Mysore
23
haze

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಆಟಿಸಂ ಮಕ್ಕಳ ಹಕ್ಕುಗಳು

ಅಂಜಲಿ ರಾಮಣ್ಣ

ಮಹಿಳಾ ಮತ್ತು ಮಕ್ಕಳ ಹಕ್ಕುಗಳ ವಕೀಲರು ರವಿ ಬಾಲ್ಯದಿಂದಲೂ ಬೇರೆ ಮಕ್ಕಳಿಗಿಂತ ವಿಭಿನ್ನ. ಶಾಲೆಯ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇಲ್ಲ. ವಯಸ್ಸಿಗೆ ಮೀರಿದ ದೇಹ. ಯಾರೊಂದಿಗೂ ಮಾತನಾಡಲು ಆಸಕ್ತಿ ಇಲ್ಲದ ಬಾಲಕನಿಗೆ ತಜ್ಞರು ಆಟಿಸಂ ವಿಕಲತೆ ಇರುವುದಾಗಿ ಹೇಳಿದರು. ಅವನ ಆಸಕ್ತಿಯನ್ನು ಗಮನಿಸಿ ಕ್ಯಾಂಡಲ್ ಮಾಡುವುದರಲ್ಲಿ ತರಬೇತಿ ಕೊಡಿಸಲಾಯ್ತು. ಖ್ಯಾತ ಗೃಹೋದ್ಯಮದವರು ೧೫ರ ಇವನಿಗೆ ಸಂಬಳಕ್ಕೆ ಕೆಲಸ ಕೊಟ್ಟರು. ಬಾಲಕನ ಕೈಯೆಲ್ಲಾ ಮೇಣದಿಂದ ಸುಡಿಸಿಕೊಂಡು ಜಡ್ಡುಗಟ್ಟಿತ್ತು. ಅವನ ಸಮಸ್ಯೆ ಮತ್ತಷ್ಟು ಹೆಚ್ಚಿತು.

೨೭ ವರ್ಷದ ಸಂತೋಷ್ ಶ್ರೀಮಂತ ಉದ್ಯಮಿಯ ಮಗ. ಯಾರೊಡನೆಯೋ ಬೆರೆಯದ, ತನ್ನದೇ ಲೋಕದಲ್ಲಿ ತಲ್ಲೀನನಾಗಿರುವವನಿಗೆ ಮದುವೆ ಮಾಡಿಸಿದರೆ ಸರಿಹೋಗುತ್ತಾನೆ ಎಂದ ಜ್ಯೋತಿಷ ನಂಬಿ ಮದುವೆ ಮಾಡಿದ್ದಾರೆ. ಹೆಂಡತಿಗೆ ಇವನೊಡನೆ ಬಾಳುವುದು ಅಸಾಧ್ಯ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿದಿದೆ. ವೈದ್ಯರು ಅವನ ಬಾಲ್ಯದಲ್ಲಿಯೇ ಆಟಿಸಂ ಇದೆ ಎಂದು ಹೇಳಿದ್ದರೂ ಯಾವುದೇ ಚಿಕಿತ್ಸೆ ಕೊಡಿಸದ ಪರಿಣಾಮ ಇವತ್ತು ಅವರ ಮದುವೆ ವಿಚ್ಚೇಧನಕ್ಕಾಗಿ ನ್ಯಾಯಾಲಯದಲ್ಲಿದೆ.

ಭಾರತದಲ್ಲಿ ಪ್ರತೀ ೪೦ ವಯಸ್ಕ ಗಂಡಸರಲ್ಲಿ ಒಬ್ಬ ವ್ಯಕ್ತಿ ಆಟಿಸಂ ವೈಕಲ್ಯತೆಯಿಂದ ಬಳಲುತ್ತಿದ್ದಾರೆ ಎನ್ನುತ್ತದೆ ಒಂದು ಅಂಕಿ ಅಂಶ. ಆದರೆ ಸಂವಿಧಾನದ ಪರಿಚ್ಛೇದ ೧೪ ಮತ್ತು ೧೫ ಅವರುಗಳಿಗೆ ಕೂಡ ಯಾವುದೇ ತಾರತಮ್ಯವಿಲ್ಲದೆ ಬದುಕುವ ಹಕ್ಕನ್ನು ಖಾತ್ರಿ ಪಡಿಸಿದೆ. ಹಾಗಾಗಿಯೇ ಅವರುಗಳ ಅವಶ್ಯಕತೆಗಳನ್ನು ಗಮನಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಒಳಗೊಳ್ಳುವಿಕೆಯ ದೃಷ್ಟಿಯಿಂದ ಅಂಗವಿಕಲರ ಹಕ್ಕುಗಳ ಕಾನೂನು ೨೦೧೬ ರನ್ನು ಜಾರಿಗೆ ತರಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಅವರ ಅಗತ್ಯಗಳಿಗೆ ಪೂರಕವಾದ ವಾತಾವರಣ ನಿರ್ಮಿಸಿ ಇತರೆ ಮಕ್ಕಳೊಂದಿಗೆ ಬೆರೆಯುವಂತೆ ಮಾಡಬೇಕು. ೧೪ ವರ್ಷಗಳವರೆಗೆ ಶಾಲಾ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಒದಗಿಸಿಕೊಡಲಾಗಿದೆ.

ಶೇ.೪೦ಕ್ಕಿಂತ ಹೆಚ್ಚಿನ ವಿಕಲತೆ ಇರುವವರಿಗೆ ಪ್ರತ್ಯೇಕ ಗುರುತಿನ ಚೀಟಿ ನೀಡಬೇಕಿರುತ್ತದೆ. ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳಲ್ಲಿ ಶೇ.೪ ಮೀಸಲಾತಿ ನೀಡಲಾಗಿದೆ. ಆಟಿಸಂ, ಸೆರೆಬ್ರಲ್ ಪ್ಲಾಸಿ, ಮಾನಸಿಕ ಮಾಂಧ್ಯತೆ ಮತ್ತು ಬಹುವಿಕಲತೆ ಇರುವ ವ್ಯಕ್ತಿಗಳ ರಾಷ್ಟ್ರೀಯ ಕಲ್ಯಾಣ ಟ್ರಸ್ಟ್, ೧೯೯೯ ಇದನ್ನು ಸ್ಥಾಪಿಸಲಾಗಿದ್ದು ಇದರಡಿಯಲ್ಲಿ ಅವರುಗಳ ಶ್ರೇಯೋಭಿವೃದ್ಧಿಗಾಗಿ, ಆಟಿಸಂ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆಗಾಗಿ ಸರ್ಕಾರ ಪ್ರತ್ಯೇಕ ವ್ಯವಸ್ಥೆ ಮಾಡಬೇಕಿರುತ್ತದೆ.

ಆಟಿಸಂ ಇರುವ ಮಕ್ಕಳಿಗೂ ಬಾಲ್ಯವಿವಾಹ ಮಾಡುವುದು, ಬಾಲಕಾರ್ಮಿಕರಾಗಿ ದುಡಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಕುಟುಂಬವು ಆಟಿಸಂ ವಿಕಲತೆಯನ್ನು ಹೊಂದಿರುವ ವ್ಯಕ್ತಿಯನ್ನು ನೋಡಿಕೊಳ್ಳಲು ಅಸಮರ್ಥವಾಗಿದ್ದಲ್ಲಿ ಸರ್ಕಾರವು ಪರಿಚಾರಕರನ್ನು ಒದಗಿಸಿಕೊಡುವ ಕರ್ತವ್ಯವನ್ನು ಹೊಂದಿದೆ. ಕಾನೂನಿನ ರೀತ್ಯ ಮದುವೆ ಮತ್ತು ಕುಟುಂಬ ಎನ್ನುವ ವ್ಯವಸ್ಥೆಯನ್ನು ಅರ್ಥಮಾಡಿಕೊಂಡು ಒಪ್ಪಿಗೆ ನೀಡಲು ಅಸಮರ್ಥನಿರುವ ವ್ಯಕ್ತಿಯು ಮದುವೆಯನ್ನು ಮಾಡಿಕೊಳ್ಳುವ ಹಾಗಿಲ್ಲ ಮತ್ತು ಅಂತಹ ಮದುವೆಯನ್ನು void ab initio (ಊರ್ಜಿತವಲ್ಲದ್ದು) ಎನ್ನಲಾಗುತ್ತದೆ. ಇಂತಹ ವ್ಯಕ್ತಿಗಳು ಲೀಗಲ್ ಗಾರ್ಡಿಯನ್ ಮೂಲಕ ಆಸ್ತಿಗೆ ವಾರಸುದಾರ ಆಗಿರಬಹುದು. ಮಾನಸಿಕ ಆರೋಗ್ಯ ಕಾಯಿದೆ ೨೦೧೭ ಇದರಲ್ಲಿ ವ್ಯಕ್ತಿಯಲ್ಲಿ ಆಟಿಸಂ ಸ್ಥಿತಿಯನ್ನು ಪತ್ತೆಹಚ್ಚಿ, ಚಿಕಿತ್ಸೆ ನೀಡಲು ತಗಲುವ ವೆಚ್ಚವನ್ನು ಆರೋಗ್ಯ ವಿಮಾ ಕಂಪೆನಿಗಳು ತಮ್ಮ ವಿಮೆಯಲ್ಲಿ ಹೊಂದಿರಬೇಕು ಎಂದು ಹೇಳಲಾಗಿದೆ.

ಏಪ್ರಿಲ್ ತಿಂಗಳನ್ನು ಆಟಿಸಂ ಇರುವ ವ್ಯಕ್ತಿಗಳ ಸಂಕಷ್ಟಗಳ ಬಗ್ಗೆ ಗಮನಹರಿಸಬೇಕಾದ ತಿಂಗಳು ಎಂದು ಗುರುತಿಸಲಾಗಿದೆ. ಚಿಕ್ಕ ವಯಸ್ಸಿನಲ್ಲೇ ಇಂತಹ ಸ್ಥಿತಿಯನ್ನು ಗುರುತಿಸಿದರೆ ಚಿಕಿತ್ಸೆ ಮೈಗೂಡುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಾರೆ ತಜ್ಞರು. ಸಮಸ್ಯೆಯನ್ನು ಉಲ್ಬಣವಾಗಲು ಬಿಟ್ಟು ವಯಸ್ಕ ವ್ಯಕ್ತಿಯೊಬ್ಬ ಮತ್ತೊಬ್ಬರ ಬದುಕಿನಲ್ಲಿ ಹೊರೆಯಾಗದಿರುವಂತೆ ನೋಡಿಕೊಳ್ಳುವುದು ಎಲ್ಲರ ಸಾಮಾಜಿಕ ಜವಾಬ್ದಾರಿಯಾಗಿರುತ್ತದೆ.

Tags:
error: Content is protected !!