ಬೇಸಿಗೆ ಆರಂಭದಲ್ಲಿಯೇ ತಾಪಮಾನ ಏರಿಕೆಯಾಗುತ್ತಿದೆ. ಮಾರ್ಚ್ ಮೊದಲ ವಾರವೇ ಸೂರ್ಯನ ತಾಪಮಾನ ೩೫ ಡಿಗ್ರಿ ದಾಟುತ್ತಿದ್ದು, ಸೂರ್ಯನಿಂದ ಚರ್ಮವನ್ನು ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಒಂದೆರಡು ನಿಮಿಷ ಬಿಸಿಲಿನಲ್ಲಿ ನಿಂತರೆ, ನಡೆದಾಡಿದರೆ, ಮಧ್ಯಾಹ್ನದ ಬಿಸಿಲಿನ ವೇಳೆ ವಾಹನ ಚಲಾಯಿಸಿ ಮನೆಗೆ ಬರುವ ವೇಳೆಗಾಗಲೆ ಮುಖ, ಕೈ-ಕಾಲುಗಳು ಸಂಪೂರ್ಣವಾಗಿ ಟ್ಯಾನ್ ಆಗಿ ಹೋಗಿರುತ್ತವೆ. ಇಂತಹ ಸುಡು ಬೇಸಿಗೆಯ ಸಂದರ್ಭದಲ್ಲಿ ನಮ್ಮ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿರುವಂತೆ ನೋಡಿಕೊಳ್ಳುವುದು, ಉತ್ತಮವಾದ ಆಹಾರ ಸೇವನೆ, ಮುಖ್ಯವಾಗಿ ಚರ್ಮವನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುವುದು ಮುಖ್ಯವಾಗಿರುತ್ತದೆ. ಅವುಗಳಲ್ಲಿ ಪ್ರಮುಖವಾದ ಸಲಹೆಗಳು ಇಲ್ಲಿವೆ.
೧) ಬಿಸಿಲಿಗೆ ಹೋದಾಗ ಚರ್ಮ ಕಾಣದಂತೆ ಬಟ್ಟೆ ಧರಿಸಬೇಕು
ಸೂರ್ಯನ ಕಿರಣಗಳಿಂದ ನಮ್ಮ ದೇಹದ ಚರ್ಮವನ್ನು, ಮುಖದ ಕಾಂತಿಯನ್ನು ಕಾಪಾಡಿಕೊಳ್ಳಲು, ಸೂರ್ಯನ ತಾಪ ಹೆಚ್ಚಿದ್ದಾಗ ಸಾಮಾನ್ಯವಾಗಿ ಹೊರಹೋಗುವುದನ್ನು ತಪ್ಪಿಸಬೇಕು. ಅನಿವಾರ್ಯವಾಗಿ ಹೋಗಬೇಕಾದರೆ, ಕಣ್ಣುಗಳಿಗೆ ಸನ್ ಗ್ಲಾಸ್ ಹಾಗೂ ದೇಹ ಮತ್ತು ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವಂತೆ ಬಟ್ಟೆ ಧರಿಸಬೇಕು. ಬಿಸಿಲಿನಿಂದ ರಕ್ಷಣೆ ಪಡೆಯಲು ಸ್ಕಾರ್ಫ್‌ಗಳು, ಅಗಲವಾದ ಅಂಚುಳ್ಳ ಟೋಪಿಗಳು ಮತ್ತು ಸ್ಟೋಲ್‌ಗಳನ್ನು ಧರಿಸುವುದು ಉತ್ತಮ.
೨) ಹತ್ತಿ ಬಟ್ಟೆಗಳನ್ನು ಧರಿಸಬೇಕು
ಬಿಸಿ ವಾತಾವರಣದಲ್ಲಿ ಸಾಮಾನ್ಯವಾಗಿ ತಿಳಿ ಬಣ್ಣದ, ಹತ್ತಿ ಬಟ್ಟೆಗಳನ್ನು ಧರಿಸಬೇಕು. ಹತ್ತಿ ಬಟ್ಟೆಯು ಚರ್ಮಕ್ಕೆ ಹಿತವಾಗಿದ್ದು, ಬೇಸಿಗೆಯಲ್ಲಿ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಗಾಳಿ ಸುಲಭವಾಗಿ ಸಂಚರಿಸಲು ಅವಕಾಶವಿರುವುದರಿಂದ ಹೊರಗಿನ ತಾಪಮಾನವು ಹೆಚ್ಚಾಗಿದ್ದಾಗ ದೇಹವನ್ನು ತಂಪಾಗಿರಿಸುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಸಡಿಲವಾದ ಉದ್ದ ತೋಳುಗಳು ಮತ್ತು ಉದ್ದನೆಯ ಸ್ಕರ್ಟ್ ಗಳು ಅಥವಾ ಪ್ಯಾಂಟ್‌ಗಳನ್ನು ಧರಿಸಬೇಕು.
೩) ಹೆಚ್ಚು ನೀರು ಕುಡಿಯಬೇಕು
ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚಾಗಿರುತ್ತದೆ. ಆದ್ದರಿಂದ ನೀರಿನಾಂಶ ಹೆಚ್ಚಾಗಿರುವ ಹಣ್ಣುಗಳು, ಹಣ್ಣಿನ ರಸ ಅಥವಾ ತಂಪು ಪಾನೀಯಗಳನ್ನು ಸೇವಿಸಬೇಕು. ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವುದು ಉತ್ತಮ. ಇದು ನಿರ್ಜಲೀಕರಣವನ್ನು ತಡೆಯುವುದಲ್ಲದೆ ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ದೇಹವು ಹೆಚ್ಚಿನ ನೀರಿನಾಂಶವನ್ನು ಕಳೆದುಕೊಳ್ಳುವುದರಿಂದ ಬೇಸಿಗೆಯಲ್ಲಿ ಬೆವರು ಹೆಚ್ಚು. ಆದ್ದರಿಂದ ದಿನಕ್ಕೆ ಸುಮಾರು ೨-೩ ಲೀಟರ್ ನೀರನ್ನು ಕುಡಿಯಬೇಕು.
೪) ಚರ್ಮವನ್ನು ಆಗಾಗ್ಗೆ ತೇವಗೊಳಿಸಬೇಕು
ನಿಮ್ಮ ಚರ್ಮವನ್ನು ಆರೋಗ್ಯವಾಗಿಡಲು ಲೋಷನ್ ಆಧಾರಿತ ಮಾಯಿಶ್ಚರೈಸರ್‌ಅನ್ನು ಬಳಸಬೇಕು. ರಾತ್ರಿ ಮಲಗುವ ಮೊದಲು ಕೈ-ಕಾಲುಗಳಿಗೆ ಹಚ್ಚಬೇಕು. ಮುಂಜಾನೆ ಸ್ನಾನದ ನಂತರವೂ ಸ್ವಲ್ಪ ಒದ್ದೆಯಾದ ಚರ್ಮದ ಮೇಲೆ ಇದನ್ನು ಅನ್ವಯಿಸುವುದು ಒಳ್ಳೆಯದು. ಇದರಿಂದ ಚರ್ಮದಾದ್ಯಂತ ಮಾಯಿಶ್ಚರೈಸರ್ ಅನ್ನು ಸರಿಯಾಗಿ ಹೀರಿಕೊಳ್ಳಲು ಇದು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಹೈಡ್ರೇಟ್ ಮಾಡುವುದಲ್ಲದೆ ಚರ್ಮದ ಮೇಲೆ ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
೫) ಗುಣಮಟ್ಟದ ಸನ್‌ಸ್ಕ್ರೀನ್ ಬಳಸಬೇಕು
ಬೇಸಿಗೆಯ ಸಂದರ್ಭದಲ್ಲಿ ಸೂರ್ಯನ ಕಿರಣಗಳು ನಿಮ್ಮ ಚರ್ಮವನ್ನು ಸುಟ್ಟು ಹಾಕಬಹುದು. ಇದರಿಂದ ಡಾರ್ಕ್ ಸ್ಪಾಟ್ ಅಥವಾ ಮುಖದ ಚರ್ಮ ಟ್ಯಾನ್ ಆಗಬಹುದು. ಸನ್ ಬರ್ನ್ ಆಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಆದ್ದರಿಂದ ಚರ್ಮಕ್ಕೆ ಹೊಂದಿಕೊಳ್ಳುವ ಗುಣಮಟ್ಟದ ಸನ್ ಸ್ಕ್ರೀಮ್‌ಗಳನ್ನು ಬಳಸುವುದು ಉತ್ತಮ. ಸನ್‌ಸ್ಕ್ರೀಮ್‌ಗಳು ಸೂರ್ಯ ಹಾನಿಕಾರಕ ವಿಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತವೆ. ಹೊರ ಹೋದಾಗ ಪ್ರತಿ ಎರಡು ಗಂಟೆಗಳಿಗೊಮ್ಮೆ ಮುಖ ಮತ್ತು ಚರ್ಮದ ತೆರೆದ ಭಾಗಗಳಿಗೆ ಸನ್‌ಸ್ಕ್ರೀಮ್ ಹಚ್ಚುವುದು ಉತ್ತಮ. ಅದರಲ್ಲಿಯೂ ನೀವು ಹೆಚ್ಚಿನ ಸಮಯವನ್ನು ಹೊರಾಂಗಣದಲ್ಲಿ ಕಳೆಯುತ್ತಿದ್ದರೆ, ಕ್ರೀಡೆಗಳನ್ನು ಆಡುತ್ತಿದ್ದರೆ ಅಥವಾ ಹೊರಾಂಗಣದಲ್ಲಿ ವ್ಯಾಯಾಮ ಮಾಡುತ್ತಿದ್ದರೆ ಬಳಸಲೇ ಬೇಕಾಗುತ್ತದೆ. ಇದರೊಂದಿಗೆ ಬೇಸಿಗೆಯಲ್ಲಿ ನಿಮ್ಮ ತುಟಿಗಳನ್ನು ರಕ್ಷಿಸಲು ಮರೆಯ ಬಾರದು. ಏಕೆಂದರೆ ತುಟಿಗಳು ಬೇಸಿಗೆಯಲ್ಲಿ ಕಠಿಣ ಶಾಖಕ್ಕೆ ಹೆಚ್ಚು ಗುರಿ ಯಾಗುತ್ತವೆ. ಆದ್ದರಿಂದ ತುಟಿಗಳ ಆರೈಕೆ ನಮ್ಮ ಚರ್ಮದ ಆರೈಕೆಯ ದಿನಚರಿಯಷ್ಟೇ ಮುಖ್ಯವಾಗಿರುತ್ತದೆ. ವಿಶೇಷ ವಾಗಿ ಬೇಸಿಗೆಯಲ್ಲಿ, ಹೆಚ್ಚಾಗಿ ಚರ್ಮ ಮತ್ತು ತುಟಿಗಳ ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ.