ಅಂಜಲಿ ರಾಮಣ್ಣ
ಒಂದು ಧರ್ಮಕ್ಕೆ ಸೀಮಿತವಾದ ಬಟ್ಟೆಯನ್ನು ಹಾಕಿಕೊಂಡು ಒಬ್ಬಾಕೆ ರೈಲಿನಲ್ಲಿ ಸಾಮಾನ್ಯಬೋಗಿಯಲ್ಲಿ ಪ್ರಯಾಣ ಮಾಡುತ್ತಿರುತ್ತಾಳೆ. ಟಿಕೆಟ್ ಪರೀಕ್ಷಣಾ ಅಧಿಕಾರಿ ಆಕೆಯ ಟಿಕೆಟ್ ತೋರಿಸಲು ಕೇಳಿದಾಗ ಆಕೆ ತನ್ನ ಬಳಿ ಟಿಕೆಟ್ ಇಲ್ಲವೆಂದು, ತಾನು ಟಿಕೆಟ್‌ಅನ್ನು ತೆಗೆದುಕೊಳ್ಳುವ ಅವಶ್ಯಕತೆಯೇ ಇಲ್ಲವೆಂದು ಹೇಳುತ್ತಾಳೆ.
ಯಾಕೆ ಎಂದು ಪ್ರಶ್ನಿಸಿದಾಗ ಆಕೆ ನಮ್ಮ ಧರ್ಮದವರು ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಸಂವಿಧಾನದಲ್ಲೇ ಹೇಳಲಾಗಿದೆ, ಅದಕ್ಕೇ ತಾನು ಟಿಕೆಟ್ ತೆಗೆದುಕೊಳ್ಳುವುದಿಲ್ಲ ಎನ್ನುವ ವಿತಂಡ ವಾದ ಮಾಡುತ್ತಾಳೆ. ಅಲ್ಲಿದ್ದ ಇತರೆ ಪ್ರಯಾಣಿಕರು ಆಕೆಯನ್ನು ಸುತ್ತುವರಿದು ರೈಲಿನಿಂದ ಹೊರಹೋಗಲು ಒತ್ತಾಯಿಸುತ್ತಾರೆ. ಉತ್ತರದ ಒಂದು ರಾಜ್ಯದಲ್ಲಿ ನಡೆದ ಈ ಘಟನೆಯ ವಿಡಿಯೋ ತುಣುಕೊಂದು ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ಇದನ್ನು ನೋಡಿದ ಕೂಡಲೇ ಈ ದೇಶದ ಯಾವುದೇ ಪ್ರಜೆಗೂ ಆ ಮಹಿಳೆ ಹೇಳಿದ್ದು ಮತ್ತು ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ್ದು ಎರಡೂ ತಪ್ಪು ಮತ್ತು ದಂಡನೆಗೆ ಅರ್ಹವಾದ ಅಪರಾಧ ಎನ್ನುವುದು ಗೊತ್ತಾಗುತ್ತದೆ. ಆದರೆ ಆಕೆಯನ್ನು ಘೇರಾವ್ ಮಾಡಿ ಏಕಾಏಕಿ ರೈಲಿನಿಂದ ಇಳಿಯುವಂತೆ ಒತ್ತಾಯ ಮಾಡುತ್ತಿದ್ದ ಜನರದ್ದು ಕೂಡ ಕಾನೂನು ರೀತ್ಯ ಶಿಕ್ಷಾರ್ಹ ಅಪರಾಧವೇ ಹೌದು. ಧರ್ಮ, ಜಾತಿ, ಅಂತಸ್ತುಗಳ ಭೇದವಿಲ್ಲದೆ ಪ್ರತಿಯೊಬ್ಬ ಪ್ರಯಾಣಿಕನೂ ರೈಲಿನಲ್ಲಿ ಟಿಕೆಟ್ ಪಡೆದುಕೊಂಡು ಅಥವಾ ವಿಶೇಷ ಪಾಸ್ ಹೊಂದಿದ್ದರೆ ಮಾತ್ರ ಪ್ರಯಾಣಿಸಲು ಸಾಧ್ಯ. ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಲಾಗುತ್ತದೆ. ದಂಡ ನೀಡಲು ಆಗದವರನ್ನು ಕೂಡಲೇ ರೈಲಿನಿಂದ ಇಳಿಸಲಾಗುತ್ತದೆ.
ರೈಲ್ವೇ ಪೊಲೀಸರ ಬಳಿ ದೂರು ದಾಖಲಿಸಿ ನಂತರ ನ್ಯಾಯಾಲಯದ ಮೆಟ್ಟಿಲು ಹತ್ತಿದ ಪ್ರಕರಣಗಳು ಸಹ ಇವೆ. ಆದರೆ ಜೊತೆಗಾರರಿಲ್ಲದೆ ಮಹಿಳೆಯೊಬ್ಬಳು ಅಥವಾ ೧೮ ವರ್ಷ ಗಳು ತುಂಬದ ವ್ಯಕ್ತಿ ಗಳು ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದರೆ ಅವರುಗಳನ್ನು ರೈಲಿನಿಂದ ಕೆಳಗಿಳಿಸುವ ಹಾಗಿಲ್ಲ.
೧೯೮೯ರಲ್ಲಿ ಜಾರಿಗೆ ಬಂದಿರುವ ಭಾರತೀಯ ರೈಲ್ವೆ ಕಾಯಿದೆಯ ಸೆಕ್ಷನ್ ೧೩೯ರ ಪ್ರಕಾರ ಗಂಡಸರ ಜೊತೆಯಿಲ್ಲದೇ ಒಬ್ಬಳೇ ಹೆಂಗಸು ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದರೆ ಆಕೆಗೆ ದಂಡ ವಿಧಿಸಿ ಪ್ರಯಾಣ ಮುಂದುವರಿಸಲು ಅವಕಾಶ ನೀಡಬೇಕು ಅಥವಾ ಆಕೆಯು ಹತ್ತಿದ ನಿಲ್ದಾಣದಲ್ಲಿ ಮಾತ್ರವೇ ತಕ್ಷಣ ಇಳಿಸ ಬಹುದೇ ಹೊರತು ನಂತರದ ಯಾವುದೇ ನಿಲ್ದಾಣದಲ್ಲಿ ಆಕೆಯನ್ನು ರೈಲಿನಿಂದ ಕೆಳಗಿಳಿಯಲು ಬಲವಂತ ಮಾಡುವ ಹಾಗಿಲ್ಲ. ಇಳಿಸ ಬೇಕಾದಂತಹ ಸಂದರ್ಭದಲ್ಲಿ ಆಕೆಯನ್ನು ಮಹಿಳಾ ಪರಿವೀಕ್ಷಕರು ಆ ರೈಲು ಹಾದು ಹೋಗುವ ಯಾವುದಾದರೂ ರಾಜ್ಯದ ಯಾವುದೇ ಜಿಲ್ಲೆಯ ಮುಖ್ಯ ರೈಲು ನಿಲ್ದಾಣದಲ್ಲಿ ಇಳಿಸಬೇಕಿರುತ್ತದೆ. ಹಾಗೆಯೇ ರೈಲಿನಿಂದ ರಾತ್ರಿಯ ವೇಳೆ ಒಂಟಿ ಮಹಿಳೆಯನ್ನು ಟಿಕೆಟ್ ಇಲ್ಲ ಎನ್ನುವ ಕಾರಣಕ್ಕೆ ಹೊರಗಡೆ ಕಳುಹಿಸುವ ಹಾಗಿಲ್ಲ. ಮೇಲೆ ಹೇಳಿದ ಘಟನೆಯಲ್ಲಿ ಆ ಮಹಿಳೆಯ ಪರಿಸ್ಥಿತಿಯು ಯಾವ ಮಹಿಳೆಗೆ ಎದುರಾದರೂ ಆಕೆ ತಕ್ಷಣವೇ ರೈಲ್ವೇ ಸಹಾಯವಾಣಿ ೧೮೨ಕ್ಕೆ ಕರೆ ಮಾಡಿ ದೂರು ಸಲ್ಲಿಸುವ ಅವಕಾಶ ಇರುತ್ತದೆ. ಟಿಕೆಟ್ ಪರೀಕ್ಷಣಾ ಅಧಿಕಾರಿಯಾಗಲೀ, ಸಹ ಪ್ರಯಾಣಿಕರಾಗಲೀ ಒಂಟಿ ಮಹಿಳೆಯನ್ನು ರೈಲಿನಿಂದ ಹೊರಗೆ ಹೋಗಲು ಬಲವಂತ ಮಾಡಿದರೆ ಅವರುಗಳಿಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ೨೯೨ರ ರೀತ್ಯ ಶಿಕ್ಷೆ ವಿಧಿಸಲಾಗುತ್ತದೆ. ಹಾಗೆಯೇ ಆ ಮಹಿಳೆಗೆ ಟಿಕೆಟ್ ರಹಿತ ಪ್ರಯಾಣಕ್ಕಾಗಿ ದಂಡ ವಿಧಿಸಲಾಗುತ್ತದೆ. ೧೨ ವರ್ಷದೊಳಗಿನ ಮಗನನ್ನು ಮಹಿಳೆಯು ತನ್ನ ಜೊತೆ ಮಹಿಳಾ ಬೋಗಿಯಲ್ಲಿ ಕರೆದುಕೊಂಡು ಹೋಗಬಹುದಾಗಿದೆ.
(ಲೇಖಕರು: ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಕೀಲರು)





