ಬೆಳವಾಡಿಯ ಗೇಟ್ ಬಳಿ ಮೊದಲ ಬಾರಿಗೆ ತರಕಾರಿ ಮಾರುವುದಕ್ಕೆ ಆರಂಭಿಸಿದವರು ರೇವಮ್ಮ. ಹತ್ತು ವರ್ಷಗಳ ಹಿಂದೆ ಆಕಸ್ಮಿಕವಾಗಿ ತರಕಾರಿ ಮಾರುವ ಕೆಲಸಕ್ಕೆ ಕೈ ಹಾಕಿದರು. ಇದಕ್ಕೂ ಮೊದಲು ಬೆಂಕಿಪುರದಲ್ಲಿ ಮನೆಯಲ್ಲೇ ಹೋಟೆಲ್ ವ್ಯಾಪಾರ ನಡೆಸುತ್ತಿದ್ದರು. ಮಕ್ಕಳೆಲ್ಲ ಬೆಳವಾಡಿಗೆ ಹೋಗಬೇಕೆಂದಾಗ ಮನೆಯಲ್ಲಿ ಒಬ್ಬಳೇ ಇರುವುದಕ್ಕೆ ಮನಸ್ಸಾಗದೆ, ಮಕ್ಕಳೊಂದಿಗೆ ಹೊರಟುನಿಂತರು.
ರೇವಮ್ಮ ಅವರು ಚಿಕ್ಕವರಿದ್ದಾಗ ಬಲಗಣ್ಣಿನ ದೃಷ್ಟಿ ಕಳೆದುಕೊಂಡರು. ಚಿಕಿತ್ಸೆಗೆಂದು ವೈದ್ಯರ ಬಳಿ ಹೋಗಲಾರದಷ್ಟು ಬಡತನ.
ಬೆಳಿಗ್ಗೆ ಆರು ಗಂಟೆ ಹೊತ್ತಿಗೆಲ್ಲ ತರಕಾರಿ, ಹೂ ವ್ಯಾಪಾರ ಶುರು ಮಾಡುವ ರೇವಮ್ಮ ರಾತ್ರಿ ಎಂಟೂವರೆ ತನಕ ಆದಷ್ಟು ದುಡಿಮೆ ಮಾಡಿಕೊಂಡು ಮನೆಗೆ ವಾಪಸ್ ಆಗುತ್ತಾರೆ. ಮಗಳು ಕೊಟ್ಟ ಮಧ್ಯಾಹ್ನದ ಬುತ್ತಿ, ಸಂಜೆಯ ಚಹ ಇವರ ಕೆಲಸಕ್ಕೆ ಹುರುಪು ಕೊಡುತ್ತವೆ. ನನ್ನ ಬದುಕಿಗೆ ನನ್ನ ತಾಯಿಯೇ ಸೂರ್ತಿ ಎನ್ನುವ ರೇವಮ್ಮ ಹತ್ತು ತಿಂಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದರೂ ತಾಯಿ ಕಲಿಸಿದ ಜೀವನ ಪಾಠವನ್ನು ಮರೆತಿಲ್ಲ





