Mysore
32
few clouds

Social Media

ಬುಧವಾರ, 09 ಏಪ್ರಿಲ 2025
Light
Dark

ಕರೆದೊಡನೆ ಠಾಣೆಗೆ ಹೋಗಬೇಕಾಗಿಲ್ಲ

ಅಂಜಲಿ ರಾಮಣ್ಣ

ಕುಟುಂಬಗಳ ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದ ಪೂಜಾಳಿಗೆ ಸಿಕ್ಕಿದ್ದು ಸೋಮಾರಿ ಗಂಡ. ಪೂಜಾಳ ವಿದ್ಯೆಯೂ ಪಿಯುಸಿಯಷ್ಟೇ. ಸಾಲ ತಂದು ಬಾಡಿಗೆ ಮನೆಯ ಕೋಣೆಯಲ್ಲಿಯೇ ಬ್ಯೂಟಿಪಾರ್ಲರ್ ನಡೆಸುತ್ತಾ ಸಂಸಾರ ನಡೆಸುತ್ತಿದ್ದಳು. ಇನ್ನು ಮೂರು ದಿನಗಳಲ್ಲಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಬರಬೇಕು ಎನ್ನುವ ಕರೆ ಬಂದಾಗ, ವಿವರ ಕೇಳಿದರೂ ಸಿಗದಿದ್ದಾಗ ಆಕೆ ಕಂಗಾಲಾಗಿ ಹೋದಳು.

ಶ್ರೀಮತಿ ಮನೆಯಲ್ಲಿಯೇ ಸೀರೆ ವ್ಯಾಪಾರ ಮಾಡುತ್ತಿದ್ದಳು. ಸೀರೆ ಸಪ್ಲೆ  ಮಾಡುತ್ತಿದ್ದವರ ಜೊತೆ ಹಣಕಾಸಿನ ವಿಷಯಕ್ಕೆ ವಾಗ್ವಾದವಾಗಿತ್ತು. ಅದಾದ ಒಂದೇ ವಾರದಲ್ಲಿ ಆತನ ಊರಿನ ಪೊಲೀಸ್ ಠಾಣೆಯಿಂದ ‘ನಿಮ್ಮ ಮೇಲೆ ಎಫ್‌ಐಆರ್ ಆಗಿದೆ ಠಾಣೆಗೆ ಹಾಜರಾಗಬೇಕು’ ಎಂದಿದ್ದ ಪತ್ರವೊಂದು ಕೈಸೇರಿದಾಗ ಮನೆಯವರು ಇವಳನ್ನೇ ನಿಂದಿಸಿ ಆತಂಕ ಒಡ್ಡಿದ್ದರು.

ಅವರು ವ್ಯಾಪಾರ ಮಾಡಿಕೊಂಡಿರಬಹುದು, ಯಾರಿಗೋ ಜಾಮೀನಾಗಿ ನಿಂತಿರಬಹುದು, ಬ್ಯಾಂಕ್ ಸಾಲಕ್ಕೆ ಶ್ಯೂರಿಟಿ ಹಾಕಿರಬಹುದು, ಜಗಳ ಬಿಡಿಸಲು, ರಾಜಿ ನ್ಯಾಯ ಮಾಡಲು ಹೋಗಿದ್ದಿರಬಹುದು, ಆಸ್ತಿ ಕೊಳ್ಳುವಿಕೆ, ಕುಟುಂಬದ ಆಸ್ತಿ ಪಾಲುದಾರಿಕೆ ವಿಷಯಗಳು, ಚೆಕ್ ಬೌನ್ಸ್ ಆಗಿರುವಾಗ, ಸಾಲವನ್ನು ಹಿಂದಿರುಗಿ ಕೇಳಿರುವಾಗ, ಸಾಲ ತೀರಿಸಲು ಆಗದೆಯಿದ್ದಾಗ, ಉದ್ಯೋಗಸ್ಥ ಸ್ಥಳದಲ್ಲಿಯೋ, ಮನೆ ಮಾಲೀಕರ ಜೊತೆಯಲ್ಲಿಯೋ ನಡೆದ ಜಗಳ, ಗಾಡಿ ಓಡಿಸುತ್ತಿರುವಾಗ ರಸ್ತೆಯಲ್ಲಿ ಅಡ್ಡ ಬಂದವರ ಜೊತೆಗಾದ ವಾದವೂ ಇರಬಹುದು, ಯಾವುದೇ ವಿಷಯದಲ್ಲಿ ವ್ಯಕ್ತಿಯ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದಾಗ ಆ ವ್ಯಕ್ತಿಯನ್ನು ಆರೋಪಿ ಎಂದು ಪರಿಗಣಿಸಿ ಅಥವಾ ಪರಿಗಣಿಸುವ ಮುನ್ನ ಅಥವಾ ಯಾವುದೇ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಸಾಕ್ಷಿ ಆಗಬಹುದೆಂದು ಪೊಲೀಸರಿಗೆ ಮನವರಿಕೆ ಆದಾಗ ಅಂತಹ ವ್ಯಕ್ತಿಯನ್ನು ವಿಚಾರಣೆ ನಡೆಸುವ, ವಿವರ ಪಡೆದುಕೊಳ್ಳುವ ಅಧಿಕಾರವನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ೨೦೨೩ ಸೆಕ್ಷನ್ ೩೫ರ ಅಡಿಯಲ್ಲಿ ಪೊಲೀಸರಿಗೆ ನೀಡಲಾಗಿದೆ. ರಿಟ್ ದಾವೆ ೧೫೧೨೫/೨೦೨೪ ಇದರ ವಿಚಾರಣೆಯಲ್ಲಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯವು ನೀಡಿರುವ ಆದೇಶದನ್ವಯ ಪೊಲೀಸರು ವ್ಯಕ್ತಿಯನ್ನು ವಿಚಾರಣೆಗೆ ಕರೆಯುವಾಗ ಯಾವ ಕಾರಣಕ್ಕಾಗಿ, ಯಾವ ಆರೋಪದ ಮೇರೆಗೆ ಅಥವಾ ಸಾಕ್ಷಿದಾರರಾಗಿ ಕರೆಯಲಾಗುತ್ತಿದೆ, ಆ ಘಟನೆ ಎಂದು, ಎಲ್ಲಿ ನಡೆದಿದೆ, ದೂರುದಾರರು ಯಾರು, ಎಫ್‌ಐಆರ್ ಸಂಖ್ಯೆ ಮತ್ತು ದಿನಾಂಕ ಯಾವುದು, ಯಾವ ವ್ಯಾಪ್ತಿ ಪ್ರದೇಶದ ಠಾಣೆಯಲ್ಲಿ ದೂರು ದಾಖಲಾಗಿದೆ. ಅದರವಿಳಾಸ ಯಾವುದು ಎನ್ನುವ ವಿವರಗಳನ್ನು ಮತ್ತು ಎಫ್‌ಐಆರ್ ಪ್ರತಿಯನ್ನೂ ರಿಜಿಸ್ಟರ್ಡ್ ಅಂಚೆಯ ಮೂಲಕವೇ ನೀಡಬೇಕು. ವ್ಯಕ್ತಿಯನ್ನು ಫೋನ್ ಕರೆ, ವಾಟ್ಸಾಪ್ ಸಂದೇಶ, ಇ-ಮೇಲ್, ಪತ್ರ ಮೂಲಕ ವಿಚಾರಣೆಗಾಗಿ ಬರಬೇಕು ಎಂದು ಹೇಳುವಾಗ ವಿವರಣೆ ನೀಡದಿದ್ದರೆ ಕರೆ ಬಂದ ವ್ಯಕ್ತಿಯು ಠಾಣೆಗೆ ಹೋಗುವುದನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಬಹುದು. ವಿವರಗಳು ಇದ್ದಾಗ್ಯೂ ನೋಟಿಸನ್ನು ಕಡೆಗಣಿಸಿದರೆ ಆಗ ಪೊಲೀಸರು ಆ ವ್ಯಕ್ತಿಯನ್ನು ಬಂಽಸಬಹುದಾಗಿರುತ್ತದೆ. (ಲೇಖಕರು ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು)

Tags: