ಶಿವಮೊಗ್ಗ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದ್ದು, ಅದ್ಭುತ ಭೂ ದೃಶ್ಯಗಳು, ಕರಕುಶಲ ವಸ್ತುಗಳು, ಶ್ರೀಗಂಧ, ಕಸೂತಿ ಕಲೆಯನ್ನು ಹೊಂದಿರುವ ಸೀರೆಗಳು ಮತ್ತು ಮೆರುಗೆಣ್ಣೆ ಆಟಿಕೆಗಳಿಂದ ಹೆಚ್ಚು ಜನಪ್ರಿಯವಾಗಿದೆ. ತುಂಗಾ ನದಿಯ ದಡ ದಲ್ಲಿರುವ ಈ ಸುಂದರ ತಾಣ ಹಚ್ಚ ಹಸಿರಿನ ಬೆಟ್ಟಗುಡ್ಡಗಳು ಮತ್ತು ಹಲವಾರು ಜಲಪಾತ ಗಳಿಂದ ಆವೃತವಾಗಿದೆ. ಧಾರ್ಮಿಕ ಹಾಗೂ ಐತಿಹಾಸಿಕ ಕೇಂದ್ರವಾಗಿರುವ ಈ ತಾಣ ಸುಂದರವಾದ ಕಲೆ, ಸಂಸ್ಕ ತಿಗೆ ಹೆಚ್ಚು ಹೆಸರುವಾಸಿಯಾಗಿದೆ. ಇಲ್ಲಿನ ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಸೊರಬ ತಾಲ್ಲೂಕುಗಳಲ್ಲಿ ಯಕ್ಷಗಾನ ನೃತ್ಯ ನಾಟಕವು ಜನಪ್ರಿಯವಾಗಿದ್ದು, ನಗರದ ಪ್ರವಾಸಿ ಆಕರ್ಷಣೆಗಳಿಗೆ ಇನ್ನಷ್ಟು ಮೆರುಗು ನೀಡುತ್ತದೆ. ಇಂತಹ ಸುಂದರ ತಾಣವನ್ನು ಕೆಳದಿ ರಾಜವಂಶಸ್ಥ ದೊರೆಗಳು ಸುಮಾರು ಕ್ರಿ.ಶ.೧೬೦೦ರಲ್ಲಿ ಶಿವಪ್ಪ ನಾಯಕನ ನೇತೃತ್ವ ದಲ್ಲಿ ಸ್ಥಾಪಿಸಿದರು ಎಂಬುದು ಇಲ್ಲಿನ ಇತಿಹಾಸ. ಇಲ್ಲಿನ ಕೆಳಕಂಡ ಸುಂದರ ಪ್ರವಾಸಿ ತಾಣಗಳಿಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಭೇಟಿ ನೀಡಬಹುದಾಗಿದೆ.
ಸಕ್ರೆಬಯಲು ಆನೆ ಶಿಬಿರ, ಡಬ್ಬೆ ಜಲಪಾತ, ಕುಂದಾದ್ರಿ ಬೆಟ್ಟ, ಭದ್ರಾ ಅಣೆಕಟ್ಟೆ, ಇಕ್ಕೇರಿ, ಗುಡವಿ ಪಕ್ಷಿಧಾಮ, ಭದ್ರಾ ವನ್ಯಜೀವಿ ಅಭಯಾರಣ್ಯ, ಮಂಡಗದ್ದೆ ಪಕ್ಷಿಧಾಮ, ಕುಂಚಿಕಲ್ ಜಲಪಾತ, ಬರ್ಕಾನಾ ಜಲಪಾತ, ಹೊಸಹಳ್ಳಿ, ಗಾಜನೂರು ಅಣೆಕಟ್ಟೆ, ಕವಲೇದುರ್ಗ ಕೋಟೆ, ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯ, ಮಾರೀಚ ಮೃಗವಧೆ ಸ್ಥಳಗಳೂ ಕೂಡ ಶಿವಮೊಗ್ಗ ದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿವೆ.
ಕೊಡಚಾದ್ರಿ ಬೆಟ್ಟಗಳು: ಶಿವಮೊಗ್ಗದ ಕೊಡಚಾದ್ರಿ ಬೆಟ್ಟಗಳು ಸುಂದರವಾದ ನಿತ್ಯಹರಿದ್ವರ್ಣ ಕಾಡನ್ನು ಹೊಂದಿದ್ದು, ದಕ್ಷಿಣ ಕೆನರಾ ಅರಣ್ಯದಿಂದ ಪ್ರಾರಂಭವಾಗುವ ಈ ಭೂಭಾಗ ಚಾರಣಕ್ಕೆ ಸೂಕ್ತವಾದ ಸ್ಥಳವಾಗಿದೆ. ಸಮುದ್ರ ಮಟ್ಟದಿಂದ ೪,೪೧೧ ಅಡಿ ಎತ್ತರದಲ್ಲಿದ್ದು, ಕರ್ನಾಟಕದ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದೊಳಗೆ ಈ ಬೆಟ್ಟಗಳಿವೆ. ಈ ಬೆಟ್ಟಗಳ ಎರಡೂ ಬಿಂದುಗಳ ನಡುವಿನ ಅಂತರವು ೧೪ ಕಿಲೋಮೀಟರ್‌ಗಳಷ್ಟಿದ್ದು, ಚಾರಣ ಪ್ರಿಯರು ಈ ಬೆಟ್ಟಗಳಿಗೆ ಭೇಟಿ ನೀಡಿ ಚಾರಣ ಮಾಡಿ, ಪ್ರಕೃತಿಯ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.
ಕೆಳದಿ: ಶಿವಮೊಗ್ಗ ಜಿಲ್ಲೆಯ ಒಂದು ಸಣ್ಣ ಹಳ್ಳಿ ಕೆಳದಿ. ಇದು ಒಂದು ಐತಿಹಾಸಿಕ ನೆಲೆಯಾಗಿದ್ದು, ಕೆಳದಿ ರಾಮೇಶ್ವರ ದೇವಸ್ಥಾನ ಮತ್ತು ಕೆಳದಿ ವಸ್ತು ಸಂಗ್ರಹಾ ಲಯವು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಕೆಳದಿ ನಾಯಕ ಸಾಮ್ರಾಜ್ಯದ ಮೊದಲ ರಾಜಧಾನಿಯಾಗಿತ್ತು. ರಾಮೇಶ್ವರ ದೇವಸ್ಥಾನವು ಹೊಯ್ಸಳ, ದ್ರಾವಿಡ, ಕದಂಬ ಮೂರು ವಾಸ್ತುಶಿಲ್ಪ ಶೈಲಿಗಳಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಇಲ್ಲಿ ಭಗವಾನ್ ವೀರಭದ್ರ ಮತ್ತು ಪಾರ್ವತಿ ದೇವಿಯ ದೇವಾಲಯಗಳೂ ಇವೆ. ಹಳ್ಳಿಯಲ್ಲಿರುವ ವಸ್ತುಸಂಗ್ರಹಾಲಯವು ಕೆಳದಿ ನಾಯಕ ಸಾಮ್ರಾಜ್ಯದ ಪ್ರಾಚೀನ ವಸ್ತುಗಳು ಮತ್ತು ಹಿಂದಿನ ಯುಗದ ಇತರ ಸ್ಮಾರಕಗಳ ಹಳೆಯ ಸಂಗ್ರಹವನ್ನು ಹೊಂದಿದೆ. ಇಲ್ಲಿ ಹಲವಾರು ವಿಗ್ರಹಗಳು, ಶಿಲ್ಪಗಳು, ತಾಮ್ರ ಶಾಸನಗಳು, ನಾಣ್ಯಗಳು ಮತ್ತು ತಾಳೆಗರಿಗಳನ್ನು ಕೂಡ ಪ್ರದರ್ಶನದಲ್ಲಿ ಇರಿಸಲಾಗಿದೆ. ಇವೆಲ್ಲವೂ ಚಾಲುಕ್ಯ ಮತ್ತು ಹೊಯ್ಸಳ ಅರಸರ ಕಾಲದ ಶ್ರೀಮಂತ ಇತಿಹಾಸವನ್ನು ಬಿಚ್ಚಿಡುತ್ತವೆ.
ಜೋಗ ಜಲಪಾತ: ಭಾರತದ ಎರಡನೇ ಅತಿ ಎತ್ತರದ ಜಲಪಾತವಾದ ಜೋಗ ಜಲಪಾತವು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದೆ. ಇದು ಮೇಘಾಲಯದ ನೊಹ್ಕಲಿಕೈ ಜಲಪಾತದ ನಂತರದ ಎರಡನೇ ಎತ್ತರದ ಜಲಪಾತವಾಗಿದೆ. ಇಲ್ಲಿ ೨೫೩ ಮೀಟರ್ (೮೫೦ ಅಡಿಗಳು) ಎತ್ತರದಿಂದ ನೀರು ಧುಮುಕುತ್ತದೆ. ಇಲ್ಲಿನ ರುದ್ರರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಬೇಕು. ಶಿವಮೊಗ್ಗ ನಗರ ಕೇಂದ್ರದಿಂದ ಸುಮಾರು ಎರಡು ಗಂಟೆಗಳು ಪ್ರಯಾಣಿಸಿದರೆ ಜೋಗ ಜಲಪಾತವನ್ನು ತಲುಪಬಹುದು. ಈ ಜಲಪಾತಕ್ಕೆ ಗೇರುಸೊಪ್ಪ ಜಲಪಾತ ಎಂಬ ಹೆಸರೂ ಇದೆ. ಜಲಪಾತವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ರಾಜ, ರಾಣಿ, ರೋರರ್, ರಾಕೆಟ್ ಎಂಬ ಹೆಸರುಗಳನ್ನು ನೀಡಲಾಗಿದೆ.
ಹೊನ್ನೆಮರಡು (ಚಿನ್ನದ ಮರಳಿನ ನಾಡು): ಹೊನ್ನೆಮರಡು ಜಲಾಶಯ ಶಿವಮೊಗ್ಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಈ ಸ್ಥಳವು ಕಣಿವೆಯ ಹೃದಯಭಾಗದಲ್ಲಿರುವುದರಿಂದ ವಾರಾಂತ್ಯದ ಸಂದರ್ಭದಲ್ಲಿ ಇಲ್ಲಿ ಸಾಹಸಮಯ ಕ್ರೀಡೆಗಳ ಶಿಬಿರಗಳನ್ನು ಹೆಚ್ಚಾಗಿ ಆಯೋಜನೆ ಮಾಡಲಾಗುತ್ತದೆ. ಹೊನ್ನೆಮರಡು ಸರೋವರದಲ್ಲಿ ಹೊನ್ನೆಮರಡು ಕ್ಯಾಂಪಿಂಗ್, ಕಯಾಕಿಂಗ್ ಅಥವಾ ಸರೋವರದ ಬಳಿ ವಿಶ್ರಾಂತಿ ಪಡೆಯುವುದಕ್ಕೆ ಸೂಕ್ತವಾದ ಸ್ಥಳವಿದ್ದು, ಇದರ ಸಮೀಪದಲ್ಲಿಯೇ ಡಬ್ಬೆ ಜಲಪಾತ ಮತ್ತು ಪ್ರಸಿದ್ಧ ಜೋಗ ಜಲಪಾತಗಳಂತಹ ಸುಂದರ ಪ್ರವಾಸಿತಾಣಗಳು ಇವೆ.
ಆಗುಂಬೆ: ಶಿವಮೊಗ್ಗ ಜಿಲ್ಲೆಯ ಹೆಚ್ಚು ಪ್ರಸಿದ್ಧಿ ಪಡೆದಿರುವ ಒಂದು ಸುಂದರ ಪಟ್ಟಣವೇ ಆಗುಂಬೆ. ಇದನ್ನು ‘ದಕ್ಷಿಣ ಭಾರತದ ಚಿರಾಪುಂಜಿ‘ ಎಂದೂ ಕರೆಯುತ್ತಾರೆ. ಅನೇಕ ಜೀವವೈವಿಧ್ಯತೆಯನ್ನು ಹೊಂದಿರುವ ಈ ಪ್ರದೇಶವು ಕಾಳಿಂಗ ಸರ್ಪಗಳಿಗೆ ಹೆಸರುವಾಸಿಯಾಗಿದ್ದು, ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಮತ್ತು ಭಾರತದ ಎರಡನೇ ಅತಿ ಹೆಚ್ಚು ವಾರ್ಷಿಕ ಮಳೆ ದಾಖಲಾಗುವ ಪ್ರದೇಶವಾಗಿದೆ. ಇಲ್ಲಿನ ಗಿರಿಧಾಮಗಳು ರಮಣೀಯ ಸೌಂದರ್ಯವನ್ನು ಹೊಂದಿದು , ಇದೂ ಚಾರಣ ಪ್ರಿಯರಿಗೆ ನೆಚ್ಚಿನ ತಾಣವಾಗಿರುವುದರಲ್ಲಿ ಅಚ್ಚರಿ ಪಡಬೇಕಾಗಿಲ್ಲ. ಶಿವಮೊಗ್ಗಕ್ಕೆ ಭೇಟಿ ನೀಡಿದ ಯಾರೇ ಆದರೂ ಒಮ್ಮೆಯಾದರೂ ಆಗುಂಬೆಗೆ ಭೇಟಿ ನೀಡುವುದುಂಟು. ಮಿರಿಸ್ಟಿಕಾ, ಲಿಸ್ಟೆ ಯಾ, ಗಾರ್ಸಿನಿಯಾ, ಡಯೋಸ್ಪೆ ರೋಸ್, ಯುಜೆನಿಯಾ ಸೇರಿದಂತೆ ಇತರೆ ಅಪರೂಪದ ಔಷಽಯ ಸಸ್ಯ ಪ್ರಭೇದಗಳಿಗೆ ನೆಲೆಯಾಗಿದ್ದು, ‘ಹಸಿರು ಚಿನ್ನ‘ ಎಂಬ ಹೆಸರನ್ನು ಗಳಿಸಿದೆ. ಇಲ್ಲಿ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರವಿದ್ದು, ವೈವಿಧ್ಯಮಯ ಸಸ್ಯ ಮತ್ತು ವನ್ಯಜೀವಿಗಳನ್ನು ಹೊಂದಿದ್ದು, ಭಾರತದ ಅತ್ಯಂತ ಹಳೆಯ ಹವಾಮಾನ ಕೇಂದ್ರವಾಗಿದೆ. ಇಲ್ಲಿ ಹೆಚ್ಚಾಗಿ ನಾಗರಹಾವಿನ ಜಾತಿಗೆ ಸೇರಿದ ಹಾವುಗಳು ಕಂಡುಬರುವುದರಿಂದ ಇದನ್ನು ‘ನಾಗರಹಾವಿನ ರಾಜಧಾನಿ‘ ಎಂದೂ ಕರೆಯಲಾಗುತ್ತದೆ.