ದೇವರ ಸ್ವರೂಪ ನಮ್ಮ ಶಿವಪ್ಪ ಸರ್
ಎಲ್ಲ ವಿದ್ಯಾರ್ಥಿಗಳಿಗೂ ಎಲ್ಲ ಶಿಕ್ಷಕರೂ ಇಷ್ಟವಾಗುವುದಿಲ್ಲ. ಒಬ್ಬ ವಿದ್ಯಾರ್ಥಿ ಒಬ್ಬ ಶಿಕ್ಷಕನ್ನು ತನ್ನ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸ್ವೀಕರಿಸುತ್ತಾನೆ ಎಂದರೆ ಅಲ್ಲೇನೋ ವಿಶೇಷ ಇದ್ದೇ ಇರುತ್ತದೆ.
ಶ್ರೀರಾಂಪುರ 2ನೇ ಹಂತದಲ್ಲಿ ಇರುವ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಓದಿದ ನನಗೆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶಿವಪ್ಪ ಸರ್ ಎಂದರೆ ಅಪಾರ ಪ್ರೀತಿ, ಗೌರವ. ನಾನು ಶಾಲೆಗೆ ಸೇರುವ ವೇಳೆಗಾಗಾಲೇ ಶಿವಪ್ಪ ಸರ್ ನಿವೃತ್ತರಾಗಿದ್ದರು. ಆದರೂ ಸ್ವಯಂ ಆಸಕ್ತಿಯಿಂದ ಬೋಧನೆ ಮುಂದುವರಿಸಿದ್ದರು. ಗಣಿತ ಪಾಠ ಮಾಡುತ್ತಿದ್ದ ಅವರು ಅದರ ಜೊತೆಗೆ ಜೀವನದ ಲೆಕ್ಕಾಚಾರಗಳನ್ನೂ ತಿಳಿಸುತ್ತಿದ್ದರು.
ನಾವೆಲ್ಲ ಬೆಳಿಗ್ಗೆ ಶಾಲೆಗೆ ಹೋದ ತಕ್ಷಣ ಬ್ಯಾಟ್ ಹಿಡಿದು ಮೈದಾನಕ್ಕಿಳಿಯುತ್ತಿದ್ದೆವು. ದೂರದಲ್ಲಿ ಎಕ್ಸ್ ಎಲ್ ಸೂಪರ್ ಸ್ಕೂಟರ್ ಸದ್ದಾದ ತಕ್ಷಣ ನಾವೆಲ್ಲ ಕ್ಲಾಸ್‌ಗೆ ಓಡುತ್ತಿದ್ದೆವು. ಆ ಸ್ಕೂಟರ್ ಸದ್ದಾದರೆ ನಮಗೆ ಶಿವಪ್ಪ ಸರ್ ಬಂದ್ರು ಎಂಬುದರ ಸಂದೇಶವಾಗಿತ್ತು.
ನಾನು ಎಂಟನೇ ತರಗತಿಯಲ್ಲಿದ್ದಾಗ ಸರಳರೇಖೆ ಎಂದರೇನು? ಎಂಬ ಪ್ರಶ್ನೆಯನ್ನು ಶಿವಪ್ಪ ಸರ್ ಕೇಳಿದ್ದರು. ಯಾರೊಬ್ಬರೂ ಉತ್ತರಿಸಿರಲಿಲ್ಲ. ಕಡೆಯ ಬೆಂಚಿನಲ್ಲಿ ಕೂತಿದ್ದ ನಾನು ಉತ್ತರ ನೀಡಿದ್ದೆ. ಆಗ ನನ್ನಲ್ಲಿ ಇರುವ ಶಕ್ತಿಯನ್ನು ಅಂದೇ ಗುರುತಿಸಿ ಕ್ಲಾಸ್ ಲೀಡರ್ ಮಾಡಿದ್ದರು. ಅದರಿಂದ ಉತ್ತೇಜಿತನಾದ ನಾನು ಸತತ ೩ ವರ್ಷಗಳ ತನಕ ತರಗತಿಯ ನಾಯಕನಾಗಿದ್ದೆ. ನನ್ನಲ್ಲಿ ಆತ್ಮ ವಿಶ್ವಾಸವನ್ನು ತುಂಬಿದ ಮೊದಲಿಗರು ನನ್ನ ಶಿವಪ್ಪ ಸರ್.
ಅವರ ಪ್ರೀತಿಯಿಂದಲೋ ಏನೋ ಇಂದಿಗೂ ಗುರುಗಳೊಂದಿಗೆ ಸಂಪರ್ಕದಲ್ಲಿ ಇದ್ದನೆ. ಆ. ೧೩ ಕ್ಕೆ ಅವರಿಗೆ ೮೨ ವರ್ಷಗಳು ತುಂಬಿವೆ. ಪ್ರತಿ ವರ್ಷವು ನಾನು ಅವರ ಹುಟ್ಟುಹಬ್ಬದ ದಿನ ಅವರ ಮನೆಗೆ ಹೋಗಿ ಭೇಟಿಯಾಗಿ ಬರುತ್ತೇನೆ. ಅವರೇ ನನಗೆ ತಿಂಡಿಗಳನ್ನು ಕೊಟ್ಟು ಕಳಿಸುತ್ತಾರೆ. ಅವರ ಪಾಲಿಗೆ ನಾವಿನ್ನೂ ಮಕ್ಕಳೇ ಆಗಿದ್ದೇವೆ.
ಅವರ ಆಶೀರ್ವಾದ, ಪ್ರೋತ್ಸಾಹದಿಂದ ಇಂದು ನಾನು ಶಿಕ್ಷಕನಾಗಿದ್ದೇನೆ. ಅವರು ಹಾಕಿಕೊಟ್ಟ, ತೋರಿದ ಹಾದಿಯಲ್ಲೇ ಸಾಗುವ ಬಯಕೆ ನನ್ನದು. – ರಾಜೇಂದ್ರ ಎಸ್., ಮಹದೇವಪುರ