ಸೌಮ್ಯ ಕೋಠಿ, ಮೈಸೂರು
ಹೆಣ್ಣುಮಕ್ಕಳಿಗೆ ಅಲಂಕಾರ ಎಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲಿಯೂ ಉಡುಗೆಗೆ ತಕ್ಕ ಜಡೆ ಹಾಕಿಕೊಳ್ಳುವುದು ಹೆಣ್ಣು ಮಕ್ಕಳ ಆಸಕ್ತಿ ವಿಷಯಗಳಲ್ಲಿ ಒಂದು ಎಂದರೆ ತಪ್ಪಾಗಲಾರದು.
ಈಗೆಲ್ಲಾ ವಿಭಿನ್ನ ಶೈಲಿಯ ಕೇಶ ವಿನ್ಯಾಸಗಳು ಬಂದಿವೆ. ಆದರೆ ಇಂದಿಗೂ ಹೆಣ್ಣುಮಕ್ಕಳ ಅಂದ ಹೆಚ್ಚಿಸುವ, ಅವರ ಮೊಗದಲ್ಲಿ ಮಂದಹಾಸ ಮೂಡಿಸುವ ಕೇಶ ವಿನ್ಯಾಸ ಎಂದರೆ ಅದು ಮೊಗ್ಗಿನ ಜಡೆ.
ಈಗಂತೂ ಭಿನ್ನ-ಭಿನ್ನವಾದ ಹಲವು ಬಗೆಯ ಹೂವಿನ ಮೊಗ್ಗಿನ ಜಡೆಗಳು ಬಂದಿವೆ. ಸೀರೆಗೆ ಒಪ್ಪುವಂತಹ ಮೊಗ್ಗಿನ ಜಡೆಯನ್ನು ಯಾವಾಗ ಬೇಕಿದ್ದರೂ ಹಾಕಿಕೊಳ್ಳಬಹುದು. ಆದರೆ ದಶಕದ ಹಿಂದೆ ಹೀಗಿರಲಿಲ್ಲ. ನಾವೆಲ್ಲ ಮೊಗ್ಗಿನ ಜಡೆ ಹಾಕಿಕೊಳ್ಳಬೇಕು ಎಂದರೆ ವಸಂತಕಾಲಕ್ಕೇ ಕಾಯಬೇಕಿತ್ತು.
ವಸಂತಕಾಲದಲ್ಲಿ ಮಾವಿನಹಣ್ಣಿನ ಘಮದಂತೆಯೇ ಮಲ್ಲಿಗೆಯ ಪರಿಮಳವೂ ಹೆಚ್ಚಾಗಿರುತ್ತದೆ. ಅಲ್ಲದೆ ಸಾಲು ಸಾಲು ಜಾತ್ರೆ, ಉತ್ಸವಗಳು, ವಿವಾಹ ಮಹೋತ್ಸವಗಳು ಬರುತ್ತವೆ. ಈ ಕಾಲದಲ್ಲಿ ಮಲ್ಲಿಗೆಯು ದಪ್ಪ ದಪ್ಪ ಮೊಗ್ಗುಗಳು ಬಿಡುವುದರಿಂದ ಈ ಕಾಲಕ್ಕಾಗಿಯೇ ಕಾದು ನಾವು ಮೊಗ್ಗಿನ ಜಡೆ ಹಾಕಿಕೊಳ್ಳಬೇಕಿತ್ತು. ಈಗ ಕಾಲ ಬದಲಾಗಿದೆ. ಬೇಕೆಂದರೆ ವರ್ಷಪೂರ್ತಿ ಮಲ್ಲಿಗೆ ಮೊಗ್ಗು ಪಡೆದುಕೊಳ್ಳಬಹುದು.
ನಮ್ಮದು ಮಲೆನಾಡು. ವಸಂತ ಕಾಲ ಆರಂಭವಾಗುತ್ತಿದ್ದಂತೆಯೇ ಮಲ್ಲಿಗೆ ಮೊಗ್ಗುಗಳನ್ನು ಸಂಗ್ರಹಿಸಿ ಅಜ್ಜಿಯ ಕೈಯಲ್ಲಿ ಮೊಗ್ಗಿನ ಜಡೆ ನೇಯ್ದು ಹಾಕಿಸಿಕೊಂಡು ಓಡಾಡುವುದೇ ಒಂದು ಸಂತಸ. ಮೊಗ್ಗಿನ ಜಡೆಯೊಂದಿಗೆ ಅಜ್ಜಿ ಹಾಗೂ ಇತರೆ ಕುಟುಂಬಸ್ಥರ ಕಾಸಿನ ಸರ, ಅವಲಕ್ಕಿದಂತಹ ಒಡವೆಗಳನ್ನು ಧರಿಸಿಕೊಂಡು ಅಲಂಕಾರ ಮಾಡಿಕೊಳ್ಳುವುದು, ರೇಷ್ಮೆ ಸೀರೆಯಿಂದ ಮಾಡಿದ ಲಂಗ, ಅಜ್ಜಿಯ ರವಿಕೆ ತೊಟ್ಟು ಓಣಿಯ ತುಂಬಾ ಓಡಾಡುವ ಸಂಭ್ರಮ ಈಗ ಇಲ್ಲವಾಗಿದೆ.
ಮಲೆನಾಡಿನ ಹೆಣ್ಣುಮಕ್ಕಳಿಗೆ ವಸಂತ ಕಾಲ ಬಂತೂ ಎಂದರೆ ಸಾಕು ಅದು ಮೊಗ್ಗಿನ ಜಡೆ ಹಾಕಿಸಿಕೊಳ್ಳುವ ಕಾಲ ಎಂದೇ ಬಿಂಬಿತವಾಗುತ್ತಿತ್ತು. ನಾನು ಮೊದಲ ಮೊಗ್ಗಿನ ಜಡೆ ಹಾಕಿಸಿಕೊಂಡಿದ್ದು ನನಗೆ ಮೂರು ವರ್ಷವಿದ್ದಾಗ. ಆ ಫೋಟೋ ಇನ್ನೂ ನನ್ನ ಬಳಿ ಇದೆ. ಅದನ್ನು ನೋಡಿದಾಗಲೆಲ್ಲ ಅಜ್ಜಿಯ ನೆನಪಾಗುವ ಜತೆ ಆ ಸಂಭ್ರಮದ ಕ್ಷಣ ಕಣ್ಣಮುಂದೆ ಬಂದು ಹಾದು ಹೋಗುತ್ತದೆ.
ಯಾವುದೇ ಶುಭ ಸಮಾರಂಭಗಳಾದರೂ ಹೆಣ್ಣು ಮಕ್ಕಳು ಮೊಗ್ಗಿನ ಜಡೆ ಹಾಕಿಕೊಂಡರೆ ಅದಕ್ಕೊಂದು ಲಕ್ಷಣ. ಈಗೆಲ್ಲ ಆ ಸಂಭ್ರಮ ದೂರದ ಮಾತೇ ಬಿಡಿ. ತರಹೇವಾರಿ ಕೇಶವಿನ್ಯಾಸ ಮಾರುಕಟ್ಟೆಗೆ ಲಗ್ಗೆ ಇಟ್ಟ ಮೇಲೆ ಹೆಣ್ಣುಮಕ್ಕಳು ಜಡೆಕಟ್ಟಿಕೊಳ್ಳುವುದೇ ದೂರಾಗಿದೆ.
ಇತ್ತೀಚೆಗೆ ಕೆಲ ಮಹಿಳೆಯರು ಶಾರ್ಟ್ ಹೇರ್, ಬಾಬ್ ಕಟ್ ಮಾಡಿಸಿಕೊಳ್ಳುತ್ತಿದ್ದು, ಜಡೆಯ ಮಹತ್ವವನ್ನೇ ಮರೆತುಬಿಟ್ಟಿದ್ದಾರೆ. ಅದರಲ್ಲೂ ವರ್ಷದ ಎಲ್ಲ ಋತುವಿನಲ್ಲೂ ಮಲ್ಲಿಗೆಯ ಮೊಗ್ಗು ಲಭ್ಯವಿರುವುದರಿಂದ ಯಾವಾಗ ಬೇಕಿದ್ದರೂ ಮೊಗ್ಗಿನ ಜಡೆ ಹಾಕಿಕೊಳ್ಳಬಹುದು. ಆದರೆ ಈ ಹಿಂದೆ ಇದ್ದ ಸಂಭ್ರಮ ಈಗ ಮಾಯವಾಗಿದೆ ಎಂದೇ ಹೇಳಬಹುದು.
ನಾವು ಪಾಶ್ಚಿಮಾತ್ಯ ಸಂಸ್ಕತಿಗೆ ಒಗ್ಗಿಕೊಂಡಷ್ಟೂ ನಮ್ಮ ಸಂಸ್ಕ ತಿ ಮರೆಯಾಗುತ್ತ ಹೋಗುತ್ತದೆ. ಶುಭ ಸಮಾರಂಭಗಳಲ್ಲಿ ಹೆಣ್ಣು ಮಕ್ಕಳ ಸಂಕೇತದಂತಿದ್ದ ಜಡೆಗಳು ಅವರ ತಲೆಗಳಿಂದ ಮಾಯವಾಗಿ ಫ್ರೀ ಹೇರ್ ಅಭ್ಯಾಸ ವಾಗಿರುವುದೇ ಇದಕ್ಕೆ ಸಾಕ್ಷಿ.





