Mysore
24
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಬರಹ:ಬದುಕು : ಅಮ್ಮನ ಮೈಮೇಲೆ ಬರುತ್ತಿದ್ದ ದೈವ ತಂಗಿಯನ್ನು ಕಾಪಾಡಲಿಲ್ಲ

ತುಳುನಾಡಿನ ‘ಪಂಜುರ್ಲಿ’ ಬೂತ ‘ಕಾಂತಾರ’ ಸಿನೆನಮಾದಲ್ಲಿ ಮಿಂಚುತ್ತಿರುವ ಹೊತ್ತಲ್ಲಿ ಲೇಖಕರು ತಮ್ಮ ತಾಯಿಯ ಮೈಮೇಲೆ ಬರುತ್ತಿದ್ದ ‘ಸಿರಿ’ ದೈವದ ಕುರಿತು ಬರೆದಿದ್ದಾರೆ  

ಸಂತೋಷ ಗುಡ್ಡಿಯಂಗಡಿ sguddiyangadi@gmail.com

ನಾವು ನಮ್ಮ ತಾಯಿಯನ್ನು ಅಬ್ಬಿ ಎಂದು ಕರೆಯುವುದು. ನನ್ನ ಅಬ್ಬಿ ದೈವದ ಪಾತ್ರಿ. ಮಾತಿಗೊಂದು ಆದ್ಗೇತಿ (ಗಾದೆ) ಹೇಳುವ ನನ್ನಬ್ಬಿಯ ಮೇಲೆ ದೈವ ಆಳಿ ಬಂದಾಗ ಮಾತ್ರ ಅವರ ಹಾವ ಭಾವ ಭಾಷೆ ನಿಲುವು ನಡಿಗೆ ಕುಣಿತ ಎಲ್ಲ ಬದಲಾಗಿ ಬಿಡುತ್ತದೆ. ‘ತನ್ನ ತಪ್ಪಿಲ್ಲದಿದ್ದರೆ ತೋಳಿಗೆ ಸರಗಿ (ಪೊಲೀಸ್) ಹಾಕಿದವ ಬಂದರೂ ತಾನು ಬಾಗುವುದಿಲ್ಲ’ ಎಂದು ದೃಢವಾಗಿ ಜಗಳಕ್ಕೆ ನಿಲ್ಲುವ ನನ್ನ ತಾಯಿಯ ಭುಂಂಕರ ಸೌಂಡಿಗೆ ನಾವೇನು, ಊರಿನ ಇತರೆ ಗಟ್ಟಿ ಹೆಂಗಸರೇ ಹೆದರಿ ಹಿಂದಿನಿಂದ ಮಾತಾಡಿಕೊಳ್ಳುತ್ತಿದ್ದರು. ದೈವ ಆಳಿ ಬಂದಾಗ ಅಂತಹ ಜೋರು ಸೌಂಡು ಮೃದು ಮಧುರವಾಗಿ ಬಿಡುತ್ತಿತ್ತು. ಅಲ್ಲೊಂದು ಹೊಸ ರಾಗ, ಲಯದ ಮಾಧುರ್ಯವೇರ್ಪಡುತ್ತಿತ್ತು.

ತಾನು ವೆಜಿಟೇರಿಯನ್ ದೇವರಾದ ಹಿರಿಯಡ್ಕದ ಸಿರಿ ಅಮ್ಮನ ಪಾತ್ರಿ ಎಂಬುದು ನನ್ನ ತಾಯಿಗೆ ಒಂದು ಸಣ್ಣ ಕೋಡು ಮೂಡಿಸಿತ್ತು. ಹಾಗಾಗಿ ಅವರು ಆ ಅಮ್ಮನ ದರ್ಶನಕ್ಕೆ ಬೇಕಾದ ಮಡಿಯ ಪಟ್ಟೆ, ಕಾಲಿನ ಕಡಗ ಮುಂತಾದ ಸಾಮಗ್ರಿಗಳನ್ನು ಅತ್ಯಂತ ಸ್ವಚ್ಛವಾಗಿ ಮುಟ್ಟು ಚಟ್ಟು ಆಗದ ಹಾಗೆ ಕಾಪಾಡಿಕೊಂಡಿದ್ದರು.

ನಮ್ಮ ಮನೆಯಲ್ಲೇ ಆಗಲಿ, ಇನ್ಯಾರದೋ ಮನೆಯಲ್ಲಿ ಆಗಲಿ ಅಮ್ಮನವರ ದರ್ಶನಕ್ಕೆ ಹೇಳಿಕೆ ಬಂದಾಗ ನನ್ನ ತಾಯಿ ಗೌಲು ತಿನ್ನುತ್ತಿರಲಿಲ್ಲ. ಎಳನೀರು ಕುಡಿಯುತ್ತಿದ್ದರು. ದರ್ಶನಕ್ಕೆ ಬೇಕಾದ ಸಾಮಗ್ರಿಗಳನ್ನು ಮನೆಗೆ ತಂದು ಅದರ ಜಾಗದಲ್ಲಿ ತಲುಪಿಸುವವರೆಗೆ ಅವರು ಗೌಲು ಮುಟ್ಟುತ್ತಿರಲಿಲ್ಲ. ಆ ವೆಜಿಟೇರಿಯನ್ ಅಮ್ಮನ ಬಿಟ್ಟು ನನ್ನಬ್ಬಿಯ ನೋಡಿದರೆ ಅವರು ನಾನ್ವೆಜ್ ಅಡುಗೆ ಮಾಡುವುದರಲ್ಲಿ ಸಿದ್ಧಹಸ್ತರು. ಅದರಲ್ಲೂ ಅವರೇ ಹಿಡಿದುಕೊಂಡು ಬರುತ್ತಿದ್ದ ಹೊಳೆಮೀನುಗಳ ಅಡುಗೆಯಂತೂ ಅದ್ಭುತ.

ಹೀಗೆ ನಮ್ಮ ತಾಯಿಯಾಗಿ ಮಕ್ಕಳಿಗೆ ಅತ್ಯಂತ ರುಚಿಕರ ಮೀನಿನ ಅಡುಗೆ ಮಾಡಿ ಬಡಿಸುತ್ತಾ ತಾನೂ ತಿನ್ನುತ್ತಾ, ದೈವದ ವಿಚಾರಕ್ಕೆ ಬಂದಾಗ ಮೀನು ಮಾಂಸದ ವಾಸನೆ ಸೋಕದ ಹಾಗೆ ಸಿರಿ ಅಮ್ಮನಿಗೆ ನಿಷ್ಠೆಯಾಗಿರುತ್ತಿದ್ದರು. ಆದರೆ ನನ್ನ ತಾಯಿ ಸಿರಿ ಅಮ್ಮನಿಗಾಗಿ ಇಷ್ಟು ನಿಷ್ಠೆ, ಮಡಿಯಾಗಿದ್ದರೂ ನಮ್ಮ ಜಾತಿಯಿಂದಾಗಿ ಅಮ್ಮನ ಮೇಲೆ ಆಳಿ ಬರುವ ದೈವಕ್ಕೆ ಜಾತಿ ಮೀರಿ ಅನ್ಯ ಜಾತಿಯವರಿಗೆ ಬಡ್ಕೊಂಡ ಭೂತ ಪಿಶಾಚಿಗಳಿಗೆ ಕಟ್ಟುಪಾಡು ಮಾಡುವ, ನುಡಿ ಕೊಡುವ ತಾಕತ್ತು ಇರಲಿಲ್ಲ. ಎಷ್ಟೇ ಘಟಾನುಘಟಿ ಪಾತ್ರಿಯಾಗಿದ್ದರೂ ನನ್ನ ತಾಯಿಯ ಮೇಲೆ ಆಳಿ ಬರುವ ಸಿರಿ ಅಮ್ಮ ನಮ್ಮ ಜಾತಿಗಷ್ಟೇ ಸೀಮಿತವಾಗಿತ್ತು.

ಯಾಕೆ ಹೀಗೆ? ಎಂದರೆ ನಮ್ಮೂರ ಕಡೆ ಪ್ರತಿ ಜಾತಿಯಲ್ಲಿಯೂ ಈ ಅಮ್ಮನವರ ಪಾತ್ರಿಗಳಿರುತ್ತಾರೆ. ಈ ಎಲ್ಲಾ ಪಾತ್ರಿಗಳೂ ತಮ್ಮ ತಮ್ಮ ಜಾತಿಗಳಲ್ಲಿ ಬಗೆಹರಿಸಿದ, ಬಗೆಹರಿಸಲು ಬಾಕಿಯಿಟ್ಟ ಭೂತ ಪಿಶಾಚಿಗಳ ಡೇಟಾ ಸಂಗ್ರಹ ಮಾಡುವುದು ಮೂಲ ಅಮ್ಮನವರಿಗೆ ಕಷ್ಟವಾಗುತಿತ್ತೋ ಅಥವಾ ಶ್ರೇಣಿಕೃತ ಜಾತಿಗಳ ದಬ್ಬಾಳಿಕೆ ಕಂಡು ಬೇಜಾರು ಆಗಿರುವ ಮೂಲ ಅಮ್ಮನವರು ತಾನು ಆಯಾ ಜಾತಿಯಲ್ಲೇ ಪರಿಹಾರ ಸೂಚಿಸುವುದಕ್ಕೆ ಕಂಡುಕೊಂಡ ವಿಕೇಂದ್ರಿಕೃತ ಸುಲಭೋಪಾಯವೋ ಏನೋ? ಒಟ್ಟಾರೆ ನನ್ನ ತಾಯಿಯ ಭಾರೀ ನೇಮದ ಅಮ್ಮನವರ ಶಕ್ತಿ ನಮ್ಮ ಜಾತಿಗಷ್ಟೇ ಸೀಮಿತವಾಗಿತ್ತು.

ಆದರೂ ಇಂತಹ ನೇಮದ ಅಮ್ಮನವರ ಶಕ್ತಿಗೆ ಭಯಂಕರ ಸೋಲಾಗಿದ್ದು ಮಾತ್ರ ನಮ್ಮ ಮನೆಯಲ್ಲಿ. ನನ್ನ ಪುಟ್ಟ ತಂಗಿಗೆ ಕಾಣಿಸಿಕೊಂಡ ವಾಂತಿ ಬೇಧಿ, ಚಳಿ ಜ್ವರ ದಿನೇ ದಿನೇ ಹದಗೆಡುತ್ತಾ, ಅದಕ್ಕಾಗಿ ಅಬ್ಬಿಯ ಮೇಲಾಳಿ ಬರುವ ಅಮ್ಮನವರ ಮಾಧುರ್ಯ ಆರ್ಭಟಕ್ಕೆ ತಿರುಗಿದರೂ ನನ್ನ ತಂಗಿಗೆ ವಾಸಿಯಾಗಲಿಲ್ಲ. ಅಮ್ಮನವರ ಸಪೋರ್ಟಿಗೆ ಹಯ್ಗುಳಿಯ ಆರ್ಭಟ ಕೂಡಿಕೊಂಡರೂ ಒಂದು ದಿನ ನನ್ನ ತಂಗಿ ಆಸ್ಪತ್ರೆಗೆ ಹೋಗುವ ಮೊದಲೇ ತೀರಿಕೊಂಡಳು. ನಾವು ನಾಲ್ಕು ಜನ ಮಕ್ಕಳು ಮೂವರಾದೆವು.

1980-90ರ ದಶಕದಲ್ಲಿ ಪಾತ್ರಿಯಾಗಿ ಮಡಿಯಾಗಿದ್ದ ನನ್ನ ತಾಯಿ ಬರಬರುತ್ತಾ ಮಂಕಾದರು. ಮತ್ತು ದರ್ಶನಕ್ಕೆ ಕರೆ ಬಂದರೆ ತಾನು ಬರುವುದಿಲ್ಲ ಮತ್ತು ಆಸ್ಪತ್ರೆಗೆ ಹೋಗಿ ಎನ್ನುತ್ತಿದ್ದರು. ಅಬ್ಬಿ ತೀರಿಕೊಂಡ ನಂತರವೂ ಅವರ ಅಮ್ಮನವರ ಪಟ್ಟೆ ಸಾಮಾನುಗಳು ಒಂದಷ್ಟು ದಿನ ಇದ್ದವು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!