ಅಂಜಲಿ ರಾಮಣ್ಣ
ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು
ಒಮ್ಮೆ ಮಗುವಿಗೆ ೧೫ ತಿಂಗಳಾದ್ರೂ ಬರ್ತ್ ಸರ್ಟಿಫಿಕೇಟ್ ಮಾಡಿಸಿರಲಿಲ್ಲ. ಯಾಕೆ ಎಂದಿದ್ದಕ್ಕೆ ಬಂದ ಉತ್ತರ ‘೩ ತಿಂಗಳ ಹಿಂದೇನೆ ಕೊಟ್ಟಿದ್ದೀವಿ, ತಂದೆ ಹೆಸರು ಕೊಡದೆ ಮಾಡಲ್ಲ ಅಂತಿದ್ದಾರೆ. ತಾಯಿ ಲೈಂಗಿಕ ದೌರ್ಜನ್ಯದಿಂದ ನೊಂದವಳೆನ್ನುವ ಆದೇಶ ತೋರಿಸಿದರೂ ಆಫೀಸಿನಲ್ಲಿ ತಂದೆ ಹೆಸರು ಬೇಕೆನ್ನುತ್ತಿದ್ದಾರೆ’
ಇನ್ನೊಂದು ಪ್ರಕರಣದಲ್ಲಿ ೫ ಮಕ್ಕಳನ್ನು ಭಿಕ್ಷಾಟನೆಯಿಂದ ರಕ್ಷಿಸಲಾಗಿತ್ತು. ತಾಯಿಯರಿಗೆ ದಾಖಲೆಗಳನ್ನು ತರಲು ಹೇಳಲಾಗಿತ್ತು. ಅವರೆಲ್ಲರೂ ತಮ್ಮ ರಾಜ್ಯದ ಅಧಿಕಾರಿಗಳಿಂದ ಜನ್ಮದಾಖಲೆ ತಂದರು. ದಾಖಲೆಗಳಲ್ಲಿ ಐದೂ ಮಕ್ಕಳ ಅಮ್ಮಂದಿರ ಹೆಸರು ಬೇರೆ ಬೇರೆ, ತಂದೆಯ ಹೆಸರು ಒಬ್ಬನದ್ದೇ ಇತ್ತು. ಪರಿಶೀಲನೆಯಿಂದ ಸತ್ಯ ಗೊತ್ತಾಯಿತು. ಕೆಲವರಿಗೆ ಮಕ್ಕಳ ತಂದೆಯರ ಹೆಸರು ತಿಳಿದಿರಲಿಲ್ಲ.
ಕೆಲವರಿಗೆ ಕಾರಣಾಂತರಗಳಿಂದ ಹೇಳಲಾಗುತ್ತಿಲ್ಲ. ಆದರೆ ಜನ್ಮದಾಖಲೆ, ಆಧಾರ್ ಕಾರ್ಡ್ ಇತರೆ ಯಾವುದಕ್ಕೂ ತಂದೆಯ ಹೆಸರು ಕೇಳುತ್ತಾರೆ. ಅದಕ್ಕೇ ಅವರೂರಿನ ಪುಢಾರಿಯೊಬ್ಬರು ಒಂದೆರಡು ಹೆಸರು ಕೊಟ್ಟು ಅಧಿಕಾರಿಗೆ ಎಲ್ಲಾ ಮಕ್ಕಳಿಗೂ ಆ ಹೆಸರನ್ನೇ ತಂದೆಯ ಹೆಸರು ಎಂದು ಬಳಸಿ ದಾಖಲೆ ನೀಡಲು ಹೇಳಿಬಿಟ್ಟಿದ್ದರು.
ಸರ್ವೋಚ್ಚ ನ್ಯಾಯಾಲಯವೇ ಯಾವ ಮಹಿಳೆಗೂ ತನ್ನ ಹೆಸರಿನ ಮುಂದೆ ಗಂಡನ ಅಥವಾ ತಂದೆಯ ಹೆಸರು ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತೀರ್ಪು ಕೊಟ್ಟಿದೆ. ಒಂಟಿ ಮಹಿಳೆಯರು ಬೇರೆ ಬೇರೆ ವಿಧಾನದಿಂದ ತಾಯಿಯಾಗುತ್ತಿದ್ದಾರೆ. ಸಮಾಜದ ಮನ್ನಣೆ ಸಿಗುತ್ತಿದೆ. ಕಾನೂನು ಒಪ್ಪುತ್ತಿದೆ.
ಗಂಡ ತೀರಿಕೊಂಡಾಕೆಗೆ, ಒಂಟಿ ಹೆಂಗಸಿಗೆ, ಮಾಜಿ ದೇವದಾಸಿಯರಿಗೆ ಬದುಕುವ, ಆಸ್ತಿ ಹೊಂದುವ, ದತ್ತು ತೆಗೆದುಕೊಳ್ಳುವ ಹಕ್ಕುಗಳನ್ನು ಸಂವಿಧಾನವೇ ನೀಡಿದೆ. ಪಾಸ್ಪೋರ್ಟ್ನಲ್ಲಿ ತಾಯಿಯ ಹೆಸರು ಕಡ್ಡಾಯ ತಂದೆಯ ಹೆಸರು ಆಯ್ಕೆ ಎನ್ನುವ ನಿರ್ಧಾರಗಳೂ, ಪಾನ್ಕಾರ್ಡ್ನಲ್ಲಿ ತಂದೆಯ ಹೆಸರು ಕಡ್ಡಾಯ ಅಲ್ಲ ಎನ್ನುವ ನಿರ್ದೇಶನಗಳೂ ಹೊರಬಂದಿವೆ. ವೈವಾಹಿಕ ಸ್ಥಿತಿಯನ್ನು ಘೋಷಿಸಿಕೊಳ್ಳಲು ಕೆಲವು ದಾಖಲೆಗಳಲ್ಲಿ ಕೇಳಬಹುದು. ಆದರೆ ಹೆಸರಿನ ಜೊತೆ ಗಂಡನ ಹೆಸರನ್ನು ಸೇರಿಸಿಕೊಳ್ಳಬೇಕು ಎನ್ನುವ ಹಾಗಿಲ್ಲ. ಇದೆಲ್ಲವನ್ನು ಗಮನಿಸಿಯೇ ೨೦೧೫ರ ಜುಲೈ ತಿಂಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ ‘ವಯಸ್ಕ ಹೆಂಗಸರ Identifi cationಗಾಗಿ ತಂದೆ ಅಥವಾ ಗಂಡನ ಹೆಸರು ಇರಬೇಕು
ಎನ್ನುವ ನಿಯಮ ಎಲ್ಲೂ ಇಲ್ಲ. ಇದೊಂದುby practice’ ಬಂದಿರುವ ಅಲಿಖಿತ ನಿಯಮವಾಗಿ ಬಿಟ್ಟಿದೆ. ಕೆಲವು ದಾಖಲೆಗಳು ಆಗಬೇಕಾದಾಗ ತಿಳಿವಳಿಕೆಯಿಲ್ಲದೆ ಸಂಸ್ಥೆಗಳಲ್ಲಿ ತಂದೆಯ ಅಥವಾ ಗಂಡನ ಹೆಸರಿಗಾಗಿ ಒತ್ತಾಯ ಹೇರುತ್ತಾರೆ.
ಆದರೆ,ಆಯ್ಕೆಯ ಸಾತಂತ್ರ್ಯ ಕಾನೂನಿನಲ್ಲಿ ಖಂಡಿತಾ ಇದೆ. ಕೆಲವು ಶಾಲಾ-ಕಾಲೇಜು ಹಾಗೂ ಸಂಸ್ಥೆಗಳ ಅರ್ಜಿಯಲ್ಲಿ ಪ್ರಮುಖವಾಗಿ ತಾಯಿಯ ಹೆಸರನ್ನೇ ಕೇಳಲಾಗುತ್ತಿದೆ ಎನ್ನುವುದನ್ನೂ ಗಮನಿಸಬೇಕು. ನಮ್ಮನ್ನು ನಾವು ‘”Identify’’ ಹೇಗೆ
ಮಾಡಿಕೊಳ್ಳಬೇಕೆನ್ನುವುದು ಸಂವಿಧಾನ ನೀಡಿದ ಹಕ್ಕು ಮತ್ತು ಆಯ್ಕೆ“ ಎಂದು ಹೇಳಿ ಮುಂದುವರೆದು, “ಜನ್ಮದಾಖಲೆ ನೀಡುವ ಅಧಿಕಾರಿಗಳು ತಾಯಿಯು ಇಚ್ಛಿಸಿದಲ್ಲಿ ಆಕೆಯ ಹೆಸರನ್ನು ಮಾತ್ರ ನಮೂದಿಸಿ ಜನ್ಮದಾಖಲೆಯನ್ನು ನೀಡಬೇಕು. ತಂದೆಯ ಹೆಸರಿಗಾಗಿ ಒತ್ತಾಯ ಮಾಡಬಾರದು, ಸರ್ಕಾರಗಳು ಇಲಾಖೆಗಳಿಗೆ ಸುತ್ತೋಲೆ ನೀಡಬೇಕು” ಎಂದು ಆದೇಶಿಸಿದೆ. ಸ್ವ ಇಚ್ಛೆಯಿದ್ದಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ.