ಇಂದು ಶಿಕ್ಷಕಿಯಾಗಲು ಅಂದು ಪ್ರೋತ್ಸಾಹಿಸಿದ ಮೇಷ್ಟ್ರು
ಹೇಗೆ ಬದುಕು ನಡೆಸಬೇಕು ಎಂದು ಹೇಳಿಕೊಡುತ್ತಿದ್ದಾರೆ.
ನನ್ನ ಪ್ರೀತಿಯ ಮೇಷ್ಟ್ರುಗಳು ಎಂದು ನೆನಪಿಸಿಕೊಂಡರೆ ಹೈಸ್ಕೂಲ್ ಗೆ ಮನಸ್ಸು ಹಾರುತ್ತದೆ. ಅಲ್ಲಿ ಇದ್ದ ಎಚ್.ಬಿ. ರಾಜೇಂದ್ರ ಸರ್, ಸವಿತ ಮೇಡಂ, ಆರ್.ಕೆ. ಸರ್, ಎಸ್.ಎನ್. ಸರ್, ಸುಬ್ಬಣ್ಣ ಸರ್, ಕೆರೂರು ಸರ್, ಕುಮಾರಸ್ವಾಮಿ ಸರ್, ಎಂ.ಆರ್. ಸರ್, ಪಿ.ಟಿ. ಮಹೇಶ್ ಸರ್ ಹೀಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಾನು ಶಿಕ್ಷಕಿಯಾಗಲು ಸ್ಫೂರ್ತಿ ಯಾದರು.
ಎಚ್.ಬಿ. ರಾಜೇಂದ್ರ ಸರ್ ಕನ್ನಡದಲ್ಲಿ 125ಕ್ಕೆ 120 ತೆಗೆಯಲು ನಿಮ್ಮಂದ ಆಗುತ್ತದೆ, ಪ್ರಯತ್ನಿಸಿ ಎಂದು ಪ್ರೋತ್ಸಾಹಿಸಿದರು. ಅವರ ಮಾರ್ಗದರ್ಶನದಲ್ಲಿ ಓದಿ 122 ಅಂಕ ಗಳಿಸಿ ಅತ್ಯುತ್ತಮ ದರ್ಜೆಯಲ್ಲಿ ಪಾಸ್ ಆದೆ. ಉತ್ತಮ ವಿದ್ಯಾರ್ಥಿ ಪ್ರಶಸ್ತಿಗೂ ಭಾಜನಳಾದೆ.
ಸವಿತ ಮೇಡಂ ಒಳ್ಳೆಯ ಸ್ನೇಹಿತೆ ರೀತಿ ನನ್ನನ್ನು ಕಂಡು ಎಲ್ಲ ಹಂತಗಳಲ್ಲೂ ಪ್ರೋತ್ಸಾಹ ನೀಡಿದರು. ನಾನು ಶಿಕ್ಷಕಿಯಾಗಲು ಅವರೂ ಸ್ಫೂರ್ತಿ.
ಆರ್.ಕೆ. ಸರ್ ಕಲಿಸಿದ ಹಿಂದಿ, ಅವರ ಪಾಠ ಎಲ್ಲವೂ ನನಗೆ ಈಗಲೂ ಹಿಂದಿ ಓದುವ ಮತ್ತು ಅರ್ಥಮಾಡಿಕೊಳ್ಳುವುದನ್ನು ಕಲಿಸಿದೆ.
ನಮ್ಮ ಗಣಿತ ವಿಷಯದ ಟ್ಯೂಷನ್ ಮೇಷ್ಟ್ರು ಸುಬ್ಬಣ್ಣ, ಎಲ್ಲ ವಿದ್ಯಾರ್ಥಿಗಳನ್ನು ಲೋ ಏನೋ ಎಂದೇ ಮಾತನಾಡಿಸುತ್ತಿದ್ದರು. ಹಾಗೆ ಎಲ್ಲರಿಗೂ ಪ್ರೋತ್ಸಾಹ ನೀಡುತ್ತಿದ್ದರು. ನನ್ನ ಕುರಿತಾಗಿ ನಿಮ್ಮ ತಂದೆ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡ್ತಾರೆ, ನೀನು ಮುಂದೆ ಪ್ರೌಢಶಾಲೆಯಲ್ಲಿ ಪಾಠ ಮಾಡಬೇಕು ಎಂದು ಹೇಳುತ್ತಿದ್ದರು. ಅವರ ಮಾತುಗಳ ಪ್ರೇರಣೆಯಿಂದಲೇ ನಾನಿಂದು ಹೈಸ್ಕೂಲ್ ಟೀಚರ್.
ಎಸ್.ಎನ್.ಸರ್ ಅವರು ಗಣಿತ ವಿಷಯವನ್ನೂ ಸುಲಭವಾಗಿ ಬೋಧನೆ ಮಾಡುತ್ತಿದ್ದರು. ಅವರ ಬೋಧನ ಕ್ರಮವೇ ನನಗೆ ಸಹಕಾರಿಯಾಯಿತು.
ಪಿಯುಸಿ ಮುಗಿಸಿದ ತಕ್ಷಣ ನನಗೆ ಮದುವೆ ಆಯಿತು. ಆದರೆ ನನ್ನ ಶಿಕ್ಷಕ ವೃತ್ತಿ ಬಗೆಗಿನ ಸೆಳೆತ ಗುರುತಿಸಿದ ನನ್ನ ಪತಿ ನನಗೆ ಮುಂದೆ ಓದಲು ಅವಕಾಶ ಒದಗಿಸಿದರು. ಬಿಎ, ಎಂಎ, ಬಿ.ಇಡ್ ಕರೆಸ್ಪಾಂಡೆನ್ಸ್ ನಲ್ಲಿ ಓದಿದೆ. ಅಲ್ಲಿ ಸಿಕ್ಕ ಕೆ.ಜಿ. ಮಹೇಶ್ ಸರ್, ಕೆ.ಕೆ.ಸರ್, ಆರ್.ಎಂ.ಸರ್, ವೀಣಾ ಮೇಡಂ, ರಮೇಶ್ ಸರ್, ಎಂ.ಎಂ.ಸರ್ ನನಗೆ ದಾರಿ ತೋರಿದರು.
ಇಂತಹ ಮಹಾನ್ ಗುರುಗಳ ಗರಡಿಯಲ್ಲಿ ಕಲಿತ ನನ್ನನ್ನು ಲಯನ್ಸ್ ಸಂಸ್ಥೆಯವರು ಭರವಸೆ ಇಟ್ಟು ಶಿಕ್ಷಕಿ ಜವಾಬ್ದಾರಿಯನ್ನು ನೀಡಿದ್ದಾರೆ. ಅದೇ ಗುರುಗಳ ರೀತಿ ಮಕ್ಕಳಿಗೆ ಚೆನ್ನಾಗಿ ಪಾಠ ಮಾಡುವ ಮಹದಾಸೆ ನನ್ನದು.
ಸುಮಾ ಕೃಷ್ಣ ಮೂರ್ತಿ, ಶಿಕ್ಷಕಿ