ಡಾ.ಎಸ್.ಬಸವರಾಜಪ್ಪ ಮತ್ತು ಆರ್.ಸಿಂಧು
ಪ್ರಾಣಿಶಾಸ್ತ್ರ ವಿಭಾಗ, ಮಾನಸಗಂಗೋತ್ರಿ, ಮೈಸೂರು.
ಇದೇ ಮಾರ್ಚ್ ೨೦ರಂದು ವಿಶ್ವ ಗುಬ್ಬಿ ದಿ ವನ್ನು ಆಚರಿಸಿ, ಅವುಗಳ ರಕ್ಷಣೆಯ ಬಗ್ಗೆ ಒಂದಿಷ್ಟು ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿವೆ. ಆದರೆ, ಮನುಷ್ಯ ಅಭಿವೃದ್ಧಿಯತ್ತ ದಾಪುಗಾಲು ಹಾಕಿದಂತೆಲ್ಲ, ಗುಬ್ಬಿ ಸಂತತಿ ಅಳಿವಿನ ಅಂಚಿಗೆ ಜಾರುತ್ತಿರುವುದು ವಿರ್ಪಯಾಸ. ದಶಕದ ಹಿಂದೆ ಎಲ್ಲಿ ನೋಡಿದರಲ್ಲಿ ಗುಂಪು ಗುಂಪಾಗಿ ಕಾಣುತ್ತಿದ್ದ ಗುಬ್ಬಿಗಳು ಈಗ ಅಲ್ಲೊಮ್ಮೆ ಇಲ್ಲೊಮ್ಮೆ ಸಣ್ಣ ಸಣ್ಣ ಗುಂಪುಗಳಲ್ಲಿ ಕಾಣಿಸುತ್ತಿವೆ.
ಗುಬ್ಬಚ್ಚಿಗಳು ಮಾನವನಿಗೆ ತೀರ ಹತ್ತಿರದ ಜೀವಿಗಳಾಗಿದ್ದು, ಮನುಷ್ಯನೊಂದಿಗೆ ನಿಕಟ ಸಂಬಂಧ ಹೊಂದಿವೆ. ಗುಬ್ಬಿಗಳ ಚಿಲಿಪಿಲಿ ಶಬ್ದವನ್ನು ಕೇಳಿಯೇ ನಾವೆಲ್ಲ ಬೆಳೆದಿರುವುದು, ಅವುಗಳಿಗೆ ಕಾಳುಗಳನ್ನು ಹಾಕುವುದು, ನೀರಿಡುವುದು ಬಹುಶಃ ಎಲ್ಲರೂ ಮಾಡಿರುತ್ತಾರೆ. ನಮ್ಮ ನಡುವೆಯೇ ಬಳಗವನ್ನು ಕಟ್ಟಿಕೊಂಡು, ಚಿಲಿಪಿಲಿಗುಟ್ಟುತ್ತಾ, ಹಾರಾಡುತ್ತಿದ್ದ ಈ ಪುಟ್ಟ ಜೀವಿಗಳು ಈಗ ಕಣ್ಮರೆಯಾಗುತ್ತಿರುವುದು ದುಃಖಕರ ಸಂಗತಿ.
ಈ ಹಿಂದೆ ಮನೆಯ ಗೋಡೆಯ ಅಂಚುಗಳಲ್ಲಿ, ಬಾಗಿಲ ಬಳಿ, ವರಾಂಡದಲ್ಲಿ ಗುಬ್ಬಿಗಳು ಗೂಡು ಕಟ್ಟಿಕೊಂಡು ವಾಸಿಸುತ್ತಿದ್ದವು. ಅವು ಗೂಡು ಕಟ್ಟುವ ಪರಿ ನೋಡುವುದೇ ಒಂದು ವಿಶೇಷ ಅನಿಸುತ್ತಿತ್ತು. ಈಗ ಎಲ್ಲೆಡೆ ಕಾಂಕ್ರಿಟ್ ಮನೆಗಳು ತಲೆ ಎತ್ತಿ ಅವುಗಳಿಗೆ ಗೂಡು ಕಟ್ಟಿಕೊಳ್ಳಲು ಸೂಕ್ತ ಸ್ಥಳಾವಕಾಶವೇ ಇಲ್ಲದಂತೆ ಮಾಡಿದೆ. ಪಕ್ಷಿ ತಜ್ಞರ ಪ್ರಕಾರ ವಿಶ್ವದಾದ್ಯಂತ ೨೬ ಪ್ರಭೇದದ ಗುಬ್ಬಚ್ಚಿಗಳಿವೆ. ಅವುಗಳಲ್ಲಿ ಐದು ಪ್ರಭೇದದ ಗುಬ್ಬಿಗಳು ಭಾರತದಲ್ಲಿ ಕಾಣ ಸಿಗುತ್ತವೆ.
ಅವುಗಳಲ್ಲಿಯೂ ವಲಸೆ ಹೋಗುವ ಗುಬ್ಬಿಗಳು ಮತ್ತು ಮಾನವ ವಸತಿ ಪ್ರದೇಶಗಳಲ್ಲಿ ವಾಸಿಸುವ ಗುಬ್ಬಚ್ಚಿಗಳೆಂಬ ಎರಡು ಪ್ರಕಾರದ ಗುಬ್ಬಿಚ್ಚಿಗಳನ್ನು ಕಾಣಬಹುದು. ಈ ಪೈಕಿ ಪಕ್ಷಿತಜ್ಞರು ಸುಮಾರು ೧೨ ಉಪಪ್ರಭೇದದ ಗುಬ್ಬಚ್ಚಿಗಳಿರುವ ಬಗ್ಗೆಯೂ ವರದಿ ಮಾಡಿದ್ದಾರೆ.
ಗುಬ್ಬಿಗಳ ತಮ್ಮ ಜೀವಮಾನವನ್ನು ಒಂದೇ ಸಂಗಾತಿಯೊಂದಿಗೆ ಕಳೆಯುತ್ತಿವೆ ಎಂಬುದು ಮತ್ತೊಂದು ವಿಶೇಷ. ಹೌದು, ಗುಬ್ಬಚ್ಚಿಗಳು ಏಕಪತ್ನಿತ್ವ ಜೀವನ ಅನುಸರಿಸುವ ಜೀವಿಗಳು. ಒಮ್ಮೆ ಗಂಡು-ಹೆಣ್ಣು ಒಂದಾದರೆ, ಅನೇಕ ವರ್ಷಗಳ ಕಾಲ ಅವು ಜೊತೆಯಾಗಿ ಜೀವಿಸುತ್ತವೆ. ಈ ಜೋಡಿ ಹಲವು ವರ್ಷಗಳ ಕಾಲ ಒಂದೇ ಗೂಡಿನಲ್ಲಿ ವಾಸಿಸುತ್ತವೆ. ಹೀಗಾಗಿ ಗುಬ್ಬಚ್ಚಿಗಳ ಸಂತಾನ ಅಭಿವೃದ್ಧಿಯು ಭಾರತದ ಹಲವು ಪ್ರದೇಶಗಳಲ್ಲಿ ಬಹುತೇಕ ವರ್ಷದ ಎಲ್ಲ ಋತುಗಳಲ್ಲಿಯೂ ನಡೆಯುತ್ತದೆ. ಕೆಲವು ಪ್ರದೇಶಗಳಲ್ಲಿ ಆಗಸ್ಟ್ ತಿಂಗಳಲ್ಲಿ ಸಂತಾನ ಪ್ರಕ್ರಿಯೆ ನಡೆಯುತ್ತದೆ. ಸಾಮಾನ್ಯವಾಗಿ ಅವು ಏಪ್ರಿಲ್ ತಿಂಗಳಲ್ಲಿ ಒಟ್ಟಾಗಿ ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುತ್ತವೆ.
ಇಂತಹ ಸಂಘ ಜೀವಿಗಳು ಇಂದು ನಮ್ಮಿಂದ ದೂರಾಗುತ್ತಿವೆ. ಕೃಷಿ ಭೂಮಿಗಳಲ್ಲಿ ಸಿಗುವ ಕಾಳು, ದವಸಧಾನ್ಯಗಳನ್ನು ತಿಂದು ಬದುಕುತ್ತಿದ್ದ ಈ ಜೀವಿಗಳಿಗೆ ಕೃಷಿಯಲ್ಲಿ ಬಳಸುವ ರಾಸಾಯನಿಕಗಳು ಈಗ ಮಾರಕವಾಗಿವೆ. ಮೊಬೈಲ್ ಟವರ್‌ಗಳ ಸೂಕ್ಷ ತರಂಗಗಳು ಇವುಗಳ ಬದುಕಿಗೆ ಕಂಟಕವಾಗಿವೆ. ಇನ್ನು ಹಳ್ಳಿಗಳೆಲ್ಲ ನಗರಗಳಾಗಿ ಪರಿವರ್ತನೆಗೊಳ್ಳುತ್ತಿದ್ದು, ಬೃಹತ್ ಕಟ್ಟಡಗಳು ತಲೆ ಎತ್ತುತ್ತಿವೆ. ಇದರಿಂದ ಗುಬ್ಬಿಗಳಿಗೆ ಗೂಡು ಕಟ್ಟಿಕೊಳ್ಳಲು ಸ್ಥಳಾವಕಾಶವೇ ಇಲ್ಲದೆ, ಅವು ಸಂಕಷ್ಟಕ್ಕೆ ಸಿಲುಕಿವೆ. ಪರಿಣಾಮ ಅವುಗಳ ಸಂತತಿ ಅಳಿವಿನ ಅಂಚಿಗೆ ಜಾರಿದೆ. ಗುಬ್ಬಿಗಳು ಸಾಮಾನ್ಯವಾಗಿ ನಾವು ಮನೆಯಿಂದ ಹೊರ ಹಾಕುವ ಯಾವುದೇ ಉಳಿದ ಆಹಾರ ಪದಾರ್ಥಗಳು, ಅಂಗಡಿಯಿಂದ ತಂದ ಧಾನ್ಯಗಳನ್ನು ತಿನ್ನುತ್ತವೆ. ಜತೆಗೆ ಭತ್ತದ ಹುಲ್ಲಿನಲ್ಲಿ ಉಳಿದ ಭತ್ತದ ಕಾಳುಗಳು, ಗೋಧಿಕಾಳು, ಹೆಸರುಕಾಳು, ಉದ್ದಿನಕಾಳಿನಂತಹ ಧವಸ ಧಾನ್ಯಗಳನ್ನು ತಿಂದು ಬದುಕುತ್ತವೆ. ಈಗ ಪೇರಲ, ನಿಂಬೆ, ನುಗ್ಗೇಕಾಯಿ, ಪಪ್ಪಾಯಿ ಸೇರಿದಂತೆ ಇತರೆ ಸಸ್ಯಗಳ ಮೊಗ್ಗುಗಳನ್ನು ತಿನ್ನುತ್ತವೆ. ಸಣ್ಣ ಗಿಡಗಳು, ಮರಗಳ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತವೆ. ಈಗ ಅಭಿವೃದ್ಧಿಯ ಹೆಸರಿನಲ್ಲಿ ಮರಗಿಡಗಳಿಗೂ ಕೊಡಲಿಪೆಟ್ಟು ಬೀಳುತ್ತಿದ್ದು, ನೆಲೆ ಕಳೆದುಕೊಂಡು ಹಕ್ಕಿಗಳು ತಮ್ಮ ಸಂತತಿಯ ಉಳಿವಿಗೆ ಹೋರಾಡುತ್ತಿವೆ.
ಗುಬ್ಬಿಗಳ ರಕ್ಷಣೆ ಆಗತ್ಯ
ಇಂತಹ ಪುಟ್ಟ ಜೀವಿಗಳ ರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು. ಪ್ರತಿ ವರ್ಷ ವಿಶ್ವ ಗುಬ್ಬಿ ದಿನವನ್ನು ಆಚರಿಸಿ ಅವುಗಳನ್ನು ರಕ್ಷಣೆ ಮಾಡಬೇಕು ಎಂದು ಕೊಳ್ಳುತ್ತೇವೆಯೇ ವಿನಾ ಮುಂದುವರಿದು ಯಾವುದೇ ಯೋಜನೆಗಳನ್ನೂ ಕಾರ್ಯಗತಗೊಳಿಸುತ್ತಿಲ್ಲ. ಹೀಗಾಗಿ ನಾವು ನೀವು ಗುಬ್ಬಿಗಳಿಗಾಗಿ ನಮ್ಮ ಮನೆಯ ಮುಂಭಾಗ, ತಾರಸಿಯ ಮೇಲೆ ಒಂದಿಷ್ಟು ಕಾಳುಗಳನ್ನು ಚೆಲ್ಲಿ ಅವುಗಳಿಗೆ ಆಹಾರ ನೀಡುವ ಜತೆಗೆ ನೀರನ್ನು ಇಟ್ಟು ಅವುಗಳ ದಾಹ ತಣಿಸಬೇಕು. ಜತೆಗೆ ಮನೆಯ ಅಕ್ಕ-ಪಕ್ಕ ಅವುಗಳಿಗೆ ಗೂಡುಕಟ್ಟಿ ವಾಸಿಸಲು ಪೂರಕ ವಾತಾವರಣ ನಿರ್ಮಿಸಿಕೊಡಬೇಕು. ಆ ಮೂಲಕ ಅವುಗಳ ರಕ್ಷಣೆ ಮುಂದಾಗಬೇಕು. ನಮ್ಮ ಮುಂದಿನ ಪೀಳಿಗೆಗೂ ಗುಬ್ಬಿ ಎಂಬ ಸುಂದರ ಜೀವಿ ಉಳಿಯುವಂತೆ ಮಾಡಬೇಕು
ವಿಶ್ವದಾದ್ಯಂತ ೨೬ ಪ್ರಭೇದದ ಗುಬ್ಬಚ್ಚಿಗಳಿವೆ. ಅವುಗಳಲ್ಲಿ ಐದು ಪ್ರಭೇದದ ಗುಬ್ಬಿಗಳು ಭಾರತದಲ್ಲಿ ಕಾಣ ಸಿಗುತ್ತವೆ.