Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ವಾರಾಂತ್ಯ ವಿಶೇಷ : ನೋಡಬನ್ನಿ ಹತ್ವಾಳು ಜಲಾಶಯದ ವಿಹಂಗಮ ನೋಟ

– ಶ್ರೀಧರ್ ಆರ್ ಭಟ್.

ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕಿನಲ್ಲಿರುವ ಹತ್ವಾಳು ಜಲಾಶಯವು ಜಲ ಸೌಂದರ್ಯ ಹಾಗೂ ಪ್ರಾಕೃತಿಕ ಸೊಬಗಿನ ಪ್ರಾಕೃತಿಕ ತಾಣವಾಗಿದೆ.

ಕೇರಳದ ವೈನಾಡಿನಲ್ಲಿ ಉದ್ಭವವಾಗಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ಸಾಗುವ ಕಪಿಲಾ ನದಿ ಅನೇಕ ಸುಂದರ ಪ್ರಾಕೃತಿಕ ತಾಣಗಳನ್ನು ತನ್ನ ಒಡಲಲ್ಲಿ ಹುದುಗಿಸಿಟ್ಟುಕೊಂಡಿದೆ.
ಅಂತಹ ತಾಣಗಳಲ್ಲಿ ತಾಲ್ಲೂಕಿನ ಹುಲ್ಲಹಳ್ಳಿ ಬಳಿಯ ಹತ್ವಾಳು ಜಲಾಶಯವೂ ಒಂದಾಗಿದೆ. 2 ಶತಮಾನಗಳ ಹಿಂದೆ, 1889 ರಲ್ಲಿ ಕಪಿಲಾ ನದಿಗೆ ನಿರ್ಮಿಸಲಾದ ಜಲಾಶಯದಿಂದ ವರ್ಷದ 365 ದಿನಗಳ ಕಾಲವೂ ಧುಮ್ಮಿಕ್ಕ್ಕುವ ಜಲ ರಾಶಿಯ ಸಿರಿ ಸೊಬಗು ನೋಡುಗರ ಕಣ್ಮನ ಸೆಳೆಯುತ್ತದೆ.

ಮೈಸೂರು ಸಂಸ್ಥಾನದಲ್ಲಿ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳನ್ನು ಸಾಕಾರಗೊಳಿಸಿದ ಮಹರಾಜ ಮುಮ್ಮಡಿ ಚಾಮರಾಜ ಒಡೆಯರ್ ಅವರು, ಹುಲ್ಲಹಳ್ಳಿ ಬಳಿಯ ಹತ್ವಾಳಿನಲ್ಲಿ ಈ ಪ್ರದೇಶದ ಕೃಷಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಿರುಜಲಾಯವನ್ನು ನಿರ್ಮಿಸಿ, ರಾಂಪುರ ನಾಲೆ ಮತ್ತು ಹುಲ್ಲಹಳ್ಳಿ ನಾಲೆಯನ್ನು ನಿರ್ಮಿಸಿದ್ದು ಈಗ ಇತಿಹಾಸ.

ಬೀಚನಳ್ಳಿಯಿಂದ ಹರಿದು ಬರುವ ಈ ನದಿಗೆ ಅಡ್ಡಲಾಗಿ ಪ್ರಾಕೃತಿಕವಾಗಿಯೇ ಇದ್ದ ಕಲ್ಲುಗಳನ್ನು ಉಪಯೋಗಿಸಿಕೊಂಡು ಇಲ್ಲಿ 42 ಮೀಟರ್ ಎತ್ತರ, 430 ಮೀಟರ್ ಉದ್ದದ ಬಾಗಿಲುಗಳಿಲ್ಲದ ಕಿರು ಅಣೆಕಟ್ಟು ನಿರ್ಮಿಸಲಾಗಿದೆ. ಸದಾ ತುಂಬಿ ವಿಸ್ತಾರವಾಗಿ ಭೂಮಿಗೆ ಚಾಚಿ ಹರಿಯುವ ನೀರು ರಮಣೀಯತೆಯನ್ನು ಸೃಷ್ಟಿಸಿದೆ.

ಮೈಸೂರಿನಿಂದ ಎಷ್ಟು ದೂರ: ಜಿಲ್ಲಾ ಕೇಂದ್ರ ಮೈಸೂರಿನಿಂದ ಕೇವಲ 28 ಕಿ .ಮಿ, ತಾಲ್ಲೂಕು ಕೇಂದ್ರ ನಂಜನಗೂಡಿನಿಂದ 18ಕಿ.ಮಿ. ದೂರದಲ್ಲಿರುವ ಈ ರಮಣೀಯ ತಾಣ ಹೊರ ಜಗತ್ತಿನ ಪಾಲಿಗೆ ಎಲೆ ಮರೆಯ ಕಾಯಿಯಿಂತೆ ಇದೆ. ಇಂತಹ ಸುಂದರ ವಾದ ಸ್ಥಳ ಯಾವುದೇ ಸೌಕರ್ಯಗಳಿಲ್ಲದೆ ಸೊರಗಿದೆ. ಹೀಗಾಗಿ ಪ್ರವಾಸಿಗರನ್ನು ತನ್ನತ್ತ ಬಾ ಎಂದು ಆಹ್ವಾನಿಸುವ ಎಲ್ಲ ಸಾಮರ್ಥ್ಯವಿರುವ ಈ ಹತ್ವಾಳು ಜಲಾಶಯ ಸದ್ಯಕ್ಕೆ ಕುಡುಕರು, ಜೂಜು ಕೋರರ ತಾಣವಾಗಿದೆ.
ರಾಂಪುರ ನಾಲೆಯ ಉಗಮಸ್ಥಾನದಲ್ಲಿರುವ ಈ ಸುಂದರ ತಾಣವನ್ನು ಸ್ವಲ್ಪ ಅಭಿವೃದ್ಧಿಪಡಿಸಿದರೆ ಇದು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಲಿದೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸ್ಥಳ ಮೂಲೆ ಗುಂಪಾಗಿದೆ. ನೋಡಲು ಸುಂದರ ಸ್ಥಳವಾಗಿದೆ ಆದರೆ, ಈ ಸ್ಥಳವನ್ನು ನೋಡಲು ಹೋಗುವವರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು. ಸುರಕ್ಷತೆಗೆ ಆದ್ಯತೆ ಇರಲಿ. ಪ್ರಕೃತಿ ದತ್ತ ತಾಣವಾಗಿರುವುದರಿಂದ ನೋಡಿ, ಕಣ್ತುಂಬಿಕೊಳ್ಳಲು ಯಾವುದೇ ತೊಂದರೆ ಇಲ್ಲ. ಸ್ನೇಹಿತರೊಟ್ಟಿಗೆ ಹೋಗಿ ಒಂದರ್ಧ ದಿನ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕಾಲ ಕಳೆದು ತಣ್ಣನೆಯ ಅನುಭವದೊಂದಿಗೆ ಹಿಂದಿರುಗಬಹುದು.


ತಲುಪುವ ಮಾರ್ಗ: ಮೈಸೂರು- ದೂರ ಮಾರ್ಗವಾಗಿ ತೆರಳಿ, ಹುಲ್ಲಹಳ್ಳಿಯ ಕಪಿಲಾ ಸೇತುವೆ ಮಾರು ದೂರವಿರುವಾಗಲೆ ಬಲಕ್ಕೆ ಹೊರಳಿ ರಾಂಪುರ ನಾಲೆಯ ದಡದಲ್ಲಿ 2.5 ಕಿ. ಮಿ. ಸಾಗಬೇಕು.
ನಂಜನಗೂಡಿನಿಂದ ಹುಲ್ಲಹಳ್ಳಿಗೆ ಆಗಮಿಸಿ ಕಪಿಲಾ ಸೇತುವೆ ದಾಟಿ ರಾಂಪುರ ನಾಲೆಯ ಎಡಕ್ಕೆ ಸಾಗಿದರೆ ಕಾಣುವುದೇ ಹತ್ವಾಳು ಜಲಾಶಯದ ವಿಹಂಗಮ ನೋಟ.


ವಿಶೇಷ ಸೂಚನೆ: ಇಲ್ಲಿ ಯಾವುದೇ ಆಹಾರ ಸಿಗುವ ವ್ಯವಸ್ಥೆ ಇಲ್ಲ, ಪ್ರವಾಸಿಗರು ತಮಗೆ ಬೇಕಾದ ತಿನಿಸುಗಳನ್ನು ಜೊತೆಯಲ್ಲೆ ತೆಗೆದುಕೊಂಡು ಹೋಗಬೇಕು. ಇದೊಂದು ಅಪರೂಪದ ವಿಹಾರದ ಸ್ಥಳವಂತೂ ಹೌದು.

ಈಗಲಾದರೂ ಜಪ್ರತಿನಿಧಿಗಳು ಇಲ್ಲಿ ನೀರು, ನೆರಳು, ಬೋಟಿಂಗ್ ಸೇರಿದಂತೆ ಪ್ರವಾಸಿಗರಿಗೆ ಕನಿಷ್ಠ ಸೌಕರ್ಯಗಳನ್ನಾದರೂ ಒದಗಿಸಿ ಪ್ರವಾಸೋದ್ಯಮದ ಭೂಪಟದಲ್ಲಿ ನಂಜನಗೂಡಿಗೂ ಸ್ಥಾನ ದೊರಕಿಸುವಂತೆ ಮಾಡಬೇಕಿದೆ.


ಜವಾಬ್ದಾರಿ ಇರಲಿ: ಪೃಕೃತಿ ನಿರ್ಮಿತ ಪ್ರಮುಖ ನಿಸರ್ಗ ತಾಣಗಳು ಮೋಜು ಮಸ್ತಿಗಾಗಿ ತೆರಳುವವರಿಂದ ಪರಿಸರ,ನೈರ್ಮಲ್ಯ ಹಾಳಾಗುತ್ತಿದೆ. ಇಲ್ಲಿ ಅಂತಹ ಯಾವ ಚಟುವಟಿಕೆಗೂ ಪ್ರಾಶಸ್ತ್ಯ ನೀಡಬೇಡಿ,ಪ್ಲಾಸ್ಟಿಕ್ ನಂತಹ ಹಾನಿಕಾರಕ ವಸ್ತುಗಳ ಬಳಕೆ ಬೇಡ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ