Mysore
17
clear sky

Social Media

ಗುರುವಾರ, 22 ಜನವರಿ 2026
Light
Dark

ಗಗನಚುಕ್ಕಿ-ಭರಚುಕ್ಕಿ ಅವಳಿ ಜಲಪಾತಗಳಲ್ಲಿ ಜಲ ವೈಭವ

gagana chukki falls

ಕಾವೇರಿ, ಕಪಿಲ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳಿಗೆ ಜೀವಕಳೆ ಬಂದಿದೆ. ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಗಡಿ ಭಾಗದಲ್ಲಿರುವ ಈ ಅವಳಿ ಜಲಪಾತಗಳು ಇದೀಗ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿವೆ. ಭೋರ್ಗರೆಯುತ್ತಿರುವ ಜಲ ವೈಭವದ ಮನಮೋಹಕ ದೃಶ್ಯ ಪ್ರವಾಸಿಗರ ಕಣ್ಮನ ಸೆಳೆಯುತ್ತಾ ಆಕರ್ಷಿಸುತ್ತಿದ್ದು, ವಾರಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ಕೊಳ್ಳೇಗಾಲ ರಸ್ತೆಯಲ್ಲಿ ೨೦ ಕಿಮೀ ಕ್ರಮಿಸಿದರೆ ಶಿವನ ಸಮುದ್ರ ತೋಳ್ಗಂಬದಿಂದ ಒಂದು ಕಿ.ಮೀ ಒಳಗೆ ಸಿಗಲಿದೆ ಗಗನಚುಕ್ಕಿ. ಕಾವೇರಿಯ ಎಡದಡದಲ್ಲಿರುವ ಗಗನಚುಕ್ಕಿ ಜಲಪಾತದ ಪಾರ್ಶ್ವ ದೃಶ್ಯ ವಿಶಿಷ್ಟ ಅನುಭವವನ್ನು ನೀಡುತ್ತದೆ. ಇದು ಕಾವೇರಿ ನದಿಯ ಎಡ ಕವಲಾಗಿದ್ದು, ಸುಮಾರು ೩೦೦ ಅಡಿ ಎತ್ತರದಿಂದ ವೈಯ್ಯಾರದಿಂದ ಧುಮ್ಮಿಕ್ಕುವ ದೃಶ್ಯ ಗಗನದಿಂದಲೇ ಧುಮುಕುತ್ತಿರುವಂತೆ ಭಾಸವಾಗುವುದರಿಂದ ಈ ಜಲಪಾತಕ್ಕೆ ಗಗನಚುಕ್ಕಿ ಎಂದೇ ಕರೆಯಲಾಗಿದೆ.

ಗಗನಚುಕ್ಕಿಯ ಜಲ ವೈಭವವನ್ನು ಕಣ್ತುಂಬಿಕೊಂಡು ಸ್ವಲ್ಪ ದೂರ ಮುಂದೆ ಹೋದಾಗ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಸಿಗುತ್ತದೆ.ಅಲ್ಲಿಂದ ಮಧ್ಯ ರಂಗನಾಥ ದೇವಾಲಯವನ್ನು ಕಣ್ತುಂಬಿಕೊಂಡು ಕ್ರಮಿಸಿದರೆ, ಕಾವೇರಿ ಎಡದಂಡೆಯಲ್ಲಿರುವ ಚಾ.ನಗರ ಜಿಲ್ಲಾ ವ್ಯಾಪ್ತಿಗೊಳಪಟ್ಟ ಭರಚುಕ್ಕಿ ಜಲಪಾತ ಕಣ್ಮನ ಸೆಳೆಯುತ್ತದೆ. ಸುಮಾರು ಒಂದು ಕಿ.ಮೀ ಅಗಲವಾಗಿ ಮೈದಳೆದಿರುವ ಕಾವೇರಿ ನದಿ ಸುಮಾರು ೭೫ರಿಂದ ೧೦೦ ಅಡಿಯವರೆಗೆ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದೆ.

ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯ ಹಾಗೂ ಕಬಿನಿ ಜಲಾಶಯಗಳಿಂದ ಸಾವಿರಾರು ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಹರಿಯ ಬಿಡುತ್ತಿರುವುದರಿಂದ ಶಿವನಸಮುದ್ರ (ಬ್ಲ-) ಬಳಿಯ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತಾ ಜಲ ವೈಭವವನ್ನು ಸೃಷ್ಟಿಸಿವೆ. ಕಾವೇರಿ ನದಿಯಲ್ಲಿ ನೀರಿನ ಹರಿವು ತಗ್ಗಿದಾಗ ಸೊರಗುವ ಈ  ಅವಳಿ ಜಲಪಾತಗಳು ಇದೀಗ ಮೈದುಂಬಿ ಹರಿಯುತ್ತಿವೆ.

ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ಈ ಬಾರಿ ಜುಲೈ ತಿಂಗಳಲ್ಲೇ ಕೆಆರ್‌ಎಸ್, ಕಬಿನಿ ಜಲಾಶಯಗಳು ಭರ್ತಿಯಾ ಗಿರುವುದು ವಿಶೇಷ. ೧೨೪.೮೦ ಅಡಿ ಗರಿಷ್ಟ ನೀರು ಸಂಗ್ರಹಣಾ ಸಾಮರ್ಥ್ಯದ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದ್ದು, ೨೧,೬೩೫ ಕ್ಯೂಸೆಕ್ಸ್ ಒಳ ಹರಿವು ಬರುತ್ತಿರುವುದರಿಂದ ೧೩,೮೮೧ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದೆ. ೨,೨೮೪ ಅಡಿ ಗರಿಷ್ಟ ನೀರು ಸಂಗ್ರಹಣಾ ಸಾಮರ್ಥ್ಯದ ಕಬಿನಿ ಜಲಾಶಯ ಭರ್ತಿಯಾಗಿದ್ದು, ಸದ್ಯ ೧೨,೧೧೩ ಕ್ಯೂಸೆಕ್ಸ್ ಒಳ ಹರಿವು ಬರುತ್ತಿರುವುದರಿಂದ ೧೨,೦೦೦ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ. ತಿ.ನರಸೀಪುರದ ಸಂಗಮದಲ್ಲಿ ಕಾವೇರಿಯನ್ನು ಕೂಡಿಕೊಳ್ಳುವ ಕಪಿಲಾ ಮುಂದೆ ಜಲ ವೈಭವವನ್ನು ಸೃಷ್ಟಿಸುತ್ತಾ ಹೋಗುತ್ತಿದೆ.

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟುವ ಜೀವನದಿ ಕಾವೇರಿ ೩೨೦ ಕಿ.ಮೀ ಕ್ರಮಿಸಿ ಕೆಆರ್‌ಎಸ್ ಜಲಾಶಯಕ್ಕೆ ಸೇರುತ್ತದೆ. ಕೆಆರ್‌ಎಸ್‌ನಿಂದಮಂಡ್ಯ ಮತ್ತು ಚಾಮರಾಜ ನಗರ ಜಿಲ್ಲೆಗಳ ಮೂಲಕ ಹಾದು ಸತ್ಯಗಾಲದ ಮೂಲಕ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಜಲಪಾತದಲ್ಲಿ ಧುಮ್ಮಿಕ್ಕಿ ಹರಿದು ಮುತ್ತತ್ತಿಯನ್ನು ಬಳಸಿಕೊಂಡು ಮೇಕೆದಾಟು ಮೂಲಕ ಹೊಗೇನಕಲ್ ತಲುಪಿ ಅಲ್ಲಿಂದ ಮುಂದೆ ತಮಿಳುನಾಡು ಸೇರುತ್ತದೆ. ಪ್ರತಿ ವರ್ಷ ಉತ್ತಮ ಮಳೆಯಾಗುವ ಜುಲೈ ತಿಂಗಳಲ್ಲಿ ಕಾವೇರಿ ನದಿ ಮೈದುಂಬಿ ಹರಿಯುವುದರಿಂದ ಗಗನಚುಕ್ಕಿ-ಭರಚುಕ್ಕಿ ಅವಳಿ ಜಲಪಾತಗಳು ಮೈದುಂಬಿ ಹರಿಯುತ್ತಾ ಪ್ರಕೃತಿ ಸೌಂದರ್ಯಕ್ಕೆ ಮತ್ತಷ್ಟು ಮೆರಗು ತಂದಿದೆ.

ಪ್ರವಾಸಿಗರ ದಂಡು: ಗಗನಚುಕ್ಕಿ-ಭರಚುಕ್ಕಿ ಜಲಪಾತಗಳ ಜಲ ವೈಭವವನ್ನು ಕಣ್ತುಂಬಿಕೊಳ್ಳಲು ವಾರಾಂತ್ಯದ ಶನಿವಾರ-ಭಾನುವಾರಗಳಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಆಗಮಿಸುವ ಜೊತೆಗೆನೆರೆಯ ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕುಟುಂಬ ಸಮೇತ, ಸ್ನೇಹಿತರ ಜೊತೆಗೂಡಿ ತಂಡೋಪತಂಡವಾಗಿ ಆಗಮಿಸಿ ಜಲಧಾರೆಯ ವೈಭವವನ್ನು ಕಣ್ತುಂಬಿಕೊಳ್ಳುತ್ತಾ ಮೊಬೈಲ್ ಕ್ಯಾಮೆರಾಗಳಲ್ಲಿ ದೃಶ್ಯವನ್ನು ಸೆರೆಹಿಡಿಯುತ್ತಾ, ಸೆಲ್ಪಿ ತೆಗೆದುಕೊಂಡು ಸಂಭ್ರಮಿಸುವ ದೃಶ್ಯ ಇಲ್ಲೀಗ ಸಾಮಾನ್ಯವಾಗಿದೆ.

ಏಷ್ಯಾದ ಮೊಟ್ಟಮೊದಲ ಜಲ ವಿದ್ಯುತ್ ಉತ್ಪಾದನಾ ಕೇಂದ್ರ: ಶಿವನಸಮುದ್ರದಿಂದ ೧೪೪ ಕಿ.ಮೀ. ದೂರದಲ್ಲಿರುವ ಕೋಲಾರದ ಚಿನ್ನದ ಗಣಿಗೆ ಅಗತ್ಯವಿದ್ದ ವಿದ್ಯುತ್‌ಅನ್ನು ತಂತಿಯ ಮೂಲಕ ಸರಬರಾಜು ಮಾಡುವ ಉದ್ದೇಶದಿಂದ ಕಾವೇರಿ ನದಿಯಿಂದ ವಿದ್ಯುತ್ ಉತ್ಪಾದಿಸುವ ಸಲುವಾಗಿ ಏಷ್ಯಾ ಖಂಡದಲ್ಲಿ ಸ್ಥಾಪನೆಯಾದ ಮೊಟ್ಟಮೊದಲ ಜಲ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ೧೯೦೨ರ ಜೂನ್ ೩೦ರಂದು ಅಂದಿನ ಬ್ರಿಟಿಷ್ ರೆಸಿಡೆಂಟ್ ಕರ್ನಲ್ ಡೊನಾಲ್ಡ್ ರಾಬರ್ಟ್‌ಸನ್‌ರ ಪತ್ನಿ ಉದ್ಘಾಟಿಸಿದ್ದರು. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್ ಅವರ ಪರಿಶ್ರಮದಿಂದ ಈ ಕೇಂದ್ರ ಸ್ಥಾಪನೆಯಾಗಿದ್ದರಿಂದ ಆ ವೇಳೆಗಾಗಲೇ ನಿಧನರಾಗಿದ್ದ ದಿವಾನ್ ಶೇಷಾದ್ರಿ ಅಯ್ಯರ್ ಅವರ ಸ್ಮರಣಾರ್ಥ ಅವರ ಹೆಸರನ್ನೇ ಈ ಕೇಂದ್ರಕ್ಕೆ ಇಡಲಾಗಿದೆ.

ಜಲಪಾತ ಉತ್ಸವದಿಂದ ಇನ್ನಷ್ಟು ಮೆರುಗು:  ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಅವಳಿ ಜಲಪಾತಗಳಿಗೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಮಂಡ್ಯ ಮತ್ತು ಚಾಮರಾಜ ನಗರ ಜಿಲ್ಲಾಡಳಿತಗಳು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಪ್ರತಿ ವರ್ಷ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ ಉತ್ಸವವನ್ನು ಆಯೋಜಿಸುತ್ತಾ ಬರುತ್ತಿವೆ. ಜಲಪಾತ ಉತ್ಸವದ ವೇಳೆ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಜಗಜಗಿಸುವ ಶಿವನಸಮುದ್ರ, ಗಗನಚುಕ್ಕಿ- ಭರಚುಕ್ಕಿಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಆನಂದ.

– ಗಿರೀಶ್ ಹುಣಸೂರು

Tags:
error: Content is protected !!