ಕೀರ್ತಿ
ಮೈಸೂರಿನ ಬಿಸಿಲ ಬೇಗೆಯಲ್ಲಿ ತಾಯಿ ಎಲ್ಲಮ್ಮ ಮಿನುಗುತ್ತಿದ್ದಳು. ಎಲ್ಲಮ್ಮನ ಹೊತ್ತ ಜೋಗಮ್ಮ ಬಾಯಾರಿ ಬಸವಳಿದಿದ್ದರು. ಜನರೆಲ್ಲ ಹಣ್ಣು – ತರಕಾರಿ ಅಂತ ಓಡಾಡುತ್ತಿದ್ದರೆ, ಜೋಗಮ್ಮ ತಾಯಿ ಎಲ್ಲಮ್ಮನೊಡನೆ ಕೂತು ಚಿಕ್ಕ ಗಡಿಯಾರ ಎನ್ನುವ ಮಾಯಾ ಬಜಾರ್ ಅನ್ನು ನೋಡುತ್ತಿದ್ದರು.
ಈ ಜೋಗಮ್ಮ ದುಡಿಮೆಯ ಸಲುವಾಗಿ ಶಿವಮೊಗ್ಗದಿಂದ ಪ್ರತೀ ಭಾನುವಾರವೂ ಮೈಸೂರಿಗೆ ಬರುತ್ತಾರೆ. ಇವರ ಹೆಸರು ಭಾಗ್ಯ. ಓದಿನ ಗಾಳಿಯೇ ಇವರನ್ನು ಸೋಕಿಲ್ಲವಂತೆ. ಬಡತನದ ನಡುವೆ ಲೋಟ ಗಂಜಿಗೂ ಗತಿಯಿರಲಿಲ್ಲ. ಹಾಗಾಗಿ ಅಕ್ಷರಗಳೆಲ್ಲ ಅಪರಿಚಿತವಾಗೇ ಉಳಿದುಬಿಟ್ಟವು. ಮಕ್ಕಳಿಬ್ಬರನ್ನು ತನ್ನ ಸ್ವಂತ ದುಡಿಮೆಯಿಂದ ಶಾಲೆಗೆ ಕಳುಹಿಸಿಕೊಟ್ಟು, ಅವರಿಬ್ಬರ ಖರ್ಚುಗಳನ್ನೆಲ್ಲಾ ಸಂಭಾಳಿಸುತ್ತಿದ್ದಾರೆ.
ಭಾಗ್ಯ ಅವರು ಶನಿವಾರ ಬೆಳಿಗ್ಗೆ ನಾಲ್ಕು ಗಂಟೆಯ ಹೊತ್ತಿಗೆ ಶಿವಮೊಗ್ಗದಿಂದ ಹೊರಟರೆ, ಒಂಬತ್ತೂವರೆಗೆ ಮೈಸೂರನ್ನು ತಲುಪುತ್ತಾರೆ. ಸಂಜೆ ಮೂರರ ತನಕ ಭಿಕ್ಷೆ ಬೇಡಿ, ನಾಲ್ಕು ಗಂಟೆಯ ಹೊತ್ತಿಗೆ ಮತ್ತೆ ಊರ ದಾರಿ ಹಿಡಿಯುತ್ತಾರೆ. ಹೀಗೆ ಭಿಕ್ಷೆ ಬೇಡುವುದೆಂದರೆ ಭಾಗ್ಯ ಅವರಿಗೂ ಇಷ್ಟವಿರಲಿಲ್ಲ. ಇವರ ತಾಯಿ, ಅತ್ತೆ, ದೊಡ್ಡಮ್ಮ ಎಲ್ಲರೂ ಜೋಗಮ್ಮರೇ. ‘ಬೆನ್ನು ಬಗ್ಗಿಸಿ, ದುಡಿಯುವುದಕ್ಕೆ ಆಗದೇನು? ಎಲ್ಲರೆದುರು ಹೋಗಿ ಕೈ ಚಾಚ್ತೀರಲ್ಲಾ. ನಾಚ್ಕೆ ಆಗಲ್ವಾ?‘ ಎಂದೆಲ್ಲ ಮನೆಯವರನ್ನು ಭಾಗ್ಯ ಪ್ರಶ್ನಿಸುತ್ತಿದ್ದರು.
‘ಮನೆಯವರೆಲ್ಲ ಹಾಗೆಲ್ಲ ಕೇಳಬಾರದು. ಮನೆ ದೊಡ್ಡ ಸೊಸೆನೇ ಜೋಗಮ್ಮ ಆಗುವುದು. ನೀನೇ ಹೀಗೆಂದರೆ ಹೇಗೆ?’ ಎನ್ನುತ್ತಿದರು. ಭಾಗ್ಯ ಅವರ ಹುಡುಗಾಟಿಕೆಯ ಬುದ್ಧಿ ಕೇಳಬೇಕಲ್ಲಾ, ಮನೆಯಲ್ಲಿ ಎಲ್ಲಮ್ಮ ತಾಯಿಯ ಬುಟ್ಟಿ ಇದ್ದರೆ ತಾನೇ ಸಮಸ್ಯೆ. ಆಕೆಯ ಮೂಲಸ್ಥಾನಕ್ಕೆ ಬಿಟ್ಟು ಬರುವುದೇ ಸರಿಯೆಂದು ಸವದತ್ತಿಗೆ ನಡೆದರು. ತಾಯಿಯ ಬುಟ್ಟಿಯನ್ನು ಬಿಟ್ಟು ಬಂದಾಯಿತು.
ಹಿಂದಿರುಗುವಾಗ ಮನಸ್ಸಲ್ಲೇನೊ ಕಸಿವಿಸಿ. ತುಮಕೂರು ರೈಲ್ವೆ ನಿಲ್ದಾಣದಲ್ಲಿ ಇಳಿದು, ತಿಂಗಳುಗಟ್ಟಲೆ ಕಳೆದರು. ಅತ್ತ ಊರಿನಲ್ಲಿ ಇವರ ಗಂಡ ಫೋಟೋ ಹಿಡಿದು ಓಡಾಡಿ, ಕಾಣೆಯಾದ ಬಗ್ಗೆ ದೂರನ್ನೂ ನೀಡಿದ್ದರು. ಕಡೆಗೆ ಇವರಿದ್ದ ಜಾಗದ ಸುಳಿವು ಸಿಕ್ಕಿ, ಮನೆಗೆ ಕರೆತಂದರು. ತಾಯಿ ಸೇವೆ ಮಾಡುವುದಾಗಿ ಭಾಗ್ಯ ಒಪ್ಪಿದರು. ಸವದತ್ತಿಗೆ ತೆರಳಿ ಐದು ಜನ ಜೋಗಮ್ಮ – ಜೋಗಪ್ಪರಿಂದ ಮಣಿಹಾರ ಕಟ್ಟಿಸಿಕೊಂಡು ಬಂದರು. ಗಂಡ ತೀರಿಹೋದರೂ ಮಾಂಗಲ್ಯ ತೆಗೆಯುವಂತಿಲ್ಲ. ಮುತ್ತೈದೆಯ ಸಿಂಗಾರವನ್ನೆಲ್ಲ ಇವರೂ ತೊಡುತ್ತಾರೆ. ಎಲ್ಲಮ್ಮನಂತೆ ಜಮದಗ್ನಿಯೇ ಇವರಿಗೆ ಗಂಡ.
ಒಂದು ವರ್ಷದಿಂದ ತಾಯಿಯನ್ನು ತಲೆ ಮೇಲಿಟ್ಟು ಮೆರೆಸಿ, ಸೇವೆ ಗೈಯುತ್ತಿದ್ದಾರೆ. ಭಿಕ್ಷೆ ಬೇಡಿದ ದುಡ್ಡಲ್ಲೇ ಬದುಕು ಕಟ್ಟಿಕೊಳ್ಳಬೇಕು. ಅಂಗವೈಕಲ್ಯ ಸಮಸ್ಯೆಯಲ್ಲಿರುವ ಗಂಡ ಮತ್ತಿಬ್ಬರು ಮಕ್ಕಳಿರುವ ಮನೆಗೆ ಭಾಗ್ಯ ಅವರೇ ಆಧಾರ. ಯುಗಾದಿ ಬರುತ್ತಿದೆ. ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಬೇಕು.
ಭಾಗ್ಯ ಅವರು ತಾಯಿ ಹೊಂದಿಸಿಕೊಡುತ್ತಾಳೆ ಎಂಬ ನಂಬಿಕೆಯಲ್ಲಿದ್ದಾರೆ. ಮೊದಲೆಲ್ಲ ಹದಿನೈದು ರೂಪಾಯಿಗೂ ಒದ್ದಾಡಿದ್ದಿದೆ. ತಾಯಿ ಸೇವೆಯಿಂದಾಗಿ ನೂರು ರೂಪಾಯಿಗೇನೂ ಕೊರತೆಯಿಲ್ಲ ಎನ್ನುತ್ತಾರೆ.ಮೈಸೂರಿಗೆ ವಾರಕ್ಕೊಮ್ಮೆ ಬಂದರೂ ಇಲ್ಲಿನ ಜನ ಎಂದಿಗೂ ಹಸಿದು ಕಳುಹಿಸಿಲ್ಲ ಎಂದು ಭಾಗ್ಯ ಅವರು ಖುಷಿಯಿಂದ ಹೇಳುವಾಗ ಮನದುಂಬಿದ ತೃಪ್ತಿ ಕಾಣಿಸುತ್ತಿತ್ತು. ಭಾಗ್ಯ ಅವರು ಎಲ್ಲಮ್ಮನ ಹೊತ್ತು ಒಂದು ವಾರ ಬಂದಿಲ್ಲವೆಂದರೆ ಏಕೆ ಬಂದಿಲ್ಲ ಎಂದು ಕೇಳುವಷ್ಟು ಮೈಸೂರಿನ ಜನ ಆತ್ಮೀಯರಾಗಿದ್ದಾರೆ. ಸುಮ್ಮನೆ ಕುತೂಹಲಕ್ಕೆ ಕೇಳಿದೆ, ಮಗನ ಮದುವೆಯಾಗಿ ಬರುವವಳು ತಾಯಿ ಎಲ್ಲಮ್ಮನ ಸೇವೆ ಮಾಡುತ್ತಾಳಾ? ಅದಕ್ಕೆ ಭಾಗ್ಯ ಅವರು, ತಾಯಿ ತನ್ನ ಸೇವೆ ಮಾಡಿಸಿಕೊಳ್ಳುವವರನ್ನು ಹುಡುಕಿಕೊಳ್ಳುತ್ತಾಳೆ. ಈಗಿನ ಹುಡುಗಿಯರೆಲ್ಲ ಓದಿನಲ್ಲಿ ಚುರುಕು. ನನ್ನ ಮಗಳು ಕೂಡ. ನಾನಂತೂ ನಿಷ್ಠೆಯಿಂದ ಮಾಡುತ್ತಿದ್ದೇನೆ ಎನ್ನುತ್ತಾ, ಹೇಳಿದರು, ‘ಉಧೋ ಉಧೋ ಎಲ್ಲಮ್ಮ’.





