Mysore
27
overcast clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ನೋಂದಾವಣಿ ಇಲ್ಲದೆ ಮದುವೆ ಇಲ್ಲ

ಅಂಜಲಿ ರಾಮಣ್ಣ

ಕೌಟುಂಬಿಕ ನ್ಯಾಯಾಲಯಗಳಲ್ಲಿರುವ ಹಲವಾರು ಪ್ರಕರಣಗಳು ಇತ್ಯರ್ಥವಾಗದಿರುವುದಕ್ಕೆ ವಿವಾಹ ವಾಗಿದೆಯೆಂದು ದಾಖಲೆಗಳ ಮೂಲಕ ಸಾಬೀತುಪಡಿಸಲಾಗದಿರುವುದು ಒಂದು ಕಾರಣ. ದಾಂಪತ್ಯ ತೊಡರಿದ್ದಾಗ ವಿವಾಹವನ್ನೇ ಅಲ್ಲಗಳೆಯುವ, ಮಕ್ಕಳನ್ನೂ ತನ್ನವಲ್ಲವೆನ್ನುವವರಿದ್ದಾರೆ. ಕೆಲವು ಸಂದರ್ಭಗಳಲ್ಲಿ ಗಂಡ ಮರಣಿಸಿದಾಗ ಆತನ ಮನೆಯವರು ಸೊಸೆಯನ್ನು ಒಪ್ಪಿಕೊಳ್ಳುವುದಿಲ್ಲ. ಕೆಲವು ತಾಯಿ ತಂದೆಯರು ಮಗಳನ್ನು ವಂಚಿಸಿ ಕದ್ದೊಯ್ದಿದ್ದಾನೆ ಎಂದು ದೂರು ದಾಖಲಿಸುತ್ತಾರೆ.

ಆಗೆಲ್ಲಾ ವಿವಾಹವು ನೋಂದಣಿಯಾಗಿದ್ದರೆ ಪರಿಹಾರದೆಡೆಗೆ ಭರವಸೆಯಾಗಿರುತ್ತದೆ. ಮದುವೆ ಪ್ರಮಾಣಪತ್ರವು ಸರ್ಕಾರಿ ದಾಖಲೆಯಾಗಿದ್ದು, ಮಹಿಳೆಯರಿಗೆ ಸಾಮಾಜಿಕ ರಕ್ಷಣೆ, ಭದ್ರತೆ, ಇತರ ಸವಲತ್ತುಗಳನ್ನು ಪಡೆಯಲು ಅಗತ್ಯವಾಗಿರುತ್ತದೆ. ವಿದೇಶಗಳಿಗೆ ಪತಿ/ಪತ್ನಿಯನ್ನು ಕರೆದೊಯ್ಯಬೇಕಾದ ಸಂದರ್ಭದಲ್ಲಿ ವೀಸಾ ಪಡೆಯಲೂ ಬೇಕಿರುತ್ತದೆ. ಸರ್ಕಾರವು ಕೌಟುಂಬಿಕ ಕಲ್ಯಾಣ ಯೋಜನೆಗಳನ್ನು ರೂಪಿಸಿ ನಿಧಿಯನ್ನು ನಿಗದಿಪಡಿಸಲು ವಿವಾಹಿತ ದಂಪತಿಗಳ ಅಂಕಿ-ಅಂಶ ಬೇಕಿರುತ್ತದೆ. ಬಾಲ್ಯ ವಿವಾಹವನ್ನು ತಡೆಗಟ್ಟಲು ವಿವಾಹ ನೋಂದಾವಣೆ ಒಂದು ಮುಖ್ಯವಾದ ಸಾಧನ.

೨೦೦೬ರಲ್ಲಿ ಸೀಮಾ ಅಶ್ವಿನ್‌ಕುಮಾರ್ ದಂಪತಿಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಯಾವುದೇ ಧರ್ಮದನ್ವಯ ನಡೆದ ಮದುವೆಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ತೀರ್ಪು ನೀಡಿತು. ಈ ತೀರ್ಪನ್ನನುಸರಿಸಿ ೨೦೦೮ರಲ್ಲಿ ಕರ್ನಾಟಕದಲ್ಲಿ ಕರ್ನಾಟಕ ರೆಜಿಸ್ಟ್ರೇಶನ್ ಆಕ್ಟ್ ಜಾರಿಗೆ ಬಂದಿದೆ. ಇದರ ಪ್ರಕಾರ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಯಾವುದೇ ಧರ್ಮೀಯ ಸಂಪ್ರದಾಯದಂತೆ ವಿವಾಹವಾದ ದಂಪತಿಗಳು, ಈಗಾಗಲೇ ಮದುವೆಯಾಗಿ ಕೆಲವು ವರ್ಷಗಳು ಕಳೆದಿದ್ದರೂ ತಮ್ಮ ಮದುವೆಯನ್ನು ನೋಂದಾಯಿಸಬೇಕಿರುತ್ತದೆ. ಮಸೀದಿ ಹಾಗೂ ಚರ್ಚ್ ಗಳಲ್ಲಿ ನೋಂದಾವಣೆ ಮಾಡಿದ್ದರೂ ವಿವಾಹ ನೋಂದಣಾಧಿಕಾರಿಯಲ್ಲಿ ನೋಂದಾಯಿಸಿ ಕೊಳ್ಳಬೇಕಿರುತ್ತದೆ.

ತೀರಿಕೊಂಡ ಪತಿ/ಪತ್ನಿಯ ಬ್ಯಾಂಕ್ ಡಿಪಾಸಿಟ್ ಅಥವಾ ವಿಮಾ ಪಾಲಿಸಿಯಲ್ಲಿ ನಾಮ ನಿರ್ದೇಶನ ಮಾಡಿದ್ದರೂ ಅವರ ಹೆಸರಿನಲ್ಲಿದ್ದ ಬ್ಯಾಂಕ್ ಡಿಪಾಸಿಟ್ ಅಥವಾ ವಿಮಾ ಪಾಲಿಸಿಯ ಹಣ ಪಡೆಯಲು, ಅನುಕಂಪದ ನೌಕರಿ ಪಡೆಯಲು ವಿವಾಹ ನೋಂದಣಿ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಲೇಬೇಕು.

ಸರ್ಕಾರಿ ಕೆಲಸಕ್ಕೆ ಸೇರುವಾಗ ವಿವಾಹಿತ ಮಹಿಳೆ ಅಥವಾ ಪುರುಷ ತಮ್ಮ ಪತಿ/ಪತ್ನಿ ಹೆಸರನ್ನು ಪಿಂಚಣಿ ದಾಖಲೆಗೆ ನೀಡಬೇಕಿರುತ್ತದೆ. ಆಗಲೂ ವಿವಾಹ ನೋಂದಾವಣೆ ಸರ್ಟಿಫಿಕೇಟ್ ಬೇಕಿರುತ್ತದೆ. ನೋಂದಾಯಿತ ಮದುವೆಯ ಹೊರತಾಗಿ ಪುರುಷ ಯಾವುದೇ ಮಹಿಳೆಯ ಜೊತೆಗೆ ಎಷ್ಟೇ ಕಾಲ ಸಂಬಂಧ ವಿರಿಸಿಕೊಂಡಿದ್ದರೂ ಆಕೆಯು ಆತನ ಪಿಂಚಣಿಯ ಪಾಲುದಾರಳಾಗಲು ಸಾಧ್ಯವಿಲ್ಲ.

ಮದುವೆಯನ್ನು ನಡೆದ ಸ್ಥಳದ ವ್ಯಾಪ್ತಿ ಅಥವಾ ವಧು-ವರರು ವಾಸಿಸುವ ಪ್ರದೇಶದ ನೋಂದಣಿ ಕಚೇರಿಯಲ್ಲಿ ನೋಂದಾಯಿಸಬಹುದು. ಇದೀಗ mo://hhttps://kaveri.karnataka.gov.in/landing- ವೆಬ್‌ಸೈಟ್‌ನಲ್ಲಿಯೂ ನೋಂದಾಯಿಸಬಹುದಾಗಿದೆ.

ಆಯಾ ಧರ್ಮದ ಧಾರ್ಮಿಕ ಪದ್ಧತಿಯ ಪ್ರಕಾರ ಮದುವೆಯಾದ ನಂತರ ನಿಗದಿತ ಮದುವೆ ನೋಂದಣಿ ಫಾರ್ಮ್‌ನಲ್ಲಿ ವರ, ವಧು ಮತ್ತು ವಧುವಿನ ತಂದೆ ಅಥವಾ ತಾಯಿ ಅಥವಾ ಮೂರು ಜನರ ಸಾಕ್ಷಿಗಳು ತಮ್ಮ ಹೆಸರು, ವಿಳಾಸ ನೀಡಿ ಸಹಿ ಮಾಡಿ, ವಧು ವರರ ಜೋಡಿ ಫೋಟೋ, ವಿಳಾಸ, ವಯೋಮಾನ ದೃಢೀಕರಣ ದಾಖಲೆಗಳನ್ನು ನಿಗದಿತ ನಮೂನೆಯ ಅರ್ಜಿಯೊಂದಿಗೆ ವಿವಾಹ ನೋಂದಣಾಧಿಕಾರಿಗೆ ದ್ವಿಪ್ರತಿಯಲ್ಲಿ ಖುದ್ದಾಗಿ ಅಥವಾ ರಿಜಿಸ್ಟರ್ಡ್ ಅಂಚೆ ಮೂಲಕ ಸಲ್ಲಿಸಬೇಕು.

ವಿಶೇಷ ವಿವಾಹ ಅಧಿನಿಯಮದಡಿಯಲ್ಲಿ ನೋಂದಣಿ ಮಾಡುವವರು ನಿಗದಿತ ಅರ್ಜಿ ಭರ್ತಿ ಮಾಡಿ, ವಯಸ್ಸಿನ ದಾಖಲೆಯ ಜೊತೆಗೆ ನೋಂದಣಾಧಿಕಾರಿಗೆ ಸಲ್ಲಿಸಬೇಕು. ಮದುವೆ ನೋಟೀಸನ್ನು ಅವರ ಕಚೇರಿಯ ನೋಟಿಸ್ ಬೋರ್ಡಿನಲ್ಲಿ ೩೦ ದಿನಗಳ ಕಾಲ ಪ್ರಕಟಿಸಲಾಗುತ್ತದೆ. ಯಾವುದೇ ಆಕ್ಷೇಪಣೆಗಳು ಬಾರದ್ದಿದ್ದಲ್ಲಿ ನಂತರದ ೩೦ ದಿನಗಳೊಳಗಾಗಿ ಮೂರು ಸಾಕ್ಷಿಗಳೊಂದಿಗೆ ವಿವಾಹ ನೋಂದಣಾಧಿಕಾರಿಯೆದುರು ಹಾಜರಾಗಿ ಸಹಿ ಮಾಡಬೇಕು.

ಆಧಾರ್ ಕಾರ್ಡ್‌ಅನ್ನು ವಯಸ್ಸಿನ ದಾಖಲೆಯಾಗಿ ಪರಿಗಣಿಸುವುದಿಲ್ಲ. ಅದು ಈ ನಾಡಿನಲ್ಲಿ ನಮ್ಮ ವಾಸದ ನೆಲೆಯನ್ನು ಮಾತ್ರ ಖಚಿತ ಪಡಿಸುವ ದಾಖಲೆಯಾಗಿದೆ. ಹಾಗಾಗಿ ವಿವಾಹ ನೋಂದಾವಣೆಗೆ ಜನನ ಪ್ರಮಾಣ ಪತ್ರ ಅಥವಾ ಹತ್ತನೆಯ ತರಗತಿಯ ಅಂಕಪಟ್ಟಿ ಅಥವಾ ಪಾಸ್‌ಪೋರ್ಟ್‌ಗಳನ್ನು ನೀಡಬೇಕಿರುತ್ತದೆ.

ಇವುಗಳಿಲ್ಲವಾದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಹಾಕಿ ಘೋಷಣಾ ತೀರ್ಪನ್ನು ತರಬೇಕಿರುತ್ತದೆ. ಹಿಂದೂ ವಿವಾಹ ಕಾಯ್ದೆ ೧೯೫೫ ಮತ್ತು ವಿಶೇಷ ವಿವಾಹ ಕಾಯ್ದೆ ೧೯೫೪ರ ಅಡಿ ವಿವಾಹವಾಗುವವರಿಗೆ ಮುಂಚೆಯೇ ಮದುವೆ ಆಗಿರುವ ಜೀವಿತ ಪತಿ ಅಥವಾ ಪತ್ನಿ ಇದ್ದಲ್ಲಿ ಅವರು ವಿವಾಹಕ್ಕೆ ಅರ್ಹರಲ್ಲ. ಮಾನಸಿಕ ಅಸ್ವಸ್ಥರು, ವಿವಾಹಕ್ಕೆ ಅರ್ಹರಲ್ಲ. ೧೮ ವರ್ಷ ತುಂಬದ ಹೆಣ್ಣು, ೨೧ ವರ್ಷ ವಯಸ್ಸು ಪೂರ್ಣಗೊಳ್ಳದ ಗಂಡು ಕೂಡಾ ವಿವಾಹ ಮಾಡಿಕೊಳ್ಳುವಂತಿಲ್ಲ. ವಿಚ್ಛೇದಿತ ವ್ಯಕ್ತಿಗಳು ಕೂಡಾ ಅದೇ ಸಂಗಾತಿಯೊಂದಿಗೆ ಪುನಾ ಮದುವೆಯಾಗಲು ಅವಕಾಶವಿದೆ ಮತ್ತು ಆ ಮದುವೆಯನ್ನೂ ನೋಂದಾಯಿಸಿಕೊಳ್ಳಬೇಕಿರುತ್ತದೆ.

(ಲೇಖಕರು ಮಹಿಳಾ ಮತ್ತು ಮಕ್ಕಳ ಹಕ್ಕುಗಳ ವಕೀಲರಾಗಿದ್ದಾರೆ)

Tags:
error: Content is protected !!