Mysore
15
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ರೋಮಾಂಚನ ಅನುಭವ ನೀಡಿದ ಶ್ರೀಲಂಕಾ ಪ್ರವಾಸ

ಡಾ.ಎಸ್.ಎನ್.ಶಿಲ್ಪ

ಇತ್ತೀಚೆಗೆ ನಾನು ನನ್ನ ಕುಟುಂಬದೊಂದಿಗೆ ಶ್ರೀಲಂಕಾಕ್ಕೆ ಪ್ರವಾಸ ಹೋಗಿದ್ದೆ. ಅಲ್ಲಿನ ಪ್ರವಾಸಿ ತಾಣಗಳ ಪರಿಚಯದ ಹೊರತಾಗಿಯೂ ಅಲ್ಲಿನ ಕೆಲವು ವಿಶಿಷ್ಟ ಅನುಭವಗಳು ಸದಾ ನೆನಪಿನಲ್ಲಿ ಉಳಿದಿವೆ.

ಶ್ರೀಲಂಕಾದಲ್ಲಿ ಜನರೊಂದಿಗೆ ಬೆರತು ಮಾತನಾಡಲು ಆರಂಭಿಸಿದಾಗ ಅಲ್ಲಿ ಮೊದಲು ಕೇಳಿ ಬರುತ್ತಿದ್ದ ವಿಚಾರವೇ ಕ್ರಿಕೆಟ್. ಕ್ರಿಕೆಟ್, ಭಾರತ ಮತ್ತು ಶ್ರೀಲಂಕಾ ನಡುವೆ ಒಂದು ರೀತಿಯ ಉತ್ತಮ ಬಾಂಧ್ಯವ್ಯ ಬೆಸೆದಿದೆ ಎಂದರೆ ತಪ್ಪಾಗಲಾರದು. ನಮ್ಮ ಬಾಲ್ಯದಲ್ಲಿ ಈಗಿನಂತೆ ಐಪಿಎಲ್ ಪಂದ್ಯಾವಳಿ ಇಲ್ಲದಿದ್ದರೂ ಕ್ರಿಕೆಟ್ ನಮ್ಮೆಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ನಮ್ಮ ನೆಚ್ಚಿನ ಆಟಗಾರರನ್ನು ನಾವು ನೆನಪಿಸಿಕೊಳ್ಳುವಂತೆ ಇತರೆ ದೇಶದವರೂ ಮೆಚ್ಚಿಕೊಂಡಿದ್ದರು. ಇಂತಹ ಕ್ರಿಕೆಟ್ ಆಟದ ಬಗ್ಗೆ ಶ್ರೀಲಂಕಾದ ಅನೇಕರು ನಮ್ಮೊಡನೆ ಚರ್ಚಿಸಿದ್ದು, ವಿಶೇಷವಾಗಿತ್ತು. ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮುಂತಾದವರು ಮಾತ್ರವಲ್ಲದೇ ಈಗಿನ ವಿಶ್ವ ಶ್ರೇಷ್ಠ ಆಟಗಾರರೆನಿಸಿಕೊಂಡಿರುವ ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಮುಂತಾದವರ ಬಗ್ಗೆ ಚರ್ಚಿಸಿದರು.

ಒಂದು ಕ್ರೀಡೆ ಎರಡು ದೇಶಗಳ ನಡುವೆ ಈ ಮಟ್ಟದ ಬಾಂಧವ್ಯವನ್ನು ಬೆಸೆಯಬಹುದು ಎಂಬುದು ನನಗೆ ಅರಿವಾಗಿದ್ದು ಅಲ್ಲಿಯೇ. ನಾವು ತಂಗಿದ್ದ ಹೋಟೆಲ್‌ನ ಸರ್ವರ್‌ನಿಂದ ಹಿಡಿದು ಆಟೋ ರಿಕ್ಷಾದ ಚಾಲಕನವರೆಗೂ ಕ್ರಿಕೆಟ್‌ನದ್ದೇ ಮಾತು. ನಾವು ಕೂಡ ಶ್ರೀಲಂಕಾದ ಅರ್ಜುನ್ ರಣತುಂಗ, ಅರವಿಂದ ಡಿ’ ಸಿಲ್ವಾ, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಚಮಿಂದ ವಾಸ್ ಮುಂತಾದವರ ಬಗ್ಗೆ ಮಾತನಾಡುತ್ತಾ ಎಲ್ಲರೊಂದಿಗೂ ಸ್ನೇಹ ಸಂಪಾದಿಸಿದ್ದೆವು. ಅನೇಕ ಬಾರಿ ಶ್ರೀಲಂಕಾದವರು ನಮ್ಮ ದೇಶದ ಆಟಗಾರರನ್ನೂ ಮುಕ್ತಕಂಠದಿಂದ ಹೊಗಳಿದ್ದು ನಮಗೆ ಹೆಮ್ಮೆ ಅನಿಸಿತು.

ಅದರಲ್ಲಿಯೂ ಭಾರತಕ್ಕೆ ಹಿಂತಿರುಗುವ ವೇಳೆ ವಿಮಾನದಲ್ಲಿ ಅನಿಲ್ ಕುಂಬ್ಳೆಯವರೊಂದಿಗೆ ಪ್ರಯಾಣಿಸಿದ್ದು, ಖುಷಿ ಅನಿಸಿತು. ಶ್ರೀಲಂಕನ್ನರು ಕ್ರಿಕೆಟ್ ಮಾತ್ರವಲ್ಲದೇ ನಮ್ಮ ದೇಶದ ಸಿನಿಮಾಗಳ ಮೇಲೆಯೂ ಹೆಚ್ಚಿನ ಅಭಿಮಾನ ಹೊಂದಿದ್ದಾರೆ. ಬಾಲಿವುಡ್ ನಟರಾದ ಶಾರುಖ್ ಖಾನ್, ಅಮೀರ್ ಖಾನ್, ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಸೇರಿದಂತೆ ಹಲವಾರು ತಾರೆಯರ ಅಭಿಮಾನಿಗಳು ಶ್ರೀಲಂಕಾದಲ್ಲಿಯೂ ಇದ್ದಾರೆ. ನಾವು ಶ್ರೀಲಂಕಾದ ರೈಲು ನಿಲ್ದಾಣದಲ್ಲಿದ್ದಾಗ ನಮ್ಮ ಪಕ್ಕದಲ್ಲಿಯೇ ಕುಳಿತಿದ್ದ ಹಿರಿಯ ನಾಗರಿಕರೊಬ್ಬರು ನಮ್ಮ ಪರಿಚಯ ಮಾಡಿಕೊಂಡು, ನಾವು ಭಾರತೀಯರು ಎಂದು ತಿಳಿದ ಕೂಡಲೇ ಹಳೆಯ ಸಿನಿಮಾ ತಾರೆ ಸಾಯಿರಾ ಬಾನುರವರನ್ನು ನೆನಪಿಸಿದರು. ಅವರ ಅಭಿಮಾನ ಎಷ್ಟಿತ್ತೆಂದರೆ ಅವರು ತಮ್ಮ ನೆಚ್ಚಿನ ಸಿನಿಮಾ ನಟಿಯನ್ನು ನೋಡಲು ಭಾರತಕ್ಕೆ ಬರಬೇಕೆಂದು ಅಪೇಕ್ಷಿಸಿದ್ದರು. ಅಲ್ಲಿನ ಜನರಿಗೆ ಹಿಂದಿ ಅಷ್ಟಾಗಿ ಬಾರದಿದ್ದರೂ ನಮ್ಮ ಸಿನಿಮಾಗಳು ಅವರನ್ನು ಆಕರ್ಷಿಸಿದ್ದುದು ಹೆಮ್ಮೆಯ ವಿಚಾರ.

ಶ್ರೀಲಂಕಾದಲ್ಲಿ ಬುದ್ಧನ ಪ್ರಭಾವ ಹೆಚ್ಚು ರಾವಣನ ಶ್ರೀಲಂಕೆಯಲ್ಲಿ ಎಲ್ಲೆಡೆ ನಮಗೆ ಕಂಡದ್ದುಭಗವಾನ್ ಬುದ್ಧರ ದೇವಾಲಯಗಳು ಮತ್ತು ಅವರ ಅನುಯಾಯಿಗಳು. ಅಂದಿನ ಕಾಲದಲ್ಲಿಯೇ ಭಗವಾನ್ ಬುದ್ಧರು ಕಾಲ್ನಡಿಗೆಯಲ್ಲಿಯೇ ಸಂಚರಿಸಿ ಬೌದ್ಧ ಧರ್ಮ ಪ್ರಚಾರ ಮಾಡಿರುವುದು ಹೆಮ್ಮೆಯ ವಿಚಾರ. ಶ್ರೀಲಂಕಾದ ಕ್ಯಾಂಡಿ ನಗರದಲ್ಲಿ ಭಗವಾನ್ ಬುದ್ಧರ ಹಲ್ಲನ್ನು ಇಟ್ಟಿರುವ ‘ದಲದ ಮಾಲಿಗಾವ ದೇವಸ್ಥಾನ’ದಲ್ಲಿನ ಅವರ ಪ್ರಭಾವಳಿ ನಮ್ಮ ಅನುಭವಕ್ಕೂ ಬಂತು. ದೇಶ-ವಿದೇಶಗಳಿಂದ ಜನರು ಅಲ್ಲಿಗೆ ಬರುತ್ತಾರೆ. ಕ್ಯಾಂಡಿ ನಗರ ಸರೋವರದಿಂದ ಸುತ್ತುವರಿದಿದ್ದು, ಅಲ್ಲಿರುವ ಬೌದ್ಧ ಮಂದಿರಕ್ಕೆ ಹೋಗಿದ್ದು, ಆಧ್ಯಾತ್ಮಿಕ ಅನುಭೂತಿಯೆಂದರೆ ತಪ್ಪಾಗಲಾರದು. ಶ್ರೀಲಂಕಾ ವಿದೇಶಿಗರನ್ನು ಹೆಚ್ಚಾಗಿ ಆಕರ್ಷಿಸಿರುವ ಒಂದು ಸುಂದರ ಪ್ರವಾಸಿ ತಾಣ. ಗೋವಾದಂತೆಯೇ ಇರುವ ಶ್ರೀಲಂಕಾದ ಮಿರೀಸ್ಸಾ ನಗರಕ್ಕೆ ಭೇಟಿ ನೀಡಿದಾಗ ಅಲ್ಲಿ ಬಹುಸಂಖ್ಯೆಯಲ್ಲಿ ಕಂಡಿದ್ದು ವಿದೇಶಿಗರೇ. ಅಮೆರಿಕಾ, ಫ್ರಾನ್ಸ್, ಸ್ವಿಡ್ಜರ್‌ಲ್ಯಾಂಡ್ ಹೀಗೆ ಹಲವು ದೇಶಗಳಿಂದ ಬರುವ ವಿದೇಶೀಯ ಪ್ರವಾಸಿಗರು ಅಲ್ಲಿನ ಸ್ಥಳೀಯರಂತೆ ಬೈಕು, ಟುಕ್‌ಟುಕ್‌ಗಳನ್ನು ಚಲಾಯಿಸುತ್ತಿರುತ್ತಾರೆ. ಮಿರೀಸ್ಸಾ ಮಾತ್ರವಲ್ಲದೆ ವೆಲಿಗಾಮ, ಮೊರಾಟುವಾ, ನೆಗುಂಬೋ ಮುಂತಾದ ಸ್ಥಳಗಳಲ್ಲಿಯೂ ಸ್ಕೂಬಾ ಡೈವಿಂಗ್, ಸರ್ಫಿಂಗ್, ಡಾಲ್ಹಿನ್ ಮತ್ತು ವೇಲ್ ವಾಚಿಂಗ್ ಮುಂತಾದ ಜಲ ಕೀಡೆಗಳನ್ನು ಆನಂದಿಸುವ ಸಲುವಾಗಿ ವಿದೇಶಿಗರು ಶ್ರೀಲಂಕಾಕ್ಕೆ ಭೇಟಿ ನೀಡುತ್ತಾರೆ. ಕೆಲವರು ಸ್ಕೂಬಾ ಡೈವಿಂಗ್, ಸರ್ಫಿಂಗ್ ತರಬೇತಿಗಳನ್ನು ಅಲ್ಲಿಯೇ ಪಡೆದು ಅಲ್ಲಿಯೇ ತಮ್ಮದೇ ಆದ ತರಬೇತಿ ಕೇಂದ್ರಗಳನ್ನು ತೆರೆದಿದ್ದಾರೆ.

ಇದಷ್ಟೇ ಅಲ್ಲದೆ ಶ್ರೀಲಂಕಾದಲ್ಲಿ ನಮಗೆ ಹೆಚ್ಚು ಇಷ್ಟವಾಗಿದ್ದು, ಅಲ್ಲಿ ಸಮುದ್ರದ ದಡದ ರೆಸ್ಟೋರೆಂಟ್ ಗಳಲ್ಲಿ ಸಿಗುವ ತರಹೇವಾರಿ ತಾಜಾ ಮೀನು, ಏಡಿ, ಸೀಗಡಿ, ಕಪ್ಪೆ ಚಿಪ್ಪು ಮುಂತಾದವು. ಇವು ಹೆಚ್ಚು ರುಚಿಕರವಾಗಿರುತ್ತವೆ. ನಮಗೆ ಬೇಕಾದ ಮೀನು, ಏಡಿಗಳನ್ನು ಖರೀದಿಸಿ ಸಮೀಪದ ರೆಸ್ಟೋರೆಂಟ್‌ನಲ್ಲಿ ಬೇಯಿಸಿ ರುಚಿಯಾದ ಖಾದ್ಯಗಳನ್ನು ತಯಾರಿಸಿಕೊಳ್ಳಬಹುದು. ಸಮುದ್ರದ ಅಲೆಗಳನ್ನು ವೀಕ್ಷಿಸುತ್ತಾ ಅವುಗಳನ್ನು ಆಸ್ವಾದಿಸುವುದು ಸೀ ಫುಡ್ ಪ್ರಿಯರಿಗೆ ಹಬ್ಬವೇ ಸರಿ.

ಒಟ್ಟಾರೆ ಶ್ರೀಲಂಕಾ ಜನರ ಸಹಕಾರ ಮತ್ತು ಒಳ್ಳೆಯಸ್ವಭಾವ, ನಮ್ಮನ್ನು ಎಲ್ಲೆಡೆ ಸ್ವಾಗತಿಸುತ್ತಿದ್ದ ಅವರ  ಮಂದಹಾಸ, ಹೋಟೆಲ್‌ನವರಿಂದ ಹಿಡಿದು ಬೀದಿ ಬದಿಯ ವ್ಯಾಪಾರಿಗಳವರೆಗೂ ಎಲ್ಲರೂ ಪ್ರೀತಿಯಿಂದ ಕಾಣುತ್ತಿದ್ದ ಅವರ ಗುಣವನ್ನು ಮೆಚ್ಚಿಕೊಳ್ಳಲೇ ಬೇಕು. ಅತಿಥಿ ದೇವೋಭವ ಎಂಬ ನಮ್ಮ ಭಾರತೀಯ ನಾಣ್ಣುಡಿಯಂತೆ ಶ್ರೀಲಂಕನ್ನರೂ ಪ್ರವಾಸಿಗರನ್ನು ದೇವರಂತೆಯೇ ಆದರಿಸುತ್ತಾರೆ. ನಮ್ಮ ಪ್ರವಾಸದ ಎಲ್ಲ ಹಂತಗಳಲ್ಲಿಯೂ ಅನೇಕ ವ್ಯಕ್ತಿಗಳು ನಮಗೆ ಸೂಕ್ತ ಮಾರ್ಗದರ್ಶನ ನೀಡಿ ನಮ್ಮ ಪ್ರಯಾಣದ ಅನುಭವವನ್ನು ಸುಲಲಿತಗೊಳಿಸಿದರು.

(ಲೇಖನರು ಹಾಸನದ ರಾಜೀವ್ ಆಯುರ್ವೇದ

ಕಾಲೇಜು ಮತ್ತು ಆಸ್ಪತ್ರೆಯ ಸಹ ಪ್ರಾಧ್ಯಾಪಕರಾಗಿದ್ದಾರೆ)

Tags:
error: Content is protected !!