Mysore
24
overcast clouds

Social Media

ಗುರುವಾರ, 03 ಏಪ್ರಿಲ 2025
Light
Dark

ಅಭೂತಪೂರ್ವ ನಟನೆಯ ನಟನ ಮಕ್ಕಳ ಮಹಾಭಾರತ

ಈ.ಧನಂಜಯ ಎಲಿಯೂರು, ಮೈಸೂರು.

ಫೆ.೨೩ರ ಭಾನುವಾರ ಸಂಜೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟ ಮಂಡ್ಯ ರಮೇಶ್ ಅವರ ರಂಗಶಾಲೆ ‘ನಟನ’ ರಂಗಮಂದಿರದಲ್ಲಿ ಮಕ್ಕಳು ಅಭ್ಯಸಿಸಿ ಪ್ರಯೋಗಿಸಿದ ಡಾ.ಪಿ.ಕೆ.ರಾಜಶೇಖರ ಸಂಪಾದಿತ ಕೃತಿ ಜನಪದ ಮಹಾಭಾರತ ಆಧಾರಿತ ‘ಮಕ್ಕಳ ಮಹಾಭಾರತ’ ರಂಗಾಯಣ ರಾಮನಾಥ ಅವರ ರಚನೆಯಲ್ಲಿ ಡಿ.ಸಿ.ಸುದರ್ಶನ ಅವರ ನಿರ್ದೇಶಕತ್ವದಲ್ಲಿ ಪ್ರದರ್ಶನಗೊಂಡಿತು.

ಈ ನಾಟಕದ ವಿಶೇಷವೆಂದರೆ ಇದರಲ್ಲಿ ಅಭಿನಯಿಸಿದವರ‍್ಯಾರೂ ವಯಸ್ಕರಲ್ಲ. ಬದಲಿಗೆ ೫, ೬ ಮತ್ತು ೭ನೇ ತರಗತಿಗಳಲ್ಲಿ ಓದುತ್ತಿರುವ ೧೧ ರಿಂದ ೧೩ ವರ್ಷದೊಳಗಿನ ಮಕ್ಕಳು. ನಾವು ನೋಡಿದಂತೆ ವಯಸ್ಕ ಕಲಾವಿದರೂ ಇಂತಹ ಪೌರಾಣಿಕ ಪಾತ್ರಗಳಲ್ಲಿ ನಟಿಸುವುದು ಸಾಮಾನ್ಯ. ಆದರೆ, ಇಲ್ಲಿ ಮಕ್ಕಳೇ ಅದ್ಭುತವಾಗಿ ಪ್ರದರ್ಶನ ನೀಡಿದ್ದನ್ನು ನೋಡಿದ್ದು ಇದೇ ಮೊದಲು. ಆ ಮಕ್ಕಳು ಎಲ್ಲಿಯೂ ತಮ್ಮ ಪಾತ್ರಕ್ಕೆ ಕುಂದುಂಟಾಗದಂತೆ ಅನುಭವವುಳ್ಳ ನಟರಂತೆ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದರು.

ನಾನು ೪೦ ವರ್ಷಗಳ ಹಿಂದೆ ಡಾ.ಎ.ಆರ್. ಕೃಷ್ಣಶಾಸ್ತ್ರಿಯವರ ೪೦೬ ಪುಟಗಳುಳ್ಳ ‘ವಚನ ಭಾರತ’ ಪುಸ್ತಕವನ್ನು ಓದಿದ್ದೆ. ಆಗ ಓದಿದ ಪುಸ್ತಕದ ನೆನಪು ಮತ್ತೆ ಮೂಡುವಂತೆ ಮಾಡಿತು, ಮಕ್ಕಳು ಒಂದು ಗಂಟೆ ೧೫ ನಿಮಿಷಗಳ ಈ ನಾಟಕ ಕಾಲಾವಽಯಲ್ಲಿ ರಂಗದ ಮೇಲೆ ನೀಡಿದ ಈ ನಾಟಕ ಪ್ರದರ್ಶನ ನೆರೆದವರೆಲ್ಲರನ್ನೂ ಬೆರಗುಗೊಳಿಸಿತು. ಅದರಲ್ಲಿಯೂ ಮಹಾಭಾರತ ಕಥೆಯ ಆರಂಭದ ಶಂತನು-ಭೀಷ್ಮರ ಪೂರ್ವ ವೃತ್ತಾಂತವನ್ನು ಈ ನಾಟಕದಲ್ಲಿ ತಂದಿದ್ದು, ವಿಶೇಷವಾಗಿತ್ತು. ನಾಟಕದ ಆರಂಭದಿಂದ ಅಂತ್ಯದವರೆಗೂ ಸೂತ್ರಧಾರ ಪಾತ್ರ, ಮೇಳದವರ ಪಾತ್ರ ಮಕ್ಕಳ ಸಂಭಾಷಣೆಯ ವೈಖರಿ, ಉಚ್ಚಾರಣೆ, ಅದಕ್ಕೆ ತಕ್ಕಂತೆ ಅವರ ನಟನೆ ಪ್ರೇಕ್ಷಕರಿಗೆ ರೋಮಾಂಚನವೆನಿಸಿದಂತೂ ನಿಜ. ಇದು ಈ ಮಕ್ಕಳಿಗೆ ಮೊದಲ ನಾಟಕವಾಗಿದ್ದರೂ ನೋಡುಗರಿಗೆ ಎಲ್ಲಿಯೂ ಅವರು ಮೊದಲ ಬಾರಿಗೆ ನಟಿಸುತ್ತಿದ್ದಾರೆ ಎಂದು ಅನಿಸಲೇ ಇಲ್ಲ. ಆ ಮಟ್ಟಿಗೆ ಮಕ್ಕಳನ್ನು ತಯಾರು ಮಾಡಿದ ಮಂಡ್ಯ ರಮೇಶ್ ರವರ ಶ್ರಮ, ನಟನ ತಂಡದ ಬದ್ಧತೆ ಈ ನಾಟಕದ ಪ್ರದರ್ಶನದಲ್ಲಿ ಗೋಚರವಾಗುತ್ತಿತ್ತು.

ಪಾಂಡವರು-ಕೌರವರ ಪಗಡೆಯಾಟ, ದ್ರೌಪದಿಯ ಸ್ವಯಂವರ, ದ್ರೌಪದಿಯ ವಸ್ತ್ರಾಪಹರಣ, ಕೀಚಕನ ವಧೆ, ಕರ್ಣಾರ್ಜುನರ ಕಾಳಗ, ಭೀಮ-ದುರ್ಯೋಧನರ ಕಾಳಗದ ದೃಶ್ಯಗಳು ಕೇವಲ ಒಂದೆರಡು ನಿಮಿಷಗಳಲ್ಲೇ ಘಟಿಸಿದರೂ ಆ ಪ್ರಸಂಗಗಳಲ್ಲಿ ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ಮಕ್ಕಳು ನಟಿಸಿದ್ದಾರೆ.

ದಿಶಾ ರಮೇಶ್ ಮತ್ತು ಮೇಘ ಸಮೀರ ಅವರು ಈ ನಾಟಕಕ್ಕೆ ಹಿಮ್ಮೇಳದ ಸಂಗೀತವನ್ನು ನೀಡಿ ಸುಶ್ರಾವ್ಯವಾಗಿ ಹಾಡಿದ್ದು ಹಿತನೀಡಿತು.

ಇನ್ನು ನಾಟಕಕ್ಕೆ ಮತ್ತಷ್ಟು ಮೆರುಗು ನೀಡಿದ್ದು, ವಸ್ತ್ರ ವಿನ್ಯಾಸ ಮತ್ತು ಬೆಳಕಿನ ವಿನ್ಯಾಸ. ಮಕ್ಕಳೇ ನಟಿಸಿದ ಈ ನಾಟಕ ನೆರೆದಿದ್ದ ಮಕ್ಕಳಿಗೆ ಮಹಾಭಾರತ ಕಥೆಯನ್ನು ಸುಲಭವಾಗಿ ಅರ್ಥವಾಗುವಂತೆ ಮಾಡಿತು. ಅಲ್ಲದೆ ಇಂತಹ ವಿಶೇಷ ಪ್ರಯೋಗಗಳು ಮಕ್ಕಳನ್ನು ರಂಗ ಭೂಮಿಯೆಡೆಗೆ ಸೆಳೆಯಲು ಹೆಚ್ಚು ಪರಿಣಾಮ ಕಾರಿಯೆನಿಸಿತು.

ಮಂಡ್ಯ ರಮೇಶ್, ನಟನದ ಬಹುದೊಡ್ಡ ಕನಸಿನ ಆಶಯಕ್ಕೆ ಅಲ್ಲಿನ ಕಲಾವಿದರಷ್ಟೇ ಸಮರ್ಥವಾಗಿ, ಬದ್ಧತೆಯಿಂದ ತಮ್ಮನ್ನು ತಾವು ತೊಡಗಿಸಿಕೊಂಡು ದುಡಿಯುತ್ತಿದ್ದಾರೆ. ಅವರು ಪ್ರೇಕ್ಷಕರ ಬಗ್ಗೆ ತೋರುವ ವಿನಮ್ರ ಪ್ರೀತಿ ‘ನಟನ’ ಬಗ್ಗೆ ವಿಶೇಷ ಗೌರವ ಮೂಡಲುಸಹಕಾರಿಯಾಗಿದೆ. ಇಂತಹ ಕಾರ್ಯಕ್ರಮಗಳು ಪ್ರತಿ ವಾರ ಆಯೋಜನೆಗೊಳ್ಳುತ್ತಿದ್ದರೆ, ಮಕ್ಕಳ ಶೈಕ್ಷಣಿಕ ಪ್ರಗತಿಗೂ ಅನುಕೂಲವಾಗಲಿದೆ. ಜತೆಗೆ ಅವರಿಗೆ ಓದಿನ ಜತೆಗೆ ಇತರೆ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಕೊಳ್ಳಲು ಪ್ರೆರೇಪಿಸುತ್ತದೆ.

ಒಟ್ಟಾರೆ ಮಂಡ್ಯ ರಮೇಶ್ ಒಬ್ಬ ಪ್ರತಿಭಾವಾನ್ವಿತ ನಟ. ಅವರಲ್ಲಿನ ಸಾಮಾಜಿಕ ಕಳಕಳಿ, ರಂಗಭೂಮಿ ಬಗೆಗಿನ ತುಡಿತ, ಚುರುಕುತನ, ಶಿಸ್ತು, ಸಮಯ ಪರಿಪಾಲನೆಯನ್ನು ಅವರ ‘ನಟನ’ ರಂಗದಲ್ಲಿಯೂ ಕಾಣಬಹುದು. ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಬೇಕಾದರೆ ಅದಕ್ಕೆ ತನ್ನದೇ ಆದ ಶ್ರದ್ಧೆ, ಬದ್ಧತೆ, ಧೈರ್ಯ, ಪರಿಶ್ರಮ ಮತ್ತು ಆರ್ಥಿಕ ಸಬಲತೆ ಇರಬೇಕು. ಅಂತಹದೊಂದು ಬದ್ಧತೆಯನ್ನು ಹೊಂದಿರುವ ನಟ ಮಂಡ್ಯ ರಮೇಶ್ ಚಿತ್ರರಂಗ ಮತ್ತು ರಂಗಭೂಮಿ ಎರಡರಲ್ಲೂ ಸಕ್ರಿಯವಾಗಿರುವುದು ರಂಗಾಸಕ್ತರಿಗೆ ಅವರ ಬಗ್ಗೆ ಹೆಮ್ಮೆ ಮೂಡಿಸುತ್ತದೆ.

Tags: