ಕೀರ್ತನಾ ಎಂ.
ವೃತ್ತಿ ಬದುಕಿನ ನಡುವೆ ಕಳೆದು ಹೋಗುವ ನಮಗೆ ಕನಿಷ್ಠ ಪಕ್ಷ ಸ್ನೇಹಿತೆಯರನ್ನು ಭೇಟಿಯಾಗಲು ಸಮಯವೂ ಇರುವುದಿಲ್ಲ. ಹಾಗಂತ ನಾನು, ನನ್ನ ಸ್ನೇಹಿತೆ ಒಬ್ಬರಿಗೊಬ್ಬರು ಸಮಯ ಕೊಡುವುದನ್ನು ನಿಲ್ಲಿಸಿಲ್ಲ. ದೂರದ ಬೆಂಗಳೂರಿನಲ್ಲಿ ನೆಲೆಸಿರುವ ಅವಳು ಇನ್ನೆಲ್ಲೋ ಇರುವ ನಾನು ವರ್ಷಕ್ಕೊಮ್ಮೆಯಾದರೂ ಭೇಟಿಯಾಗುತ್ತೇವೆ. ಕರೆ ಮಾಡುವುದನ್ನು ತಪ್ಪಿಸುವುದಿಲ್ಲ.
ಒಮ್ಮೆ ಕರೆ ಮಾಡಿದಾಗ ಅವಳ ಗೆಳತಿ ರಾಶಿ ಎಂಬವರ ಕುರಿತು ಮಾತು ಬಂತು. ‘ರಾಶಿ ಹೇಗಿದ್ದಾಳೆ? ‘ಎಂದೆ. ‘ಪರವಾಗಿಲ್ಲ, ಡೈವೋರ್ಸ್‌ಗೆ ಅಪ್ಲೆ ಮಾಡಿದ್ದಾಳೆ. ಮುಂದಿನ ವಾರ ಕೋರ್ಟ್ ಇಯರಿಂಗ್ ಇದೆ‘ ಎಂದಳು. ಕೇಳಿ ಬೇಸರವಾಯಿತು. ರಾಶಿ ನನ್ನ ಸ್ನೇಹಿತೆಯಿಂದ ಪರಿಚಯವಾದ ಹುಡುಗಿ. ಸಿವಿಲ್ ಇಂಜಿನಿಯರ್ ಮುಗಿಸಿ ನೌಕರಿಯಲ್ಲಿ ಇದ್ದಳು. ಇದರ ನಡುವೆ ಅವಳ ತಂದೆ ಅವಳಿಗಾಗಿ ವರನನ್ನು ಹುಡುಕಿದ್ದರು. ಅವನು ಇಂಜಿನಿಯರ್, ಸರ್ಕಾರಿ ನೌಕರ. ಆದರೆ ಮದುವೆಗೂ ಮುನ್ನ ಹೃದಯಾಘಾತದಿಂದ ಅವಳ ತಂದೆ ಸಾವನ್ನಪ್ಪಿದರು. ರಾಶಿ ತಂದೆಯ ಪ್ರೀತಿಯಲ್ಲಿ ಮಿಂದು ಬದುಕಿದವಳು. ಅವಳಿಗೆ ಭಾವನಾತ್ಮಕವಾಗಿ ಆಸರೆಯ ಅವಶ್ಯವಿತ್ತು. ಅದಕ್ಕಾಗಿ ತಂದೆ ನೋಡಿದ ಹುಡುಗನಿಗೆ ಹತ್ತಿರವಾದಳು. ದಿನ ಕಳೆದಂತೆ ಅವನು ರಾಶಿಗೆ ಇನ್ನಷ್ಟು ಹತ್ತಿರವಾದ. ಅವಳನ್ನು ಭೇಟಿಯಾಗುತ್ತಿದ್ದು, ಅವಳಿದ್ದ ರೂಮಿನಲ್ಲಿ ಸಮಯ ಕಳೆಯುತ್ತಿದ್ದ. ಇಬ್ಬರ ನಡುವೆ ಆಗಾಗ ದೈಹಿಕ ಸಂಪರ್ಕವೂ ಏರ್ಪಟ್ಟಿತ್ತು. ಆದರೆ ಎಲ್ಲವೂ ಬದಲಾಗದೆ ಉಳಿಯಬೇಕಲ್ಲ. ದಿನ ಕಳೆದಂತೆ ಮದುವೆ ಮುಂದೂಡುವುದು ಸಹಜವಾಯಿತು. ಆತ ಮೂರು ವರ್ಷ ಕಳೆದರೂ ಮದುವೆ ವಿಚಾರದಲ್ಲಿ ಮುಂದೆಹೆಜ್ಜೆ ಇಡದೆ ಹೋದಾಗ ಈಕೆ ರೋಸಿ ಹೋದಳು. ಕೊನೆ ಕೊನೆಗೆ ಅವನಿಂದ ಮಾತ್ರವಲ್ಲ, ಅವನ ಕುಟುಂಬದಿಂದಲೂ ಕಡೆಗಣನೆಗೆ ಗುರಿಯಾದಳು. ಕೆಲಸ ಬಿಟ್ಟರೆ ಮದುವೆ ಆಗುತ್ತೇನೆ ಎಂದಿದಕ್ಕೆ ಇದ್ದ ಕೆಲಸವನ್ನೂ ಬಿಟ್ಟು ಸೋತಳು. ರಾಶಿ ತಾಯಿ ಮುಗ್ಧೆ. ತನ್ನ ಮಗಳ ಬದುಕು ಹಾಳಾಗಿ ಹೋಯಿತಲ್ಲ ಎಂದು ಗೋಳಾಡುತ್ತಿದ್ದರು. ಬೇರೆ ಹುಡುಗನಿಗೆ ಮದುವೆಯಾಗು ಎಂದರೂ ಒಪ್ಪದ ಮಗಳನ್ನು ಶಪಿಸುತ್ತ ದಿನಕಳೆಯುತ್ತಿದ್ದರು. ರಾಶಿ ಸುಮ್ಮನಾಗಲಿಲ್ಲ. ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದಳು. ಬಳಿಕ ಆತನನ್ನೇ ಮದುವೆ ಮಾಡಿಕೊಂಡಳು. ಅಸಲಿ ಆಟ ಶುರುವಾಗಿದ್ದು ಆ ನಂತರವೇ.
ಮೊದಲ ಗರ್ಭ ನಿಂತಾಗ ಅವಳ ಗಂಡ ಅವಳಿಗೆ ತಿಳಿಯದಂತೆ ಗರ್ಭ ಜಾರುವಂತೆ ಮಾಡಿದ. ಮನೆಯಲ್ಲಿ ಎಲ್ಲರ ಟಾರ್ಚರ್ ಸಹಿಸುವುದು ಕಷ್ಟವಾಯಿತು. ಹೇಗೋ ಕಷ್ಟಪಟ್ಟು ಹತ್ತಿರದಲ್ಲೇ ಕೆಲಸ ಒಂದನ್ನು ಹುಡುಕಿಕೊಂಡಳು. ಅಲ್ಲದೆ ಈ ಸಲ ಗರ್ಭ ನಿಲ್ಲುತ್ತಿದ್ದಂತೆ ಪಿಜಿ ಒಂದಕ್ಕೆ ಶಿಫ್ಟ್ ಆದಳು. ಐದು ತಿಂಗಳು ಆಗುತ್ತಾ ಬರುವಾಗ ಸಹಜವಾಗಿ ಹೊಟ್ಟೆ ಉಬ್ಬಲು ಇದನ್ನು ಕಂಡ ಅವಳ ಪತಿ ರೋಷಗೊಂಡ. ಪ್ರಯೋಜನವಾಗಲಿಲ್ಲ. ಆದರೆ ಹುಟ್ಟಿದ ಮಗನನ್ನು ಅವನೊಂದಿಗೆ ಬಿಡಲಾಗಲಿ ಮರಳಿ ಅವನ ಮನೆಗೆ ಹೋಗಲಾಗಲಿ ಅವಳಲ್ಲಿ ಧೈರ್ಯ ಉಳಿದಿರಲಿಲ್ಲ. ಹಾಗಾಗಿ ತಾಯಿ ಮನೆ ಸೇರಿಕೊಂಡಳು. ಪತಿ-ಪತ್ನಿಯರ ಗಲಾಟೆ ನಿಲ್ಲಲಿಲ್ಲ. ಬಾಡಿಗೆ ಮನೆಯಲ್ಲಿ ಮಗನೊಂದಿಗೆ ರಾಶಿ ಬದುಕಬೇಕೆಂದುಕೊಂಡರೂ ಅಲ್ಲಿಗೂ ಬಂದು ರಂಪ ಮಾಡುತ್ತಿದ್ದ ಪತಿ. ಎಲ್ಲವನ್ನೂ ಸಹಿಸುವುದು ಇನ್ನೂ ಸಾಧ್ಯವಿಲ್ಲ ಎಂದು ದೃಢ ನಿರ್ಧಾರ ಮಾಡಿ ಪತಿಯಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾಳೆ. ತನ್ನ ಮಗನನ್ನು ಒಬ್ಬಳೆ ಸಾಕಿ ಬೆಳೆಸಿ ಉತ್ತಮ ಸಂಸ್ಕಾರ ಕೊಡುವ ಪಣ ತೊಟ್ಟಿದ್ದಾಳೆ. ರಾಶಿ ದುಡುಕಲಿಲ್ಲ. ಭಾವನಾತ್ಮಕವಾಗಿ ಕುಗ್ಗಿದಾಗ ಗಂಡಿನ ಆಸರೆ ಪಡೆದಳು. ಅವನನ್ನು ನಂಬಿದಳು. ಅವನಲ್ಲಿ ಪರಿಶುದ್ಧ ಪ್ರೀತಿಯನ್ನು ಬಯಸಿದಳು. ಅವಳೆಲ್ಲ ಬದುಕಿನ ಕನಸನ್ನು ಅವನೊಂದಿಗೆ ಹೆಣೆದಿದ್ದಳು. ಆದರೆ ಅವಳ ಗಂಡನಾದವನು ಎಲ್ಲವನ್ನೂ ತನ್ನ ಸ್ವಾರ್ಥಕ್ಕೆ ಬಳಸಿಕೊಂಡಿದ್ದ. ಇಲ್ಲಿ ರಾಶಿ ಅವನಿಂದ ಮದುವೆ ಹಂತಕ್ಕೆ ಮುನ್ನವೇ ದೂರ ಆಗದೆ ಉಳಿದಿದ್ದು ಅವನೊಂದಿಗೆ ಯೌವನದ ಆಕರ್ಷಣೆಗೆ ಸಿಲುಕಿ ಮೈ ಮರೆತ ಕಾರಣಕ್ಕೆ. ಅದನ್ನೊಮ್ಮೆ ಸ್ನೇಹಿತೆ ಜೊತೆ ಹೇಳಿಕೊಂಡಿದ್ದಳು ಕೂಡ. ಕೆಲವು ಹೆಣ್ಣು ಮಕ್ಕಳು ನಂಬಿ ಈ ರೀತಿ ಸಿಕ್ಕಿ ಹಾಕಿಕೊಂಡು ನರಳುತ್ತಾರೆ. ಇಲ್ಲಿ ಅವರನ್ನು ನಿಂದಿಸುವುದು ಸಮಂಜಸವಲ್ಲ. ಅಷ್ಟು ನಂಬಿ ಬಂದವಳ ನಂಬಿಕೆಗೆ ದ್ರೋಹ ಬಗೆಯುವವರ ಕುರಿತು ಯೋಚಿಸಬೇಕು. ಅವರ ಸಂಸ್ಕಾರ ಎಂತಹುದು? ರಾಶಿ ಅವನನ್ನು ಬಿಟ್ಟು ಇನ್ನೂ ಸುಂದರವಾದ ಬದುಕು ಕಟ್ಟಿಕೊಳ್ಳಬಹುದಿತ್ತು. ಆದರೆ ಅವಳು ಅಂಜಿದ್ದು ಈ ಸಮಾಜಕ್ಕೊ ಮತ್ತೊಂದಕ್ಕೊ ಅಲ್ಲ. ತನ್ನ ಆತ್ಮಸಾಕ್ಷಿಗೆ. ಅವರಿಬ್ಬರ ನಡುವೆ ನಡೆದಿದ್ದು ಯಾವ ಸಮಾಜಕ್ಕೂ ತಿಳಿಯದಂತೆ ಬದುಕಿ ಬಿಡಬಹುದಿತ್ತು. ಆದರೆ ಅವಳ ತಂದೆ ನೀಡಿದ್ದ ಆದರ್ಶ ಅವಳಿಗೆ ಅನುವು ಮಾಡಿಕೊಡಲಿಲ್ಲ.





