Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ನಡಿಗೆ ಎಂಬ ಬೌದ್ಧಿಕ ದಿನಚರಿ; ನಡಿಗೆ ಎಂಬ ವಿಕಾಸದ ದಾರಿ

ಶೇಷಾದ್ರಿ ಗಂಜೂರು

ಎಲ್ಲೋ ಎಂದೋ ಓದಿದ ಕತೆ ಇದು. ಒಂದು ದಿನ ಜರಿಹುಳ ಎಂದು ಕರೆಯಲ್ಪಡುವ ಶತಪದಿಯೊಂದು ತನ್ನ ಪಾಡಿಗೆ ತಾನು ನೆಲದ ಮೇಲೆ ಹರಿಯುತ್ತಿತ್ತು. ಆಗ ಅದರ ಎದುರಿಗೆ ಬಂದ ತುಂಟ ಕಪ್ಪೆ ಮರಿಯೊಂದು ಆ ಜರಿಹುಳವನ್ನು ಪ್ರಶ್ನಿಸಿತು.

“ನೀ ನಡೆಯುವಾಗ ಯಾವ ಪಾದವನ್ನು ಮೊದಲು ಇಡುತ್ತೀ? ” ಈ ಪ್ರಶ್ನೆ ಆ ಜರಿಹುಳವನ್ನು ಎಂತಹ ಗೊಂದಲಕ್ಕೆ ದೂಡಿತೆಂದರೆ, ಯಾವ ಪಾದ ಮೊದಲಿಡುವುದು ಎಂಬ ಆಲೋಚನೆಯಲ್ಲಿ ನಡೆಯುವುದು ಹೇಗೆಂದೇ ಅದು ಮರೆಯಿತು. ಕೆಲವೊಮ್ಮೆ, ನಾವು ತಲೆ ಕೆಡಿಸಿಕೊಳ್ಳದೆ ಮಾಡುವ ಕೆಲಸಗಳ ಕುರಿತು ಹೆಚ್ಚು ಆಲೋಚಿಸಿದಷ್ಟೂ ನಮ್ಮ ತಲೆ ಗೊಂದಲದ ಗೂಡಾಗುವ ಪ್ರಕ್ರಿಯೆಗೆ ಮನಶ್ಶಾಸ್ತ್ರದಲ್ಲಿ “ಸೆಂಟೀಪೀಡ್ ಎಫೆಕ್ಟ್” ಎನ್ನುವ ಪರಿಪಾಠವಿದೆ. ಇಂತಹ ‘ದಾರಿ ಕಾಣದಾಗದ’ ಪರಿಸ್ಥಿತಿ ಉಂಟಾದಾಗ, ಸುಲಭದ ಪರಿಹಾರವೆಂದರೆ, “ವಾಕಿಂಗ್”. ಇದು ಕೇವಲ ನಾನು ಕಂಡುಕೊಂಡದ್ದಲ್ಲ; ಚಾರ್ಲ್ಸ್ ಡಾರ್ವಿನ್, ಐನ್‌ಸ್ಟೈನ್ ಅಂತಹ ಮಹಾಮಹಿಮರೂ ಕೂಡ ಕಂಡುಕೊಂಡ ಪರಿಹಾರ. ತಾರುಣ್ಯದಲ್ಲೇ ತನ್ನ ವಾಕಿಂಗ್ ಅಭ್ಯಾಸ ಬೆಳೆಸಿಕೊಂಡ ಡಾರ್ವಿನ್, ವೃದ್ಧಾಪ್ಯದಿಂದ ಹಣ್ಣಾಗುವವರೆಗೂ ಅದನ್ನು ಬಿಡಲೇ ಇಲ್ಲ. ತನ್ನ ವಿಕಾಸವಾದದ ಮೂಲಕ ನಾವು ನಾವಾದ ಬಗೆಯನ್ನು ನಮ್ಮ ಮುಂದಿಟ್ಟ ಅವನು, ಬಿಸಿಲಾಗಲೀ, ಮಳೆಯಾಗಲೀ, ಕೊರೆವ ಚಳಿಯಾಗಲೀ ತನ್ನ “ವಾಕಿಂಗ್” ಮಾತ್ರ ಎಂದೂ ತಪ್ಪಿಸುತ್ತಿರಲಿಲ್ಲ. ಈ ವಾಕಿಂಗ್ ಅವನಿಗೆ ಕೇವಲ “ವಾಯು ವಿಹಾರ” ಅಥವಾ ಆರೋಗ್ಯದ ವಿಚಾರವಾಗಿರಲಿಲ್ಲ. ಬದಲಿಗೆ ಅದು ಅವನ ಬೌದ್ಧಿಕ ದಿನಚರಿಯಾಗಿತ್ತು.

ತಾನು ಪ್ರತಿನಿತ್ಯ ವಾಕಿಂಗಿಗೆ ಹೋಗುತ್ತಿದ್ದ ತನ್ನ ಮನೆಯ ಸುತ್ತಲಿನ ದಾರಿಯನ್ನು ಅವನು “ಥಿಂಕಿಂಗ್ ಪಾತ್” (“ಆಲೋಚನೆಯ ಪಥ”) ಎಂದೇ ಕರೆಯುತ್ತಿದ್ದ. ೧೮೫೯ರಲ್ಲಿ ಪ್ರಕಟವಾದ ಡಾರ್ವಿನ್ನನ “ಆರಿಜಿನ್ ಆಫ್ ಸ್ಪೆಷೀಸ್”, ಮಾನವ ಇತಿಹಾಸದಲ್ಲೇ ಒಂದು ಮೇರು ಕೃತಿ. ಆದರೆ, ಅದರಲ್ಲಿ ಅವನು, ಮಾನವ ಇತಿಹಾಸದ ವಿಚಾರವನ್ನು ಪ್ರಸ್ತಾಪಿಸುವುದೇ ಇಲ್ಲ; ಪುಸ್ತಕದ ಕೊನೆಯ ಪುಟದಲ್ಲಿ ಬರುವ “ಮಾನವನ ಉಗಮ ಮತ್ತು ಇತಿಹಾಸದ ಬಗೆಗೆ ಮುಂದೊಮ್ಮೆ ಬೆಳಕು ಚೆಲ್ಲಲಾಗುವುದು” ಎಂಬ ಸಾಲೊಂದನ್ನು ಬಿಟ್ಟು. ಆದರೆ, ಹನ್ನೆರಡು ವರ್ಷಗಳ ನಂತರ ತನ್ನ “ಡಿಸೆಂಟ್ ಆಫ್ ಮ್ಯಾನ್” ಕೃತಿಯಲ್ಲಿ, ಮಾನವ ಮಾನವನಾಗಿದ್ದು ಹೇಗೆಂಬುದನ್ನು ಅವನು ವಿವರಿಸುತ್ತಾನೆ. ಅವನ ಪ್ರಕಾರ ಮಾನವತ್ವದ ಗುಣಲಕ್ಷಣಗಳೆಂದರೆ, “ಸಲಕರಣೆಗಳ ಉಪಯೋಗ, ಕಿರಿದಾದ ಕೋರೆಹಲ್ಲು ಮತ್ತು ದ್ವಿಪಾದದ ನಡಿಗೆ”. ಡಾರ್ವಿನ್ ತನ್ನ ಪುಸ್ತಕ ಬರೆದ ಸಂದರ್ಭದಲ್ಲಿ, ಅವನಿಗೆ ಪುರಾತನ ಪಳೆಯುಳಿಕೆಗಳಾಗಲೀ, ಚಿಂಪಾಂಜಿ, ಗೊರಿಲ್ಲಾ, ಬೊನೊಬೋ ಇತ್ಯಾದಿಗಳ ಬಗೆಗೆ ಹೆಚ್ಚಿನ ಅರಿವಾಗಲೀ ಇರಲಿಲ್ಲ.

ಅವುಗಳನ್ನು ಅಧ್ಯಯನ ಮಾಡಿರುವ ಇತ್ತೀಚಿನ ವಿಜ್ಞಾನಿಗಳು ಹೇಳುವಂತೆ, ಮನುಷ್ಯನನ್ನು ಮನುಷ್ಯನನ್ನಾಗಿ ಮಾಡಿದ್ದೇ ಅವನ ದ್ವಿಪಾದ-ನಡಿಗೆ, ಅರ್ಥಾತ್, “ವಾಕಿಂಗ್”! ಈ ದ್ವಿಪಾದದ ನಡಿಗೆಯ ಆರಂಭಕ್ಕೆ ಹಲವು ಕಾರಣಗಳಿವೆ. ಅದರಲ್ಲಿ, ಹಣ್ಣು- ಹಂಪಲನ್ನು ಕೈ ತುಂಬಾ ಹಿಡಿದು ಬರುವುದೂ ಒಂದು. ವಿಜ್ಞಾನಿಗಳು ಹೇಳುವಂತೆ, ಈ ದ್ವಿಪಾದ-ನಡಿಗೆ, ಶಕ್ತಿಯ ಉಪಯೋಗದಲ್ಲಿ ಅತ್ಯಂತ ದಕ್ಷವಾಗಿದ್ದು (energy efficient), ಮಿದುಳು ದೊಡ್ಡದಾಗಲು ಅನುವು ಮಾಡಿಕೊಟ್ಟಿತು. ಈ ದೊಡ್ಡ ಮಿದುಳಿನಿಂದಲೇ, “ನಾನು” ಎನ್ನುವ ಭಾವ, ಭಾಷೆ, ಸಮಾಜ, ಸಂಸ್ಕ ತಿ, ಮತ್ತೆಲ್ಲವೂ. ಒಟ್ಟಿನಲ್ಲಿ, ಈ ವಾಕಿಂಗ್ ಇಲ್ಲದಿದ್ದರೆ, ಈ ಲೇಖನವೇ ಇರುತ್ತಿರಲಿಲ್ಲ. ಮಿದುಳನ್ನೇ ದೊಡ್ಡದಾಗಿಸಿ ನಮ್ಮನ್ನು ನಮ್ಮನ್ನಾಗಿಸಿದ ಈ ವಾಕಿಂಗಿನ ಕುರಿತು ಆಲೋಚಿಸುತ್ತಾ ನಾನೂ ನಡಿಗೆಗೆ ಹೊರಟೆ. ಕಾಲ್ನಡಿಗೆ ನನಗೂ ಅತ್ಯಂತ ಪ್ರಿಯವಾದದ್ದೇ. ಈ ವರ್ಷದ ಮೇ ತಿಂಗಳಿನಲ್ಲಿ ಬೆಂಗಳೂರಿಗೆ ವಾಪಸಾಗುವ ಮುನ್ನ ಎಷ್ಟೋ ವರ್ಷಗಳು ಕೆನಡಾದ ಟೊರೊಂಟೋ ಮತ್ತು ಅಮೆರಿಕದ ನ್ಯೂಯಾರ್ಕ್‌ಗಳಲ್ಲಿ ಕಳೆದಿರುವ ನನ್ನ ಬಳಿ ಕಾರೂ ಇಲ್ಲ, ಸ್ಕೂಟರೂ ಇಲ್ಲ.

ಕಡೆಗೆ, ಅವುಗಳನ್ನು ನಡೆಸುವ ಲೈಸೆನ್ಸೂ ಇಲ್ಲ. ನಡೆಯಲು ಸಾಧ್ಯವಿದ್ದಲ್ಲೆಲ್ಲಾ ನಡೆಯುವುದೇ ನನ್ನ ಅಭ್ಯಾಸ. ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೊಂದಿರುವ ಟೊರಾಂಟೋ, ನ್ಯೂಯಾರ್ಕ್‌ಗಳಲ್ಲಿದ್ದಷ್ಟು ವರ್ಷ ಕಾರು ಹತ್ತಿದ್ದೇ ಇಲ್ಲವೆಂಬಷ್ಟು ಕಡಿಮೆ. ಟೊರೊಂಟೋದಲ್ಲಿ, ನನ್ನ ಮನೆಯಿಂದ ಆಫೀಸಿನ ದೂರ ಅರ್ಧ ಕಿ. ಮೀ. ಸಹ ಇರಲಿಲ್ಲ. ಹೀಗಾಗಿ, ನಾನು ಬೇಕೆಂದೇ ಮನಸ್ಸಿಗೆ ಬಂದ ದಿಕ್ಕಿನಲ್ಲಿ ಮೂರ್ನಾಲ್ಕು ಕಿ. ಮೀ. ನಡೆದು ನಿಧಾನಕ್ಕೆ ಆಫೀಸ್ ಸೇರುತ್ತಿದ್ದೆ. ಮನೆಗೆ ವಾಪಸಾಗುತ್ತಿದ್ದುದ್ದೂ ಹಾಗೆಯೇ. ಹೀಗೆ ಮನ ಬಂದ ದಿಕ್ಕಿನಲ್ಲಿ ನಡೆಯುವುದನ್ನು ‘random walk’ ಎಂದೂ ಕರೆಯಬಹುದು. ಈ “ರಾಂಡಮ್ ವಾಕ್”ಗೆ ವಿಜ್ಞಾನ ಮತ್ತು ಗಣಿತ ಶಾಸ್ತ್ರಗಳಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ. ಮನಬಂದಂತೆ ಹಾರಾಡುವ ಸೊಳ್ಳೆಯೊಂದರ ಚಲನೆಯನ್ನು ಗಣಿತದ ಮೂಲಕ ಹಿಡಿದಿಡಿಯಬಹುದೇ ಎಂದು ಆಲೋಚಿಸಿ ಅದಕ್ಕೆ “ರಾಂಡಮ್ ವಾಕ್” ಎಂದು ಹೆಸರಿತ್ತವನು ಬ್ರಿಟಿಷ್ ಗಣಿತಜ್ಞ ಕಾರ್ಲ್ ಪಿಯರ್‌ಸನ್. ಭೌತ ಶಾಸ್ತ್ರದ “ಬ್ರೌನಿಯನ್ ಮೋಷನ್”,

ಈ “ರಾಂಡಮ್ ವಾಕ್”ನ ಮತ್ತೊಂದು ರೂಪ. “ಮನ ಬಂದಂತೆ” ಎಂದು ನಾವೆಂದುಕೊಳ್ಳುವ ಚಲನೆಗಳೂ ಗಣಿತದ ನಿಯಮಗಳಿಗೆ ಒಳಗೊಳ್ಳುವುದನ್ನು ತೋರಿಸಿಕೊಟ್ಟವನು ಐನ್‌ಸ್ಟೈನ್. ಅವನೂ, ಡಾರ್ವಿನ್ನನಂತೆಯೇ ನಿಯಮಿತ ನಡಿಗೆಯ ಮನುಷ್ಯ. ದಿನ ನಿತ್ಯದ ವಾಕಿಂಗ್, ನಮ್ಮ ಮನಸ್ಸನ್ನು ತಿಳಿಗೊಳಿಸಿ ಹೊಸ ಆಲೋಚನೆಗಳು ಸ್ಪಷ್ಟಗೊಳಿಸುತ್ತದೆಂದು ನಂಬಿದ್ದವನು. ೧೯೦೫ರಲ್ಲಿ ಅವನು ತೋರಿಸಿದ “ರಾಂಡಮ್ ವಾಕ್”ನ ಗಣಿತದ ನಿಯಮಗಳು, ಪರಮಾಣುಗಳ ಇರುವಿಕೆಗೆ ಸ್ಪಷ್ಟ ಸಾಕ್ಷ್ಯವನ್ನು ಒದಗಿಸಿದವು. ಅಲ್ಲಿಯವರೆಗೆ, ಪರಮಾಣುಗಳು ಕೇವಲ ಊಹಾಪೋಹಗಳ ವಿಚಾರಗಳಷ್ಟೇ ಆಗಿದ್ದವು. ವಾನರನನ್ನು ಮನುಷ್ಯನನ್ನಾಗಿ ಮಾಡಿ, ಪರಮಾಣುಗಳ ಇರುವಿಕೆಗೆ ಸಾಕ್ಷ್ಯವನ್ನು ಒದಗಿಸಿದ ವಾಕಿಂಗಿನ ಸೋಜಿಗದ ಕುರಿತು ಯೋಚಿಸುತ್ತಲೇ, ನಮ್ಮ ಕಾಲನಿಯಿಂದ ಹೊರಬಂದೆ. ನಮ್ಮ ಕಾಲನಿಯಿಂದ ಹೊರಬಂದ ಕೂಡಲೇ, ಸದಾ ಕಾರು-ಸ್ಕೂಟರ್-ಟ್ರಕ್‌ಗಳಿಂದ ಗಿಜಿಗುಡುವ ಮುಖ್ಯ ರಸ್ತೆ ಎದುರಾಗುತ್ತದೆ.

ಆ ರಸ್ತೆಯ ಎರಡೂ ಬದಿಗೂ, ಸರ್ಕಾರಿ ಹಣ ಯಥೇಚ್ಛವಾಗಿ ಖರ್ಚಾಗಿದೆ ಎಂದು ತೋರಿಸಲು ನಿರ್ಮಿತವಾಗಿರುವ ಫುಟ್‌ಪಾತ್ ಎಂದೆನ್ನಿಸಿಕೊಳ್ಳುವ ಅಡೆ-ತಡೆಗಳ ಮಾರ್ಗಗಳಿವೆ. ಅವನ್ನು ಕಾಲುದಾರಿ ಎನ್ನಲಾರೆ. ಏಕೆಂದರೆ, ಸ್ಕೂಟರ್-ಮೋಟಾರ್ ಬೈಕುಗಳೂ ಅದರ ಮೇಲೆ ಓಡಾಡುವುದುಂಟು. ಕಳೆದ ಅಕ್ಟೋಬರಿನಲ್ಲಿ ನಾನು ಎರಡು ವಾರಗಳ ಕಾಲ ಜಪಾನಿನ ಟೋಕಿಯೋದಲ್ಲಿ ಸುತ್ತಾಡಿದೆ. ಅಲ್ಲಿನ ಫುಟ್‌ಪಾತುಗಳ ಉದ್ದಕ್ಕೂ ಹಳದಿ ಪಟ್ಟಿಯೊಂದು ಇರುತ್ತದೆ; ಸಣ್ಣ-ಸಣ್ಣ ಉಬ್ಬುಗಳಿರುವ ಆ ಪಟ್ಟಿ, ದೃಷ್ಟಿಮಾಂದ್ಯರ ನಡಿಗೆಗೆ ಬಹು ಸಹಕಾರಿಯಂತೆ. ಆದರೆ, ಬೆಂಗಳೂರಿನ ಫುಟ್‌ಪಾತಿನ ಮೇಲೆ ನಡೆಯಬೇಕಿದ್ದರೆ, ಕಾಲುಗಳಿಗೂ ಕಣ್ಣಿರಲೇಬೇಕು. ಈ ಫುಟ್ ಪಾತುಗಳ ಮೇಲೆ ನಡೆಯುವಾಗ ಬೇರೇನೋ ವಿಚಾರದ ಬಗೆಗೆ ಯೋಚಿಸುತ್ತಿದ್ದರೆ ಹೆಚ್ಚು ದೂರ ಹೋಗಲು ಸಾಧ್ಯವೇ ಇಲ್ಲ. ಅದರ ಬದಲು, ಪಾನ್ ಮಸಾಲ-ಗುಟ್ಕಾ ಇತ್ಯಾದಿಗಳ ಖಾಲಿ ಪ್ಯಾಕೆಟ್ ತುಂಬಿರುವ ಈ ಹೊಂಡವನ್ನು ದಾಪುಗಾಲಿನಲ್ಲಿ ದಾಟಲೋ ಅಥವಾ ಪಕ್ಕದಿಂದ ನಿಭಾಯಿಸಲೋ ಎಂಬಂತಹ ಚಿಂತೆಗಳು ತಲೆಯೊಳಗೆ ನೃತ್ಯವಾಡುತ್ತಿರುತ್ತವೆ. ಇದೂ ಒಂದು ತರಹದ “ಆಲೋಚನೆಯ ಪಥ”ವೇ. (ಅಂದಹಾಗೆ, ವಿಶ್ವದ ಅತಿ ಜನನಿಬಿಡ ನಗರಗಳಲ್ಲಿ ಒಂದಾದ ಟೋಕಿಯೋ ಮತ್ತು ಅದರ ಸುತ್ತಮುತ್ತ ಸುಮಾರು ೪೦,೦೦೦ ಜನ ದೃಷ್ಟಿಮಾಂದ್ಯರಿದ್ದಾರಂತೆ, ಬೆಂಗಳೂರಿನಲ್ಲಿ, ೨೦೧೧ರ ಸೆನ್ಸಸ್ ಪ್ರಕಾರ ಅವರ ಸಂಖ್ಯೆ ೮೦,೦೦೦ಕ್ಕೂ ಹೆಚ್ಚು) ಕಾದಂಬರಿಕಾರ ಇ. ಎಂ. ಫಾರ್ಸ್ಟರ್, “ಭಾರತ ವಾಕಿಂಗ್‌ಗೆ ತಕ್ಕುದಲ ” ಎನ್ನುತ್ತಾನೆ.

ಇದು ಇಡೀ ಭಾರತದ ವಿಷಯದಲ್ಲಿ ನಿಜವಿರದಿರಬಹುದು. ಆದರೆ, ಬೆಂಗಳೂರಿನ ಮಟ್ಟಿಗಂತೂ ಅಪ್ಪಟ ಸತ್ಯ. ಕಳೆದ ವರ್ಷ ಬೆಂಗಳೂರಿನ ರಸ್ತೆ ಅಪಘಾತಗಳಲ್ಲಿ ಸತ್ತವರ ಸಂಖ್ಯೆಯಲ್ಲಿ ಸುಮಾರು ೪೦% ಜನರು ಪಾದಚಾರಿಗಳು. ಆದರೆ, ಇದು ಯಾರಿಗೂ ಬೇಡದ ವಿಷಯ. ರಸ್ತೆಯ ಪಾಟ್ ಹೋಲ್‌ಗಳನ್ನು ಮುಚ್ಚಲು ಬರುವ ಬೇಡಿಕೆ, ಅದಕ್ಕೆ ಸರ್ಕಾರ ತೋರುವ ಅಸ್ಥೆ — ಬೆಂಗಳೂರಿನ ರಸ್ತೆಗಳ ಪಾಟ್ ಹೋಲ್‌ಗಳನ್ನು ೧೫ ದಿನಗಳಲ್ಲೇ ಮುಚ್ಚಿಸುವುದಾಗಿ ಉಪಮುಖ್ಯಮಂತ್ರಿಗಳು ವಾಗ್ದಾನ ಮಾಡಿದ್ದಾರಂತೆ — ಪಾದಚಾರಿಗಳ ವಿಷಯದಲ್ಲಿ ಕಾಣುವುದೇ ಇಲ್ಲ. ಇದಕ್ಕೆ ಕಾರಣವೂ ಇದೆ. ನಮ್ಮ ಮನೆಯಿಂದ ಮೂರು ಕಿ. ಮೀ. ದೂರದಲ್ಲಿರುವ ದಿನಸಿ ಅಂಗಡಿಯಿಂದ ಸಾಮಾನು ತೆಗೆದುಕೊಂಡು ಬ್ಯಾಗುಗಳನ್ನು ಹಿಡಿದು ನಡೆಯುವಾಗ ಗಮನಿಸಿದ್ದೇನೆ, ಯಾರೂ ನನ್ನಂತೆ — ಕೈತುಂಬಾ ಆಹಾರ ಹಿಡಿದು ದ್ವಿಪಾದಗಳ ಮೇಲೆ ನಡೆದು ಮನುಷ್ಯನಾದ ಮಂಗನಂತೆ — ನಡೆಯುವುದೇ ಇಲ್ಲ. ನಡಿಗೆ ಯಾರಿಗೂ ಬೇಕಿಲ್ಲ. ಸ್ವಲ್ಪ ಅನುಕೂಲಸ್ಥರಾದವರೂ, ಸ್ಕೂಟರೋ-ಬೈಕೋ ಕೊಳ್ಳುತ್ತಾರೆ. ಅವರೆಲ್ಲಾ ನಡೆಯುವುದು ಪಾರ್ಕ್ ಮತ್ತು ಪಾರ್ಕಿಂಗಿನ ನಂತರ ಮಾತ್ರ. ಬೆಂಗಳೂರಿನ ರಸ್ತೆಗಳಲ್ಲಿ ಕಡುಬಡವರಿಗಷ್ಟೇ ನಡಿಗೆ. ಆದರೆ, ನ್ಯೂಯಾರ್ಕಿನ ರಸ್ತೆಗಳಲ್ಲಿ, ಮೈಕೆಲ್ ಬ್ಲೂಮ್‌ಬರ್ಗ್ ಅಂತಹ ಬಿಲಿಯನೇರುಗಳು ಪ್ರತಿನಿತ್ಯ ನಡೆಯುವುದು, ಸಾರ್ವಜನಿಕ ಸಾರಿಗೆಗಳನ್ನು ಉಪಯೋಗಿಸುವುದನ್ನು ನಾನೇ ನೋಡಿದ್ದೇನೆ.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಮೋಟಾರು ವಾಹನಗಳಿಗಾಗಿ ಸುರಂಗ ಮಾರ್ಗಗಳನ್ನು ನಿರ್ಮಿಸುವ ಯೋಜನೆ ತಯಾರಾಗುತ್ತಿದೆಯಂತೆ. ಟೊರಾಂಟೋ ನಗರದ ಹೃದಯ ಭಾಗದಲ್ಲಿ, ಹತ್ತಾರು ಕಿ. ಮೀ. ಉದ್ದದ ಸುರಂಗ ಮಾರ್ಗಗಳಿವೆ. ಎಲ್ಲವೂ ಪಾದಚಾರಿಗಳಿಗಾಗಿಯೇ. ಬೆಂಗಳೂರಿನಲ್ಲಿ “ಪಾದಚಾರಿಗಳಿಂದ ಆಗುವ ಸಮಸ್ಯೆ”ಯನ್ನು ತಡೆಗಟ್ಟಲು ರಸ್ತೆಯ ಮಧ್ಯದ ಡಿವೈಡರ್‌ಗಳನ್ನು ಎತ್ತರಿಸುವ ಆಲೋಚನೆಯ ವರದಿಗಳೂ ಬಂದಿವೆ. ಆ ಡಿವೈಡರುಗಳನ್ನು ಹಾರಲು ನನ್ನ ದಿನಸಿ ಕೈಚೀಲಗಳನ್ನು ಎಸೆದು ಮತ್ತೊಮ್ಮೆ ಮಂಗನಾಗಬೇಕು. ಒಂದು ನಗರವನ್ನು ನೋಡಲು ನಡಿಗೆಗಿಂತ ಉತ್ತಮ ವಿಧಾನವಿಲ್ಲ. ಬ್ಯೂನಸ್ ಏರಿಸ್, ನ್ಯೂಯಾರ್ಕ್, ಟೊರಾಂಟೋ, ಲಂಡನ್, ಪ್ಯಾರಿಸ್, ಟೋಕಿಯೋ ಸೇರಿ ವಿಶ್ವದ ಹತ್ತು ಹಲವು ನಗರಗಳಲ್ಲಿ ನಡೆದಾಡುವಾಗ ಇದು ನನ್ನ ಅನುಭವಕ್ಕೆ ಬಂದಿದೆ.

ಪಾದಚಾರಿಗಳು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮರೆತ ಮಾತಿನಂತೆ ಚಿಂತಿಸುವ ಬೆಂಗಳೂರು ಈ ಸಾಲಿನ ನಗರಕ್ಕೆ ಸೇರುವ ಸಾಧ್ಯತೆಯೇ ಇಲ್ಲ. ಕೊಂಚ ಮನಸ್ಸು ಮಾಡಿದರೆ, ವಿಶಾಲವಾದ ರಸ್ತೆಗಳು ಮತ್ತು ತಕ್ಕ ಮಟ್ಟಿಗೆ ನಡೆಯಲು ಅನುಕೂಲವಾಗಿರುವ ಫುಟ್‌ಪಾತುಗಳು ಇರುವ ಮೈಸೂರಿಗೆ ಸಾಧ್ಯವಿರಬಹುದು. ಈ ಆಲೋಚನೆಯ ನಡುವೆಯೇ ನನ್ನ ವಾಕಿಂಗ್ ಮುಂದುವರಿಯುತ್ತದೆ. ಈಗಷ್ಟೇ ತಲೆ ಎತ್ತುತ್ತಿರುವ ಆಳೆತ್ತರದ ಅತ್ಯಾಧುನಿಕ ಕಟ್ಟಡದ ನಿರ್ಮಾಣಕ್ಕಾಗಿ, ಮುರುಕಲು ಫುಟ್‌ಪಾತಿನ ಮೇಲೆಯೇ ಗುಡ್ಡೆ ಹಾಕಿರುವ ಸಿಮೆಂಟಿನಿಂದಾಗಿ, ರಸ್ತೆಗಿಳಿಯುತ್ತೇನೆ. ರಸ್ತೆಯಲ್ಲಿರುವ ಸಿಮೆಂಟಿನ ದೂಳಿನಲ್ಲಿ ನನ್ನ ಪಾದದ ಗುರುತು ಬೀಳುತ್ತದೆ. ಒಂದು ಕ್ಷಣ ನನ್ನ ಮನಸ್ಸು ಚಂದ್ರನ ಮೈ ಮೇಲೆ ಏರುತ್ತದೆ. ಚಂದ್ರನ ಮೈ ಮೇಲೆ ನಡೆದಾಡಿದ ನೀಲ್ ಆರ್ಮ್‌ಸ್ಟ್ರಾಂಗನ ಪಾದದ ಗುರುತಿನ ಫೋಟೋ ನೆನಪಾಗುತ್ತದೆ. ಚಂದ್ರನ ಮೈತುಂಬಾ ದೂಳಿದ್ದರೂ, ಗಾಳಿಯೇ ಇಲ್ಲದ್ದರಿಂದ ಆರ್ಮ್‌ಸ್ಟ್ರಾಂಗನ ಪಾದದ ಗುರುತುಗಳು ಕೋಟಿ-ಕೋಟಿ ವರ್ಷಗಳಾದರೂ ಮಾಸುವುದೇ ಇಲ್ಲವಂತೆ. ಆ ಫೋಟೊದಲ್ಲಿ ಕಂಡದ್ದು ಅವನ ಎಡ ಪಾದದ ಗುರುತೋ ಅಥವಾ ಬಲದ್ದೋ. . . ಅದೇ ಕ್ಷಣದಲ್ಲಿ, ಕುಯ್ಯೋ ಎಂದು ಹಾರ್ನ್ ಹಾಕುತ್ತಾ ಭೋರ್ ಎಂದು ವೇಗವಾಗಿ ನನ್ನ ಮೈಮೇಲೇ ಬರುವ ಕಾರಿನಿಂದ ತಪ್ಪಿಸಿಕೊಳ್ಳಲು ಇಲ್ಲದ ಫುಟ್‌ಪಾತಿಗೆ ಹಾರುತ್ತೇನೆ. ಸಾವರಿಸಿಕೊಂಡು ತಿರುಗಿ ನೋಡುತ್ತೇನೆ. ಆ ಕಾರು ಎಬ್ಬಿಸಿದ ದೂಳಿಗೆ ನನ್ನ ಪಾದದ ಗುರುತು ಮಾಯವಾಗಿರುತ್ತದೆ.

 

Tags: