Mysore
27
broken clouds
Light
Dark

ಜಾಜಿಯಕ್ಕನ ಸ್ವಚ್ಛ ಹಾಸ್ಟೆಲ್

• ಕೀರ್ತಿ ಬೈಂದೂರು

ಗಂಗೋತ್ರಿ ಹಾಸ್ಟೆಲ್‌ನಲ್ಲಿ ಜಾಜಿಯಕ್ಕ ಗುಡಿಸಿ, ಒರೆಸುವ ಕೆಲಸಕ್ಕೆ ಬರುತ್ತಿದ್ದರು. ಸ್ವಚ್ಛತೆಯ ಕಾಯಕವೆಂಬುದು ಇವರಿಗೆ ಅಭಿಮಾನ. ಎರಡು ದಿನಗಳು ಕೆಲಸಕ್ಕೆ ರಜೆ ತೆಗೆದುಕೊಂಡರೆ ನಾವೆಲ್ಲ ಬಾಯಿ ಬಡಿದುಕೊಳ್ಳಬೇಕಾದ ಸ್ಥಿತಿ, ಹಾಗಾಗಿ ಇವರು ಹಬ್ಬ-ಹರಕೆಯೆಂದು ಕೆಲಸಕ್ಕೆ ರಜೆ ತೆಗೆದುಕೊಳ್ಳದೆ, ಆ ದಿನ ಬೇಗ ಬಂದು ಕೆಲಸ ಮುಗಿಸಿ ಹೋಗುತ್ತಿದ್ದರು.

ಅಂದಹಾಗೆ, ಹೇಳುವುದು ಮರೆತೆ. ಇವರು ಹಾಸ್ಟೆಲ್‌ಗೆ ಬೇಗ ಬರಬಹುದು, ತಡವಾಯಿತೆಂದರೆ ಸಂಬಳಕ್ಕೆ ಕತ್ತರಿ ಬಿತ್ತೆಂದೇ ಲೆಕ್ಕ. ತಿಂಗಳಲ್ಲಿ ಒಂದೋ ಎರಡೋ ದಿನ ಸಮಯ ಮೀರುತ್ತಿದ್ದದ್ದೂ ಹೌದು. ಆವತ್ತಿಡೀ ಜಾಜಿಯಕ್ಕನ ಮುಖದಲ್ಲಿ ಹೆಪ್ಪುಗಟ್ಟಿದ ಮೌನ.

ಬಾತ್‌ರೂಂ, ಟಾಯ್ಲೆಟ್‌ಗೆ ಭೀಚಿಂಗ್ ಪೌಡರ್, ಫಿನೈಲ್, ಆಸಿಡ್ ಹಾಕುವಾಗೆಲ್ಲ ಪಕ್ಕದಲ್ಲಿದ್ದ ರೂಮಿನ ಹುಡುಗಿಯರಿಗೆ, “ಆಚೆ ಹೋಗ್ರವ್ವಾ’ ಎಂದು ಕಾಳಜಿ ತೋರುತ್ತಿದ್ದ ಜಾಜಿಯಕ್ಕ, ಅಲ್ಲೇ ಇರುವ ತಾನಿನ್ನೆಷ್ಟು ಜಾಗೃತೆ ವಹಿಸಬೇಕು ಎಂಬುದನ್ನು ತಪ್ಪಿಯೂ ಯೋಚಿಸುತ್ತಿರಲಿಲ್ಲ. ಆಸಿಡ್ ಹಾಕಿದ ಮೇಲೆ ಮಾರುದ್ದ ಇರುವ ನಮಗೇ ಅದರ ಘಾಟು ವಾಸನೆ ಮೂಗು, ಬಾಯಿಗೆ ಬಡಿಯುತ್ತಿದ್ದರೆ, ಇವರು ಮಾತ್ರ ಅದೇನೂ ಅಲ್ಲವೆಂಬಂತೆ ಕೆಲಸ ಮಾಡುತ್ತಿದ್ದರು. ಇಂದ್ರಿಯಗಳೆಲ್ಲ ಜಡ ಗಟ್ಟಿದ ಮೇಲೆ ಯಾವ ಅನುಭವ ಆಗುತ್ತದೆ ಹೇಳಿ!

ಹುಡುಗಿಯರ ಹಾಸ್ಟೆಲ್ ಎಂದರೆ ನ್ಯಾಪ್‌ಕಿನ್ ಗಳಂತೂ ಇದ್ದೇ ಇರುತ್ತಿತ್ತು. ಸರಿ, ನಿಗದಿತ ಬುಟ್ಟಿಗೇ ಹಾಕುವ ಹುಡುಗಿಯರನ್ನು ಭೂತಕನ್ನಡಿ ಹಾಕಿ ಹುಡುಕಬೇಕು. ಇನ್ನೂ ಕೆಲ ಹುಡುಗಿಯರಂತೂ ರೂಮಿನ ಎದುರು ಇಟ್ಟ ಕಸದಬುಟ್ಟಿಗೆ ಹಾಕಿದ ಉದಾಹರಣೆಗಳೂ ಇವೆ. ಆಗೆಲ್ಲ ಜಾಜಿಯಕ್ಕ ಕಿವಿ ತಮಟೆ ಒಡೆದುಹೋಗುವಂತೆ ಕಿರುಚಾಡುತ್ತಿದ್ದರು.

ವಾಂತಿಯಾಗಿ ಎರಡು ದಿನ ಊಟ ಬಿಟ್ಟ ಘಟನೆಗಳೂ ಸಾಕಷ್ಟಿವೆ. ಬಳಸಿದ ನ್ಯಾಪ್‌ಕಿನ್‌ಗಳನ್ನು ನಾವೇ ಮುಟ್ಟಲು ಹೇಸಿಗೆ ಪಡುವಾಗ, ಇವರು ಕೈಯಿಂದ ಎತ್ತಬೇಕೆಂದರೆ ಹೇಗೆನಿಸಬಹುದು?
ಮಧ್ಯಾಹ್ನ ಕೆಲಸ ಮುಗಿಸಿ, ಸ್ನಾನ ಮಾಡಿದ ಮೇಲೆ ಸೀರೆಯನ್ನು ಅಲ್ಲೇ ಒಣಗಿಸುವ ಹಾಗಿಲ್ಲ. ಮರೆತು ಬಟ್ಟೆಯನ್ನು ಬಿಟ್ಟುಬಂದರೆ ಆಕಾಶ ಭೂಮಿಯನ್ನು ಈ ಹುಡುಗಿಯರು ಒಂದು ಮಾಡಿಬಿಡುತ್ತಿದ್ದರು.

ಇನ್ನೊಂದು ಬಹುಮುಖ್ಯ ಸಂಗತಿ, ಊಟಕ್ಕೆಂದು ಮೆಸ್‌ಗೆ ಬಂದರೆ ಹುಡುಗಿಯರು ಇದ್ದರೆ, ಅವರ ಕೈಯಿಂದ ಹಾಕಿಸಿ ಕೊಂಡು ತಿನ್ನುತ್ತಿದ್ದರು. ಇಲ್ಲದಿದ್ದರೆ, ಹುಡುಗಿಯರು ಬರುವ ತನಕ ತಟ್ಟೆ ಹಿಡಿದು ಅಲ್ಲೇ ನಿಂತಿರುತ್ತಿದ್ದರು. ಏಕೆಂದು ಕೇಳಿದ್ದಕ್ಕೆ, “ಅಯ್ಯೋ, ಇದನ್ನೆಲ್ಲ ನಾವ್ ಮುಟ್ಟಿದ್ರೆ ಯಾರೂ ತಿನ್ನಲ್ಲ ಕಣವ್ವ ಎನ್ನುವುದು ಜಾಜಿಯಕ್ಕನ ಉತ್ತರ. ‘ನೀವ್ಯಾಕೆ ಮುಟ್ಟಿದ್ರಿ? ನಾವೆಲ್ಲ ತಿನ್ನೋದು ಬೇಡ್ವಾ?’ ನೇರವಾಗಿ ಸಿಬ್ಬಂದಿಗಳಿಂದ ಹಿಡಿದು ವಿದ್ಯಾರ್ಥಿಗಳ ತನಕ ನೇರವಾಗಿ ಹೇಳಿದ್ದಕ್ಕೆ, ತಮ್ಮ ಬಗ್ಗೆ ಅಸಹ್ಯ ಪಟ್ಟು, ಆಹಾರದ ಪಾತ್ರೆಗಳನ್ನು ಮುಟ್ಟಲು ಮುಜುಗರಪಟ್ಟು, ತಲೆ ತಗ್ಗಿಸಿದ್ದೂ ಇದೆ. ಅಸ್ಪೃಶ್ಯತೆ ಅಳಿದು ಕಾಲವಾಯ್ತು ಎನ್ನುವವರಿಗೆ ಇದು ವಾಸ್ತವ ಚಿತ್ರಣ. ಇನ್ನೂ ಯಾವ ಸಮಾಜದಲ್ಲಿ ಬದುಕುತ್ತಿದ್ದೇವೆ ನೋಡಿ!

ಕೊಡುವ ಸಂಬಳಕ್ಕೆ ಹತ್ತು ಪಟ್ಟು ಹೆಚ್ಚು ಕೆಲಸ ಮಾಡುವ ಜಾಜಿಯಕ್ಕ ಮತ್ತವರ ಗೆಳತಿಯರಿಗೆ ವಿಶ್ರಾಂತಿ ಎಂದರೆ ಊಟದ ಹೊತ್ತು ಮಾತ್ರ. ಸಂಬಳದಲ್ಲಿ ತುಸು ಏರಿಕೆ, ಭಾನುವಾರದಂದು ರಜೆ ನೀಡಿ ಎರಡು ವರ್ಷಗಳಾಗಿರಬಹುದು. ಇನ್ನೆಲ್ಲಿ ಇವರು ಕೆಲಸ ಬಿಡುತ್ತಾರೊ ಎಂಬ ಆತಂಕದಲ್ಲಿ ವಿಶ್ವವಿದ್ಯಾನಿಲಯ ಈ ಕ್ರಮ ಕೈಗೊಂಡಿದ್ದೇನೊ ಹೌದು. ಆದರೆ, ಪ್ರತಿಭಟಿಸಲಾಗದ ನೋವು, ದಿನೇದಿನೇ ಹದಗೆಡುತ್ತಿರುವ ತಮ್ಮ ದೇಹಸ್ಥಿತಿಯನ್ನು ಗಮನಿಸಿದ ಜಾಜಿಯಕ್ಕ ಮತ್ತವರ ಸಂಗಡಿಗರು ಅಬ್ಬಬ್ಬಾ ಎಂದರೆ ಇನ್ನೆರಡು ವರ್ಷ ಕೆಲಸ ಮಾಡಬಹುದು. ‘ನಾವೇನೊ ಮಾಡಿದ್ದೀವಿ. ನಮ್ ಮಕ್ಲು ಈ ಕೆಲ್ಸ ಮಾಡ್ಡಾರ್ದು ಕಣವ್ವಾ’ ಎನ್ನುತ್ತಾ ಹನಿಗಣ್ಣಾಗುತ್ತಾರೆ.

ಹಾಗಾದರೆ ಮುಂದೇನು? ಚಿಂತಾಮಣಿ ಕೊಡ್ಲೆಕೆರೆ ಅವರ ‘ಬಾಬುವಿನ ಕನಸು’ ಕವಿತೆ ಮತ್ತೆ ನೆನಪಾಗುತ್ತದೆ. ಜೂನಲ್ಲಿ ಲದ್ದಿ ಎತ್ತುವ ಕೆಲಸದಲ್ಲಿರುವ ಬಾಬು, ಆನೆಯಾಗಬೇಕೆಂದು ಕನಸು ಕಾಣುತ್ತಾನೆ. ಅವನು ಆನೆಯಾದರೆ ಬಾಬು ಯಾರಾಗಬೇಕು? ಎಂಬುದೇ ಕವಿತೆ ಎತ್ತುವ ಪ್ರಶ್ನೆ. ಜಾಜಿಯಕ್ಕನ ತರಹದ ಮಹಿಳೆಯರು ಕೆಲಸ ಬಿಟ್ಟ ಮೇಲೆ ನಂತರ ಯಾರು? ಅಥವಾ ಸದ್ಯ ಹೊರದೇಶಗಳಲ್ಲಿರುವ ಮೆಷಿನ್ ಸಂಸ್ಕೃತಿ ಇಲ್ಲಿಗೂ ಲಗ್ಗೆ ಇಟ್ಟು ಶ್ರಮ ಸಂಸ್ಕೃತಿಗೆ ಪರ್ಯಾಯವಾಗಬಹುದಾ? ಕೊಡ್ಲೆಕೆರೆ ಅವರ ನುಡಿಯಲ್ಲಿ ಹೇಳಬೇಕೆಂದರೆ, ‘ಜಗತ್ತಿಗೆ ಇದು ಅರ್ಥವಾಗಲು ಇನ್ನೆಷ್ಟು ಸಮಯ ಬೇಕು?’