿಕ ಜೀವನ ಶೈಲಿ, ಆಹಾರ ಕ್ರಮಗಳಿಂದ ಇದರ ಪ್ರಮಾಣ ಕಡಿಮೆಯಾಗಿದೆ. ಮಾತ್ರವಲ್ಲದೇ ೫೦ ರ ನಂತರ ಆಸ್ಪತ್ರೆಗಳಿಗೆ ಎಡತಾಗುವುದು ಹೆಚ್ಚಾಗಿದೆ. ಇದು ಇಂದು ಸಹಜವೇ ಆದರೂ ಕೆಲವು ಆಹಾರ ಕ್ರಮಗಳನ್ನು ರೂಢಿಸಿಕೊಳ್ಳುವುದರ ಮೂಲಕ ಇದನ್ನು ತಪ್ಪಿಸಬಹುದು. 
———
ನಮ್ಮ ಆಹಾರವೇ ಔಷಧವಾಗಬೇಕು. ಇದಕ್ಕಾಗಿ ಒಂದಿಷ್ಟು ಪಥ್ಯ, ಶಿಸ್ತಿನ ಜೀವನ ಶೈಲಿ ಅಭ್ಯಾಸ ಮಾಡಿಕೊಂಡರೆ ಸಾಕು. ಸಾಕಷ್ಟು ಆರೋಗ್ಯ ಸಮಸ್ಯೆಗಳಿಂದ ದೂರವೇ ಉಳಿಯಬಹುದು. ದೇಹವೂ ಉಲ್ಲಾಸದಿಂದ ಇದ್ದು, ಮನಸ್ಸೂ ಹಗುರವಾಗಿರುತ್ತದೆ. ಹಾಗಿದ್ದ ಮೇಲೆ ಯಾವೆಲ್ಲಾ ರೀತಿಯ ಆಹಾರ ಕ್ರಮವನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ.
ನಾರು-ಬೇರು ಕುಶಲಕೆ ತವರು
ನಾವು ಸೇವಿಸುವ ಆಹಾರದಲ್ಲಿ ಹೆಚ್ಚಿನ ನಾರಿನ ಅಂಶ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಇರುತ್ತದೆ. ಎಲ್ಲ ಬಗೆಯ ಹಸಿರು ಸೊಪ್ಪು, ತರಕಾರಿ, ಗೆಡ್ಡೆ-ಗೆಣಸು, ಮೊಳಕೆ ಕಾಳುಗಳು, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳಲ್ಲಿ ಹೇರಳವಾದ ನಾರಿನ ಅಂಶ ಇರುತ್ತದೆ. ಇವುಗಳ ನಿಯಮಿತ ಸೇವನೆಯಿಂದ ಮಲಬದ್ಧತೆ, ಮಧುಮೇಹದಂತಹ ಸಮಸ್ಯೆಗಳಿಂದಲೂ ದೂರ ಉಳಿಯಬಹುದು.
ಮನೆ ಮದ್ದುಗಳ ಬಳಕೆ
ಆಯುರ್ವೇದಲ್ಲಿ ಬಳಕೆ ಮಾಡುವ ಅತಿ ಮುಖ್ಯ ಪದಾರ್ಥಗಳು ನಮ್ಮ ಅಡುಗೆ ಮನೆಯಲ್ಲಿ ಸದಾ ಇರುವಂತೆ ನೋಡಿಕೊಳ್ಳಬೇಕು. ಏಲಕ್ಕಿ, ಅರಿಶಿಣ, ಶುಂಠಿ, ತುಳಸಿ, ಜೀರಿಗೆ, ಕರಿ ಮೆಣಸು, ಬೆಲ್ಲ, ಜೇನುತುಪ್ಪ, ಅಶ್ವಗಂಧ, ಧನಿಯಾ, ಚಕ್ಕೆ, ಲವಂಗ, ನಿಂಬೆಹಣ್ಣು, ಪುದಿನ ಮುಂತಾದ ಅತ್ಯುಪಯುಕ್ತ ಪದಾರ್ಥಗಳು ಮನೆಯಲ್ಲಿ ಇರುವಂತೆ ನೋಡಿಕೊಂಡು, ಇವುಗಳ ನಿಯಮಿತ ಬಳಕೆಯಿಂದ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
ಹಣ್ಣು, ತರಕಾರಿಗಿರಲಿ ಆದ್ಯತೆ
ದಿನಕ್ಕೆ ಕನಿಷ್ಟ ಮೂರು ಬಗೆಯ ಹಣ್ಣು, ನಾಲ್ಕಾರು ಬಗೆಯ ತರಕಾರಿಗಳ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದರೆ ಇದು ಜೇಬಿಗೆ ಹೊರಯಾಗಲೂಬಹುದು. ಹೀಗಾಗಿ ಸ್ಥಳೀಯವಾಗಿಯೇ ಸಿಗುವ, ಬೆಲೆ ಕಡಿಮೆ ಇರುವ ಹಣ್ಣು, ತರಕಾರಿಗಳ ಬಳಕೆ ಮಾಡುತ್ತಾ ಬಂದರೆ ಒಳಿತು. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಮೀನು, ಮಾಂಸ ಸೇವನೆ
ಮಾಂಸಹಾರಿಗಳಾಗಿದ್ದರೆ ಮೀನು ಮತ್ತು ಮಾಂಸವನ್ನು ಹತ್ತು ದಿನಗಳ ಅಂತರದಲ್ಲಿ ಸೇವನೆ ಮಾಡುವುದು ಉತ್ತಮ. ಇದರಿಂದ ಒಮೇಗಾ ೩, ದೇಹಕ್ಕೆ ಬೇಕಾದ ಅಗತ್ಯ ಕೊಬ್ಬನಾಂಶ, ಶಕ್ತಿಯನ್ನು ಒದಗಿಸುತ್ತವೆ. ಆದರೆ ನಿಮ್ಮ ದೇಹ ಪ್ರಕೃತಿಗೆ ಮಾಂಸ, ಮೀನು ಆಗಿ ಬರುತ್ತದೆಯೇ ಎಂಬುದನ್ನು ವೈದ್ಯರಿಂದ ಖಚಿತಪಡಿಸಿಕೊಂಡರೆ ಉತ್ತಮ.
ಈ ೩ರಿಂದ ಅಂತರವಿರಲಿ
ಉಪ್ಪು, ಸಕ್ಕರೆ, ಸೋಡಾ ಈ ಮೂರು ಬಿಳಿ ಬಣ್ಣದ ಪದಾರ್ಥಗಳು ನಿಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟನ್ನು ತೆಗೆದುಕೊಂಡರೆ ಒಳಿತು. ಅಧಿಕವಾದರೆ ತಕ್ಷಣಕ್ಕೆ ಸಮಸ್ಯೆ ಶುರುವಾಗುತ್ತದೆ. ಬಿಪಿ, ಶುಗರ್, ಜೀರ್ಣ ಸಮಸ್ಯೆ ಇರುವವರು ಉಪ್ಪು, ಸಕ್ಕರೆ, ಸೋಡಾ ದಿಂದ ಅಂತರ ಕಾಯ್ದುಕೊಳ್ಳುವುದು ಒಳಿತು. ಇವುಗಳಿಗೆ ಪರ್ಯಾಯವಾಗಿ ಇರುವ ಪದಾರ್ಥಗಳ ಬಳಕೆ ಮಾಡುವುದು ಸೂಕ್ತ.
ಕಲಬೆರಕೆಗೆ ಕೈ ಹಾಕದಿರಿ
ಆಹಾರ ಪದಾರ್ಥಗಳ ಕಲಬೆರಕೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಜಾಗರೂಕವಾಗಿರುವುದು ಅಗತ್ಯ. ಇಲ್ಲದೇ ಇದ್ದರೆ ಶಿಸ್ತಿನ ಜೀವನ ಶೈಲಿ ರೂಪಿಸಿಕೊಂಡಿದ್ದರೂ ಈ ಕಲಬೆರಕೆಯಿಂದ ಆರೋಗ್ಯದಲ್ಲಿ ಏರುಪೇರು ಆಗಿಬಿಡುತ್ತದೆ. ಅನುಮತಿ ಇಲ್ಲದ ಬಣ್ಣಗಳು, ಎಣ್ಣೆ, ಹೊರಗಿನ ತಿಂಡಿ, ಬೇಕರಿ ತಿನಿಸುಗಳನ್ನು ಆಯ್ಕೆ ಮಾಡಿಕೊಳ್ಳುವಾಗ, ಬಳಕೆ ಮಾಡುವಾಗ ಎಷ್ಟು ಸಾಧ್ಯವೋ ಅಷ್ಟು ಎಚ್ಚರಿಕೆ ವಹಿಸುವುದು ಉತ್ತಮ.
ಆಹಾರದ ಜೊತೆಗೆ ಆನಂದವೂ ಇರಲಿ
ಉತ್ತಮ ಆಹಾರದ ಜೊತೆಗೆ ಆನಂದವಾಗಿ ಇರುವುದು, ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡುವುದು, ದಿನಕ್ಕೆ ಕನಿಷ್ಟ ೬ ಲೀ. ಶುದ್ಧ ನೀರು ಕುಡಿಯುವುದು, ದ್ರವ ರೂಪದ ಆಹಾರಕ್ಕೆ ಹೆಚ್ಚಿನ ಒತ್ತು ಕೊಡುವುದು, ಬೆಳಿಗ್ಗೆ, ಸಂಜೆ ವಾಯು ವಿಹಾರ, ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ೫೦ ರ ನಂತರದ ಆರೋಗ್ಯದ ದೃಷ್ಟಿಯಿಂದ ತುಂಬಾ ಮಹತ್ತರವಾದದ್ದು.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ