• ಅನಿತಾ ಹೊನ್ನಪ್ಪ
ಕುರಿಗಾಯಿ ಮಂಜಪ್ಪನಿಗೆ ಒಂದು ಹೆಣ್ಣು ಹಾಗೂ ಎರಡು ಗಂಡು ಮಕ್ಕಳು. ಹಳ್ಳಿ ಬೇಡವೆಂದ ಮಗಳಿಗೆ ಪೇಟೆ ಹುಡುಗನ ತಂದು ಮದುವೆ ಮಾಡಿದ್ದರಿಂದ ಮಂಜಪ್ಪ ಸಾಲಗಾರನಾಗಿದ್ದ.
ಈಗ ಮಂಜಪ್ಪನಿಗೆ ಅರವತ್ತು ವರ್ಷ. ಮಗಳು ಗಂಡನ ಮನೆ ಸೇರಿದ ನಂತರ, ಮಡದಿಯೂ ಇಹಲೋಕ ತ್ಯಜಿಸಿ ಮಂಜಪ್ಪನನ್ನು ಒಂಟಿಯಾಗಿ ಮಾಡಿದ್ದಳು. ಆ ಮನೆಗೆ ಸೊಸೆಯ ಅಗತ್ಯ ಹೆಚ್ಚಿತ್ತು. ಸಾಲವಿದ್ದ ಕಾರಣ ದೊಡ್ಡ ಮಗ ಕೇಶವನ ಮದುವೆ ಸರಳವಾಗಿ ನೆರವೇರಿತ್ತು. ತನ್ನ ಮದುವೆಗೆ ಕಾಸಿದ್ದರೂ ಖರ್ಚು ಮಾಡಲಿಲ್ಲವೆಂದು, ಕೇಶವನಿಗೆ ಆ ದಿನದಿಂದ ಅಪ್ಪನ ಮೇಲೆ ಕೋಪ, ಮಡದಿ ಬಂದ ನಂತರ ಮನೆ ಜವಾಬ್ದಾರಿ ಕಡೆಗಣಿಸಿದ.
ಓದು ಬರಹ ತಿಳಿಯದ ಮಂಜಪ್ಪ, ಮಂಡಿ ನೋವಿಯ ಔಷಧಿಗೂ ದೂರದಲ್ಲಿ ಕೆಲಸ ಮಾಡುತ್ತಿರುವ ಕಿರಿ ಮಗ ಶೇಖರನ ದಾರಿ ಕಾಯುವಂತಾಯಿತು. ಒಂದಿಷ್ಟು ದಿನ ತಂದೆಯ ಕಾಳಜಿ ಮಾಡಿದ ಶೇಖರ್ ನಂತರ ತಂದೆಯ ಕರೆ ಸ್ವೀಕರಿಸಲು ವಾರಗಟ್ಟಲೇ ಸತಾಯಿಸಿ ಕಾಯಿಸುತ್ತಿದ್ದ. ಅದೊಂದು ದಿನ ಅವನೂ ಮೆಚ್ಚಿದವಳೊಂದಿಗೆ ಮದುವೆಯಾಗಿ ದೊಡ್ಡ ಆಘಾತ ನೀಡಿದ.
ಹೇಗೋ ಎಲ್ಲರೂ ತಮ್ಮ ಜೀವನ ಕಂಡುಕೊಂಡರು ಎಂದು ನಿಟ್ಟುಸಿರು ತೆಗೆಯವಂತಿರಲಿಲ್ಲ. ಮನೆಯಲ್ಲಿ ಕುರಿ ಕಾಯಲು, ದನಕ್ಕೆ ಮೇವು ತರಲು ಪ್ರತಿಯೊಂದಕ್ಕೂ ನಾಲ್ಕು ಜನರ ನಡುವೆ ಜಗಳ ಶುರುವಾಯಿತು. ತಮ್ಮ ತಮ್ಮ ಗಂಡನ ಪರ ಮಾತನಾಡಲು ನಿಲ್ಲುತ್ತಿದ್ದ ಸೊಸೆಯರು, ಕೊನೆಯಲ್ಲಿ ಮಾವನನ್ನೇ ಬೈಯ್ದು ಬಿಡುತ್ತಿದ್ದರು. ‘ಎಲ್ಲ ಮಾರಿ, ನಮ್ಮ ನಮ್ಮ ಪಾಲು ಕೊಟ್ಟರೆ ನೆಮ್ಮದಿಯಾಗಿ ಜೀವನ ಮಾಡುತ್ತೇವೆ. ಇದ್ಯಾವ ಕರ್ಮ ನಮಗೆ?’ ಎಂದು ದಿನವೂ ಸಿಡುಕುತ್ತಿದ್ದರು ಸೊಸೆಯರು.
ಮೂಕ ಪ್ರಾಣಿಗಳನ್ನು ತನ್ನ ಯೌವ್ವನದ ಕಾಲದಿಂದಲೂ ಪ್ರೀತಿಸಿದ್ದ ಮಂಜಪ್ಪನಿಗೆ ಅವುಗಳನ್ನು ಮಾರುವ ಮನಸಿರಲಿಲ್ಲ. ಸಾಯುವ ತನಕ ಅವುಗಳ ಆರೈಕೆ ಮಾಡಲು ಪಣತೊಟ್ಟ. ಮಾವ ಆಸ್ತಿಯಲ್ಲಿ ಪಾಲು ಕೊಡುವುದಿಲ್ಲವೆಂದು ತಿಳಿದ ಮೇಲೆ, ತಮ್ಮ ಗಂಡಂದಿರಿಗೆ ದಿನವೂ ಚಾಡಿ ಹೇಳಿ, ಜಗಳ ಎಬ್ಬಿಸುತ್ತಿದ್ದ ಆ ಮನೆಯ ಸೊಸೆಯರು, ಕೊನೆಗೂ ಮಂಜಪ್ಪನನ್ನು ಮನೆಯಿಂದ ಹೊರಹಾಕಿ ಕುರಿ ದೊಡ್ಡಿಯಲ್ಲಿ ಮಲಗುವಂತೆ ಮಾಡಿದ್ದರು.
ಮಂಜಪ್ಪ ಊಟಕ್ಕೆ ಕುಳಿತಾಗ ದೊಡ್ಡಿಗೆ ಕುರಿ ಮರಿಗಳನ್ನು ಬಿಡುವುದು, ಊಟದ ಜೊತೆಗೆ ನೀರು ತಂದಿಡದೆ ಸತಾಯಿಸುವುದು, ಬೇಕಂತಲೇ ಕಾರ ಜಾಸ್ತಿ ಹಾಕಿ ಅಡುಗೆ ಮಾಡುವುದು, ಇವೆಲ್ಲ ಸೊಸೆಯರು ಮಂಜಪ್ಪನ ಮೇಲೆ ಮಾಡುತ್ತಿದ್ದ ನಿತ್ಯ ಪ್ರಯೋಗಗಳು.
ಮಂಜಪ್ಪ ತನ್ನನ್ನು ತೊರೆದು ಹೋದ ಮಡದಿಯೊಂದಿಗೆ ತನ್ನ ನೋವು ಹೇಳಿಕೊಂಡು ದಿನ ದೂಡುತ್ತಿದ್ದ. ಆತನ ಮನದಾಳದ ನೋವಿನೊಂದಿಗೆ ಕಾಲವೂ ಸರಿಯುತ್ತಿತ್ತು. ಈ ಮಧ್ಯೆ ಕೇಶವ್ ಹಾಗೂ ಶೇಖರ್ ಎರಡೆರಡು ಮಕ್ಕಳ ತಂದೆಯಾದರು. ಆ ಮಕ್ಕಳೂ ಬೆಳೆದು ಶಾಲೆಗೆ ಹೋಗುವ ಹಂತ ತಲುಪಿದರು.
ಮಕ್ಕಳು, ಸೊಸೆಯಂದಿರು ಮೇಲೆ ಬೇಸರವಿದ್ದರೂ ಮೊಮ್ಮಕ್ಕಳೊಂದಿಗೆ ಮಂಜಪ್ಪನ ಒಡನಾಟ ಚೆನ್ನಾಗಿತ್ತು. ದಿನ ಕಳೆದಂತೆ ಮೊಮ್ಮಕ್ಕಳು ತಂದೆ ತಾಯಿಯನ್ನು ದೂರವಿರಿಸಿ, ತಾತನೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಇದರಿಂದ ರೋಸಿ ಹೋದ ಕೇಶವ ಹಾಗೂ ಶೇಖರ್, ತಂದೆಯ ಮೇಲೆ ಹರಿಹಾಯ್ದು ಬಂದರು.
“ನಿನ್ನಿಂದ ನಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ನೀನು ಆ ಕುರಿ ದೊಡ್ಡಿಯಲ್ಲಿ ಮಲಗಿ ಮಲಗಿ, ಮಕ್ಕಳೂ ಅದನ್ನೇ ಕಲಿತಿದ್ದಾರೆ. ಮುಂದೊಂದು ದಿನ ಡಾಕ್ಟರ್ ಇಂಜಿನಿಯರ್ ಆಗಬೇಕಿರುವ ಮಕ್ಕಳನ್ನು ನೀನು ಹಾಳು ಮಾಡ್ತಿದ್ದೀಯ’ ಎಂದು ಜಗಳಕ್ಕೆ ನಿಂತರು.
ವಯಸ್ಸಾದ ಮಂಜಪ್ಪ ಮಕ್ಕಳಿಗೆ ಸರಿ ಸಮವಾಗಿ ಮಾತನಾಡಲು ಹಿಂಜರಿದರು.
ಆದರೆ ಮೊಮ್ಮಕ್ಕಳು ಸುಮ್ಮನಿರಲಿಲ್ಲ. “ಅವರಿಗೇಕೆ ಬೈತೀರಿ? ನಾವೇ ಬಂದು ಇಲ್ಲಿ ಉಳಿದುಕೊಳ್ಳುವುದು. ತಾತ ನಮಗೆ ಈ ಊರಿನ ಪದ್ದತಿ, ಹಬ್ಬಗಳ ಪ್ರಾಮುಖ್ಯತೆ, ಹೊಲ ಗದ್ದೆಯ ಅವಶ್ಯಕತೆ, ತುಂಬು ಕುಟುಂಬದ ಪ್ರೀತಿ, ಖುಷಿ ಪ್ರತಿಯೊಂದನ್ನೂ ಹೇಳಿ ಕೊಟ್ಟಿದ್ದಾರೆ. ಆದ್ರೆ ನೀವು ಅಮ್ಮನ ಜೊತೆ ಜಗಳ ಮಾಡುವುದು ಬಿಟ್ಟು ಇನ್ನೇನು ಮಾಡಿದ್ದೀರಿ? ನಮಗಿರುವ ಓದಿನ ಒತ್ತಡ ತಡೆಯುತ್ತಿರುವುದು ತಾತನ ಒಡನಾಟವೇ ಹೊರತು, ನಿಮ್ಮ ಜಗಳವಲ್ಲ. ತಾತ ನಮ್ಮ ಜೀವನದ ಮೊದಲ ಸ್ನೇಹಿತ. ನಮ್ಮನ್ನು ಕೈ ಹಿಡಿದು ನಡೆಸಿದ್ದಾರೆ, ಹೆಗಲ ಮೇಲೆ ಹೊತ್ತು ಓಡಾಡಿದ್ದಾರೆ. ದುಡಿಮೆಯ ಹಿಂದೆ ಬಿದ್ದಿರುವ ನೀವು ಇದ್ಯಾವುದನ್ನೂ ಮಾಡಿಲ್ಲ. ನಾವು ತಾತನ ಜೊತೆಗಿರ್ತಿವಿ” ಎಂದು ಕಡ್ಡಿ ಮುರಿದಂತೆ ನುಡಿದರು.
ಮೊಮ್ಮಕ್ಕಳು ಆಡಿದ ಮಾತುಗಳು ಹಿರಿ ಜೀವ ಮಂಜಪ್ಪನ ಮನಸ್ಸನ್ನು ತುಂಬಿದವು. ಅಲ್ಲದೆ ಆ ಮಾತುಗಳು ಶೇಖರ್ ಹಾಗೂ ಕೇಶವರಿಗೆ ತಾವೇನು ಕಳೆದುಕೊಂಡಿದ್ದೇವೆ ಎಂದು ತಿಳಿಸಿ ಹೇಳಿದ್ದವು. ಮನೆಯ ಹಿರಿಯರು ಹೇಳಿಕೊಡುವ ನೀತಿ ಪಾಠ ಯಾವ ಶಾಲೆ ಕಾಲೇಜಿನಲ್ಲೂ ಸಿಗುವುದಿಲ್ಲ ಎಂಬುವುದಕ್ಕೆ ಮಂಜಪ್ಪ ಜೀವಂತ ಸಾಕ್ಷಿಯಾಗಿದ್ದ.