Mysore
21
mist

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಶೋಭಾವತಿಯವರ ತಾರಸಿ ತೋಟ

ಕೆ.ಎಂ ಅನುಚೇತನ್
ಚೆಂದದ ಮನೆಯೊಂದನ್ನು ನಿರ್ಮಿಸಿ, ಅದರ ಅಂದ ಹೆಚ್ಚಿಸಲು ವಿಧವಿಧ ಹೂವಿನ ಗಿಡ-ಬಳ್ಳಿಗಳಿಂದ ಸಿಂಗರಿಸುವವರ ನಡುವೆ ಇಲ್ಲೊಂದು ಕುಟುಂಬ ಭವ್ಯವಾದ ಮನೆಯ ತಾರಸಿ ಮೇಲೆ ಕೃಷಿ ಕಾಯಕವನ್ನೇ ಆರಂಭಿಸಿದೆ. ಮೈಸೂರಿನ ಆನಂದ ನಗರ ಬಡಾವಣೆಯ ನಿವಾಸಿ ಶೋಭಾವತಿ ಹಾಗೂ ಮಂಜುನಾಥ್ ದಂಪತಿ ತಮ್ಮ ಮನೆಯ ತಾರಸಿಯನ್ನೇ ಕೃಷಿ ಭೂಮಿಯನ್ನಾಗಿ ಬದಲಾಯಿಸಿಕೊಂಡು ಮನೆಗೆ ಬೇಕಾದ ಹೂ, ಹಣ್ಣು, ತರಕಾರಿ ಬೆಳೆದುಕೊಂಡು ಸುಂದರ ಕೈದೋಟವನ್ನಾಗಿಸಿದ್ದಾರೆ.

ಶೋಭಾವತಿಯವರ ಸ್ವಾವಲಂಬಿ ಬದುಕು: ಶೋಭಾವತಿ ಅವರು ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ. ಆರ್ಥಿಕವಾಗಿ ಸಬಲರಾಗಿದ್ದರೂ ಯಾವ ಹಮ್ಮು ಬಿಮ್ಮುಗಳಿಲ್ಲದೆ ಪ್ರವೃತ್ತಿಯಾಗಿ ಮನೆಯ ಮಹಡಿ ಮೇಲೆ ತಾವೇ ಒಂದು ಕೈದೋಟ ನಿರ್ಮಿಸಿಕೊಂಡು ತಮಗೆ ಬೇಕಾದ ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದಾರೆ. ಶೋಭಾವತಿ ಮೂಲತಃ ಮಲೆನಾಡಿನ ಸಾಗರದ ಕೃಷಿಕ ಕುಟುಂಬದವರು. ತಮ್ಮ ಮದುವೆಯ ನಂತರ ಮೈಸೂರು ನಗರ ಸೇರಿಕೊಂಡರು. ತಾವು ಹುಟ್ಟಿ ಬೆಳೆದ ವಾತಾವರಣದಲ್ಲಿಯೇ ಸಾಗಬೇಕು ಎಂದು ಕಳೆದ ೩೦ ವರ್ಷಗಳಿಂದ ತಮ್ಮ ಮನೆಯ ಮಹಡಿಯ ಮೇಲೆಯೇ ತೋಟಗಾರಿಕೆ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ.

ಅಂಗಳದಲ್ಲೇ ಪ್ರಕೃತಿ ನಿರ್ಮಾಣ: ನಗರದ ಮಧ್ಯದಲ್ಲಿ ಬದುಕಿದರೂ ಅದರೊಂದಿಗೆ ತಮ್ಮ ಮೂಲಗುಣವನ್ನು ಬಿಡದೆ ಪ್ರಕೃತಿಯೊಂದಿಗೆ ಬದುಕಬೇಕೆಂಬುದು ಶೋಭಾವತಿಯವರ ಆಶಯ. ತಾರಸಿಯ ಮೇಲೆ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ನಿರ್ಮಿಸಿ ಅದರಲ್ಲಿ ಮಣ್ಣು ಹಾಗೂ ಸಾವಯವಗೊಬ್ಬರ ತುಂಬಿ ಹಣ್ಣಿನ ಗಿಡಗಳಾದ ಸೀಬೆ, ಥೈಲಾಂಡ್ ಹಲಸು, ಮಾವು, ದಾಳಿಂಬೆ, ನಿಂಬೆ, ಹೇರಳೆ, ಸಪೋಟ ಸೇರಿದಂತೆ ಹಲವು ಹಣ್ಣಿನ ಗಿಡ, ಕಬ್ಬು, ಬಾಳೆಯನ್ನು ಬೆಳೆದಿದ್ದಾರೆ. ಮಣ್ಣಿನ ಕುಂಡ, ದೊಡ್ಡ ಪ್ಲಾಸ್ಟಿಕ್ ಡ್ರಮ್‌ಗಳನ್ನು ಬಳಸಿಕೊಂಡು ಬದನೆ, ಟೊಮೊಟೊ, ವಿವಿಧ ರೀತಿಯ ಮೆಣಸಿನಕಾಯಿ, ಶುಂಠಿ, ಅರಿಶಿನ, ನುಗ್ಗೆ, ಹಾಗಲಕಾಯಿ, ಏಲಕ್ಕಿ, ಮೆಣಸು, ಕರಿಬೇವು ಸೇರಿ ಹಲವು ರೀತಿಯ ತರಕಾರಿ ಬೆಳೆ ಬೆಳೆಯಲಾಗಿದೆ. ವಿಶೇಷವೆಂದರೆ ಕನಕಾಂಬರ, ತಾವರೆ, ಹಲವು ರೀತಿಯ ಗುಲಾಬಿ, ದಾಸವಾಳ, ಸೇವಂತಿಗೆ, ರಾತ್ರಿರಾಣಿ ಹೂ, ಪೈಪ್ ತುಂಬೆ, ಸೂರ್ಯಕಾಂತಿ, ಮಲ್ಲಿಗೆ, ಸಂಪಿಗೆ, ಸ್ಪಟಿಕ, ಜಡೆನಿಯಂ, ಜರ್ತರ, ಆಂತೋರಿಯಂ, ಜೆಬ್ರಾ, ಸೀತಾಳೆ, ಮಧುಮಾಲತಿ ಸೇರಿದಂತೆ ನೂರಕ್ಕೂ ಹೆಚ್ಚಿನ ಜಾತಿಯ ಅತ್ಯಂತ ವಿಶಿಷ್ಟ ಹೂವಿನ ಗಿಡಗಳನ್ನು ಕಾಣಬಹುದು. ಪಿವಿಸಿ ಪೈಪ್‌ಗಳನ್ನು ಬಳಸಿ ಅದಕ್ಕೆ ಕೋಕೋ ಪೀಟ್ ಗೊಬ್ಬರ ತುಂಬಿ ಕೊತ್ತಂಬರಿ, ಸಪ್ಪಸೀಗೆ, ಪಾಲಕ, ದಂಟು ಸೇರಿದಂತೆ ವಿವಿಧ ರೀತಿಯ ಸೊಪ್ಪುಗಳು ಕೆಲವು ಔಷಽಯ ಗಿಡಗಳನ್ನೂ ಕೂಡ ಬೆಳೆಸಲಾಗಿದ್ದು ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಕಾಯಕ ಮಾಡುತ್ತಿದ್ದಾರೆ.

ಇಲ್ಲಿವರೆಗೂ ಯಾವುದೇ ಗಿಡಗಳಿಗೆ ರೋಗ ಅಥವಾ ಹುಳಗಳ ಬಾಧೆ ಕಂಡು ಬಂದಿಲ್ಲ ಎಂಬುದು ಶೋಭಾವತಿಯವರ ಮಾತು. ಹಕ್ಕಿ ಪಕ್ಷಿಗಳ ಆವಾಸಸ್ಥಾನ: ತಾರಸಿ ಮೇಲೆ ಸುಂದರ ವಾತಾವರಣ ಸೃಷ್ಟಿಯಾಗಿರುವುದರಿಂದ ಗೀಜಗ, ಗುಬ್ಬಚ್ಚಿ, ಪಿಕಳಾರದಂಥ ಪಕ್ಷಿಗಳು ಇವರ ಮನೆಯ ಅಂಗಳಕ್ಕೆ ಬರುತ್ತವೆ. ಮಹಡಿಯ ಮೇಲೆಯೇ ಬೀಡುಬಿಟ್ಟು ಗೂಡುಕಟ್ಟಿ ವಂಶಾಭಿವೃದ್ಧಿ ಮಾಡುತ್ತಿವೆ. ಶೋಭಾವತಿಯವರು ಅವುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನೂ ಮಾಡಿದ್ದು, ಮನೆಯಂಗಳದಲ್ಲಿಯೇ ಸುಂದರ ವಾತಾವರಣ ನಿರ್ಮಿಸಿದ್ದಾರೆ.

ಮೂಲತಃ ಕೃಷಿ ಕುಟುಂಬದಲ್ಲಿ ಬೆಳೆದು ಬಂದಿರುವ ನನಗೆ ಪ್ರಕೃತಿ ಹಾಗೂ ಕೃಷಿ ಜೀವನದ ಅವಿಭಾಜ್ಯ ಭಾಗವಾಗಿ ಹೋಗಿದೆ. ನಗರದಲ್ಲಿ ವಾಸಿಸುತ್ತಿರುವುದರಿಂದ ಕೃಷಿಗೆ ಜಮೀನಿನ ಅನುಕೂಲವಿರುವುದಿಲ್ಲ. ಹಾಗಾಗಿ ವೃತ್ತಿಯ ಜೊತೆ ಜೊತೆಯಲ್ಲಿ ಪ್ರವೃತ್ತಿಯಾಗಿ ನನ್ನ ಮನೆಯ ತಾರಸಿ ಮೇಲೆ ಹೂಕುಂಡ, ಪ್ಲಾಸ್ಟಿಕ್ ಡ್ರಮ್, ಪೈಪ್ ಬಳಸಿ ಸಾವಯವ ಕೃಷಿಯನ್ನು ಯಾವುದೇ ಆದಾಯದ ನಿರೀಕ್ಷೆ ಇಲ್ಲದೆ ನನ್ನ ಸಂತೋಷಕ್ಕಾಗಿ ೩೦ ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. -ಶೋಭಾವತಿ

 

 

Tags:
error: Content is protected !!