ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಇಂದು; ಪಾಸ್ ಆದ ವಿದ್ಯಾರ್ಥಿಗಳಿಗೆ ಇದೆ ಹಲವು ಅವಕಾಶ
ಇಂದು (ಸೆ.೧೨) ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಹೊರಬೀಳಲಿದೆ. ಮೊದಲ ಹಂತದ ಪರೀಕ್ಷೆಯಲ್ಲಿ ಯಾವ್ಯಾವುದೋ ಕಾರಣಗಳಿಂದ ಅನುತ್ತೀರ್ಣರಾದ ವಿದ್ಯಾರ್ಥಿಗಳು ಸಿಕ್ಕ ಮತ್ತೊಂದು ಅವಕಾಶವನ್ನು ಬಳಸಿಕೊಂಡು ಪುಟಿದೇಳುವ ವೇಳೆ ಇದು. ಹೀಗೆ ಉತ್ತೀರ್ಣರಾದ ವಿದ್ಯಾರ್ಥಿಗಳು, ಪೋಷಕರು ಮುಂದೇನು? ಎಂದು ಯೋಚಿಸುವುದು ಸಹಜ. ಈ ನಿಟ್ಟಿನಲ್ಲಿ ಪೂರಕ ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಇರುವ ಅನಂತ ಅವಕಾಶಗಳ ಕಿರು ನೋಟ ನೀಡಲಾಗಿದೆ.
ಸಾಂಪ್ರದಾಯಿಕ ಆಯ್ಕೆಗಳು
ಸಹಜವಾಗಿಯೇ ಪಿಯುಸಿ ಮುಗಿದ ನಂತರ ಪದವಿ ಪ್ರವೇಶ. ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ ಸೇರಿ ಹಲವಾರು ಆಯ್ಕೆಗಳು ಪಿಯುಸಿಯಲ್ಲಿ ಆಯ್ಕೆ ಮಾಡಿಕೊಂಡ ವಿಷಯಕ್ಕೆ ಅನುಗುಣವಾಗಿ ಸಿಗುತ್ತವೆ. ಪೂರಕ ಪರೀಕ್ಷೆಯಲ್ಲಿ ಪಾಸ್ ಆದ ವಿದ್ಯಾರ್ಥಿಗಳು ತಕ್ಷಣವೇ ಸೀಟ್ ಖಾಲಿ ಇರುವ ಕಾಲೇಜುಗಳ ಬಗ್ಗೆ ಮಾಹಿತಿ ಪಡೆದು, ತಮ್ಮಿಷ್ಟದ, ತಮಗೆ ಸೂಕ್ತ ಎನ್ನಿಸುವ ಸಾಂಪ್ರದಾಯಿಕ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ತಾಂತ್ರಿಕ ಕೋರ್ಸ್‌ಗಳು
ಈಗ ಸಾಕಷ್ಟು ಉದ್ಯೋಗಾಧಾರಿತ, ತಾಂತ್ರಿಕ ಕೋರ್ಸ್‌ಗಳು ಲಭ್ಯವಿವೆ. ಸಾಕಷ್ಟು ವಿಶ್ವವಿದ್ಯಾಲಯಗಳು, ವಿದ್ಯಾಸಂಸ್ಥೆಗಳು ಈ ರೀತಿಯ ಅಸಂಪ್ರದಾಯಿಕ ಶಿಕ್ಷಣಕ್ಕೆ ಒತ್ತು ನೀಡುತ್ತಿವೆ. ಗ್ರಾಫಿಕ್ ಡಿಸೈನಿಂಗ್, ವಿಡಿಯೋ ಎಡಿಟಿಂಗ್ (ವಿಎಫ್‌ಎಕ್ಸ್), ಫೋಟೋಗ್ರಫಿ, ಕೊರಿಯೋಗ್ರಫಿ, ಡಿಒಪಿ ಸೇರಿ ಇನ್ನಿತರೆ ಕೋರ್ಸ್‌ಗಳಿಗೆ ಪ್ರವೇಶ ಪಡೆದುಕೊಳ್ಳಬಹುದು. ಇದರಿಂದ ಮುಂದಿನ ದಿನಗಳಲ್ಲಿ ಉದ್ಯೋಗ ಪಡೆದುಕೊಳ್ಳುವುದು ಸರಳ ಆಗಬಹುದು.
ಹೊಸ ಸಾಧ್ಯತೆಗಳು
ಆರ್ಟ್ಸ್, ಕಾಮರ್ಸ್, ಸೈನ್ಸ್ ವಿಭಾಗದಲ್ಲಿ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ನರ್ಸಿಂಗ್, ಫ್ಯಾಷನ್ ಡಿಸೈನಿಂಗ್, ಬಿಎಸ್‌ಡ್ಲ್ಯೂ, ಹೋಟೆಲ್ ಮ್ಯಾನೇಜ್‌ಮೆಂಟ್, ಪತ್ರಿಕೋದ್ಯಮ, ಟ್ರಾವೆಲ್ ಆ್ಯಂಡ್ ಟೂರಿಸಂ, ಫಾರ್ಮಾ ಮೆಡಿಕಲ್, ಪ್ರೋಗ್ರಾಮಿಂಗ್ ಕೋರ್ಸ್‌ಗಳು, ಕೌಶಲಾಧಾರಿತ ತರಬೇತಿಗಳನ್ನು ಪಡೆದುಕೊಳ್ಳಬಹುದು. ಇವುಗಳು ವೃತ್ತ ಆಧಾರಿತವಾಗಿದ್ದು, ಬೇಗನೇ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಹೀಗಾಗಿ ರಿಸಲ್ಟ್ ಬಂದ ತಕ್ಷಣವೇ ಕಾಲೇಜುಗಳನ್ನು ಸಂಪರ್ಕಿಸಿ, ಲಭ್ಯವಿರುವ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆದು ಕಾಲೇಜು ಸೇರಿ ಶಿಕ್ಷಣ ಮುಂದುವರೆಸುವ, ಸೇರಿದ ಕೋರ್ಸ್‌ನಲ್ಲಿ ಬಹು ಬೇಗನೇ ಪಾಂಡಿತ್ಯ ಸಾಧಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡರೆ ಯಶಸ್ಸು ಸಾಧ್ಯ.
ಪಿಯುಸಿ ಪೂರಕ ಪರೀಕ್ಷೆಯಲ್ಲಿ ಪಾಸ್ ಆದ ವಿದ್ಯಾರ್ಥಿಗಳಿಗೆ ಇನ್ನೂ ಸಾಕಷ್ಟು ಅವಕಾಶಗಳ ಇವೆ. ತಕ್ಷಣವೇ ಕಾಲೇಜುಗಳನ್ನು ಸಂಪರ್ಕಿಸಿ ಸೀಟ್ ಲಭ್ಯವಿದ್ದರೆ ಪ್ರವೇಶ ಪಡೆದುಕೊಳ್ಳಬೇಕು. ಸರ್ಕಾರಿ ಕಾಲೇಜುಗಳಲ್ಲಿ ಇನ್ನೂ ಸಾಕಷ್ಟು ಅವಕಾಶಗಳಿವೆ. ನರ್ಸಿಂಗ್, ವೃತ್ತಿ ಆಧಾರಿತ ಕೋರ್ಸ್‌ಗಳ ಕಡೆಗೂ ವಿದ್ಯಾರ್ಥಿಗಳು ಗಮನ ನೀಡಬಹುದು. – ನಾಗಮಲ್ಲೇಶ್, ಡೆಪ್ಯೂಟಿ ಡೈರೆಕ್ಟರ್, ಪಿಯು ಬೋರ್ಡ್