ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಮಹಿತಾ ಬಗ್ಗೆ ತಾಯಿಯ ಅಭಿಮಾನ
ಚೈತ್ರಾ ಎನ್. ಭವಾನಿ, ಲೈಫ್‌ಸ್ಟೈಲ್ ಜರ್ನಲಿಸ್ಟ್
ನೀವು ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ನೋಡಿರುವಿರಾದರೆ ಈ ಪುಟ್ಟ ಹುಡುಗಿ ಮಹಿತಾಳ ಪರಿಚಯ ಇದ್ದೇ ಇರುತ್ತದೆ. ಮುದ್ದು ಮುದ್ದಾಗಿ ಮಾತನಾಡುತ್ತಾ ಎಲ್ಲರ ಚಿತ್ತ ಸೆಳೆದಿರುವ ಮಹಿತಾ ಯೂಟ್ಯೂಬ್, ರೀಲ್ಸ್‌ಗಳ ಮೂಲಕ ವಯಸ್ಸಿಗೆ ಮೀರಿದ ಖ್ಯಾತಿ ಗಳಿಸಿದ್ದಾರೆ. ಇವಳ ಹಿಂದೆ ಅಮ್ಮ ತನುಜಾ ಜೆ.ಟಿ. ಅವರ ಪ್ರೀತಿ ಇದೆ. ಇಂದಿನ ದಿನಮಾನದಲ್ಲಿ ಮಕ್ಕಳನ್ನು ಹೇಗೆ ಅವಕಾಶಗಳಿಗೆ ತೆರೆದುಕೊಳ್ಳವಂತೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಈ ತಾಯಿಯ ಪಾತ್ರ ಮಹತ್ತರವಾಗಿದ್ದು, ಅವರಿಲ್ಲಿ ತಮ್ಮ ಮಗುವಿನ ಪ್ರತಿಭೆ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ.
ಮಗಳ ಸಾಧನೆಯ ಹಿಂದೆ ನಿಮ್ಮ ಪಾತ್ರವೇನು?
ನಾನು ಸೈಕಾಲೇಜಿಯಲ್ಲಿ ಎಂಎಸ್ಸಿ ಮಾಡಿದರೂ ಕಲಾವಿದೆ ಆಗಬೇಕು ಅನ್ನೋ ಆಸೆ ಇತ್ತು. ಸರಿಯಾದ ಸಪೋರ್ಟ್ ಸಿಗಲಿಲ್ಲ. ಬದಲಿಗೆ ಪತ್ರಿಕೋದ್ಯಮಕ್ಕೆ ಬಂದೆ. ನನ್ನ ಮಕ್ಕಳಿಗೆ ಕಲಾತ್ಮಕ ವಾತಾವರಣ ನಿರ್ಮಾಣ ಮಾಡಬೇಕು ಎನ್ನುವ ಆಸೆ ಇತ್ತು. ಅದರಂತೆ ಪ್ರೆಗ್ನೆನ್ಸಿ ಸಮಯದಲ್ಲಿ ಹಾಡು ಕೇಳುವುದು, ಹಾಡು ಹಾಡುವುದು ಮಾಡುತ್ತಿದ್ದೆ. ಮಗಳು ಹುಟ್ಟಿದ ಮೇಲೆ ನಿತ್ಯ ಲಾಲಿ ಹಾಡಿಯೇ ಮಲಗಿಸುತ್ತಿದ್ದೆ. ಆದ್ದರಿಂದ ಅವಳಿಗೆ ಪುಟ್ಟ ವಯಸ್ಸಿನಿಂದಲೇ ಕಲೆಯ ಬಗ್ಗೆ ಆಸಕ್ತಿ ಹುಟ್ಟಿತು.
ಕೋವಿಡ್ ವೇಳೆ ಜನ ಜಾಗೃತಿ ಮೂಡಿಸುವ ವಿಡಿಯೋಗಳನ್ನು ಮಾಡಲು ನಾನು ನನ್ನ ಮಗಳು ಶುರು ಮಾಡಿದೆವು. ಪತಿ ವಿನಯ್‌ರಿಂದಲೂ ಬೆಂಬಲ ಸಿಕ್ಕಿತು. ಸಿನಿಮಾ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ನನಗೆ ಕಾನ್ಸೆಪ್ಟ್‌ಗಳನ್ನು ಮಾಡಿಕೊಳ್ಳುವ ಶಕ್ತಿ ಇತ್ತು. ವಿಡಿಯೋ, ಎಡಿಟಿಂಗ್ ಎಲ್ಲವನ್ನೂ ಮಾಡುತ್ತಿದ್ದೆ. ಜನರಿಗೆ ಕಾನ್ಸೆಪ್ಟ್ ಇಷ್ಟವಾಗಿ ವಿಡಿಯೋಗಳು ವೈರಲ್ ಆದವು. ಅದರಿಂದಲೇ ನನ್ನಮ್ಮ ಸೂಪರ್ ಸ್ಟಾರ್‌ಗೆ ಆಹ್ವಾನ ಬಂತು. ಮಗಳಿಂದ ನಾನೂ ತೆರೆಯ ಮೇಲೆ ಕಾಣಿಸಿಕೊಳ್ಳುವಂತೆ ಆಯ್ತು.

ಮಗಳು ಎಲ್ಲ ಡೈಲಾಗ್ಸ್‌ಗಳನ್ನು ಹೇಗೆ ನೆನಪಿಡುತ್ತಿದ್ದಳು? ಎಲ್ಲರೊಡನೆ ಹೇಗ ಬೆರೆಯುತ್ತಿದ್ದಳು?
ನಮ್ಮದು ಅವಿಭಕ್ತ ಕುಟುಂಬ. ಮಹಿತಾಳನ್ನು ಸಣ್ಣ ವಯಸ್ಸಿನಿಂದಲೇ ಜನರೊಟ್ಟಿಗೆ ಬೆರೆಯಲು ಬಿಡುತ್ತಿದ್ದೆ. ಅಲ್ಲಿಯೇ ಅವಳು ಎಲ್ಲರೊಟ್ಟಿಗೆ ಕಲೆತು ಮಾತಾನಾಡುತ್ತಿದ್ದಳು. ಆದ್ದರಿಂದ ರಿಯಾಲಿಟಿ ಶೋನಲ್ಲಿ ವಿಭಿನ್ನ ಜನರೊಟ್ಟಿಗೆ ಬೆರೆುುಂವುದು ಸುಲಭವಾಯ್ತು. ಇನ್ನೂ ಡೈಲಾಗ್ಸ್ ವಿಷಯಕ್ಕೆ ಬಂದರೆ ಅವಳಿಗೆ ಅದ್ಭುತ ನೆನೆಪಿನ ಶಕ್ತಿ ಇದೆ. ಕಥೆಯನ್ನು ಕೇಳಿಸಿಕೊಂಡು ಸಂದರ್ಭವನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಆದ್ದರಿಂದ ಡೈಲಾಗ್ ಹೇಳುವುದು ಕಷ್ಟವಾಗುವುದಿಲ್ಲ.
ದಿನೇ ದಿನೇ ನಿಮ್ಮ ಮಗಳ ಖ್ಯಾತಿ ಹೆಚ್ಚುತ್ತಿದೆಯಲ್ವಾ?
ಹೌದು, ಈ ಹಂತದಲ್ಲಿ ನಾನು ಅವಳಿಗೆ ಒಂದು ಮಾತು ಹೇಳಿದ್ದೇನೆ, ನಿನ್ನ ಪ್ರತಿಭೆ ನೋಡಿ ಸಾಕಷ್ಟು ಮಂದಿ ನಿನ್ನನ್ನು ಇಷ್ಟಪಡುತ್ತಾರೆ. ಮಾತನಾಡಿಸಲು ಬರುತ್ತಾರೆ. ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾರೆ. ಹಾಗೆಂದು ನೀನೇನು ಎಲ್ಲರಿಗಿಂತ ವಿಶೇಷವಲ್ಲ. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು. ಸೌಮ್ಯವಾಗಿ ಮಾತನಾಡಿಸಬೇಕು. ಜಂಭ ವಾಡಬಾರದು ಎಂದು ತಿಳಿಸಿಕೊಟ್ಟಿದ್ದೇನೆ.
ಒಂದು ವೇಳೆ ಖ್ಯಾತಿ ಕುಸಿದರೆ ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವೇ?
ಟಿ.ವಿಯಯಲ್ಲಿ ಬೇರೆಯ ಮಗು ಬರುವಾಗ, ನನ್ನನ್ನು ಯಾಕೆ ಕರೆಯುತ್ತಿಲ್ಲ? ಎನ್ನುತ್ತಾಳೆ. ಆಗ ನಾನು ಅವಳಿಗೆ ಹೇಳುತ್ತೇನೆ. ನೀನು ಇನ್ನೂ ಚೆನ್ನಾಗಿ ಅಭಿನಯಿಸಬೇಕು. ನಿನ್ನ ಪ್ರತಿಭೆಯನ್ನು ಇನ್ನಷ್ಟು ಚೆನ್ನಾಗಿಸಿಕೊಳ್ಳಬೇಕು. ಅದಕ್ಕೆ ನಿನಗೆ ಈಗ ಸಮಯ ಸಿಕ್ಕಿದೆ. ಈಗ ಚೆನ್ನಾಗಿ ಓದಿಕೊಂಡು ಬಿಡು. ಮುಂದೆ ಸಮಯ ಸಿಗದಿದ್ದರೆ ಕಷ್ಟ ಎನ್ನುತ್ತೇನೆ. ಈಗ ಅವಳೇ ಭರತನಾಟ್ಯಕ್ಕೆ ಸೇರಿಸು ಎಂದು ಕೇಳುತ್ತಿದ್ದಾಳೆ. ಅವಳಿಗೆ ಕಲಿಯುವ ಆಸಕ್ತಿ ಇದೆ. ಹೀಗಾಗಿ ಅವಳು ಗಟ್ಟಿಯಾಗುತ್ತಾಳೆ ಎನ್ನುವ ನಂಬಿಕೆ ಇದೆ.

ಮಗಳ ಭವಿಷ್ಯದ ಬಗೆಗಿನ ಕನಸುಗಳೇನು?
ಈಗ ಅವಳನ್ನು ಸಂಗೀತ ಕ್ಲಾಸ್‌ಗೆ ಸೇರಿಸಿದ್ದೇನೆ. ಹಾಡುವುದು ಎಂದರೆ ಅವಳಿಗೂ ಇಷ್ಟ. ಆ ಕ್ಷೇತ್ರದಲ್ಲಿ ಅವಳು ಪ್ರಾವೀಣ್ಯತೆ ಪಡೆದುಕೊಳ್ಳಲಿ. ಹೆಣ್ಣು ಮಕ್ಕಳು ಅಂದರೆ ಬಹಳಷ್ಟು ಹಾರ್ಮೊನಲ್ ಬದಲಾವಣೆಗಳಿರುತ್ತವೆ. ನಾವು ಅವಳು ಹೀರೋಯಿನ್ ಆಗುತ್ತಾಳೆ ಎನ್ನುವ ಭ್ರಮೆಯಲ್ಲಿ ಇಲ್ಲ. ಆಗಿನ ಅವಕಾಶಗಳು, ಪರಿಸ್ಥಿತಿಗಳ ಲಭ್ಯತೆ ಮೇಲೆ ಅವೆಲ್ಲವೂ ಅಡಗಿರುತ್ತದೆ. ಒಟ್ಟಿನಲ್ಲಿ ಅವಳ ಪ್ರತಿಭೆಗೆ ಸೂಕ್ತ ವೇದಿಕೆ ಸಿಕ್ಕಾಗ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ.
ಇತರ ಪೋಷಕರಿಗೆ ನಿಮ್ಮ ಕಿವಿ ಮಾತೇನು?
ನಮ್ಮ ಮಾತನ್ನು ಮಕ್ಕಳ ಮೇಲೆ ಹೇರಬಾರದು. ನಮ್ಮ ಕನಸುಗಳನ್ನು ಮಕ್ಕಳ ಮೂಲಕ ನನಸು ವಾಡಿಕೊಳ್ಳಬೇಕೆಂದರೆ ಸಣ್ಣ ವಯಸ್ಸಲ್ಲೇ ಮಕ್ಕಳಲ್ಲಿ ಆಸಕ್ತಿಯನ್ನು ಬೆಳೆಸಬೇಕು. ಮಕ್ಕಳು ಬೆಳೆದ ಮೇಲೆ ನೀನು ಡಾಕ್ಟರ್, ಇಂಜಿನಿಯರ್ ಆಗಬೇಕು ಎಂದು ಹೇಳಬೇಡಿ. ಅವರಿಗೆ ಅರಿವಿಗೆ ಬರುವ ಮುಂಚೆ ಆಸಕ್ತಿ ಬೆಳೆಸಬೇಕು. ಅವರಿಗೂ ಅದು ಖುಷಿ ಆದ್ರೆ ಅವರನ್ನು ಬೆಳೆಸಿ. ಇಲ್ಲ ಅಂದ್ರೆ ಆ ಮಗುವಿನ ಆಸಕ್ತಿಯನ್ನು ಗುರುತಿಸಿ, ಪ್ರೋತ್ಸಾಹಿಸೋದು ತಂದೆ ತಾಯಿ ಕರ್ತವ್ಯ.





