Mysore
20
overcast clouds
Light
Dark

ಆಫ್ರಿಕಾದ ಚೀತಾಗಳಿಗೆ ನಮ್ಮ ನೆಲ ಹಿಡಿಸಲಿಲ್ಲವೇ ?

  • ಅನಿಲ್‌ ಅಂತರಸಂತೆ

ಮಧ್ಯಪ್ರದೇಶದ ಕುನೋ ಉದ್ಯಾನದಲ್ಲಿ ಆಫ್ರಿಕಾದಿಂದ ತರಲಾಗಿದ್ದ ಚೀತಾಗಳ ಸರಣಿ ಸಾವು ಮುಂದುವರಿದಿದೆ. ಗುರುವಾರ ಸೂರಜ್ ಹೆಸರಿನ ಮತ್ತೊಂದು ಗಂಡು ಚೀತಾ ಸಾವನ್ನಪ್ಪಿದೆ. 20 ಚೀತಾಗಳ ಪೈಕಿ ಕಳೆದ ನಾಲ್ಕು ತಿಂಗಳಲ್ಲಿ ಮೃತಪಟ್ಟ 8ನೇ ಚೀತಾ ಇದಾಗಿದೆ. ಕುನೋ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ಸೂರಜ್ ಚೀತಾ ಸಾವಿಗೆ ನಿಖರ ಕಾರಣವೇನು ಎಂದು ಪತ್ತೆ ಹಚ್ಚಲು ತನಿಖೆ ಶುರು ಮಾಡಿದ್ದಾರೆ.

ಕಳೆದ ಮಂಗಳವಾರ ತೇಜಸ್ ಹೆಸರಿನ ಗಂಡು ಚೀತಾ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಸಾವನ್ನಪ್ಪಿತ್ತು. ಹೆಣ್ಣು ಚೀತಾ ಜೊತೆಗಿನ ಕಾದಾಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ತೇಜಸ್ ಚೀತಾ ಚೇತರಿಕೆ ಕಾಣದೆ ಸಾವನ್ನಪ್ಪಿತ್ತು. ಮರಣೋತ್ತರ ಪರೀಕ್ಷಾ ವರದಿ ಕೂಡಾ ಇದೇ ಅಂಶವನ್ನು ಬಹಿರಂಗಪಡಿಸಿದೆ.

ಕಳೆದ ಮಾರ್ಚ್ 27 ರಂದು ಸಾಶಾ ಹೆಸರಿನ ಹೆಣ್ಣು ಚೀತಾ ಸಾವನ್ನಪ್ಪಿತ್ತು. ಕಿಡ್ನಿ ವೈಫಲ್ಯದಿಂದ ಈ ಚೀತಾ ಕೊನೆಯುಸಿರೆಳೆದಿತ್ತು. ಏಪ್ರಿಲ್ 23ರಂದು ಉದಯ್ ಹೆಸರಿನ ಗಂಡು ಚೀತಾ ಹೃದಯ ಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪಿತ್ತು. ಇನ್ನು ಮೇ 9 ರಂದು ದಿಶಾ ಎಂಬ ಹೆಣ್ಣು ಚೀತಾ ಕೂಡಾ ಸಾವನ್ನಪ್ಪಿತ್ತು. ಗಂಡು ಚೀತಾ ಜೊತೆ ಮಿಲನದ ವೇಳೆ ಕಾದಾಟ ನಡೆದು ಈ ಚೀತಾ ಕೊನೆಯು ಸಿರೆಳೆದಿತ್ತು. ಇದಲ್ಲದೆ ಮೇ 25 ರಂದು ಹವಾಮಾನ ವೈಪರೀತ್ಯದಿಂದ ನಿರ್ಜಲೀಕರಣಕ್ಕೆ ಒಳಗಾಗಿ ಮೂರು ಚೀತಾ ಮರಿಗಳು ಸಾವನ್ನಪ್ಪಿದ್ದವು.

ಭಾರತದಲ್ಲಿ ಕಣ್ಮರೆಯಾದ ಚೀತಾ ಪ್ರಬೇಧಗಳನ್ನು ಪುನರ್ ಸ್ಥಾಪನೆ ಮಾಡಬೇಕೆಂಬುದು ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಇದಕ್ಕಾಗಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ 8, ಆಫ್ರಿಕಾದಿಂದ 12 ಚೀತಾಗಳನ್ನು ತರಿಸಲಾಗಿತ್ತು

ಆದರೆ ಈವರೆಗೆ 8 ಚೀತಾಗಳು ಸಾವನ್ನಪ್ಪಿದ್ದು, ಕೇಂದ್ರ ಸರ್ಕಾರದ ಯೋಜನೆಗೆ ಭಾರೀ ಹಿನ್ನಡೆಯಾಗಿದೆ. ಈ ಹಿಂದೆ 6 ಚೀತಾಗಳು ಸಾವನ್ನಪ್ಪಿದ್ದ ವೇಳೆ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಿರ್ವಹಣಾ ಲೋಪ ಇದೆಯೇ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ ಕೇಂದ್ರ ಸರ್ಕಾರ ಈ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿತ್ತು. ಚೀತಾಗಳ ಸಾವಿಗೆ ನಿರ್ವಹಣಾ ಲೋಪ ಕಾರಣವಲ್ಲ ಎಂದು ಹೇಳಿತ್ತು.

ಜಾಗತಿಕ ವನ್ಯಜೀವಿ ಅಂಕಿ ಅಂಶಗಳ ಪ್ರಕಾರ ನವಜಾತ ಚೀತಾ ಮರಿಗಳ ಮರಣ ಪ್ರಮಾಣ ಶೇ. 90ರಷ್ಟು ಇದೆ ಎಂದು ಮಾಹಿತಿ ನೀಡಿತ್ತು. ಭಾರತ ಚೀತಾಗಳನ್ನು ತರುವ ವಿಚಾರ ಸಂಬಂಧ ಕಳೆದ ಮೇನಲ್ಲಿ ಪ್ರತಿಕ್ರಿಯೆ ನೀಡಿದ್ದ ದಕ್ಷಿಣ ಆಫ್ರಿಕಾ ವನ್ಯಜೀವಿ ತಜ್ಞ ವಿನ್ಸೆಂಟ್ ವಾನ್ ಡೆರ್ ಮರ್ವೆ, ಸಾಕಷ್ಟು ಚೀತಾಗಳು ಸಾವನ್ನಪ್ಪುತ್ತವೆ ಎಂದು ಭವಿಷ್ಯ ನುಡಿದಿದ್ದರು. ಚೀತಾಗಳು ತಮ್ಮ ಗಡಿಯನ್ನು ನಿಗದಿ ಮಾಡಿಕೊಳ್ಳುವ ವೇಳೆ ಅರಣ್ಯದಲ್ಲಿ ಚಿರತೆ ಹಾಗೂ ಹುಲಿಗಳ ಜೊತೆ ಕಾದಾಟ ನಡೆಸುವ ಸಾಧ್ಯತೆಗಳು ಇರುತ್ತವೆ ಎಂದೂ ಹೇಳಿದ್ದರು.

ಯಾವುದೇ ಜೀವಿ ಒಂದು ಪರಿಸರ ವ್ಯವಸ್ಥೆಯಿಂದ ಮತ್ತೊಂದು ಪರಿಸರ ವ್ಯವಸ್ಥೆಗೆ ಹೊಂದಿಕೊಳ್ಳುವುದು ತೀರಾ ಕಷ್ಟ. ಅದರಲ್ಲಿಯೂ ಈಗ ಚೀತಾಗಳನ್ನು ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ಸ್ಥಳಾಂತರ ಮಾಡಲಾಗಿದೆ. ಮಾಂಸಾಹಾರಿ ಪ್ರಾಣಿಗಳ ಸ್ಥಳಾಂತರ ಅಷ್ಟು ಸುಲಭದ ಕೆಲಸವಲ್ಲ. ಈ ಬಗ್ಗೆ ವೈಜ್ಞಾನಿಕವಾಗಿ ನಿಲುವುಗಳನ್ನು ತೆಗೆದುಕೊಳ್ಳುವಲ್ಲಿ ಈ ಯೋಜನೆ ವಿಫಲವಾಗಿವೆ ಎನ್ನುವುದು ತಜ್ಞರ ಮಾತು.

ಹುಲ್ಲುಗಾವಲು, ಕುರುಚಲು ಹಾಗೂ ವಿಸ್ತಾರವಾಗಿ ಕಣ್ಣು ಹಾಯಿಸಿದಷ್ಟು ದೂರ ಕಾಣುವಂತಹ ಮೈದಾನದ ಪ್ರದೇಶದಲ್ಲಿ ಬದುಕಿದ್ದ ಚೀತಾಗಳು ಅತ್ಯಂತ ವೇಗದ ಜೀವಿ ಎಂದೇ ಹೆಸರು ಪಡೆದಿವೆ. ಇಂತಹ ಚೀತಾಗಳಿಗೆ ಭಾರತದ ಕಾಡುಗಳ ವಿಸ್ತೀರ್ಣ ತೀರಾ ಚಿಕ್ಕದು. ಅಲ್ಲದೆ ಅವುಗಳಿಗೆ ಆಫ್ರಿಕಾದ ಕಾಡುಗಳಲ್ಲಿದ್ದ ಆಹಾರ ಪದ್ಧತಿಯೇ ಬೇರೆ, ಭಾರತದ ಕಾಡುಗಳಲ್ಲಿ ಸಿಗುವ ಆಹಾರದ ಬೇಟೆ ಪ್ರಾಣಿಯೇ ಬೇರೆ. ತನ್ನ ಜೀವಿತಾವಧಿಯಲ್ಲಿ ನೋಡಿಯೇ ಇಲ್ಲದ ಪ್ರಾಣಿಗಳನ್ನು ಹೇಗೆ ತಾನೆ ಬೇಟೆಯಾಡಲು ಸಾಧ್ಯ? ಈ ಒತ್ತಡವನ್ನು ನಿಭಾಯಿಸಲಾಗದೆ ಭಾರತಕ್ಕೆ ಪರಿಚಯಿಸಿದ ಚೀತಾಗಳು ಸಾವಿಗೀಡಾಗುತ್ತಿವೆ ಎಂಬುದು ತಜ್ಞರ ಅಭಿಪ್ರಾಯ.

ಚೀತಾಗಳ ಸಾವಿಗೆ ಕಾರಣವಾದರೂ ಏನು? ಹವಾಮಾನದ ಬದಲಾವಣೆಯೇ? ಆಹಾರದ ಬದಲಾವಣೆಯೇ? ಕಾಡು ಅಥವಾ ವಾತಾವರಣ ಅವುಗಳಿಗೆ ಹೊಂದಿಕೆಯಾಗಲಿಲ್ಲವೇ? ಈ ಎಲ್ಲ ಪ್ರಶ್ನೆಗಳೂ ಹುಟ್ಟುತ್ತಿವೆ. ತಜ್ಞರೂ ಅವುಗಳಿಗೆ ವೈಜ್ಞಾನಿಕವಾಗಿ ಉತ್ತರಿಸುತ್ತಾ, ಭಾರತಕ್ಕೆ ಆಫ್ರಿಕನ್ ಚೀತಾಗಳನ್ನು ಪರಿಚಯಿಸುವ ಪ್ರಯತ್ನವೇ ಒಂದು ತಪ್ಪು ಪರಿಕಲ್ಪನೆ ಎಂದು ವಾದಿಸುತ್ತಿದ್ದಾರೆ.

ಜೀವ ಪರಿಸರಗಳ ಪುನರ್‌ ಸೃಷ್ಟಿಸುವ ಆಲೋಚನೆಗಳೇ ನಿರರ್ಥಕ. ಇಂತಹ ಯೋಜನೆಗಳಿಗೆ ಸಿದ್ಧವಾಗುವ ಮುನ್ನ ವಿಜ್ಞಾನವನ್ನು ಗೌರವಿಸುವ ಮನೋಭಾವವನ್ನು ಬೆಳೆಸಿ ಕೊಂಡಿರಬೇಕು. ಕೇವಲ ಭಾವನಾತ್ಮಕ ಸ್ಪೂರ್ತಿಯಿಂದ ಇಂತಹ ಪ್ರಯತ್ನಗಳನ್ನು ಮಾಡಿದಲ್ಲಿ ಫಲ ನೀಡುವುದಿಲ್ಲ.

– ಕೃಪಾಕರ ಸೇನಾನಿ, ವನ್ಯಜೀವಿ ತಜ್ಞರು.

ಏನು ಕಾರಣ ?

1 ಭಾರತದ ಕಾಡುಗಳ ವಿಸ್ತೀರ್ಣ ತುಂಬಾ ಚಿಕ್ಕದು

2 ಆಫ್ರಿಕಾ ಚೀತಾಗಳ ಬೇಟೆ, ಆಹಾರ ಪದ್ದತಿ ಬೇರೆ

3 ಆಫ್ರಿಕಾದ ಹವಾಮಾನಕ್ಕಿಂತ ಇಲ್ಲಿನ ಹವಾಮಾನ ಬದಲು

4 ಭಾರತದಲ್ಲಿದ್ದ ಚೀತಾ ಪ್ರಬೇಧಕ್ಕಿಂತ ಆಫ್ರಿಕಾ ಚೀತಾ ಪ್ರಬೇಧ ವಿಭಿನ್ನ

5 ಗಡಿಯನ್ನು ನಿಗದಿ 5ಮಾಡಿಕೊಳ್ಳುವ ವೇಳೆ ಚೀತಾಗಳಲ್ಲಿ ಸಂಘರ್ಷ ಸಾಮಾನ್ಯ

ಭಾರತದಲ್ಲಿ ಚೀತಾ

ಶತಮಾನಗಳಿಂದಲೂ ಜಿಮ್ ಕಾರ್ಬೆಟ್ ರಂತಹ ಸಾಕಷ್ಟು ತಜ್ಞರು ಕಾಡುಪ್ರಾಣಿಗಳ ಕುರಿತಂತೆ ಅನೇಕ ಸಂಶೋಧನೆಗಳನ್ನು ಮಾಡಿ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಆದರೆ ಎಲ್ಲಿಯೂ ಚೀತಾಗಳು ಭಾರತದ ಕಾಡುಗಳಲ್ಲಿದ್ದವು ಎಂಬ ಬಗ್ಗೆ ಉಲ್ಲೇಖ ಮಾಡಿಲ್ಲ. ಜೊತೆಗೆ ರಾಜರ ಕಾಲದ ಹಳೆಯ ದೇವಾಲಯಗಳಲ್ಲಿಯೂ, ಚಿತ್ರಕಲೆಗಳಲ್ಲಿಯೂ ಹುಲಿ, ಆನೆ, ಸಿಂಹಗಳ ಚಿತ್ರಗಳು ಮೂಡಿವೆಯೇ ವಿನಾ ಚೀತಾಗಳ ಚಿತ್ರ ಕಂಡಿರುವ ಉದಾಹರಣೆ ಇಲ್ಲ. ಈ ಎಲ್ಲ ಮಾಹಿತಿಗಳು ಚೀತಾಗಳು ಭಾರತದ ನೆಲದಲ್ಲಿ ಸ್ವತಂತ್ರವಾಗಿ ಬದುಕಿದ್ದವು ಎಂಬುದಕ್ಕೆ ಯಾವುದೇ ಆಧಾರ ನೀಡಿಲ್ಲ. ಬಹುಶಃ ಅರಬ್ ರಾಷ್ಟ್ರಗಳಿಂದ ಭಾರತಕ್ಕೆ ಬಂದ ಮೊಘಲರು ಅಥವಾ ಕೆಲ ವ್ಯಾಪಾರಿಗಳು ಇಲ್ಲಿನ ರಾಜರಿಗೆ ಚೀತಾಗಳನ್ನು ಉಡುಗೊರೆಯಾಗಿ ನೀಡಿದ್ದಿರಬಹುದು ಅವು ಒಂದಿಷ್ಟು ವರ್ಷ ಬದುಕಿರಬಹುದು ಎಂಬುದು ತಜ್ಞರ ನಿಲುವು.

ಭಾರತದಲ್ಲಿ ಚೀತಾ ಸಂತತಿ ಕೊನೆಗೊಂಡಿದ್ದು, 1911ರಲ್ಲಿ ಛತ್ತೀಸ್‌ ಗಡ ಜಿಲ್ಲೆಯಲ್ಲಿ ಹೆಣ್ಣು ಚೀತಾವೊಂದು ಕಾಣಿಸಿಕೊಂಡಿದ್ದಲ್ಲೇ ಕೆನೆಯಾಗಿತ್ತು. ಭಾರತದಲ್ಲಿ ಈ ಹಿಂದೆ ಇದ್ದದ್ದು ವಿಷಿಯಾಟಿಕ್ ಚೀತಾಗಳು, ಅವು ಇಲ್ಲಿನ ವಾತಾವರಣದಲ್ಲೇ ಹುಟ್ಟಿ ಬೆಳೆದವು ಎಂಬುದಕ್ಕೆ ಇಲ್ಲಿ ಪುಷ್ಟಿಕೊಡುವ ಭರವಸೆಗಳಿಲ್ಲ ಪ್ರಸ್ತುತ ಏಷಿಯಾಟಿಕ್ ಚೀತಾಗಳು ಇರಾನ್‌ ನಲ್ಲಿ ಬೆರಳೆಣಿಕೆಯಷ್ಟು ಇರಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. 1950ಕ್ಕೂ ಮೊದಲು ಭಾರತದಲ್ಲಿ ಕಾಡಿನ ಪ್ರಮಾಣ ವಿಸ್ತಾರವಾಗಿತ್ತು. ಬಹುಶಃ ಇದ್ದಿದ್ದೇ ಆದಲ್ಲಿ ಚೀತಾಗಳಿಗೂ ಪೂರಕ ವಾತಾವರಣವಿದ್ದಿರಬಹುದು. ಆದರೆ ಮನುಷ್ಯನ ಹಸ್ತಕ್ಷೇಪ ಹೆಚ್ಚಿದಂತೆಲ್ಲ ಕೃಷಿಗಾಗಿ, ಜನವಸತಿಗಾಗಿ ಆ ಕಾಡುಗಳನ್ನು ಸಡೆಸಲಾಗಿದೆ ಈಗಿರುವ ಕಾಡುಗಳಲ್ಲಿ ಹುಲಿ, ಚಿರತೆಯಂತಹ ದೊಡ್ಡ ಮಾಂಸಾಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕ್ಷೀಣಿಸುತ್ತಿರುವ ಕಾಡಿನಲ್ಲಿ ಅವುಗಳ ರಕ್ಷಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ