ಎನ್.ಪಿ.ಪರಶಿವಮೂರ್ತಿ, ನಂಜೀಪುರ
ಬದುಕಿನಲ್ಲಿ ಎದುರಾಗುವ ನೂರಾರು ಸವಾಲುಗಳು ಬದುಕನ್ನು ನರಕವಾಗಿಸಿಬಿಡುತ್ತವೆ. ಇಂತಹ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದಾಗ ಮಾತ್ರ ಸಮಸ್ಯೆಗಳ ಬದುಕಿನಲ್ಲಿ ಈಸಿ ಜಯಿಸಲು ಸಾಧ್ಯ. ಹೀಗೆ ಬದುಕಿನುದ್ದಕ್ಕೂ ಸವಾಲುಗಳನ್ನು ಮೆಟ್ಟಿನಿಂತು, ಎಂದಿಗೂ ತನ್ನ ಸ್ವಾಭಿಮಾನವನ್ನು ಬಿಟ್ಟುಕೊಡದೆ ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ ಮೈಸೂರಿನ ನಾಗರತ್ನಮ್ಮ.
ನಾಗರತ್ನಮ್ಮ ಎಳನೀರು ವ್ಯಾಪಾರಿ. ತಮ್ಮ ಬದುಕಿನಲ್ಲಿ ಎದುರಾದ ಸಂಕಷ್ಟಗಳ ನಿವಾರಣೆಗಾಗಿ ಬೇರೆ ದಾರಿ ಇಲ್ಲದೆ ಎಳನೀರು ವ್ಯಾಪಾರಕ್ಕೆ ಇಳಿದರು. ಕುವೆಂಪುನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ ೫೦ ವರ್ಷ ಪ್ರಾಯದ ನಾಗರತ್ನಮ್ಮ ಅವರನ್ನು ಛಲಗಾತಿ ಎಂದೇ ಹೇಳಬೇಕು. ಮೂಲತಃ ಕೆ.ಆರ್.ಪೇಟೆಯವರಾದ ನಾಗರತ್ನಮ್ಮರಿಗೆ ೨೦ನೇ ವಯಸ್ಸಿನಲ್ಲಿ ಶ್ರೀನಿವಾಸ ಎಂಬುವರೊಂದಿಗೆ ವಿವಾಹವಾಗಿ ಮೈಸೂರಿಗೆಬಂದು ನೆಲೆಸಿದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು.
ಆರಂಭದಲ್ಲಿ ಸುಖವಾಗಿದ್ದ ಪುಟ್ಟ ಸಂಸಾರಕ್ಕೆ ಬರಸಿಡಿಲು ಬಡಿದಂತೆ ಕುಡಿತದ ಚಟಕ್ಕೆ ಬಲಿಯಾಗಿದ್ದ ನಾಗರತ್ನಮ್ಮಳ ಪತಿ ಶ್ರೀನಿವಾಸ್ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದಾಗ ಅವರ ಚಿಕಿತ್ಸೆಗೆ ನಾಗರತ್ನಮ್ಮ ಸಾಲ ಮಾಡಿ ೩೫ ಲಕ್ಷ ರೂ.ಗಳನ್ನು ಖರ್ಚು ಮಾಡಿದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇದರಿಂದಾಗಿ ಸಾಲದ ಸುಳಿಗೆ ಸಿಲುಕಿದ ನಾಗರತ್ನಮ್ಮ ಸಾಲದ ಭಾರ ಹೊರುವ ಜತೆಗೆ ಇಬ್ಬರು ಹೆಣ್ಣುಮಕ್ಕಳ ಜವಾಬ್ದಾರಿಯನ್ನೂ ಹೊರಬೇಕಾಯಿತು. ಇದಕ್ಕಾಗಿ ಅವರು ಎಳನೀರು ವ್ಯಾಪಾರ ಆರಂಭಿಸಿದರು. ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ ದಕ್ಷಿಣ ಇಎಸ್‌ಐಸಿ ಚಿಕಿತ್ಸಾಲಯದ ಮುಂಭಾಗದಲ್ಲಿ ಇವರು ಕಳೆದ ಇಪ್ಪತ್ತೈದು ವರ್ಷಗಳಿಂದ ಎಳೆನೀರು ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಸಾಲ ತೀರಿಸುವ ಜತೆಗೆ ಇಬ್ಬರು ಹೆಣ್ಣುಮಕ್ಕಳ ಪೋಷಣೆ ಮತ್ತು ಅವರ ವಿವಾಹ ಮಾಡುವ ಜವಾಬ್ದಾರಿಯೂ ಇವರ ಹೆಗಲ ಮೇಲೆ ಬಿತ್ತು. ಇಂತಹ ಸಂಕಷ್ಟದಲ್ಲಿ ಎದೆಗುಂದದೆ ಬದುಕನ್ನು ಸವಾಲಾಗಿ ಸ್ವೀಕರಿಸಿ ಎಳನೀರು ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ.
ಆರಂಭದಲ್ಲಿ ಮಹಿಳೆಯಾಗಿ ಮಚ್ಚು ಹಿಡಿದು ಎಳನೀರು ಕೊಚ್ಚುವುದು ಹೇಗೆ ಸಾಧ್ಯ? ಎಂದು ಎಲ್ಲರೂ ಟೀಕೆ ಮಾಡಿ ಹೀಯಾಳಿಸಿದರು. ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಾಗರತ್ನಮ್ಮ ತಮ್ಮ ವೃತ್ತಿಯನ್ನು ಮುಂದುವರಿಸಿದ್ದಾರೆ.
ಸದ್ಯ ಗಂಡನ ಚಿಕಿತ್ಸೆಗಾಗಿ ಮಾಡಿದ ಸಾಲವನ್ನು ಹಂತಹಂತವಾಗಿ ತೀರಿಸಿದ್ದಾರೆ. ತಮ್ಮ ಕಷ್ಟದ ದಿನಗಳಲ್ಲಿ ತಮ್ಮ ಕುಟುಂಬಸ್ಥರ‍್ಯಾರು ಸ್ಪಂದಿಸಲಿಲ್ಲ ಎಂಬ ಕೊರಗು ಇವರನ್ನು ಸದಾ ಕಾಡುತ್ತಿದೆ. ಕಷ್ಟದಲ್ಲಿಯೇ ಜೀವನ ಆರಂಭಿಸಿದ ನಾಗರತ್ನಮ್ಮ ಎಳನೀರು ಮಾರಿಯೇ ತಮ್ಮ ಇಬ್ಬರು ಹೆಣ್ಣುಮಕ್ಕಳ ವಿವಾಹ ಮಾಡಿ, ಅವರ ಬದುಕನ್ನೂ ರೂಪಿಸಿದ್ದಾರೆ. ಬಂದ ಲಾಭದಲ್ಲಿ ಅಲ್ಪ ಹಣವನ್ನು ಉಳಿತಾಯ ಮಾಡಿ ಆಟೋ ರಿಕ್ಷಾವೊಂದನ್ನೂ ಖರೀದಿಸಿದ್ದಾರೆ. ರೈತರ ಜಮೀನಿಗೆ ಹೋಗಿ ತಾವೇ ಎಳನೀರು ಖರೀದಿ ಮಾಡಿ ಸಾಗಾಣಿಕೆ ಮಾಡಲು ಇದನ್ನು ಬಳಕೆ ಮಾಡುತ್ತಿದ್ದಾರೆ.
‘ಸುಖ ಮತ್ತು ಹಣ ಇದ್ದಾಗ ಊರೆಲ್ಲಾ ನೆಂಟರು, ಕಷ್ಟದಲ್ಲಿ ಯಾರೂ ಬರುವುದಿಲ್ಲ‘ ಎಂಬುದು ಇವರ ಬದುಕಿನ ಅನುಭವದ ಮಾತು. ಸುಖವಾಗಿ ದಾಂಪತ್ಯ ಜೀವನ ನಡೆಸಬೇಕಾದವರು ವಿವಾಹವಾದ ಕೇವಲ ೫ ವರ್ಷಗಳಲ್ಲಿಯೇ ಗಂಡನನ್ನು ಕಳೆದುಕೊಂಡು ಒಬ್ಬಂಟಿ ಮಹಿಳೆಯಾಗಿ ಕಣ್ಣೀರಿನಲ್ಲಿ ಕೈ ತೊಳೆದ ನಾಗರತ್ನಮ್ಮ ಅವರ ಹೋರಾಟದ ಬದುಕು ಇತರರಿಗೆ ಮಾದರಿಯಾಗಿದೆ.